ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ನವದೆಹಲಿ: ಹದಿನೇಳನೇ ಲೋಕಸಭೆಯ 73 ದಿನಗಳ ಮತೋತ್ಸವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. ಮಾ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ದೇಶದ ಅಂದಾಜು 91 ಕೋಟಿ ಮತದಾರರು ಮೇ 23ರ ನಿರ್ಣಾಯಕ ದಿನಕ್ಕೆ ಕಾಯುತ್ತಿದ್ದರು. ಈ ‘ಬಿಗ್ ಡೇ’ ದಿನಕ್ಕೂ ಮುನ್ನ 7 ಹಂತದ ಮತದಾನವಾಗಿದ್ದು, ತಮಿಳುನಾಡಿನ ವೆಲ್ಲೂರು ಹೊರತುಪಡಿಸಿ ಉಳಿದ 542 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿ ಸ್ವತಂತ್ರ ಭಾರತ ಇತಿಹಾಸದಲ್ಲೇ ಅತಿ ಹೆಚ್ಚಿನ ಶೇ.67.11 ಮತ ಪ್ರಮಾಣ ದಾಖಲಾಗಿದೆ. ಇದು ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಿರೀಕ್ಷೆ ಗರಿಗೆದರಲು ಕಾರಣವಾಗಿದೆ. ಮತಪ್ರಮಾಣ ಹೆಚ್ಚಾಗಿರುವುದು ಆಡಳಿತಾರೂಢ ಪಕ್ಷದ ಮೇಲಿನ ಒಲವಿನ ಸಂಕೇತ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೆ, ಆಡಳಿತ ವಿರೋಧಿ ಅಲೆ ಕಾರಣದಿಂದ ಜನರು ಮತಗಟ್ಟೆಗೆ ಬಂದಿದ್ದಾರೆ ಎಂದು ಪ್ರತಿಪಕ್ಷಗಳು ವ್ಯಾಖ್ಯಾನಿಸುತ್ತಿವೆ. ಈ ಮತಗಟ್ಟೆ ಕುತೂಹಲಕ್ಕೆ ಗುರುವಾರ ಸಂಜೆಯೊಳಗೆ ತೆರೆ ಬೀಳಲಿದೆ. ಮತಗಟ್ಟೆ ಸಮೀಕ್ಷೆ ಪ್ರಕಾರ ಆಡಳಿತಾರೂಢ ಬಿಜೆಪಿ ಹಾಗೂ ಎನ್​ಡಿಎ ಮತ್ತೆ ಸರ್ಕಾರ ರಚಿಸಲಿದೆ. ಆದರೆ ಈ ಬಾರಿ ಮನದಾಳ ಅರಿಯಲು ಸಾಧ್ಯವಾಗದ ಮತದಾರರು ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನುವ ಮಾತುಗಳಿವೆ. ಹೀಗಾಗಿ ‘ಅಂಡರ್ ಕರೆಂಟ್’ ಎಂದು ಉಲ್ಲೇಖಿಸುವ ಮತದಾರರು ನೀಡುವ ಆದೇಶವು ಆಡಳಿತಾರೂಢ ಪಕ್ಷವನ್ನು 200ಕ್ಕೂ ಇಳಿಸಬಹುದು ಅಥವಾ 300ರ ಗಡಿಯನ್ನೂ ದಾಟಿಸಬಹುದು ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಕೈ ನಾಯಕರೊಂದಿಗೆ ಸೋನಿಯಾ ಸಭೆ

ನವದೆಹಲಿ: ಅತಂತ್ರ ಲೋಕಸಭೆ ನಿರ್ವಣವಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕರೊಂದಿಗೆ ಬುಧವಾರ ಚರ್ಚೆ ನಡೆಸಿದ್ದಾರೆ. ಎನ್​ಡಿಎ ಹೊರತಾದ ಪಕ್ಷಗಳೊಂದಿಗೆ ಮೈತ್ರಿ ಸಾಧಿಸುವ ವಿಚಾರವನ್ನು ಸಭೆಯಲ್ಲಿ ಪ್ರಮುಖವಾಗಿ ರ್ಚಚಿಸಲಾಯಿತು. ಜತೆಗೆ, ಗುರುವಾರ ಯುಪಿಎ ಮುಖಂಡರ ಸಭೆಯಲ್ಲಿ ರ್ಚಚಿಸಬೇಕಾದ ವಿಷಯಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು ಎಂದು ತಿಳಿದು ಬಂದಿದೆ. ಪಕ್ಷದ ಹಿರಿಯ ನಾಯಕರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿಂಸಾಚಾರ ತಡೆಗೆ ಕ್ರಮ ಕೈಗೊಳ್ಳಿ

ಮತ ಎಣಿಕೆ ದಿನದಂದು ಸಂಭಾವ್ಯ ಹಿಂಸಾಚಾರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಇದಲ್ಲದೇ ಹಿಂಸಾಚಾರಕ್ಕಿಳಿಯುವಂತೆ ಹಲವರು ಪ್ರಚೋದಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರಗಳಲ್ಲಿ ಕೆಲ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ನೀಡಿರುವ ಹೇಳಿಕೆಗಳು ಹಿಂಸೆಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಎಕ್ಸಿಟ್ ಪೋಲ್ ಮೋಸ

ನವದೆಹಲಿ: ಮತದಾನೋತ್ತರ ಸಮೀಕ್ಷೆಗಳು ಮೋಸದಿಂದ ಕೂಡಿದ್ದು, ಅವುಗಳನ್ನು ನಂಬದಿರುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಿಮ್ಮ ಶ್ರಮ ನೀರುಪಾಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಜತೆಗೆ, ಮತ ಎಣಿಕೆ ವೇಳೆ ನಡೆಯಬಹುದಾದ ಅಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಮತದಾನೋತ್ತರ ಸಮೀಕ್ಷೆ ಪ್ರಕಟವಾದ ಬಳಿಕ ಯಾವುದೇ ಹೇಳಿಕೆ ನೀಡದ ರಾಹುಲ್ ಗಾಂಧಿ , ಎರಡು ದಿನಗಳ ಬಳಿಕ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಧ್ವನಿಮುದ್ರಿತ ಸಂದೇಶ ನೀಡಿ ಸಮೀಕ್ಷೆ ಹಬ್ಬಿಸಿರುವ ವದಂತಿಗಳನ್ನು ನಂಬಬೇಡಿ ಎಂದಿದ್ದರು.

ಮತೋತ್ಸವದ ಕೊನೆಯ ಎರಡು ಕಡೆ ಮತದಾನ

ಏಳನೇ ಹಂತದ ಮತದಾನ ಮುಕ್ತಾಯದ ಬಳಿಕವೂ ಪಶ್ಚಿಮ ಬಂಗಾಳದ ಕೋಲ್ಕತ ಉತ್ತರ ಕ್ಷೇತ್ರದ ಹಾಗೂ ಅಮೃತಸರದ ತಲಾ ಒಂದು ಮತಗಟ್ಟೆಯಲ್ಲಿ ಬುಧವಾರ ಮರು ಮತದಾನ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಅಮೃತಸರದ ಮತಗಟ್ಟೆಯಲ್ಲಿ ಮರುಮತದಾನ ನಡೆದಿದೆ ಎಂದು ಆಯೋಗ ತಿಳಿಸಿದೆ. ಇನ್ನೊಂದೆಡೆ ಕೋಲ್ಕತ ಉತ್ತರ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದ್ದರಿಂದ ಮರುಮತದಾನಕ್ಕೆ ಬಿಜೆಪಿ ಒತ್ತಾಯಿಸಿತ್ತು.

10 ಅಧಿಕಾರಿಗಳ ಅಮಾನತು: ಆಂಧ್ರಪ್ರದೇಶದ ಚಂದ್ರಗಿರಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆ ಅಧಿಕಾರಿಗಳು ಹಾಗೂ ಐದು ಸಹಾಯಕ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಈ ಮತಗಟ್ಟೆಗಳಲ್ಲಿ ಸಮುದಾಯವೊಂದರ ಮತದಾರರಿಗೆ ಟಿಡಿಪಿ ಕಾರ್ಯಕರ್ತರು ಅವಕಾಶ ನೀಡಿಲ್ಲ. ಇದಕ್ಕೆ ಮತಗಟ್ಟೆ ಅಧಿಕಾರಿಗಳು ಸಹಕರಿಸಿ ದ್ದಾರೆ ಎಂದು ವೈಎಸ್​ಆರ್ ಕಾಂಗ್ರೆಸ್ ಅಭ್ಯರ್ಥಿ ಭಾಸ್ಕರ್ ರೆಡ್ಡಿ ಆಯೋಗಕ್ಕೆ ದೂರು ನೀಡಿದ್ದರು.

ಚುನಾವಣೆ ಹಿನ್ನೋಟ

 • ಅರ್ಹ ಮತದಾರರು: 90.99 ಕೋಟಿ
 • ಮತ ಚಲಾಯಿಸಿದವರು: 61.06 ಕೋಟಿ
 • ಅರ್ಹ ಸೇವಾ ಮತದಾರರು: 18 ಲಕ್ಷ
 • ಮತ ಚಲಾಯಿಸಿದ ಸೇವಾ ಮತದಾರರು: 16.49 ಲಕ್ಷ
 • ಒಟ್ಟು ಮತಗಟ್ಟೆ: 10.3 ಲಕ್ಷ
 • ಲೋಕಸಭಾ ಕ್ಷೇತ್ರ: 542
 • ಇವಿಎಂ-ವಿವಿಪ್ಯಾಟ್ ಮತ ಹೊಂದಾಣಿಕೆ: 20,600
 • ಒಟ್ಟು ಅಭ್ಯರ್ಥಿಗಳು: 7,928
 • ಪುರುಷ ಅಭ್ಯರ್ಥಿಗಳು: 7199
 • ಮಹಿಳಾ ಅಭ್ಯರ್ಥಿಗಳು: 724
 • ತೃತೀಯ ಲಿಂಗಿ ಅಭ್ಯರ್ಥಿಗಳು: 05

Leave a Reply

Your email address will not be published. Required fields are marked *