ಜೆಡಿಎಸ್‌ ಹೀನಾಯ ಸೋಲಿನ ಹೊಣೆಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಎಚ್‌ ವಿಶ್ವನಾಥ್‌?

ಮೈಸೂರು: ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಳಪೆ ಫಲಿತಾಂಶ ಸಾಧಿಸಿರುವುದಕ್ಕೆ, ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಹಾಗಾಗಿ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯದ 28 ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಭಾಗವಾಗಿ ಕಾಂಗ್ರೆಸ್‌ 21 ಮತ್ತು ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಜೆಡಿಎಸ್‌ ಕೇವಲ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

ಜೆಡಿಎಸ್‌ ಕಣಕ್ಕಿಳಿಸಿದ ಕ್ಷೇತ್ರಗಳ ಪೈಕಿ ಹಾಸನದಿಂದ ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಬಿಜೆಪಿ ಅಭ್ಯರ್ಥಿ ಎ ಮಂಜು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಶ್ವನಾಥ್‌, ಸೋಲಿನ ಹೊಣೆಯನ್ನು ಹೊತ್ತು ತಾನೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಜ್ಯಾಧ್ಯಕ್ಷರಾದಾಗಿನಿಂದಲೂ ಕಾಂಗ್ರೆಸ್‌ ನಾಯಕರ ಹೇಳಿಕೆಗಳ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದ ವಿಶ್ವನಾಥ್‌, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಚುನಾವಣೆ ಇದಾಗಿದ್ದು, ಆರೋಗ್ಯದ ದೃಷ್ಟಿಯಿಂದ ಈ ಜವಾಬ್ದಾರಿಯನ್ನು ಬೇರೆ ಯಾರಿಗಾದರೂ ವಹಿಸುವಂತೆ ದೇವೇಗೌಡರಲ್ಲಿ ಮನವಿ ಮಾಡಿದ್ದರೂ ಕೂಡ ಈ ಬೇಡಿಕೆಗೆ ಗೌಡರು ಒಪ್ಪಿರಲಿಲ್ಲ. (ದಿಗ್ವಿಜಯ ನ್ಯೂಸ್)