ನಮೋ ಸುನಾಮಿಗೆ ಮಹಾಮೈತ್ರಿ ಧೂಳೀಪಟ

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ರಚನೆಯಾಗಿದ್ದ ಮಹಾಮೈತ್ರಿ ಹೀನಾಯವಾಗಿ ಸೋಲು ಕಂಡಿದೆ. ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಮಹಾಮೈತ್ರಿ ಮೋದಿ ಅಲೆಗೆ ಕೊಚ್ಚಿ ಹೋಗಿದೆ.

ಚುನಾವಣೆಗೆ ಕೆಲ ತಿಂಗಳು ಮುನ್ನ ಎನ್​ಡಿಎ ಹೊರತಾದ ಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಯತ್ನವನ್ನು ಕೆಲ ರಾಷ್ಟ್ರೀಯ ನಾಯಕರು ನಡೆಸಿದ್ದರು. ಕರ್ನಾಟಕ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುವ ವೇಳೆ 10ಕ್ಕೂ ಅಧಿಕ ನಾಯಕರು ಬೆಂಗಳೂರಿಗೆ ಬಂದು ಶಕ್ತಿ ಪ್ರದರ್ಶನ ನಡೆಸಿದ್ದರು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಯಕರು ಬೇರ್ಪಟ್ಟು, ತಮ್ಮ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ವರ್ಧಿಸಲು ನಿರ್ಣಯಿಸಿದ್ದರು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಾತ್ರ ಬಿಜೆಪಿಗೆ ಪೈಪೋಟಿ ನೀಡಲು ಮೈತ್ರಿ ರಚನೆ ಮಾಡಲಾಗಿತ್ತು. ಬಿಹಾರದಲ್ಲಿ ಆರ್​ಜೆಡಿ, ಜೆಡಿಯು ಹಾಗೂ ಕಾಂಗ್ರೆಸ್ ಮೊದಲ ಬಾರಿಗೆ ಮೈತ್ರಿ ಮೂಲಕ ಸ್ಪರ್ಧಿಸಿ ಗೆಲುವು ಸಾಧಿಸಿದ್ದವು. ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಮಹಾಮೈತ್ರಿಯನ್ನು ದೇಶಾದ್ಯಂತ ರಚಿಸಲು ಚಂದ್ರಬಾಬು ನಾಯ್ಡು, ತೃತೀಯ ರಂಗ ರಚಿಸಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಯತ್ನಿಸಿದ್ದರು. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಕಾಂಗ್ರೆಸ್, ಟಿಆರ್​ಎಸ್, ಎಡಪಕ್ಷಗಳು ಮೈತ್ರಿಯಿಂದ ದೂರ ಉಳಿದು, ಚುನಾವಣೆ ಫಲಿತಾಂಶ ಬಳಿಕ ನಿರ್ಧಾರ ಕೈಗೊಳ್ಳಲು ಮುಂದಾದವು. ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನಾದಿನವೂ ಮಹಾಮೈತ್ರಿಗೆ ಭಾರಿ ಕಸರತ್ತು ನಡೆದಿತ್ತು. ಆದರೆ ಈಗ ಬಿಜೆಪಿ ಪೂರ್ಣ ಬಹುಮತ ಗಳಿಸಿರುವ ಕಾರಣ ಮಹಾಮೈತ್ರಿ ಅವಕಾಶ ಕೈಜಾರಿದೆ.

ನೆಲಕಚ್ಚಿದ ಬಿಹಾರ ಮೈತ್ರಿ

ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ರಚನೆಯಾಗಿದ್ದರೆ, ಕಾಂಗ್ರೆಸ್, ಆರ್​ಜೆಡಿ, ಇತರ ಸಣ್ಣಪಕ್ಷಗಳು ಸೇರಿ ಮೈತ್ರಿ ರಚಿಸಿಕೊಂಡಿದ್ದವು. ಆದರೆ ಎನ್​ಡಿಎ ಎದುರು ಇದು ಭಾರಿ ಸೋಲು ಕಂಡಿದೆ. 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್​ಡಿಎ ಗೆಲುವು ಸಾಧಿಸಿದ್ದರೆ, ಕೇವಲ ಎರಡು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆದ್ದಿದ್ದಾರೆ. ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಕಾರಣ ಮೈತ್ರಿಗೆ ಹಿನ್ನಡೆ ಉಂಟಾಯಿತು. ಸಿಎಂ ನಿತೀಶ್ ಕುಮಾರ್​ಗೆ ಪೈಪೋಟಿ ನೀಡಲು ಕಾಂಗ್ರೆಸ್​ನಲ್ಲಿ ಸ್ಥಳೀಯ ಪ್ರಭಾವಿ ನಾಯಕರ ಕೊರತೆ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಉತ್ತರ ಪ್ರದೇಶದಲ್ಲೂ ಸೋಲು

ಕಾಂಗ್ರೆಸ್​ನ್ನು ಹೊರಗಿಟ್ಟು ಎಸ್​ಪಿ ಹಾಗೂ ಬಿಎಸ್​ಪಿ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ದಲಿತ ಮತಗಳ ಕ್ರೋಡೀಕರಣ ಇದರ ಮುಖ್ಯ ಉದ್ದೇಶವಾಗಿತ್ತು. ಕಳೆದ ಬಾರಿ ಉತ್ತರ ಪ್ರದೇಶವನ್ನು ಕ್ಲೀನ್​ಸ್ವೀಪ್ ಮಾಡಿದ್ದ ಬಿಜೆಪಿ ಈ ಬಾರಿ ಅರ್ಧದಷ್ಟು ಕ್ಷೇತ್ರ ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಇದರಿಂದ ಕೇಂದ್ರದಲ್ಲಿ ಬಿಜೆಪಿ ಸ್ವಂತಬಲದಿಂದ ಅಧಿಕಾರ ರಚನೆ ಕಷ್ಟ ಎನ್ನಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳೂ ಈಗ ತಲೆಕೆಳಗಾಗಿವೆ. 61 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, 18 ಕ್ಷೇತ್ರ ಮೈತ್ರಿ ಹಾಗೂ ಒಂದು ಕ್ಷೇತ್ರ ಕಾಂಗ್ರೆಸ್ ಪಡೆದಿದೆ.