ಪ್ರಭಾವ ಬೀರಿದ ಪ್ರಧಾನಿ ಹುದ್ದೆ: ಬಲಿಷ್ಠ ನಾಯಕರಿಲ್ಲದೇ ಸೊರಗಿದ ಪ್ರತಿಪಕ್ಷ?

ನವದೆಹಲಿ: ಪ್ರಧಾನಿ ಅಭ್ಯರ್ಥಿ ಘೋಷಣೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಮತದಾನೋತ್ತರ ಸಮೀಕ್ಷೆ ಹೇಳಿದೆ.

ಎನ್​ಡಿಎ ಮೈತ್ರಿಕೂಟದಿಂದ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರಿಂದಲೇ ಬಿಜೆಪಿ ಹಾಗೂ ಅದರ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತಚಲಾಯಿಸಿದ್ದಾಗಿ ಶೇ.17 ಜನ ಹೇಳಿಕೊಂಡಿದ್ದಾರೆ. ಮೋದಿ ಕಾರಣದಿಂದಾಗಿಯೇ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮತಚಲಾಯಿಸಿದ್ದಾರೆ. ಜತೆಗೆ, ಪಕ್ಷ ಹಾಗೂ ಅಭ್ಯರ್ಥಿ ಕೂಡ ಮುಖ್ಯ ಎಂದು ಕ್ರಮವಾಗಿ ಶೇ.46 ಹಾಗೂ ಶೇ.31 ಜನರು ಸಿಎಸ್​ಡಿಎಸ್- ಲೋಕನೀತಿ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರತಿಪಕ್ಷಗಳೂ ಪ್ರಧಾನಿ ಅಭ್ಯರ್ಥಿ ಘೋಷಿಸದೇ ಎಡವಿದವೇ ಎನ್ನುವ ಪ್ರಶ್ನೆ ಎದ್ದಿದೆ.

ಏತನ್ಮಧ್ಯೆ ಲೋಕಸಭಾ ಚುನಾವಣೆ ಆರಂಭವಾದ ದಿನದಿಂದ ಕೊನೆಯ ಹಂತದ ಮತದಾನದ ವರೆಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದವರ ಸಂಖ್ಯೆ ಏರುಗತಿಯಲ್ಲಿಯೇ ಇತ್ತು ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಸಲಾದ ಐಎಎನ್​ಎಸ್- ಸಿವೋಟರ್ ಸಮೀಕ್ಷೆ ಪ್ರಕಾರ ಮೇ 19ರಂದು ಮೋದಿ ನಾಯಕತ್ವ ಹಾಗೂ ಬಿಜೆಪಿ ಬಗ್ಗೆ ಹೆಚ್ಚು ಸಂತೃಪ್ತಿ ವ್ಯಕ್ತಪಡಿಸಿದವರ ಪ್ರಮಾಣ ಶೇ.45 ಹಾಗೂ ತೃಪ್ತಿ ವ್ಯಕ್ತಪಡಿಸಿದವರು ಶೇ.26 ಹಾಗೂ ಪರವಾಗಿಲ್ಲ ಎಂದವರು ಶೇ.27.

ನ್ಯಾಯ್ ಘೋಷಣೆ ವಿಳಂಬ

ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವ ನ್ಯಾಯ್ ಯೋಜನೆಯನ್ನು ಮಾ.25ರಂದು ಘೋಷಿಸಿತ್ತಾದರೂ ಚುನಾವಣೆಗೆ ಎರಡೇ ವಾರಗಳಿದ್ದರಿಂದ ಅದು ಬಹಳಷ್ಟು ಜನರನ್ನು ತಲುಪಲು ವಿಫಲವಾಯಿತು. ಚುನಾವಣೆ ಅವಧಿಯಲ್ಲಿ ಇದರ ಬಗ್ಗೆ ಶೇ.46 ಜನರಿಗಷ್ಟೇ ಮಾಹಿತಿಯಿತ್ತು. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಇದರ ಪ್ರಮಾಣ ಶೇ.44 ಇತ್ತು. ನಂತರದ ಒಂದು ತಿಂಗಳ ಅವಧಿಯಲ್ಲಿ ನ್ಯಾಯ್ ಯೋಜನೆ ಬಗ್ಗೆ ಅರಿವಿನ ಹೆಚ್ಚಳ ಕೇವಲ ಶೇ.2 ಆಗಿತ್ತು. ಆದರೆ, ಈ ವೇಳೆಗಾಗಲೇ ಪ್ರಧಾನಮಂತ್ರಿ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ 2 ಸಾವಿರ ರೂ. ರವಾನೆಯಾಗಿದ್ದು ಕೂಡ ಬಿಜೆಪಿಗೆ ನೆರವಾಯಿತು ಎಂದು ಲೋಕನೀತಿ ಸಮೀಕ್ಷೆ ಹೇಳಿದೆ.

ಚುನಾವಣೆ ಪ್ರಕ್ರಿಯೆಗೆ ಪ್ರಣಬ್ ಶ್ಲಾಘನೆ

ಚುನಾವಣಾ ಆಯೋಗದ ಬಗ್ಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಕಿಡಿಕಾರುತ್ತಿರುವ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯಾವುದೇ ಕುಂದಿಲ್ಲದ ಚುನಾವಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯನ್ನು ಕರಾರುವಕ್ಕಾಗಿ ನಡೆಸಲಾಗಿದೆ. ಮೊದಲ ಆಯುಕ್ತ ಸುಕುಮಾರ್ ಅವರಿಂದ ಹಿಡಿದು ಇಂದಿನ ಆಯುಕ್ತರವರೆಗೆ ಸಂಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಚುನಾವಣಾ ಆಯುಕ್ತರು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡುತ್ತಿದ್ದಾರೆ. ಅವರನ್ನು ಟೀಕಿಸುವ ಅಗತ್ಯವಿಲ್ಲ ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *