ಬೆಂಗಾವಲು ಕಾರಲ್ಲೇ ಹಣ ಸಾಗಣೆ: ಹಾಸನದಲ್ಲಿ ನಗದು ವಶ ಪ್ರಕರಣ

ಹಾಸನ: ಚುನಾವಣಾ ನಿಮಿತ್ತ ಹಣ ಸಾಗಣೆಗೆ ಸರ್ಕಾರಿ ವಾಹನ ಬಳಸಿದ್ದರ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು ಚುನಾವಣಾ ಆಯೋಗದ ಜಾರಿ ವಿಭಾಗದ ವಿಶೇಷಾಧಿಕಾರಿ ಮುನೀಶ್ ಮೌದ್ಗಿಲ್ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ವರದಿ ನೀಡಿದ್ದಾರೆ.

ಹೊಳೆನರಸೀಪುರದ ಚನ್ನಾಂಬಿಕ ಚಿತ್ರಮಂದಿರದ ಎದುರು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ 1.2 ಲಕ್ಷ ರೂ. ಇದ್ದ ಕಾರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಹಾಸನದ ಫ್ಲೈಯಿಂಗ್ ಸ್ಕಾ್ವಡ್ 1.2 ಲಕ್ಷ ರೂ.ಅನ್ನು ಕೆಎ 01 ಎಂಎಚ್ 4477 ನೋಂದಣಿ ಸಂಖ್ಯೆಯ ಇನ್ನೋವಾ ವಾಹನದಿಂದ ವಶಪಡಿಸಿಕೊಂಡಿರುವ ಪ್ರಕರಣವನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನ ಗಮನಕ್ಕೆ ತಂದಿದ್ದರು. ಏ.16ರಂದು ಐಟಿ ಇಲಾಖೆ ಮಾಹಿತಿ ಆಧರಿಸಿ ಹಣ ವಶಪಡಿಸಿಕೊಂಡ ಬಗ್ಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಚುನಾವಣೆಗಾಗಿ ಹಣ ಸಾಗಿಸಲು ಪೊಲೀಸ್ ವಾಹನ ಬಳಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದು ಅತ್ಯಂತ ಗಂಭೀರ ಪ್ರಕರಣ, ಈ ಬಗ್ಗೆ ಸಮರ್ಪಕ ತನಿಖೆ ಅಗತ್ಯವಿದೆ. ಇದರಲ್ಲಿ ಭಾಗಿಯಾಗಿರಬಹುದಾದ ಪೊಲೀಸ್ ಅಧಿಕಾರಿಗಳನ್ನು ಹೊರತಂದು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ನಿಗಾದಲ್ಲಿ ಸ್ವತಂತ್ರ ತಂಡದಿಂದ ತನಿಖೆ ನಡೆಸಬೇಕು ಎಂದು ಮುನೀಶ್ ಮೌದ್ಗಿಲ್ ಏ.20ರಂದು ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ರೇವಣ್ಣ ಬೆಂಗಾವಲಿಗಿದ್ದ ಕಾರು: ವಶಕ್ಕೆ ಪಡೆದಿದ್ದ ಕಾರನ್ನು ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲಿಗಾಗಿ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಹಣ ವಶಕ್ಕೆ ಪಡೆದ ಸಮಯದಲ್ಲಿ ಕಾರು ಸಚಿವರಿಗೆ ಬೆಂಗಾವಲು ಒದಗಿಸುತ್ತಿರಲಿಲ್ಲ. ಈ ಬಗ್ಗೆ ಮುನೀಶ್ ಮೌದ್ಗಿಲ್ ಏ.17ರ ಸುದ್ದಿಗೋಷ್ಠಿಯಲ್ಲಿ ಹಣ ವಶಕ್ಕೆ ಪಡೆದ ವಾಹನ ಪೊಲೀಸ್ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ರೇವಣ್ಣ, ನಮ್ಮ ಚನ್ನಾಂಬಿಕ ಚಿತ್ರಮಂದಿರವನ್ನು ಐಟಿ ಅಧಿಕಾರಿಗಳು ಪರಿಶೀಲಿಸಿದಾಗ ಅಲ್ಲಿ ಮಲಗಿದ್ದ ಮಂಜು ಹಾಗೂ ಥಿಯೇಟರ್ ಮೇಲಿನ ಕೊಠಡಿಗೆ ಹೋಗುತ್ತಿದ್ದ ನನ್ನ ಸಹಾಯಕ ರಾಘು ಎಂಬವರನ್ನು ತಡೆದು ತಪಾಸಣೆ ನಡೆಸಿದ್ದರು. ಅವರ ಬಳಿಯಿದ್ದ ತಲಾ 60 ಸಾವಿರ ರೂ. ವಶಕ್ಕೆ ಪಡೆದಿದ್ದರು. ಅದೇ ಹಣವನ್ನು ಎಣಿಕೆಗಾಗಿ ಅಲ್ಲೇ ಇದ್ದ ಕಾರಿಗೆ ಕೊಂಡೊಯ್ದು ಅಲ್ಲೇ ಬಿಟ್ಟು ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಗೆ ಬಂದ ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಿಯಾಂಕ, ಐಟಿಯವರು ಹಣ ಇರಿಸಿ ಹೋಗಿದ್ದ ಸ್ಥಳದಲ್ಲೇ ಹಣ ವಶಕ್ಕೆ ಪಡೆದಿದ್ದಾಗಿ ನಮೂದಿಸಿದ್ದಾರೆ ಅಷ್ಟೇ. ಅದೇ ಕಾರನ್ನು ಡಿಸಿ ಹಾಸನದಲ್ಲಿ ತಪಾಸಣೆ ಮಾಡಿ ಕಳುಹಿಸಿದ್ದರು. ಆಗ ಅದರಲ್ಲಿ ಹಣ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಎಂದಿದ್ದರು.

ಶನೈಶ್ಚರನ ಮೇಲಾಣೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೂ ಮುನ್ನ ದಿನ ಹಣದ ಹೊಳೆ ಹರಿಯುತ್ತಿದೆ. ಭದ್ರಾವತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ತಲಾ 500 ರೂ. ಜತೆ ಮಧು ಬಂಗಾರಪ್ಪ ಪರ ಕರಪತ್ರ ಹಾಗೂ ಶನೈಶ್ಚರ ದೇವರ ಫೋಟೋ ನೀಡಿ ಮತ ನೀಡುವಂತೆ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ತಡೆಯಲು ಹೋದಾಗ ವಾಗ್ವಾದ ನಡೆದಿದೆ.

ಅಪ್ಪಾಜಿಗೌಡಗೆ ಐಟಿ ನೋಟಿಸ್

ಶಿವಮೊಗ್ಗ: ಬೆಂಗಳೂರಿನಿಂದ ಭದ್ರಾವತಿಗೆ ಶನಿವಾರ ಕಾರಿನ ಸ್ಟೆಪ್ನಿಯಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 2.9 ಕೋಟಿ ರೂ.ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಅವರಿಗೆ ಐಟಿ ಅಧಿಕಾರಿಗಳು ಸೋಮವಾರ ನೋಟಿಸ್ ಜಾರಿಗೊಳಿಸಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ಕೊಡಲು ಕೊಂಡೊಯ್ಯಲಾಗುತ್ತಿತ್ತು ಎಂದಿದ್ದ. ಹೀಗಾಗಿ ಐಟಿ ಅಧಿಕಾರಿಗಳು ಅಪ್ಪಾಜಿಗೌಡರಿಗೆ ನೋಟಿಸ್ ರವಾನಿಸಿದ್ದಾರೆ. ಮಂಗಳವಾರ ಮತದಾನ ಇರುವುದರಿಂದ ಅಪ್ಪಾಜಿಗೌಡರು ಏ.24ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪುತ್ರನಿಗೂ ಐಟಿ ಶಾಕ್: ಅಪ್ಪಾಜಿಗೌಡ ಅವರ ಪುತ್ರ, ಭದ್ರಾವತಿ ನಗರಸಭೆ ಸದಸ್ಯ ಎಂ.ಎ. ಅಜಿತ್​ಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸೋಮವಾರ ಭದ್ರಾವತಿ ಕಾಗದನಗರ ಪೋಲಿಸ್ ಠಾಣೆ ವ್ಯಾಪ್ತಿಯ ಸುರುಗಿತೋಪು ಪ್ರದೇಶದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ವೇಳೆ ಅಜಿತ್ ಬಳಿ ಇದ್ದ ದಾಖಲೆ ಇಲ್ಲದ 1.39 ಲಕ್ಷ ರೂ. ಜಪ್ತಿ ಮಾಡಿ, ತನಿಖೆ ಮುಂದುವರಿಸಿದ್ದಾರೆ. ಭದ್ರಾವತಿ ಬಸ್ ನಿಲ್ದಾಣ ಎದುರು ಅಜಿತ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಮೇಲೂ ಐಟಿ ಅಧಿಕಾರಿಗಳು ಸೋಮವಾರ ಸಂಜೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ಅಂದಾಜು 9 ಲಕ್ಷ ರೂ. ನಗದು ದೊರೆತಿದ್ದು, ಸಮರ್ಪಕ ದಾಖಲಾತಿ ಇಲ್ಲದ್ದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಐಟಿ ಅಧಿಕಾರಿಗಳಿಂದ ನೋಟಿಸ್ ಬಂದಿತ್ತು. ಅದಕ್ಕೆ ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ. ಅದು ಬಿಜಿನೆಸ್ ಹಣ, ಚುನಾವಣೆಗೆ ಬಳಸುವುದಲ್ಲ. ಐಟಿ ಅಧಿಕಾರಿಗಳ ಬೆದರಿಕೆಯಿಂದ ನನ್ನ ಹೆಸರು ಹೇಳಿರಬಹುದು.

| ಎಂ.ಜೆ.ಅಪ್ಪಾಜಿಗೌಡ ಮಾಜಿ ಶಾಸಕ

ಬೆಳಗಾವಿಯ ವಿವಿಧೆಡೆ ಏಕಕಾಲದಲ್ಲಿ ಐಟಿ ದಾಳಿ

ಬೆಳಗಾವಿ: ಐಟಿ ಅಧಿಕಾರಿಗಳು ಭಾನುವಾರ ರಾತ್ರಿ ಬೆಳಗಾವಿ ನಗರ, ತಾಲೂಕು ಹಾಗೂ ಸವದತ್ತಿ ತಾಲೂಕಿನ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ನಗದು, ಚಿನ್ನಾಭರಣ ಸೇರಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸವದತ್ತಿಯ ಹೊಸೂರು ಗ್ರಾಮದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಕೆ.ಕೆ.ಕೊಪ್ಪ ಗ್ರಾಮದ ಶೇಖರ ಗೌಡ ಪಾಟೀಲ ಅವರ ನಿವಾಸ, ಫಾರಂ ಹೌಸ್, ಬೆಳಗಾವಿ ಸಮೀಪದ ನಾನಾವಾಡಿಯಲ್ಲಿರುವ ನಿವಾಸ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಕ್ರಮ ಹಣ ವಹಿವಾಟು, ರಿಯಲ್ ಎಸ್ಟೇಟ್ ವ್ಯವಹಾರ, ಹಾಲಿ ವ್ಯಾಪಾರದ ವಹಿವಾಟು, ಸಿಮೆಂಟ್ ವ್ಯವಹಾರದ ದಾಖಲೆಗಳು ಸೇರಿ ಲಕ್ಷಾಂತರ ರೂ. ನಗದು, ಚಿನ್ನ-ಬೆಳ್ಳಿ ವಶಕ್ಕೆ ಪಡೆದಿದ್ದಾರೆ. 15 ದಿನಗಳಿಂದ ಐಟಿ ಅಧಿಕಾರಿಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಆರ್ಥಿಕ ವಹಿವಾಟಿನ ಮಾಹಿತಿ ಕಲೆ ಹಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊನ್ನಾಳಿಯಲ್ಲಿ ಐಟಿ ಇಲಾಖೆ ಕಣ್ಗಾವಲು

ಹೊನ್ನಾಳಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಖಾಸಗಿ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್​ವೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೊಠಡಿಗಳನ್ನು ಪರಿಶೀಲಿಸಿದರು. ಐಟಿ ಅಧಿಕಾರಿಗಳು ಶಾಸಕ ರೇಣುಕಾಚಾರ್ಯ ಅವರ ಚಲನವಲನದ ಮೇಲೆ ನಿಗಾ ವಹಿಸಿದ್ದು, ಅವರ ಮನೆ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಶಾಸಕರು ಮತ್ತು ಬಿಜೆಪಿ ಮುಖಂಡರ ವಾಹನಗಳ ಮೇಲೂ ಗಮನ ಹರಿಸಲಾಗಿದ್ದು, ಅವರು ಯಾರನ್ನು ಭೇಟಿ ಮಾಡುತ್ತಾರೆ ಎಂಬ ಮಾಹಿತಿ ಸಂಗ್ರಹಿಸಿದರು ಎಂದು ಮೂಲಗಳು ಹೇಳಿವೆ.

ಗಿರೀಶ ಕುಲಕರ್ಣಿ ಮನೆಯಲ್ಲಿ ತಪಾಸಣೆ

ಧಾರವಾಡ: ರಾಜಕೀಯ ವ್ಯಕ್ತಿಗಳ ಜತೆ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ ಕುಲಕರ್ಣಿ ಅವರ ನಿವಾಸದ ಮೇಲೆ ಭಾನುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಪವನ ಎನ್​ಕ್ಲೇವ್ ಅಪಾರ್ಟ್​ವೆುಂಟ್​ನಲ್ಲಿರುವ ಅವರ ನಿವಾಸಕ್ಕೆ ಭಾನುವಾರ ಮಧ್ಯಾಹ್ನ ಆಗಮಿಸಿದ್ದ ಅಧಿಕಾರಿಗಳ ತಂಡ ಸೋಮವಾರ ಬೆಳಗಿನ ಜಾವದವರೆಗೆ ತಪಾಸಣೆ ನಡೆಸಿ, ಹಲವು ಮಹತ್ವದ ದಾಖಲೆಗಳು ಹಾಗೂ ದಾಖಲೆ ಇಲ್ಲದ 2.5 ಲಕ್ಷ ರೂ. ವಶ ಪಡಿಸಿಕೊಂಡಿದ್ದಾರೆ. ಗಿರೀಶ ಕುಲಕರ್ಣಿ ರಾಜಕೀಯ ವ್ಯಕ್ತಿ ಜತೆ ಸಂಬಂಧ ಹೊಂದಿರುವ ಕುರಿತು ಕೆಲವು ಡಿಜಿಟಲ್ ಸಾಕ್ಷ್ಯಳನ್ನು ವಶಪಡಿಸಿಕೊಳ್ಳಲಾಗಿದೆ.