ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

| ಮಂಜು ಬನವಾಸೆ ಹಾಸನ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬದ ಮೂರನೇ ತಲೆಮಾರಿನ ಭವಿಷ್ಯಕ್ಕಾಗಿ ಮಾಡಿದ ‘ತವರು ಕ್ಷೇತ್ರದ ತ್ಯಾಗ’ವೇ ದುಬಾರಿಯಾಗಿ ಪರಿಣಮಿಸಿದೆ! ಹೌದು. 1952ರಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ರಾಜಕೀಯ ಆರಂಭಿಸಿದ್ದ ಗೌಡರು ತಾಲೂಕು ಬೋರ್ಡ್ ಸದಸ್ಯರಾಗಿ, ಸಹಕಾರ ಸಂಘದ ಅಧ್ಯಕ್ಷರಾಗಿ ಹಂತ ಹಂತವಾಗಿ ರಾಜೕಯದ ಮೆಟ್ಟಿಲುಗಳನ್ನೇರಿದ್ದರು.

1962-1985ರವರೆಗೆ ಸತತ 6 ಬಾರಿ ವಿಧಾನಸಭಾ ಸದಸ್ಯರಾಗಿದ್ದ ಗೌಡರು 5 ಬಾರಿ ಸಂಸದರೂ ಆಗಿದ್ದರು. ಮಂತ್ರಿ, ಸಿಎಂ, ಪ್ರಧಾನಿಯಾದ ಏಕೈಕ ಕನ್ನಡಿಗ ಎಂಬ ದಾಖಲೆ ಬರೆದಿದ್ದರು. ಇಷ್ಟೆಲ್ಲ ಪಳಗಿರುವ ಗೌಡರು ಸುರಕ್ಷಿತ ತವರು ತೊರೆದು ತುಮಕೂರು ಆಯ್ದುಕೊಳ್ಳುವ ನಿರ್ಧಾರ ಕೈಗೊಂಡಿದ್ದೇ ತಪ್ಪಾಗಿದೆ. ಮುಂದಿನ ತಲೆಮಾರಿನ ಮಹತ್ವಾಕಾಂಕ್ಷಿಗಳ ನಡುವಿನ ಸಂಘರ್ಷ ತಪ್ಪಿಸಲು ದೇವೇಗೌಡರು ಮಾಡಿದ ತ್ಯಾಗ ಇದೆನ್ನುವುದು ಸರ್ವವಿದಿತ. ಸಚಿವ ರೇವಣ್ಣ ಪುತ್ರ ಪ್ರಜ್ವಲ್ ಹೊಸ ತಲೆಮಾರಿನ ಎಷ್ಟು ಸಮರ್ಥ ನಾಯಕನೋ ಅಷ್ಟೇ ಮಹತ್ವಾಕಾಂಕ್ಷಿಯೂ ಆಗಿದ್ದಾರೆ. ಮೊಮ್ಮಗನನ್ನು ವಿಧಾನಸಭೆಗೆ ಕಳುಹಿಸಬೇಕು ಎನ್ನುವ ಆಸೆ ರೇವಣ್ಣ ಕುಟುಂಬದಲ್ಲಿತ್ತು. ಆದರೆ, 2018ರ ಚುನಾವಣೆಯಲ್ಲಿ ಗೌಡರ ಕುಟುಂಬದಿಂದ ಇಬ್ಬರಷ್ಟೇ ಸ್ಪರ್ಧಿಸಬೇಕು ಎನ್ನುವ ಎಚ್ಡಿಕೆ ನಿಲುವು ಪ್ರಜ್ವಲ್​ಗೆ ಅಡ್ಡಿಯಾಯಿತು.

ಮೊದಲು ಬೇಲೂರು, ನಂತರ ಹುಣಸೂರು, ಅದೂ ಕೈತಪ್ಪುವಂತಾದಾಗ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪಕ್ಷ ಸಂಘಟನೆಗೆ ಸಮಯ, ಶಕ್ತಿ ವ್ಯಯಿಸಿದ್ದ ಪ್ರಜ್ವಲ್, ಚಿಕ್ಕಪ್ಪ ಕುಮಾರಸ್ವಾಮಿ ನಿಲುವಿನಿಂದಾಗಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡು ಬೇಸರಗೊಂಡಿದ್ದರು. ಈ ಸಂದರ್ಭದಲ್ಲಿ ದೇವೇಗೌಡರು ಪ್ರಜ್ವಲ್​ರನ್ನು ಸಂತೈಸಿದ್ದರು. ಲೋಕಸಭೆ ಚುನಾವಣೆಗೆ ಹಾಸನದಿಂದ ಸ್ಪರ್ಧಿಸುವಂತೆ ಹುರಿದುಂಬಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು.

ಕಾಂಗ್ರೆಸ್​ನೊಂದಿಗೆ ಸೀಟು ಹಂಚಿಕೆ ಚೌಕಾಸಿಯಲ್ಲಿ ತೊಡಗಿದ ಗೌಡರು ಜೆಡಿಎಸ್ ಪ್ರಾಬಲ್ಯವಿದ್ದ ಮೈಸೂರು ಇಲ್ಲವೆ ಮಂಡ್ಯದಿಂದ ಸ್ಪರ್ಧಿಸಿ, ಈ ಹಿಂದೆ ಕೊಟ್ಟ ಮಾತಿನಂತೆ ಹಾಸನವನ್ನು ಪ್ರಜ್ವಲ್​ಗೆ ಬಿಟ್ಟುಕೊಡುವ ಆಲೋಚನೆ ಹೊಂದಿದ್ದರು. ಆದರೆ, ಸಿದ್ದರಾಮಯ್ಯ ಹಠ ಹಿಡಿದು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಪಾಲಿಗೆ ಉಳಿಸಿಕೊಂಡರೆ, ಮಂಡ್ಯವನ್ನು ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್​ಗಾಗಿ ಆಯ್ಕೆ ಮಾಡಿಕೊಂಡರು. ಹಾಗಾಗಿ, ದೇವೇಗೌಡರು ಹಾಸನ, ಮಂಡ್ಯ ಕ್ಷೇತ್ರಗಳನ್ನು ತ್ಯಾಗ ಮಾಡಿ ಒಲ್ಲದ ಮನಸ್ಸಿನಿಂದಲೇ ತುಮಕೂರಿನತ್ತ ಹೆಜ್ಜೆ ಹಾಕಿದ್ದರು. ತುಮಕೂರಿನ ಜೆಡಿಎಸ್ ನಾಯಕರು ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಅತಿಯಾದ ವಿಶ್ವಾಸ ಹೊಂದಿದ್ದ ಗೌಡರು 2 ದಿನವಷ್ಟೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೂ, ಅದೇಕೋ ದೊಡ್ಡವರ ಲೆಕ್ಕಾಚಾರ ಕೈಕೊಟ್ಟಿತು. ಮತದಾರರ ಲೆಕ್ಕಾಚಾರ ಬೇರೆಯೇ ಇತ್ತು.

One Reply to “ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ”

  1. Congratulations to Basavaraju and Sumalatha for defeating Deve Gowda and Nikil in their respective constituencies. They have taught a good lesson to Deve Gowda clan. Voters of Tumkur and Mandya proved maturity in selecting right candidates and deserve appreciation. JDS does not have any future because of selfish attitude of Deve Gowda. He has created an impression that JDS is meant for a specific community, power, privilege and facilities are meant only for his family members

Leave a Reply

Your email address will not be published. Required fields are marked *