ಚೌಕಿದಾರ್ ಮೋದಿಗೆ ಮತ್ತೊಮ್ಮೆ ದೇಶ ಸೇವೆ ಅವಕಾಶ: ಸ್ಪಷ್ಟ ಬಹುಮತದ ಸುಳಿವು ನೀಡಿದ ಮತಗಟ್ಟೆ ಸಮೀಕ್ಷೆ

ಬೆಂಗಳೂರು: 16 ನೇ ಲೋಕಸಭೆ ಅಸ್ತಿತ್ವಕ್ಕಾಗಿ ಸುದೀರ್ಘವಾಗಿ ನಡೆದ ಪ್ರಜಾಪ್ರಭುತ್ವದ ಹಬ್ಬದ ಕೊನೆಯ ಹಂತದ ಮತದಾನ ಇಂದು ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಅದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಯೂ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್​ಡಿಎಗೆ ಈ ಬಾರಿಯೂ ಸ್ಪಷ್ಟ ಬಹುಮತ ದೊರೆತಿದೆ. ಚೌಕಿದಾರ್ ನರೇಂದ್ರ ಮೋದಿ ಎರಡನೇ ಬಾರಿಯೂ ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಲು ಮತದಾರ ಸದವಕಾಶ ಕಲ್ಪಿಸಿದ್ದಾನೆ.

ಕಳೆದ ಬಾರಿ ಅತ್ಯಂತ ಕಡಿಮೆ ಸ್ಥಾನಗಳನ್ನು ಗಳಿಸಿ ಪ್ರತಿಪಕ್ಷ ಸ್ಥಾನಮಾನದಿಂದಲೂ ವಂಚಿತವಾಗಿದ್ದ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದ್ದು, ಸ್ಥಾನ ಗಳಿಕೆಯಲ್ಲಿ ಹೆಚ್ಚಳ ಮಾಡಿಕೊಂಡು ಪ್ರತಿಪಕ್ಷ ಜವಾಬ್ದಾರಿ ನಿಭಾಯಿಸುವ ಲಕ್ಷಣಗಳು ಗೋಚರವಾಗಿವೆ.

ರಾಷ್ಟ್ರದ ಚುನಾವಣಾ ಸಮೀಕ್ಷೆ ಸಂಸ್ಥೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 287 ರಿಂದ 306 ಸ್ಥಾನಗಳನ್ನು ಗಳಿಸಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 118 ರಿಂದ 136 ಸ್ಥಾನಗಳನ್ನು ಮಾತ್ರ ಗಳಿಸುವಲ್ಲಿ ಸಫಲವಾಗಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 17 ರಿಂದ 19 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್​​ಗೆ 7 ರಿಂದ 9 ಹಾಗೂ ಜೆಡಿಎಸ್​ಗೆ 1 ರಿಂದ 3 ಸ್ಥಾನಗಳು ಲಭಿಸಲಿವೆ ಎಂದು ದಿಗ್ವಿಜಯ ನ್ಯೂಸ್ ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ.

ನಿರೀಕ್ಷೆಯಂತೆ ಎರಡನೇ ಬಾರಿಯೂ ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೊಮ್ಮೆ ಕೇಂದ್ರದ ಗದ್ದುಗೆಯನ್ನು ಏರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಲೆ ಇನ್ನು ಜೀವಂತವಾಗಿರುವುದು ಸಮೀಕ್ಷೆಯಲ್ಲಿ ಸಾಬೀತಾಗಿದೆ. ಎನ್​ಡಿಎಗೆ ಭಾರಿ ಪೈಪೋಟಿ ನೀಡಿರುವ ಕಾಂಗ್ರೆಸ್​​ ನೇತೃತ್ವದ ಯುಪಿಎ ಈ ಬಾರಿ ಪ್ರತಿಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರವಿಡಬೇಕೆಂದು ಹಲವು ಪಕ್ಷಗಳು ಸೇರಿ ಬಿಜೆಪಿ ವಿರುದ್ಧ ನಡೆಸಿದ ಹೋರಾಟ ಗುರಿ ತಲುಪದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕರ್ನಾಟಕದಲ್ಲೂ ಗರಿಗೆದರಿರುವ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ಮತದಾನೋತ್ತರ ಸಮೀಕ್ಷೆ ಅಂದಾಜಿನ ಉತ್ತರ ನೀಡಿದ್ದು, ಬಿಜೆಪಿಯನ್ನು ದೂರವಿಡಲು ಇದೇ ಮೊದಲು ಬಾರಿಗೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಕೂಡ ಮೋದಿ ಅಲೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ವಿಶೇಷವಾಗಿ ರಾಜ್ಯದ ಜನರ ಗಮನವನ್ನು ಹೆಚ್ಚಾಗಿ ಸೆಳೆದಿದ್ದ ಸಕ್ಕರೆ ನಾಡು ಮಂಡ್ಯ ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಜಯಭೇರಿ ಬಾರಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತಿದ್ದು, ನಿಖಿಲ್​ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಚುನಾವಣಾ ಸಮೀಕ್ಷೆ ಸಂಸ್ಥೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆ ಈ ಕೆಳಕಂಡಂತಿದೆ.

1. ದಿಗ್ವಿಜಯ ನ್ಯೂಸ್​ (ರಾಜ್ಯದ 28 ಕ್ಷೇತ್ರ)
ಬಿಜೆಪಿ- 17 ರಿಂದ 19
ಕಾಂಗ್ರೆಸ್​- 7 ರಿಂದ 9
ಜೆಡಿಎಸ್​- 1 ರಿಂದ 3
ಇತರೆ- 1

2. ಸಿ-ವೋಟರ್​
ಎನ್​ಡಿಎ- 287
ಯುಪಿಎ- 128
ಇತರೆ- 127

3. ಸಿ-ವೋಟರ್(ಕರ್ನಾಟಕ)
ಬಿಜೆಪಿ- 18
ಕಾಂಗ್ರೆಸ್​- 7
ಜೆಡಿಎಸ್​-​ 2
ಇತರೆ- 1

4. ಟೈಮ್ಸ್​ ನೌ
ಎನ್​ಡಿಎ- 306
ಯುಪಿಎ- 132
ಇತರೆ- 104

5. ಎನ್​ಡಿಟಿವಿ
ಎನ್​ಡಿಎ- 300
ಯುಪಿಎ- 127
ಇತರೆ- 115

6. ಎಬಿಪಿ ನ್ಯೂಸ್​ 
ಎನ್​ಡಿಎ- 298
ಯುಪಿಎ- 118
ಇತರೆ- 126

7. ಚಾಣಕ್ಯ 
ಎನ್​ಡಿಎ- 298
ಯುಪಿಎ- 118
ಇತರೆ- 126

8. ರಿಪಬ್ಲಿಕ್​ ನ್ಯೂಸ್​
ಎನ್​ಡಿಎ- 287
ಯುಪಿಎ- 128
ಇತರೆ- 127

9. ಇಂಡಿಯಾ ಟುಡೆ
ಎನ್​ಡಿಎ- 144- ರಿಂದ 162
ಯುಪಿಎ- 65 ರಿಂದ 84
ಇತರೆ- 35 ರಿಂದ 46

ಕಳೆದ ಏಪ್ರಿಲ್​ 11 ರಂದು ಪ್ರಾರಂಭವಾಗಿ ಏಳು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ 29 ರಾಜ್ಯಗಳಲ್ಲಿ ಏಳು ಹಂತದಲ್ಲಿ ಒಟ್ಟು 542 ಕ್ಷೇತ್ರಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನಕ್ಕೆ ಇಂದು(ಭಾನುವಾರ) ತೆರೆಬಿದ್ದಿದೆ. ಚುನಾವಣಾ ರಣಕಣದಲ್ಲಿ ತೊಡೆತಟ್ಟಿದ್ದ ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭ್ರದವಾಗಿದ್ದು, ಮೇ 23ಕ್ಕೆ ಹೊರಬೀಳಲಿದೆ.

Leave a Reply

Your email address will not be published. Required fields are marked *