ಸಂಸತ್ತಿಗೆ 28 ಕನ್ನಡಿಗರು: ಇವರು ನಮ್ಮ ಹೆಮ್ಮೆ

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎನಿಸಿಕೊಂಡಿರುವ ಕರ್ನಾಟಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ನೀಡಿದೆ. ಆರಂಭದಿಂದಲೂ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಲೇ ಬಂದಿದ್ದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಪ್ರಬಲ ಕೋಟೆಯನ್ನು ಛಿದ್ರಗೊಳಿಸಿದ್ದಲ್ಲದೆ. ನಿರೀಕ್ಷೆಗೂ ಮೀರಿ 25 ಸ್ಥಾನಗಳಿಸುವ ಮೂಲಕ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದ್ದಾರೆ.

ದೇವೇಗೌಡರನ್ನು ಕಾಡಿದ ಸಂಖ್ಯೆ

ಹಾಸನ: ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 9 ಅಶುಭ ಸಂಖ್ಯೆ. ಹೀಗಾಗಿ, 2019ರ ಚುನಾವಣೆಯಲ್ಲಿ ಅವರು ಸೋಲುತ್ತಾರೆ’ ಎಂಬ ಮಾಜಿ ಸಚಿವ ಎ. ಮಂಜು ಭವಿಷ್ಯ ನಿಜವಾಗಿದೆ. ದೇವೇಗೌಡರು 1962ರಿಂದ 1985ರವರೆಗೆ ಸತತವಾಗಿ ಎಲ್ಲ ವಿಧಾನಸಭಾ ಚುನಾವಣೆಗಳಲ್ಲೂ ಹೊಳೆನರಸೀಪುರ ಕ್ಷೇತ್ರದಿಂದ ಆಯ್ಕೆಯಾಗಿ ಡಬಲ್ ಹ್ಯಾಟ್ರಿಕ್ ಸಾಧಿಸಿದ್ದರು. ಅಲ್ಲಿಯವರೆಗೂ ಸೋಲಿಲ್ಲದ ಸರದಾರ ಆಗಿದ್ದ ಅವರು 1989ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಜಿ.ಪುಟ್ಟಸ್ವಾಮಿಗೌಡರ ಎದುರು 7836 ಮತಗಳ ಅಂತರದಿಂದ ಮೊದಲ ಬಾರಿಗೆ ಸೋತಿದ್ದರು. ಬಳಿಕ 1999ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್​ನ ತೇಜಸ್ವಿನಿ ಎದುರು ಸೋತಿದ್ದರು. ಚುನಾವಣೆಗೂ ಮೊದಲೇ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು 1989-1999ರ ಚುನಾವಣೆ ಫಲಿತಾಂಶಗಳನ್ನು ಪ್ರಸ್ತಾಪಿಸಿ 2019 ಗೌಡರಿಗೆ ಅಶುಭ, ಅವರು ಸೋಲುತ್ತಾರೆ ಎಂದಿದ್ದರು.

ಪ್ರಜ್ವಲ್ ಗೆದ್ದರೂ ಇಲ್ಲ ಸಂಭ್ರಮಾಚರಣೆ

ಹೊಳೆನರಸೀಪುರ: ಪಟ್ಟಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣರ ಜಯದ ಸಂಭ್ರಮಾಚರಣೆ ನಡೆಯದೆ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿಯ ಸೋಲಿನಿಂದ ವಿಚಲಿತರಾಗಿದ್ದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಸನದಲ್ಲಿ ನೀಡಿದ ಖಡಕ್ ಸಂದೇಶದಿಂದ ಎಲ್ಲವೂ ಸ್ಥಗಿತಗೊಂಡಿತು. ಕೇವಲ ಇಬ್ಬರು ಕಾರ್ಯಕರ್ತರು ಮಾತ್ರ ಪಟಾಕಿ ಸಿಡಿಸಿದ್ದರು, ಆದರೆ ಸಂದೇಶ ತಲುಪಿದೊಡನೆ ನಿರಾಸೆಯಿಂದ ತೆರಳಿದರು.

ಅಪ್ಪ ಸಂಸದ, ಮಗ ಎಂಎಲ್​ಎ

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ.ಉಮೇಶ ಜಾಧವ್ ಗೆದ್ದು ಸಂಸತ್ ಪ್ರವೇಶಿಸಿದರೆ, ಅವರ ಪುತ್ರ ಡಾ. ಅವಿನಾಶ ಜಾಧವ್ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿ ವಿಧಾನಸಭೆಗೆ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ತಂದೆ-ಮಗ ಏಕಕಾಲಕ್ಕೆ ಅದೂ ಮೊದಲ ಚುನಾವಣೆ (ಡಾ.ಉಮೇಶ ಈ ಹಿಂದೆ ಎಂಎಲ್​ಎ ಆಗಿದ್ದರು)ಯಲ್ಲಿ ಎಂಪಿ-ಎಂಎಲ್​ಎ ಆಗುವ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ರಾಜ್ಯ ಬಿಜೆಪಿಗರಿಗೆ ಕನಿಷ್ಠ 7 ಸಚಿವಗಿರಿ?

ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಈ ಬಾರಿ 25 ಸಂಸದರನ್ನು ನೀಡಿದ್ದು, ಅನೇಕರಲ್ಲಿ ಸಚಿವಗಿರಿ ಕನಸು ಚಿಗುರಿದೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾಗಿದ್ದರಿಂದ ಅದೇ ಸಮುದಾಯದ ಧಾರವಾಡದ ಪ್ರಲ್ಹಾದ ಜೋಷಿಗೆ ಸ್ಥಾನ ಬಹುತೇಕ ಖಚಿತ. ಹಾಲಿ ಸಚಿವ ಡಿ.ವಿ.ಸದಾನಂದಗೌಡ ಸ್ಥಾನ ವಂಚಿತರಾಗುವ ಸಾಧ್ಯತೆ ಕ್ಷೀಣ. ಕಳೆದ ಬಾರಿ ಸಚಿವರಾಗಿದ್ದ ರಮೇಶ್ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ ವಯಸ್ಸಿನ ಕಾರಣಕ್ಕೆ ಹಾಗೂ ಹಲವು ವಿವಾದ ಮಾಡಿಕೊಂಡಿರುವ ಅನಂತಕುಮಾರ್ ಹೆಗಡೆ ಸಚಿವರಾಗುವ ಸಾಧ್ಯತೆ ಕಡಿಮೆ. ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್ ಹಾಗೂ ಸಂವಿಧಾನ ಕುರಿತು ಬದ್ಧತೆ ತೋರಿಸಲು ಪರಿಶಿಷ್ಟ ಸಮುದಾಯದ ವಿ. ಶ್ರೀನಿವಾಸ ಪ್ರಸಾದ್​ಗೆ ಮಣೆಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಹಿಂಸಾ ನೌಕರರ ಸೇಡು!?

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಉಂಟಾಗಲು ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದ್ದು ಪ್ರಬಲ ಕಾರಣ ಎಂಬ ವಾದ ಕೇಳಿ ಬಂದಿದೆ. ಸುಪ್ರೀಂಕೋರ್ಟ್​ನಲ್ಲಿ ಬಡ್ತಿ ಮೀಸಲಾತಿ ಕಾಯ್ದೆ ಬಿದ್ದು ಹೋದರೂ ಸಂರಕ್ಷಿಸಲು ವಿಶೇಷ ಕಾಯ್ದೆ ಜಾರಿಗೊಳಿಸಿದ ಪರಿಣಾಮ ಮತ್ತೊಂದು ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ್ ಈ ಕಾಯ್ದೆಯನ್ನು ಎತ್ತಿ ಹಿಡಿಯಿತು. ಇದರಿಂದ ರಾಜ್ಯದ ಸರಿಸುಮಾರು 5.60 ಲಕ್ಷ ಸರ್ಕಾರಿ ನೌಕರರಲ್ಲಿ ಶೇ.80ಕ್ಕೂ ಹೆಚ್ಚು ಸಂಖ್ಯೆಯ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ (ಅಹಿಂಸಾ) ವರ್ಗದ ನೌಕರರು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ರಾಜ್ಯ ಸರ್ಕಾರದ ವಿರುದ್ಧ ಗುಪ್ತಗಾಮಿನಿಯಾಗಿ ಕೆಲಸ ಮಾಡಿದರು ಎನ್ನಲಾಗಿದೆ. ಇವರ ಕುಟುಂಬದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆನ್ನಲಾಗಿದೆ.

ಹಾಲು ವ್ಯಾಪಾರಿ ಈಗ ಸಂಸದ

ಕೋಲಾರ/ಮಾಸ್ತಿ: ಒಂದು ಕಾಲದಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿ ಈಗ ಸಂಸತ್ ಭವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಎಸ್.ಮುನಿಸ್ವಾಮಿ ಮೂಲತಃ ಮಾಲೂರು ತಾಲೂಕು ಟೇಕಲ್​ನ ಯಲುವಗುಳಿ ಗ್ರಾಮದವರು. ಪಿಯುಸಿ ವ್ಯಾಸಂಗದ ಬಳಿಕ ಬೆಂಗಳೂರಿಗೆ ಹೊರಟು ಮನೆ ಮನೆಗೆ ಹಾಲು ಹಾಕುತ್ತಿದ್ದರು. ಆ ವ್ಯಾಪಾರ ಬೃಹತ್ತಾಗಿ ಬೆಳೆಯಿತು. ಕಾಡುಗುಡಿ ವ್ಯಾಪ್ತಿಯ ಸೀಗೆಹಳ್ಳಿ ಗ್ರಾಪಂ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದರು. ಮೊದಲಿಗೆ ಕಾಂಗ್ರೆಸ್​ನಲ್ಲಿದ್ದು, ಮಲ್ಲಿಕಾರ್ಜುನ ಖರ್ಗೆಯವರ ಬಲಗೈ ಬಂಟರಾಗಿದ್ದರು. ಬಳಿಕ ಆರ್​ಎಸ್​ಎಸ್​ನ ಸಕ್ರಿಯ ಕಾರ್ಯಕರ್ತರಾದರು. ಬೆಂಗಳೂರು ಮಹಾನಗರ ಪಾಲಿಕೆಯ ಕಾಡುಗುಡಿ ವಾರ್ಡ್​ನ ಕಾಪೋರೇಟರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಅರವಿಂದ ಲಿಂಬಾವಳಿ ಶಿಷ್ಯರಾಗಿದ್ದು, ಹಿಂದೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಇದೀಗ ಸಂಸದರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *