ಅಲ್ಲಿ ಸೋತರೆ ಇಲ್ಲಿ ಪರಿಣಾಮ: ಮೈತ್ರಿ ಮೇಲೆ ಲೋಕಸಭೆ, ಉಪಚುನಾವಣೆ ಫಲಿತಾಂಶ ಎಫೆಕ್ಟ್

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಏರುಪೇರು ಮಾಡುವುದಂತೂ ದಿಟ. ಈಚಿನ ವರ್ಷಗಳಲ್ಲಿ ಬಲು ಅಪರೂಪ ಎಂಬಂತೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕಣಕ್ಕಿಳಿದು ಬಿಜೆಪಿಗೆ ನೇರ ಸವಾಲೊಡ್ಡಿತ್ತು. ಬಿಜೆಪಿ ಕೂಡ ಮೈತ್ರಿಯ ಹುಳುಕನ್ನೇ ಬಂಡವಾಳವಾಗಿಸಿ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಶ್ರಮ ಹಾಕಿತ್ತು. ಇದೀಗ ಇತ್ತಂಡಗಳ ‘ಬಂಡವಾಳ’ ಏನೆಂಬುದು ಗುರುವಾರ ಮಧ್ಯಾಹ್ನದೊಳಗಾಗಿ ಬಹಿರಂಗವಾಗಲಿದೆ. ಬಿಜೆಪಿಯು 18 ಕ್ಷೇತ್ರಗಳಿಗಿಂತ ಹೆಚ್ಚು ಗೆದ್ದರೆ, 2 ಉಪಚುನಾವಣೆ ಪೈಕಿ ಒಂದು ಕಡೆ ಜಯಿಸಿದೇ ಆದರೆ ಮೈತ್ರಿ ಸರ್ಕಾರಕ್ಕೆ ಆಪತ್ತು ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ. ಒಂದೆಡೆ ಮುಖ್ಯಮಂತ್ರಿ ಕುರ್ಚಿಗೆ ಈ ಫಲಿತಾಂಶ ಸಂಚಕಾರ ತರುವ ಸಾಧ್ಯತೆ ಇದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕತ್ವದ ಮೇಲೂ ಪರಿಣಾಮ ಬೀರಲಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ, ಈ ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಪರಿಣಾಮ, ಬಿಜೆಪಿ ನಾಯಕತ್ವ, ಒಂದು ವರ್ಷದ ಸರ್ಕಾರದ ಬಗೆಗಿನ ಜನಾಭಿಪ್ರಾಯದ ಬಗ್ಗೆ ಸ್ಪಷ್ಟ ಉತ್ತರ ನೀಡಲಿದೆ.

ಪ್ರಭಾವಿಗಳ ಭವಿಷ್ಯ ನಿರ್ಧಾರ

ಮೈಸೂರಿನಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಗೆದ್ದರೆ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಪ್ರಭಾವಿ, ರಾಜ್ಯದಲ್ಲೂ ಹಿಡಿತ. ಸೋತರೆ ರಾಜಕೀಯ ಜೀವನ ಕಷ್ಟವಾಗಲಿದೆ. ಶಿವಮೊಗ್ಗದಲ್ಲಿ ಬಿಜೆಪಿ ಸೋತರೆ ಯಡಿಯೂರಪ್ಪಗೆ ಪಕ್ಷದಲ್ಲಿ ದೊಡ್ಡ ಹಿನ್ನಡೆಯಾಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆದ್ದರೆ ಬಿಜೆಪಿ ಭದ್ರಕೋಟೆ ಪುಡಿಯಾದಂತೆ. ಬೀದರ್ ಅಥವಾ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ವಿಧಾನಸಭೆಗೆ ಉಪಚುನಾವಣೆ ನಡೆಯಬೇಕಾಗುತ್ತದೆ. ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸಿದರೆ ಹೊಸ ಇತಿಹಾಸದ ಜತೆಗೆ ಸಿಎಂಗೆ ದೊಡ್ಡ ಹಿನ್ನಡೆ. ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್ ಗೆದ್ದರೆ ರಾಜಕೀಯ ಇಳಿಹೊತ್ತಲ್ಲಿ ಒಂದೊಳ್ಳೆ ಅವಕಾಶ. ಕೋಲಾರದಲ್ಲಿ ಮುನಿಯಪ್ಪ ಸೋಲುಂಡರೆ ಸತತ ಗೆಲುವಿನ ಕೊಂಡಿ ಕಡಿದಂತಾಗುತ್ತದೆ. ಗೆದ್ದರೆ ದೊಡ್ಡ ಮಟ್ಟದ ಪ್ರತಿರೋಧದ ಅಲೆ ನಡುವೆ ಈಜಿದ ಸಾಧನೆ. ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಗೆಲ್ಲದಿದ್ದರೆ ರಾಜಕೀಯ ಜೀವನ ಅಂತ್ಯ.

ಉಪ ಪ್ರಭಾವ

ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳ ಅಭ್ಯರ್ಥಿಗಳು ಜಯಿಸುತ್ತಾರೆ. ಸೋತರೆ, ಸರ್ಕಾರದ ಆಡಳಿತ ಜನರಿಗೆ ಇಷ್ಟವಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ. ಚಿಂಚೋಳಿ ಹಾಗೂ ಕುಂದಗೋಳದಲ್ಲಿ ಕನಿಷ್ಠ ಒಂದರಲ್ಲಿ ಬಿಜೆಪಿ ಗೆದ್ದರೂ ಅದನ್ನು ಸರ್ಕಾರದ ವಿರುದ್ಧ ಜನಮತ ಎಂದೇ ಪ್ರಚಾರ ಮಾಡಲಾಗುತ್ತದೆ. ಇದರಿಂದ ಕಾಂಗ್ರೆಸ್​ನಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಗಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು.

ಸಮ್ಮಿಶ್ರ ಸಂದೇಶಗಳೇನು?

 • ಕನಿಷ್ಠ 15 ಸ್ಥಾನ ಗೆಲ್ಲದೆ ಹೋದರೆ ಮೈತ್ರಿ ಲಾಭವಲ್ಲ ಎಂಬುದು ಸಾಬೀತು
 • ಮೈತ್ರಿಯನ್ನು ಜನ ಒಪ್ಪಿಲ್ಲ ಎಂಬ ಸಂದೇಶ
 • ಎರಡೂ ಪಕ್ಷಗಳ ಮತ ಪರಸ್ಪರ ವರ್ಗಾವಣೆಯಾಗಲ್ಲ ಎಂಬ ಅರಿವು

ನಾಯಕರಿಗಾಗುವ ಲಾಭ-ನಷ್ಟ

 • ಕಾಂಗ್ರೆಸ್ ಸಾಧನೆ ವೃದ್ಧಿಯಾದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುರ್ಚಿ ಭದ್ರ
 • ಚುನಾವಣೆಯಲ್ಲಿ ಸೋತರೂ ನಾಯಕತ್ವ ಉಳಿಸಿಕೊಂಡ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ
 • ಮತ್ತೆ ಸಿಎಂ ಆಗಬೇಕೆಂಬ ಪ್ರಯತ್ನದಲ್ಲಿರುವ ಯಡಿಯೂರಪ್ಪಗೂ ನಿರ್ಣಾಯಕ
 • ದೇವೇಗೌಡರು ಮೊಮ್ಮಕ್ಕಳೊಂದಿಗೆ ಗೆದ್ದರೆ ಜೆಡಿಎಸ್​ಗೆ ಭದ್ರ ನೆಲೆ ಕೊಡುವ ಅವಕಾಶ

ಮತ ಎಣಿಕೆ ಪ್ರಕ್ರಿಯೆ

 • ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭ
 • ಮೊದಲು ಅಂಚೆ ಮತಪತ್ರ, ಇಟಿಬಿಎಸ್ ಎಣಿಕೆ. ಬಳಿಕ ಇವಿಎಂ ಮತ ಎಣಿಕೆ
 • ಇವಿಎಂ ಮತ ಎಣಿಕೆ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರವಾರು 5 ವಿ.ವಿ. ಪ್ಯಾಟ್​ಗಳನ್ನು ಆಯ್ಕೆ ಮಾಡಿ

ಮತಚೀಟಿ ಎಣಿಕೆ

# ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.

ಘಟಾನುಘಟಿಗಳ ಸ್ಪರ್ಧೆ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಹೆಗಡೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕಾಂಗ್ರೆಸ್​ನ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ, ಶೋಭಾ ಕರಂದ್ಲಾಜೆ ಸೇರಿ ಕುತೂಹಲ ಕೆರಳಿಸಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.

ಬೈಎಲೆಕ್ಷನ್ ಸಸ್ಪೆನ್ಸ್

ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕೂಡ ಗುರುವಾರ ಪ್ರಕಟಗೊಳ್ಳಲಿದೆ. ದೋಸ್ತಿ ಪಕ್ಷಗಳು ಈ ಪೈಕಿ ಒಂದು ಕಳೆದುಕೊಂಡರೂ ಸಹಜವಾಗಿಯೇ ವಿಧಾನಸಭೆಯಲ್ಲಿ ಬಿಜೆಪಿ ಬಲ ಹೆಚ್ಚಳವಾಗಲಿದೆ. ಇದು ಕೂಡ ಸಮ್ಮಿಶ್ರ ಸರ್ಕಾರಕ್ಕೆ ಸವಾಲಾಗಿದೆ.

ಲೆಕ್ಕಾಚಾರಗಳೇನು?

 • ಬಿಜೆಪಿ ಸೀಟು 20ರ ಗಡಿದಾಟಿದರೆ ಕಾಂಗ್ರೆಸ್​ನ ಅತೃಪ್ತರ ನಡೆ ಬಿಜೆಪಿಯತ್ತ ವಾಲಬಹುದು
 • ಈ ಬೆಳವಣಿಗೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯಬಹುದು
 • ಕಾಂಗ್ರೆಸ್ ಅತೃಪ್ತರ ಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಬಹುದು
 • ಕಾಂಗ್ರೆಸ್ ದೋಸ್ತಿ ವಿರುದ್ಧ ತಿರುಗಿಬಿದ್ದರೆ ಎಚ್ಡಿಕೆ ರಾಜೀನಾಮೆ ನೀಡಬಹುದು
 • ಕಾಂಗ್ರೆಸ್​ನ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬಹುದು
 • ಅಂತಿಮವಾಗಿ ವಿಧಾನಸಭೆ ವಿಸರ್ಜನೆಯಂತಹ ಕಾರ್ಯಕ್ಕೆ ಕೈಹಾಕಬಹುದು.