ಮೂರು ರಾಜ್ಯಗಳ ಮತ ರಹಸ್ಯ: ದೆಹಲಿ ಆಡಳಿತ ಗಾದಿ ನಿರ್ಧರಿಸಲಿರುವ ಉತ್ತರಪ್ರದೇಶ, ಪಶ್ಚಿಮಬಂಗಾಳ, ಒಡಿಶಾ

ನವದೆಹಲಿ: ಎಲ್ಲ ಮತದಾನೋತ್ತರ ಸಮೀಕ್ಷೆಗಳಲ್ಲಿ ಎನ್​ಡಿಎಗೆ ಸರಳ ಬಹುಮತ ನೀಡಲಾಗಿದೆ. ಆದಾಗ್ಯೂ ಉತ್ತರ ಹಾಗೂ ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಪಕ್ಷಗಳು ಗೆಲ್ಲುವ ಸೀಟು ಆಧರಿಸಿ ದೆಹಲಿ ಆಡಳಿತ ಗಾದಿ ಯಾರಿಗೆ ಸಿಗಲಿದೆ ಎನ್ನುವುದು ಖಾತ್ರಿಯಾಗಲಿದೆ. ಉತ್ತರಪ್ರದೇಶ, ಪಶ್ಚಿಮಬಂಗಾಳ, ಒಡಿಶಾದಲ್ಲಿ ಬಿಜೆಪಿ ಹಾಗೂ ಪ್ರತಿಪಕ್ಷಗಳು ಎಷ್ಟು ಸ್ಥಾನ ಗೆಲ್ಲಲಿವೆ ಎನ್ನುವ ಆಧಾರದ ಮೇಲೆ ಹೊಸ ಸರ್ಕಾರದ ಹಣೆಬರಹ ನಿರ್ಧಾರವಾಗಲಿದೆ. ಈ ಮೂರು ರಾಜ್ಯಗಳ ಮಟ್ಟಿಗೆ ಪ್ರತಿ ಸಮೀಕ್ಷೆಯಲ್ಲೂ ವಿಭಿನ್ನ ಭವಿಷ್ಯ ನುಡಿಯಲಾಗಿದೆ. ಅದಲ್ಲದೇ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ಅಂತರ ಕೂಡ ಹೆಚ್ಚಿದೆ. ಹೀಗಾಗಿ ಈ ಮೂರು ರಾಜ್ಯಗಳಲ್ಲಿನ ಅಂತಿಮ ಫಲಿತಾಂಶವು ಪ್ರಧಾನಿ ಹುದ್ದೆ ಯಾರಿಗೆ ಎನ್ನುವುದನ್ನು ನಿರ್ಧರಿಸಲಿದೆ.

ಈ ಮೂರು ರಾಜ್ಯಗಳಲ್ಲಿನ ಮತದಾನೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಭಿನ್ನವಾಗಿವೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ 22 ಸೀಟುಗಳಿಂದ 68 ಸೀಟುಗಳವರೆಗೂ ನೀಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ವ್ಯತ್ಯಾಸವಿರುವುದು ಆಶ್ಚರ್ಯ ಮೂಡಿಸಿದೆ. ಹಾಗೆಯೇ ಮಹಾಮೈತ್ರಿಗೆ 10ರಿಂದ 56 ಸೀಟುಗಳವರೆಗೆ ನೀಡಲಾಗಿದೆ. ಇದೇ ರೀತಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಬಿಜೆಪಿಗೆ ಕ್ರಮವಾಗಿ 3ರಿಂದ 28, 6ರಿಂದ 15 ಸೀಟುಗಳವರೆಗೆ ನೀಡಲಾಗಿದೆ. ಉಳಿದ 25 ರಾಜ್ಯಗಳಲ್ಲಿ ಬಹುತೇಕ ಎಲ್ಲ ಸಮೀಕ್ಷಾ ಏಜೆನ್ಸಿಗಳು ಒಂದೇ ರೀತಿಯ ನಿರೀಕ್ಷೆ ಮಾಡಿವೆ. ಹೀಗಾಗಿ ಮ್ಯಾಜಿಕ್ ನಂಬರ್ 272ನ್ನು ಪಾರು ಮಾಡಲು ಈ ರಾಜ್ಯಗಳಿಗೆ ಸಂಬಂಧಿಸಿ ನೈಜ ಫಲಿತಾಂಶ ಎಷ್ಟು ಬರಲಿದೆ ಎನ್ನುವುದು ಪ್ರಮುಖ ಪಾತ್ರ ವಹಿಸಲಿದೆ. ಉತ್ತರಪ್ರದೇಶದಲ್ಲಿ ಮೈತ್ರಿ ಹೇಗೆ ಕೆಲಸ ಮಾಡಿದೆ, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ರಾಜ್ಯ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಅಥವಾ ಬಿಜೆಪಿ ಪರ ಹೇಗೆ ಮತದಾರರು ಒಲವು ತೋರಿದ್ದಾರೆ ಎನ್ನುವುದನ್ನು ಏಜೆನ್ಸಿಗಳು ನಿಖರವಾಗಿ ಅಳತೆ ಮಾಡಲು ವಿಫಲರಾಗಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಬಿಜೆಪಿ ಮಟ್ಟಿಗೆ ಉತ್ತರಪ್ರದೇಶದಲ್ಲಿ ಕಳೆದುಕೊಂಡಿರುವುದನ್ನು ಒಡಿಶಾ, ಪಶ್ಚಿಮಬಂಗಾಳ ಹಾಗೂ ಈಶಾನ್ಯ ರಾಜ್ಯಗಳು ನೀಡುತ್ತವೆ ಎನ್ನುವ ನಂಬಿಕೆಯಿದೆ. ಹಾಗೆಯೇ ಪ್ರತಿಪಕ್ಷಗಳು ಈ ನಿರೀಕ್ಷೆ ನಿಜವಾಗದಿದ್ದರೆ ಮಹಾಮೈತ್ರಿ ಸರ್ಕಾರದ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರದಲ್ಲಿವೆ.

ಬಿಜೆಡಿ ಷರತ್ತಿನ ಬೆಂಬಲ?: ಒಡಿಶಾ ವಿಶೇಷ ರಾಜ್ಯದ ಸ್ಥಾನಮಾನಕ್ಕೆ ಒಪ್ಪಿಗೆ ನೀಡಿದರೆ ಎನ್​ಡಿಎಗೆ ಬೆಂಬಲ ನೀಡಲು ಬಿಜೆಡಿ ಸಿದ್ಧವಾಗಿದೆ ಎಂದು ಪಕ್ಷದ ವಕ್ತಾರ ಅಮರ್ ಪಟ್ನಾಯಕ್ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಎನ್​ಡಿಎ ಹೆಸರು ಪ್ರಸ್ತಾಪಿಸಿ ಬಿಜೆಡಿ ಈ ಪ್ರಸ್ತಾಪ ಮುಂದಿಟ್ಟಿರುವುದು ಕುತೂಹಲ ಮೂಡಿಸಿದೆ.

300+ ಎಂದ ಬಿಜೆಪಿ

ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ಪಕ್ಷಕ್ಕೆ 300ಕ್ಕೂ ಅಧಿಕ ಸೀಟುಗಳು ದೊರೆಯಲಿವೆ. ಹೀಗಾಗಿ ಎನ್​ಡಿಎ ಸೀಟುಗಳ ಸಂಖ್ಯೆ 350 ದಾಟಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ತಿಳಿಸಿದ್ದಾರೆ. ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಅಧಿಕ ಮತದಾರರ ಅಭಿಪ್ರಾಯ ಪಡೆದು ಸಮೀಕ್ಷೆ ನಡೆಸಲಾಗಿದೆ.

ಎನ್​ಡಿಎ ಔತಣಕೂಟ

ಒಟ್ಟು 14 ಮತದಾನೋತ್ತರ ಸಮೀಕ್ಷೆಗಳ ಪೈಕಿ 12ರಲ್ಲಿ ಆಡಳಿತಾರೂಡ ಎನ್​ಡಿಎಗೆ ಪೂರ್ಣ ಬಹುಮತ ನಿರೀಕ್ಷಿಸಲಾಗಿದೆ. ಹೀಗಾಗಿ ಮಂಗಳವಾರ ಸಂಜೆ ಎನ್​ಡಿಎ ನಾಯಕರ ಔತಣಕೂಟ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹಿರಿಯ ಸಚಿವರು ಕೂಡ ಭಾಗಿಯಾಗಲಿದ್ದಾರೆ. ಸಂಭಾವ್ಯ ಫಲಿತಾಂಶ ಹಾಗೂ ಎನ್​ಡಿಎ ಮುಂದಿನ ನಡೆ ಬಗ್ಗೆ ರ್ಚಚಿಸಲಾಗುತ್ತದೆ.

ಯುವ ಜನತೆ, ಮಹಿಳೆಯರ ಒಲವು?

ಸಮೀಕ್ಷೆ ಪ್ರಕಾರ ಮೊದಲ ಬಾರಿಯ ಮತದಾರರು ಹಾಗೂ ಮಹಿಳೆಯರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ವಿಶೇಷವಾಗಿ ಹಿಂದಿ ಹೃದಯ ಭಾಗದ ರಾಜ್ಯಗಳಲ್ಲಿ ಸಿಎನ್​ಎಕ್ಸ್​ನಡೆಸಿದ ಸಮೀಕ್ಷೆ ಪ್ರಕಾರ ಶೇ.50ರಿಂದ 61 ಯುವಕರು ಬಿಜೆಪಿ ಪರ ನಿಂತಿದ್ದಾರೆ. ಮಹಿಳೆಯರು ಕೂಡ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿರು ವುದು ಈ ಗೆಲುವಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಸಭೆ ರದ್ದುಗೊಳಿಸಿದ ಮಾಯಾವತಿ

ಚಂದ್ರಬಾಬು ನಾಯ್ಡು ಮಧ್ಯಸ್ಥಿಕೆ ಬಳಿಕ ಸೋನಿಯಾ ಹಾಗೂ ರಾಹುಲ್ ಗಾಂಧಿ ಭೇಟಿಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಸಮ್ಮತಿಸಿದ್ದರು. ಆದರೆ ಮತದಾನೋತ್ತರ ಸಮೀಕ್ಷೆ ವರದಿ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಭೇಟಿಯನ್ನು ಮಾಯಾವತಿ ರದ್ದುಗೊಳಿಸಿದ್ದಾರೆ. ಸೋಮವಾರ ಸಂಜೆ ಸಭೆ ನಿಗದಿಯಾಗಿತ್ತು. ಆದರೆ ಬೆಳಗ್ಗೆ ಈ ಕುರಿತು ಮಾಹಿತಿ ನೀಡಿದ ಬಿಎಸ್​ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ, ದೆಹಲಿಗೆ ಮಾಯಾವತಿ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ಚುನಾವಣೆ ಫಲಿತಾಂಶ ಕುರಿತು ಅಖಿಲೇಶ್ ಹಾಗೂ ಮಾಯಾವತಿ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ.

ಗೊಂದಲದ ಗೂಡಾದ ಮಹಾಮೈತ್ರಿ

ನರೇಂದ್ರ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಇಳಿಸುವ ಅತ್ಯುತ್ಸಾಹದ ಲ್ಲಿದ್ದ ಮಹಾಮೈತ್ರಿ ನಾಯಕರು ಮೇ 23ರಂದು ದೆಹಲಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರು. ಎನ್​ಡಿಎ ಹೊರಗಿನ ಪಕ್ಷಗಳ ಮುಖಂಡರಿಗೆ ಖುದ್ದು ಸೋನಿಯಾ ಗಾಂಧಿ ಪತ್ರ ಬರೆದು ಸಭೆಗೆ ಆಹ್ವಾನಿಸಿದ್ದರು. ಆದರೆ ಮತದಾನೋತ್ತರ ಸಮೀಕ್ಷೆ ವರದಿ ಬಳಿಕ ಮೇ 23ರ ಸಭೆ ಬಗ್ಗೆ ಗೊಂದಲ ಆರಂಭವಾಗಿದೆ. ಮೇ 23ಕ್ಕೆ ಯಾವುದೇ ಸಭೆ ಕರೆದಿಲ್ಲ, ಅಂತಹ ಯಾವುದೇ ಪತ್ರ ಬಂದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೇ 23ರ ಸಭೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಕಣಕ್ಕಿಳಿದ ಪವಾರ್: ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಎನ್​ಡಿ ಹಾಗೂ ಯುಪಿಎ ಹೊರತಾದ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಟಿಆರ್​ಎಸ್, ವೈಎಸ್​ಆರ್ ಕಾಂಗ್ರೆಸ್ ಹಾಗೂ ಬಿಜೆಡಿ ಜತೆ ಪವಾರ್ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ನಾಯ್ಡು ಏಕಾಂಗಿ ಹೋರಾಟ

ಉತ್ತರಪ್ರದೇಶ ಮಹಾಮೈತ್ರಿ ನಾಯಕರನ್ನು ಭಾನುವಾರ ಭೇಟಿಯಾಗಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸೋನಿಯಾ ಹಾಗೂ ರಾಹುಲ್ ಗಾಂಧಿ ಜತೆಗೆ ಇನ್ನೊಂದು ಹಂತದ ಮಾತುಕತೆ ನಡೆಸಿದ್ದಾರೆ. ನಂತರ ಕೋಲ್ಕತಕ್ಕೆ ತೆರಳಿದ ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆಸಿದ್ದಾರೆ. ಎನ್​ಡಿಎಗೆ ಬಹುಮತ ಬಂದರೆ ಅಥವಾ ಬರದಿದ್ದರೆ ಪ್ರತಿಪಕ್ಷಗಳ ಕಾರ್ಯತಂತ್ರದ ಬಗ್ಗೆ ಈ ಸರಣಿ ಸಭೆಗಳಲ್ಲಿ ರ್ಚಚಿಸಲಾಗಿದೆ.

ಬಂಗಾಳದಲ್ಲಿ ಮರುಮತದಾನಕ್ಕೆ ಆಗ್ರಹ

ನವದೆಹಲಿ: ಎಲ್ಲ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದ ಕ್ಷೇತ್ರಗಳಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವನ್ನು ಬಿಜೆಪಿ ಒತ್ತಾಯಿಸಿದೆ. ಈ ಕುರಿತು ವಿವರವಾದ ದೂರನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಮಾದರಿ ನೀತಿಸಂಹಿತೆ ಜಾರಿಯಲ್ಲಿರುವವರೆಗೂ ಆ ರಾಜ್ಯದಲ್ಲಿ ಕೇಂದ್ರ ಪಡೆಗಳ ಭದ್ರತೆಯನ್ನು ಮುಂದುವರಿಸುವಂತೆ ಕೋರಿದ್ದಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು, ಏಜೆಂಟರು ಹಾಗೂ ಬೆಂಬಲಿಗರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ಇತರ ಮುಖಂಡರು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ನಿಯೋಗ ಆರೋಪಿಸಿದೆ.

ಗೂಗಲ್​ನಲ್ಲೂ ಪ್ರಧಾನಿ ಮೋದಿ ಮುನ್ನಡೆ

ನವದೆಹಲಿ: ಪ್ರಸಕ್ತ ಚುನಾವಣೆಯಲ್ಲಿ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಪೈಪೋಟಿಯ ನಿಖರ ಫಲಿತಾಂಶ ಮೇ 23ರಂದು ಗೊತ್ತಾಗಲಿದೆ. ಆದರೆ, ಗೂಗಲ್​ನಲ್ಲಿ ಜನಪ್ರಿಯತೆ ವಿಷಯಕ್ಕೆ ಬಂದರೆ, ಪ್ರಧಾನಿ ಮೋದಿ ಈಗಾಗಲೇ ರಾಹುಲ್ ಗಾಂಧಿಗಿಂತ ಭಾರಿ ಮುನ್ನಡೆಯಲ್ಲಿದ್ದಾರೆ. ಸ್ಥಳೀಯವಾಗಿಯೂ ಆಯಾ ರಾಜ್ಯಗಳ ಪ್ರಮುಖ ನಾಯಕರಿಗಿಂತ ಹೆಚ್ಚು ಶೋಧಿಸಲ್ಪಟ್ಟ ಶ್ರೇಯ ಮೋದಿಗಿದೆ. ಚುನಾವಣೆ ಘೋಷಣೆಯಾದ ನಂತರದ ಎರಡು ತಿಂಗಳಲ್ಲಿ ಶೇ.74.7 ಜನರು ‘ಮೋದಿ’ ಹುಡುಕಾಟ ನಡೆಸಿದ್ದರೆ, ರಾಹುಲ್ ಗಾಂಧಿಗಾಗಿ ಸರ್ಚ್ ನಡೆಸಿದವರ ಸಂಖ್ಯೆ ಕೇವಲ ಶೇ.12.4. ಇನ್ನು, ರಾಜ್ಯ ನಾಯಕರ ಪೈಕಿ ಮಾಯಾವತಿ (ಶೇ.43) ಜನಪ್ರಿಯತೆ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ(ಶೇ.23), ಚಂದ್ರಬಾಬು ನಾಯ್ಡು(ಶೇ.15), ಕೆ.ಚಂದ್ರಶೇಖರ್ ರಾವ್ (ಶೇ.11), ನಿತೀಶ್​ಕುಮಾರ್ (ಶೇ.8) ಎಂದು ಗೂಗಲ್ ಟ್ರೆಂಡ್ ದಾಖಲಿಸಿದೆ.

ಮಾನ ರಕ್ಷಣೆಗೆ ಇವಿಎಂ ನೆಪದ ರಾಜಕೀಯ

ನವದೆಹಲಿ: ಲೋಕಸಭಾ ಚುನಾವಣೆಯ ಸಂಭಾವ್ಯ ಸೋಲಿನ ಭಯದಿಂದ ಈಗಾಗಲೇ ಇವಿಎಂ(ವಿದ್ಯುನ್ಮಾನ ಮತಯಂತ್ರ) ಮೇಲೆ ಆರೋಪ ಹೊರಿಸಲು ಪ್ರತಿಪಕ್ಷಗಳು ಆರಂಭಿಸಿವೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಗೆಲುವು ನಿರೀಕ್ಷಿಸಲಾಗಿದೆ. ಎಲ್ಲ ಸಮೀಕ್ಷೆಗಳು ಸುಳ್ಳಾಗಲು ಸಾಧ್ಯವಿಲ್ಲ. ಹೀಗಾಗಿ ನೈಜ ಫಲಿತಾಂಶ ಬರುವ ಮುನ್ನ ಇವಿಎಂ ಮೇಲೆ ಗಭೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ಮತದಾರರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಜೇಟ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.