ಬಿಎಸ್​ವೈ ಪ್ರವಾಹ, ಮೋದಿ ಸುನಾಮಿ: ಕ್ಷೇತ್ರ ಆಯ್ಕೆಯಲ್ಲಿ ಸಂಪೂರ್ಣವಾಗಿ ಎಡವಿದ ಮೈತ್ರಿ ಪಕ್ಷಗಳು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೈತ್ರಿ ಪಕ್ಷಗಳಿಗೆ ಮರ್ವಘಾತ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಆಘಾತ ಕಂಡಿವೆ. ರಾಜ್ಯದಲ್ಲಿ ಮೈತ್ರಿ-ಪಕ್ಷಗಳಿಗೆ ಕನಿಷ್ಠ 10 ಸ್ಥಾನ ಗೆಲ್ಲುವ ಅವಕಾಶವಿತ್ತು. ಆದರೆ ದುಡುಕು ನಿರ್ಧಾರಗಳು, ಕಾರ್ಯಕರ್ತರಲ್ಲಿನ ಹೊಂದಾಣಿಕೆ ಕೊರತೆ, ನಾಯಕರ ಗೊಂದಲದ ಹೇಳಿಕೆಗಳು, ಸ್ವಜನ ಪಕ್ಷಪಾತದ ಸುಂಟರಗಾಳಿಯಿಂದ ಮೈತ್ರಿ ಧೂಳಿಪಟವಾಗಿದೆ.

ಬೆಂಗಳೂರು: ದೇಶಾದ್ಯಂತ ಆವರಿಸಿರುವ ಮೋದಿ ಅಲೆಗೆ ಕರ್ನಾಟಕವೂ ಹೊರತಾಗಿಲ್ಲವಾದರೂ ಕರ್ನಾಟಕದಲ್ಲಿ ಮೋದಿ ಅಲೆ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಉಪಸ್ಥಿತಿ 25 ಸ್ಥಾನಗಳಲ್ಲಿ ಜಯಿಸುವಂತೆ ಮಾಡಿದೆ.

ಸಾಮಾನ್ಯವಾಗಿ ಕನಾಟಕದ ಮತದಾರರು ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಕ್ಕೆ ಮನ್ನಣೆ ನೀಡುತ್ತಾರೆ. 2004ರಲ್ಲಿ ದೇಶಾದ್ಯಂತ ವಾಜಪೇಯಿ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನೆಲ ಕಚ್ಚಿದರೂ ರಾಜ್ಯದಲ್ಲಿ ಮಾತ್ರ 18 ಸಂಸದರು ಜಯಿಸಿದ್ದರು. 2009ರಲ್ಲಿ ಆಡ್ವಾಣಿ ನೇತೃತ್ವದಲ್ಲಿ ಯುಪಿಎ ಕೆಳಗಿಳಿಸಲು ಬಿಜೆಪಿ ವಿಫಲವಾದಾಗಲೂ 19 ಸಂಸದರಿದ್ದರು. 2014ರಲ್ಲಿ ಮೋದಿ ಅಲೆಯಲ್ಲಿ 17 ಸಂಸದರು ಜಯಿಸಿದ್ದರು.

ಈ ಬಾರಿಯೂ ರಾಜ್ಯದಲ್ಲಿ ರಾಷ್ಟ್ರೀಯತೆಯ ಅಲೆಗೆ ಮೋದಿ ಸುನಾಮಿ ಜತೆಯಾಯಿತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಉದ್ದೇಶದಿಂದ. ತಮ್ಮ ಭ್ರಷ್ಟಾಚಾರ ರಹಿತ, ಸ್ವಚ್ಛ ಚಾರಿತ್ರ್ಯಕ್ಕೆ ಸಾಮಾನ್ಯ ಜನರ ಮನಸ್ಸಿನಲ್ಲಿ ನೆಲೆಸಿರುವ ಮೋದಿ ವಿರುದ್ಧ ಪದೇಪದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾಡುತ್ತಿದ್ದ ತೀವ್ರ ವಾಗ್ದಾಳಿಗಳು ಮೊದಲಿಗೆ ಅವರಿಗೇ ಮುಳುವಾದವು. ಮೋದಿ ವಿರುದ್ಧ ಆರೋಪ ಮಾಡುತ್ತಿದ್ದ ನಾಯಕರ ವಿರುದ್ಧವೇ ಭ್ರಷ್ಟಾಚಾರ, ಜಾತಿ ರಾಜಕಾರಣದ ಆರೋಪಗಳಿದ್ದಾಗ ಈ ಅಸಮಾಧಾನ ಇನ್ನಷ್ಟು ಹೆಚ್ಚಿತು. ಜತೆಗೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಬದಿಂದಲೂ ಒಂದಿಲ್ಲೊಂದು ಆಂತರಿಕ ಗೊಂದಲದ ಜತೆಗೆ ಸ್ವತಃ ಸಿಎಂ

ಎಚ್.ಡಿ. ಕುಮಾರಸ್ವಾಮಿಯವರ ಅತಿರೇಕದ, ಆವೇಶಭರಿತ ಮಾತುಗಳು ಸರ್ಕಾರದ ಕುರಿತು ಕನಿಷ್ಠ ಹಳೆ ಮೈಸೂರು ಭಾಗದವರಲ್ಲಿದ್ದ ಮೃದು ಧೋರಣೆಯನ್ನೂ ಅಳಿಸಿತು. ಸರ್ಕಾರ ಬಿದ್ದೇ ಹೋಗುತ್ತದೆ ಎಂಬ ಬಿಜೆಪಿ ನಾಯಕರ ಮಾತಿಗೆ ಪೂರಕವಾಗಿ ಸರ್ಕಾರದ ಭಾಗವಾಗಿದ್ದ ರಮೇಶ್ ಜಾರಕಿಹೊಳಿ ಮತ್ತಿತರರ ನಡೆ ಪುಷ್ಟಿ ನೀಡಿತು.

ಜೆಡಿಎಸ್​ಗೆ ಅಸ್ತಿತ್ವವೇ ಇಲ್ಲದ ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರಿನಲ್ಲಿ ಆ ಪಕ್ಷಕ್ಕೆ, ಮೈಸೂರಿನಲ್ಲಿ ಕಾಂಗ್ರೆಸ್​ಗೆ ಅದರಲ್ಲೂ ಒಕ್ಕಲಿಗರಲ್ಲದ ಅಭ್ಯರ್ಥಿಗೆ, ತುಮಕೂರಿನಲ್ಲಿ ಹಾಲಿ ಸಂಸದರನ್ನು ತಪ್ಪಿಸಿ ದೇವೇಗೌಡರಿಗೆ ಟಿಕೆಟ್ ನೀಡುವ ತೀರ್ವನವೇ ಕಂಟಕವಾಯಿತು.

ಉತ್ತರ ಕರ್ನಾಟಕ ಭಾಗದ ಚಿಕ್ಕೋಡಿ, ಕಲಬುರ್ಗಿಯಲ್ಲಿ 2014ರಲ್ಲಿ ಕಾಂಗ್ರೆಸ್ ಜಯಿಸಿತ್ತು. ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಸಂಸದರಿದ್ದರು. ಇದೀಗ ಈ ಮೂರು ಕ್ಷೇತ್ರ ಸೇರಿ ಸಂಪೂರ್ಣ ಉತ್ತರ ಕರ್ನಾಟಕ ಬಿಜೆಪಿ ಸ್ವೀಪ್ ಆಗಿದೆ.

ವ್ಯಾಮೋಹ, ಸ್ವಜನ ಪ್ರೀತಿಗೆ ಜೆಡಿಎಸ್ ಬಲಿ!

ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣದ ಪಕ್ಷವಾಗುತ್ತಿದೆ ಎಂಬ ತೀಕ್ಷ್ಣ ಟೀಕೆಗಳಿಗೂ ಕಿವಿಗೊಡದೇ ಆನೆ ನಡೆದದ್ದೇ ದಾರಿ ಎಂಬ ಪ್ರಜಾಪ್ರಭುತ್ವ ವಿರೋಧಿ ತೀರ್ವನಗಳಿಗೆ ಬೆಲೆತೆತ್ತ ಜೆಡಿಎಸ್ ಕೊನೆಗೂ ಹಾಸನಕ್ಕೆ ಸೀಮಿತಗೊಂಡಿದೆ. ಕಳೆದ ಬಾರಿ ಎರಡು ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ ಒಂದಕ್ಕೆ ಇಳಿದಿದೆ ಎಂದು ಸರಳ ಮಾತಿನಲ್ಲಿ ಹೇಳುವಂತಿಲ್ಲ. ಹಾಗೆಯೇ ಈ ಮಾತನ್ನು ಅಷ್ಟೇ ಕಠಿಣವಾಗಿ ತೆಗೆದುಕೊಳ್ಳಬೇಕಾದ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಕೂಡ ಸೋಲು ಅನುಭವಿಸಿರುವುದು ಪಕ್ಷದ ಅಸ್ತಿತ್ವವನ್ನೇ ಪಣಕ್ಕಿಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಕೊಚ್ಚಿಹೋಯ್ತು ಕಾಂಗ್ರೆಸ್

ರಾಜ್ಯದಲ್ಲಿ ಮೈತ್ರಿಯ ಮೂಲಕ ರಾಜಕೀಯ ಚತುರತೆೆ ಮೆರೆದಿದ್ದ ಕಾಂಗ್ರೆಸ್​ಗೆ ಮತದಾರ ಸರಿಯಾಗಿಯೇ ಪಾಠ ಕಲಿಸಿದ್ದಾನೆ. ಮೈತ್ರಿಯಿಂದ ತನಗೆಷ್ಟು ಲಾಭವಾಗುತ್ತದೆ ಎಂಬುದಕ್ಕಿಂತ ಬಿಜೆಪಿಯ ಸಂಖ್ಯೆಯನ್ನು ಎಷ್ಟು ಕಡಿಮೆ ಮಾಡಬಹುದು ಎಂಬುದು ಕಾಂಗ್ರೆಸ್​ನ ವ್ಯವಕಲನದ ಲೆಕ್ಕಾಚಾರವಾಗಿತ್ತು. ಮತದಾರ ಮಾತ್ರ ಈ ಸಮೀಕರಣವನ್ನು ಸಾರಾಸಗಟು ತಿರಸ್ಕರಿಸಿದ್ದಾನೆ. ಇನ್ನು ನಾಯಕರ ವಿಚಾರಕ್ಕೆ ಬಂದರೆ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಹೀಗೆ ಸಾಲುಸಾಲು ಕೈ ನಾಯಕರು ಜನರಿಂದ ತಿರಸ್ಕೃತಗೊಂಡು ಮನೆಹಾದಿ ಹಿಡಿದಿದ್ದಾರೆ. ಇದು ಪಕ್ಷದ ಸಂಘಟನೆಗೆ ದೊಡ್ಡ ಆಘಾತ ತಂದೊಡ್ಡಿದೆ. ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದಕ್ಕೇ ಕಾಂಗ್ರೆಸ್​ನಲ್ಲಿ ತೀವ್ರ ಆಕ್ಷೇಪ ಕೇಳಿಬಂದಿತ್ತು. ನಮಗೆ ಉಪಯೋಗಕ್ಕಿಂತ ನಷ್ಟವೇ ಹೆಚ್ಚೆಂದು ಜಿಲ್ಲಾ ಮಟ್ಟದ ನಾಯಕರು ಗೋಗರೆದಿದ್ದರು. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಲೇಬೇಕೆಂದು ರಾಜ್ಯ ನಾಯಕರು ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದೀಗ ಕಾರ್ಯಕರ್ತರ ಅಭಿಪ್ರಾಯ ಎಷ್ಟು ಪರಿಣಾಮಕಾರಿ ಎಂಬುದು ಪಕ್ಷದ ನಾಯಕರ ಅರಿವಿಗೆ ಬಂದಿದೆ.

ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಹೀಗೆ ಎಲ್ಲೆಡೆಯೂ ಲಕ್ಷ ಲಕ್ಷ ಲೀಡ್​ನಲ್ಲಿ ಬಿಜೆಪಿಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವುದು ದೊಡ್ಡ ಹೊಡೆತವೇ. ಪಕ್ಷದ ನೆಲೆ ಇದೆ ಎನಿಸಿಕೊಂಡ ಕಡೆಗಳಲ್ಲಿ ಮಗ್ಗಲು ಮುರಿಯುವಂತೆ ಘಾಸಿಯಾಗಿದೆ. ಕಾಂಗ್ರೆಸ್ ನೆಲೆ ಇರುವೆಡೆ ಜೆಡಿಎಸ್​ಗೆ

ಸೀಟುಬಿಟ್ಟುಕೊಟ್ಟ ಪರಿಣಾಮ ಪಕ್ಷದ ಸಾಂಪ್ರದಾಯಿಕ ಮತಗಳು ಬಿಜೆಪಿಯತ್ತ ಒಲಿದಿವೆ. ಪಕ್ಷದ ಕೆಳಹಂತದ ಮುಖಂಡರು ತಟಸ್ಥರಾಗಿದ್ದು ಅವರನ್ನು ಮನವೊಲಿಸಿ ಮತ್ತೆ ಚುರುಕುಗೊಳಿಸುವುದು ನಾಯಕತ್ವಕ್ಕಿರುವ ದೊಡ್ಡ ಸವಾಲಾಗಿದೆ. ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರ ಮುಂದೆ ತಲೆಎತ್ತದ ಸ್ಥಿತಿ ರಾಜ್ಯ ನಾಯಕರದ್ದಾಗಿದೆ.

ಸಂಕಷ್ಟ ತಂದೊಡ್ಡಿದ ಮೈತ್ರಿ

ಮೈಸೂರು: ಹತೋಟಿ ತಪ್ಪಿದ ಮಾತು ಹಾಗೂ ಹಿಡಿತ ತಪ್ಪಿದ ಮೈತ್ರಿ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚು ಲಾಭ ತಂದá-ಕೊಟ್ಟವು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಾ.ದಳ ಹೀನಾಯವಾಗಿ ಸೋಲá-ಕಂಡರೆ, ಚಾಮರಾಜನಗರದಲ್ಲಿ ಅನಿರೀಕ್ಷಿತ ಫಲಿತಾಂಶ ಸಿಕ್ಕಿದೆ. ಮೈಸೂರಿನಲ್ಲಿ ಬಿಜೆಪಿ ಮತಗಳಿಕೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಹಾಸನದಲ್ಲಿ ಬಿಜೆಪಿ ಸೋಲು ಕಂಡರೂ ಮತಗಳಿಕೆ ಹೆಚ್ಚಳವಾಗಿದೆ. ಫಲಿತಾಂಶ ಏನೇ ಆಗಿದ್ದರೂ ಮೈತ್ರಿ ಪಕ್ಷಗಳಿಗೆ ಇದು ಮುಂದಿನ ದಿನಗಳಲ್ಲಿ ಸಂಕಷ್ಟದ ಸ್ಥಿತಿ ನಿರ್ವಣ ಮಾಡಿದೆ ಎನ್ನಲೇಬೇಕು. ಮೈತ್ರಿ ಬಿಟ್ಟು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದರೆ ಮೂರು ಕ್ಷೇತ್ರಗಳ ಪರಿಸ್ಥಿತಿ ಹೀಗಿರá-ತ್ತಿರಲಿಲ್ಲ ಎಂದು ವಿಶ್ಲೇಷಣೆ ಮಾಡಲಾಗá-ತ್ತಿದೆ. ಹಾಸನದ ಮಾನದಂಡ ಅನá-ಸರಿಸಿದ್ದರೆ ಮಂಡ್ಯದಲ್ಲಿ ಇಷ್ಟು ಹೀನಾಯ ಸೋಲು ಕಾಣá-ತ್ತಿರಲಿಲ್ಲ. ಹಾಸನದ ಕಣದಲ್ಲಿ ಏನೆಲ್ಲಾ ಟೀಕೆಗಳು ಬಂದರೂ ಸಚಿವ ರೇವಣ್ಣ ಅವರಾಗಲೀ, ಅವರ ಬೆಂಬಲಿಗರಾಗಲೀ ಪ್ರತಿÅಯೆ ನೀಡಲಿಲ್ಲ. ಬದಲಿಗೆ ಶತ್ರುಗಳ ಮನೆ ಬಾಗಿಲಿಗೆ ಅಲೆದು ತಮ್ಮ ಪರವಾಗಿ ಮೃಧು ಧೋರಣೆ ತಾಳá-ವಂತೆ ಮಾಡá-ವಲ್ಲಿ ರೇವಣ್ಣ ಯಶಸ್ವಿಯಾದರು. ಆದರೆ, ಮಂಡ್ಯದಲ್ಲಿ ಸ್ವಾಭಿಮಾನ ಬಿಟ್ಟು ಬಂಡಾಯಗಾರರ ಮನೆಗೆ ಹೋಗá-ವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಮನವೊಲಿಕೆ’ಯ ಅವಕಾಶದ ಬಾಗಿಲಿಗೆ ಬೀಗ ಹಾಕಿತ್ತು.

ಮಧ್ಯಕರ್ನಾಟಕದಲ್ಲಿ ಕಮಲ ಕಮಾಲ್

ಚಿತ್ರದುರ್ಗ: ಮಧ್ಯಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಲೋಕಸಭೆ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಕಮಾಲ್ ಮಾಡಿದೆ. ಮೋದಿ ಅಲೆ, ಬಿಎಸ್​ವೈ ವರ್ಚಸ್ಸು, ಮೋದಿ ಚಿಂತನೆಗಳನ್ನು ಮನೆ, ಮನೆಗೆ ತಲುಪಿಸಲು ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಪಟ್ಟ ಶ್ರಮ ಗೆಲುವಿಗೆ ಮುನ್ನುಡಿ ಬರೆದವು. ಜಿ.ಎಂ.ಸಿದ್ದೇಶ್ವರ ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಸತತ ನಾಲ್ಕನೇ ಗೆಲುವು ದಾಖಲಿಸುವ ಮೂಲಕ ಬೌಂಡರಿ ಬಾರಿಸಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ನಿರಂತರ ನಾಲ್ಕು ಬಾರಿ ಗೆದ್ದ ಏಕೈಕ ಸಂಸದರು ಎಂಬ ದಾಖಲೆ ಬರೆದಿದ್ದಾರೆ. ಕಳೆದೊಂದು ದಶಕದಿಂದ ರಾಜಕೀಯ ಅಜ್ಞಾತವಾಸದಲ್ಲಿದ್ದ ನಾರಾಯಣಸ್ವಾಮಿ ಆನೇಕಲ್​ನಿಂದ ಚಿತ್ರದುರ್ಗಕ್ಕೆ ವಲಸೆ ಬಂದು ರಾಜಕೀಯ ಪುನರ್ಜನ್ಮ ಪಡೆದಿದ್ದಾರೆ.

ಕರಾವಳಿಯಲ್ಲಿ ಕೇಸರಿ ಮಾಯೆ

ಮಂಗಳೂರು/ಕಾರವಾರ: ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿಯ ಮೂರು ಕ್ಷೇತ್ರಗಳೂ ಬಿಜೆಪಿಗೆ ಮತ್ತೊಮ್ಮೆ ಭರ್ಜರಿ ವಿಜಯವನ್ನು ತಂದುಕೊಟ್ಟಿವೆ. ಮೂರೂ ಕ್ಷೇತ್ರಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ) ಬಿಜೆಪಿ ಗೆಲುವಿನ ಒಟ್ಟು ಅಂತರ 10 ಲಕ್ಷಕ್ಕೂ ಅಧಿಕ. ಪುನರಾಯ್ಕೆಯಾಗಿರುವ ಮೂವರೂ ಸಂಸದರು ತಮ್ಮ ಗೆಲುವಿನ ಅಂತರವನ್ನು ದಾಖಲೆ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದ್ದಾರೆ. ಕರಾವಳಿಯಲ್ಲಿ 2014ರಲ್ಲೂ ಮೋದಿ ಅಲೆ ಪ್ರಬಲವಾಗಿತ್ತು, ಈ ಬಾರಿಯೂ ಪರಿವರ್ತನೆಗೊಂಡಿದೆ. ಕರಾವಳಿಯಲ್ಲಿ ಬಿಜೆಪಿಗೆ ಇರುವ ದೊಡ್ಡ ಪ್ಲಸ್ ಪಾಯಿಂಟ್. ಅಗತ್ಯ ಬಿದ್ದರೆ ಎಲ್ಲವನ್ನೂ ಮರೆತು ಫೀಲ್ಡಿಗೆ ಇಳಿಯಬಲ್ಲ ಕಾರ್ಯಕರ್ತರ ಪಡೆ. ಮೋದಿಯವರ ಧನಾತ್ಮಕ ಅಂಶಗಳನ್ನು ಜನರಿಗೆ ಮುಟ್ಟಿಸುವುದಕ್ಕೆ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ತಂಡ ಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಿವೆ.

ಹೊಸ ಮುಖಗಳಿಗೆ ಸಿಕ್ಕ ಅವಕಾಶ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅನೇಕ ಹೊಸ ಮುಖಗಳಿಗೆ ಅವಕಾಶ ಸಿಕ್ಕಿರುವುದು ವಿಶೇಷ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ, ಕಲಬುರಗಿಯಲ್ಲಿ ಉಮೇಶ್ ಜಾಧವ್, ಕೋಲಾರದಲ್ಲಿ ಮುನಿಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಚೇಗೌಡ, ಮಂಡ್ಯದಲ್ಲಿ ಸುಮಲತಾ, ಬಳ್ಳಾರಿಯಲ್ಲಿ ದೇವೇಂದ್ರಪ್ಪ, ಚಿತ್ರದುರ್ಗದಲ್ಲಿ ಎ. ನಾರಾಯಣಸ್ವಾಮಿ, ರಾಯಚೂರಿನಲ್ಲಿ ಅಮರೇಶ್ವರ ನಾಯಕ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ನಾರಾಯಣಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆದರೆ ಲೋಕಸಭೆಯಲ್ಲಿ ಅವರಿಗೆ ಗೆಲುವು ಸಿಕ್ಕಿದೆ.

ಹಾಲಿ ಸಂಸದರಲ್ಲಿ ಗೆದ್ದವರು:

 • ಬೆಂಗಳೂರು ಗ್ರಾಮಾಂತರ- ಡಿ.ಕೆ.ಸುರೇಶ್
 • ಬೆಂಗಳೂರು ಕೇಂದ್ರ-ಪಿ.ಸಿ.ಮೋಹನ್
 • ಬೆಂ.ಉತ್ತರ-ಡಿ.ವಿ.ಸದಾನಂದಗೌಡ
 • ಮೈಸೂರು-ಕೊಡಗು- ಪ್ರತಾಪ್​ಸಿಂಹ
 • ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ
 • ದಕ್ಷಿಣ ಕನ್ನಡ-ನಳಿನ್​ಕುಮಾರ್ ಕಟೀಲ್
 • ಬೆಳಗಾವಿ-ಸುರೇಶ್ ಅಂಗಡಿ
 • ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್ಜ
 • ವಿಜಯಪುರ-ರಮೇಶ ಜಿಗಜಿಣಗಿ
 • ಬೀದರ್-ಭಗವಂತ ಖೂಬಾ
 • ಕೊಪ್ಪಳ-ಕರಡಿ ಸಂಗಣ್ಣ
 • ಹಾವೇರಿ-ಶಿವಕುಮಾರ್ ಉದಾಸಿ
 • ಧಾರವಾಡ- ಪ್ರಹ್ಲಾದ್ ಜೋಶಿ
 • ದ.ಕನ್ನಡ-ಅನಂತಕುಮಾರ ಹೆಗಡೆ
 • ದಾವಣಗೆರೆ-ಜಿ.ಎಂ.ಸಿದ್ದೇಶ್ವರ
 • ಶಿವಮೊಗ್ಗ-ಬಿ.ವೈ.ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ಕಳೆದ 5 ವರ್ಷಗಳಲ್ಲಿ ಮಾಡಿರುವ ಜನೋಪಕಾರಿ ಕೆಲಸಗಳಿಗೆ ದೇಶದ ಜನತೆ ಮಹಾ ತೀರ್ಪು ನೀಡಿದ್ದಾರೆ. ಸ್ವಾತಂತ್ರ್ಯ ದೊರೆತ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆ ಕಾಲ ಈಗ ಸನ್ನಿಹಿತವಾಗಿದೆ. ರಾಹುಲ್ ಗಾಂಧಿ ಕಾಲದಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ.

| ಡಾ.ಪ್ರಭಾಕರ ಕೋರೆ ರಾಜ್ಯಸಭೆ ಸದಸ್ಯ, ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ

ಪಕ್ಷಾಂತರಿಗಳಿಗೆ ಮಿಶ್ರ

ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಕೈಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಎ.ಮಂಜು ಸೋಲು ಕಂಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್​ಗೋಸ್ಕರ ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಜಿಗಿದಿದ್ದ ಪ್ರಮೋದ್ ಮಧ್ವರಾಜ್ ಪರಾಭವಗೊಂಡಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು ಕಾಂಗ್ರೆಸ್​ನ ಸೋಲಿಲ್ಲದ ಸರದಾರರೆಂದೇ ಕರೆಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಗೆಲುವು ಸಾಧಿಸಿದ್ದಾರೆ. ಚಿಂಚೋಳಿ ಉಪ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡಿದ್ದಾರೆ.

ಸತತವಾಗಿ ಗೆದ್ದವರು: ರಮೇಶ್ ಜಿಗಜಿಣಗಿ (6 ಬಾರಿ), ಅನಂತಕುಮಾರ್ ಹೆಗಡೆ (6 ಬಾರಿ), ಜಿ.ಎಂ.ಸಿದ್ದೇಶ್ವರ್ (4 ಬಾರಿ), ಪ್ರಹ್ಲಾದ್ ಜೋಷಿ (4 ಬಾರಿ), ಸುರೇಶ್ ಅಂಗಡಿ ( 3 ಬಾರಿ), ಡಿ.ವಿ.ಸದಾನಂದಗೌಡ (4 ಬಾರಿ), ಭಗವಂತ ಖೂಬಾ (2 ಬಾರಿ), ಕರಡಿ ಸಂಗಣ್ಣ (2 ಬಾರಿ), ಡಿ.ಕೆ.ಸುರೇಶ್ (3 ಬಾರಿ), ಪಿ.ಸಿ.ಮೋಹನ್ (3 ಬಾರಿ), ನಳೀನ್ ಕುಮಾರ್ ಕಟೀಲ್ (3ಬಾರಿ), ಶಿವಕುಮಾರ್ ಉದಾಸಿ (3 ಬಾರಿ)

ಡಬಲ್ ಧಮಾಕಾ ಮಾಸ್ಟರ್ ಮೈಂಡ್

ಕಲಬುರಗಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ಉಣಿಸುವ ಮೂಲಕ ಬಿಜೆಪಿಯ ಡಾ.ಉಮೇಶ ಜಾಧವ್ ಐತಿಹಾಸಿಕ ಗೆಲುವು ದಾಖಲಿಸಿದ್ದರ ಹಿಂದೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ. ಹೈಕಮಾಂಡ್ ನೀಡಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ರವಿಕುಮಾರ ಎರಡ್ಮೂರು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪಕ್ಷವನ್ನು ಎಲ್ಲ ಮಗ್ಗುಲಗಳಿಂದ ಸಂಘಟಿಸುವ ಮೂಲಕ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವಿಗೆ ಪಕ್ಕಾ ತಂತ್ರ ಹೆಣೆದಿದ್ದರು. ಇದಲ್ಲದೆ ಮಾಜಿ ಸಚಿವ ವಿ.ಸೋಮಣ್ಣ ಜತೆ ಚಿಂಚೋಳಿ ಕ್ಷೇತ್ರದಲ್ಲೂ ಠಿಕಾಣಿ ಹೂಡಿ ಹೆಣೆದ ತಂತ್ರ ಡಾ.ಅವಿನಾಶ ಜಾಧವ್ ಅವರನ್ನು ಮೊದಲ ಎಲೆಕ್ಷನ್​ನಲ್ಲೇ ಗೆಲುವಿನ ನಗೆ ಬೀರುವಂತೆ ಮಾಡಿದೆ.

ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಟ್ಟಿರುವ ನಾನು ಕಲಬುರಗಿ ಜನರ ತೀರ್ಪಿಗೆ ತಲೆಬಾಗುವೆ. ಸೋಲಿಗೆ ಕಾರಣ ಏನು ಎಂಬ ಬಗ್ಗೆ ಚಿಂತನೆ ಮಾಡಬೇಕಿದ್ದು, ಈ ಕ್ಷಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ಇವಿಎಂ ಕುಂಟು ನೆಪ ಹೇಳಲ್ಲ. ಮತ ನೀಡಿರುವ ಜನ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡಿದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ

ಭ್ರಷ್ಟಾಚಾರ ವಿರೋಧಿ, ರಾಷ್ಟ್ರೀಯತೆ-ಪ್ರಗತಿಗೆ ಸಿಕ್ಕ ಗೆಲುವು

| ಪ್ರೊ. ಚಂಬಿ ಪುರಾಣಿಕ್ ರಾಜಕೀಯ ವಿಶ್ಲೇಷಕರು

ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಜನರಲ್ಲಿ ರಾಷ್ಟ್ರೀಯತೆಯ ಭಾವನೆಯ ಜತೆಗೆ, ಭ್ರಷ್ಟಾಚಾರ ವಿರೋಧಿ ಹಾಗೂ ಪ್ರಗತಿಯ ಪರ ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದು.

ಅಭಿವೃದ್ಧಿ ಪರವಾದ ಜನಾದೇಶ ಎಂದು ಭಾವಿಸಬಹುದಾದರೂ, ಇನ್ನಷ್ಟು ಸಾಧಿಸಬೇಕೆಂಬ ಅಭಿಪ್ರಾಯವನ್ನು ಮತದಾರರು ಹೊಂದಿದ್ದಾರೆ. ಮೋದಿ ಸರ್ಕಾರ ಜನಧನ್, ಉಜ್ವಲ್, ಡಿಜಿಟಲ್ ಇಂಡಿಯಾ ಹೀಗೆ ಅನೇಕ ಯೋಜನೆಗಳನ್ನು ಆರಂಭಿಸಿದೆ. ಆ ಎಲ್ಲ ಯೋಜನೆಗಳನ್ನು ಮುಂದುವರಿಸ ಬೇಕಾಗಿದೆ ಎಂಬುದು ಮತದಾರರ ಒಡಲಾಳದ ಮಾತಾಗಿದೆ.

ನರೇಂದ್ರ ಮೋದಿ ಸ್ವಚ್ಛ ವ್ಯಕ್ತಿತ್ವ ಇರುವವರು, ಭ್ರಷ್ಟಾಚಾರದ ವಿರೋಧಿ ಎಂಬ ಭಾವನೆ ಜನರಲ್ಲಿದೆ. ಬಾಲಕೋಟ್ ಸೇರಿ ಅನೇಕ ಸಂದರ್ಭಗಳಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸುವಲ್ಲಿ, ಮತದಾರರನ್ನು ಅದರಲ್ಲೂ ಯುವ ಸಮುದಾಯವನ್ನು ಸೆಳೆದಿದ್ದಾರೆ.

ನಿರುದ್ಯೋಗದ ಸಮಸ್ಯೆ ವ್ಯಾಪಕವಾಗಿದ್ದರೂ ಸಹ ಭವಿಷ್ಯದಲ್ಲಿ ಅನುಕೂಲವಾಗುತ್ತದೆ. ಮೋದಿ ಅವರಿಂದ ಚಮತ್ಕಾರ ನಡೆಯುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಯುವಕರು ಹಾಗೂ ಮಹಿಳೆಯರು ಬಿಜೆಪಿಯತ್ತ ಒಲವು ತೋರಿದ್ದು, ಆ ನಂಬಿಕೆಯನ್ನು ಮೋದಿ ಉಳಿಸಿಕೊಳ್ಳಬೇಕಾಗಿದೆ.

ಒಬ್ಬ ಮೋದಿಯ ವಿರುದ್ಧ 26 ಪಕ್ಷಗಳು ಒಂದಾದವು, ಬಿಜೆಪಿಗಿಂತ ಮೋದಿ ವಿರುದ್ಧ ಹೋರಾಟ ಇತ್ತು. ಆದರೆ ಮೋದಿ ದೇಶ ದೊಡ್ಡದು ಎಂಬ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದರು. ವಾಜಪೇಯಿ ಅವರಿಗೂ ಈ ಪ್ರಮಾಣದ ವಿರೋಧ ಇರಲಿಲ್ಲ ಎಂಬುದನ್ನು ಜನರಿಗೆ ಅರ್ಥ ಮಾಡಿಸಿದ್ದು ಬಿಜೆಪಿಗೆ ದೊಡ್ಡ ಜಯ ಪಡೆಯಲು ಅನುಕೂಲವಾಯಿತು. ನೋಟು ಅಮಾನೀಕರಣದಿಂದ ಕಪು್ಪಹಣ ಖಾತೆಗೆ ಬರುವಂತಾಯಿತು. ಯಾವುದೇ ಪಕ್ಷದಲ್ಲಿ ಇರುವ ಕಪು್ಪ ಹಣ ಹೊಂದಿರುವ ವ್ಯಕ್ತಿ ಅದನ್ನು ಬಳಸಲು ಹಿಂದೆಮುಂದೆ ನೋಡುವಂತಾಯಿತು. ಅದರ ಬಗ್ಗೆ ಏನೇ ವಿರೋಧಗಳಿದ್ದರು ಸಹ ಜನರಲ್ಲಿ ವಿಶ್ವಾಸ ಮೂಡಿಸಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ದೊಡ್ಡ ಪ್ರಮಾಣದ ಗೌರವ ಮೂಡುವಂತಾಗಿದೆ. ಅದನ್ನು ಜನ ಗುರುತಿಸಿದ್ದಾರೆ. ಅನೇಕ ವಿದೇಶಾಂಗ ವಿಚಾರದಲ್ಲಿ ಮೋದಿ ಪ್ರಭುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಆಡಳಿತ ವಿರೋಧಿ ಅಲೆ ಇರುವುದಿಲ್ಲ ಎಂಬುದು ಗೊತ್ತಾಗುತ್ತದೆ. ಒಡಿಸ್ಸಾದಲ್ಲೂ ನಮಗೆ ಇದೇ ಅಂಶ ಕಂಡಿದೆ. ಆದರೆ ಚಂದ್ರಬಾಬು ನಾಯ್ಡು ವಿರುದ್ಧ ಆಡಳಿತ ವಿರೋಧ ಅಲೆ ಕಂಡು ಬಂದಿದೆ.

ಎಚ್ಚರಿಕೆಯ ಗಂಟೆ: ವಿರೋಧ ಪಕ್ಷಗಳು ರೂಪಿಸಿಕೊಂಡ ಮಹಾಘಟಬಂಧನ ಅತ್ಯಂತ ದುರ್ಬಲವಾಯಿತು. ಅವರ ಆತುರದ ನಿರ್ಧಾರಗಳು, ಪರಸ್ಪರ ಹೊಂದಾಣಿಕೆಯ ಕೊರತೆ, ಎಲ್ಲವೂ ಬಿಜೆಪಿಗೆ ಅನುಕೂಲವಾಗಿವೆ. ಆದರೆ ಈ ಅಂಶ ಮೋದಿ ಅವರಿಗೆ ಎಚ್ಚರಿಕೆಯ ಗಂಟೆಯೂ ಹೌದು. ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ಪರವಾದ ಸರ್ಕಾರವನ್ನು ನಡೆಸಬೇಕಾಗುತ್ತದೆ.

ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅತಿರೇಕದ ವರ್ತನೆ ತೋರಿಸಿದ್ದರು. ಅವರಲ್ಲಿ ಶತೃತ್ವದ ಭಾವನೆ ಇತ್ತು. ಆದ್ದರಿಂದಲೇ ಅವರ ಜತೆಗೆ ವೈಎಸ್​ಆರ್ ಕಾಂಗ್ರೆಸ್​ನ ಜಗನ್​ವೋಹನ್ ರೆಡ್ಡಿ, ನವೀನ್ ಪಟ್ನಾಯಕ್ ಸೇರಲಿಲ್ಲ. ತೃತೀಯ ರಂಗದಿಂದ ಸ್ಟಾಲಿನ್ ಸಹ ದೂರ ಉಳಿದರು. ತೃತೀಯ ರಂಗದ ನಾಯಕರಿಗೆ ನವೀನ್ ಪಟ್ನಾಯಕ್ ಮಾದರಿಯಾಗಬೇಕಾಗಿದೆ.

ಯಾಮಾರಿದ ರಾಹುಲ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಯಾಮಾರಿದ್ದರು. ಪಂಚ ರಾಜ್ಯಗಳ ಚುನಾವಣೆ ಗೆಲುವನ್ನೇ ದೊಡ್ಡದು ಎಂಬ ಭಾವನೆ ಬೆಳೆಸಿಕೊಂಡರು. ಯಾವುದೇ ಪ್ರಬುದ್ಧತೆ ತೋರಲಿಲ್ಲ. ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತ ಸಮಯ ವ್ಯರ್ಥ ಮಾಡಿದರು. ಅವರದೇ ಕಾರ್ಯಕ್ರಮವಾದ ನ್ಯಾಯ್ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಲು ವಿಫಲರಾದರು. ಆದ್ದರಿಂದ ಈ ಬಾರಿಯೂ ಅಧಿಕೃತ ಪ್ರತಿಪಕ್ಷದ ನಾಯಕನ ಸ್ಥಾನ ಸಿಕ್ಕುತ್ತಿಲ್ಲ. ರಾಹುಲ್​ಗೆ ಈಗ ಕಾಂಗ್ರೆಸ್ ಪಕ್ಷದವನ್ನು ಸದೃಢವಾಗಿ ಕಟ್ಟುವ ದೊಡ್ಡ ಸವಾಲಿನ ಕೆಲಸ ಇದೆ. ಧನಾತ್ಮಕವಾಗಿ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿ ಕೆಲಸ ಮಾಡಬೇಕಾಗಿದೆ.

ಸ್ವಾರ್ಥ, ಒಳಜಗಳಕ್ಕೆ ಮೈತ್ರಿ ಬಲಿ: ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಶೋಚನೀಯ ಸ್ಥಿತಿಗೆ ಪಕ್ಷದೊಳಗಿನ ನಿರಂತರ ಕಚ್ಚಾಟ, ಸ್ವಾರ್ಥತೆ, ಕೌಟುಂಬಿಕ ಪ್ರೀತಿಯೆ ಕಾರಣವಾಗಿದೆ. ಇದೆಲ್ಲವನ್ನೂ ಮೀರಿ ಅವರು ನಡೆದುಕೊಳ್ಳಬೇಕಾಗಿತ್ತು. ಎರಡು ಪಕ್ಷದ ಮುಖಂಡರಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿತ್ತು. ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ಸದಸ್ಯರು ಸ್ಪರ್ಧಿಸಿರುವ ಕ್ಷೇತ್ರಗಳಿಗೆ ಸೀಮಿತರಾದರು. ಮಂಡ್ಯ ಹಾಗೂ ತುಮಕೂರು ಕ್ಷೇತ್ರವನ್ನು ಪಡೆದಿದ್ದು ಜಾಣತನದ ನಡೆಯಾಗಿರಲಿಲ್ಲ. ಆದ್ದರಿಂದ ಅವರು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಅವಕಾಶ ಕೈಚೆಲ್ಲಬೇಕಾಯಿತು.

ಕಾಂಗ್ರೆಸ್​ನಲ್ಲಿ ಇರುವ ಒಳಜಗಳ, ಪರಸ್ಪರ ಅಸಮಾಧಾನ, ಅಪನಂಬಿಕೆ ಬಿಜೆಪಿಗೆ ಅನುಕೂಲವಾಯಿತು. ಮೈತ್ರಿ ಮಾಡಿಕೊಳ್ಳದೇ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡಿದ್ದರೆ ಈ ಶೋಚನೀಯ ಸ್ಥಿತಿ ಬರುತ್ತಿರಲಿಲ್ಲ. ಕೊನೆಯದಾಗಿ ಒಂದು ಮಾತು ಎಂದರೆ, ಚುನಾವಣೆಯಲ್ಲಿ ಅನೇಕ ನಾಯಕರು ಬಳಸುತ್ತಿದ್ದ ಭಾಷೆ ಬದಲಾಗಬೇಕು, ತಮ್ಮ ಹಾಗೂ ಪಕ್ಷದ ಗೌರವ ಕಳೆದುಕೊಳ್ಳದ ಸ್ಥಿತಿಯಲ್ಲಿ ನಡೆದುಕೊಳ್ಳುವುದನ್ನು ಕಲಿಯಬೇಕಾಗಿದೆ.

ಉಪಸಮರದಲ್ಲಿ ಕೈಗೆ ನಷ್ಟ ಕಮಲಕ್ಕೆ ಲಾಭ

ಬೆಂಗಳೂರು: ಲೋಕಸಭೆ ಚುನಾವಣೆ ನೆರಳಲ್ಲೇ ರಾಜ್ಯದ ಎರಡು ವಿಧಾನ ಸಭೆಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರ ಲಾಭ ಮಾಡಿಕೊಂಡಿದ್ದರೆ, ಕಾಂಗ್ರೆಸ್ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಯಲ್ಲಿ ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಅವರ ವಿರುದ್ಧ 1601 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅನುಕಂಪದ ಅಲೆ ಮತ್ತು ಕಾಂಗ್ರೆಸ್ ನಾಯಕರ ವಿಶೇಷ ‘ಅರ್ಥ’ ವತ್ತಾದ ಪ್ರಚಾರ ಗೆಲುವಿಗೆ ಕಾರಣವಾಯಿತು. ಕುಸುಮಾವತಿ ಶಿವಳ್ಳಿ 77640 ಮತ ಪಡೆದರೆ, ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಅವರಿಗೆ 76039 ಮತ ಬಂದಿವೆ. ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವಾಗಿತ್ತು. 2018ರ ಚುನಾವಣೆಯಲ್ಲಿ ಶಿವಳ್ಳಿ ಅವರ ಎದುರು ಚಿಕ್ಕನಗೌಡ್ರ ಕೇವಲ 734 ಮತಗಳ ಅಂತರದಿಂದ ಸೋತಿದ್ದರು.

ಕಾಂಗ್ರೆಸ್ ವಿನಾಶ ಗೆದ್ದ ಅವಿನಾಶ: ಚಿಂಚೋಳಿ ಕ್ಷೇತ್ರದಲ್ಲಿ ತಂದೆ ಡಾ.ಉಮೇಶ ಜಾಧವ್ ಮಾಡಿದ ಅಭಿವೃದ್ಧಿ ಕಾರ್ಯ, ಬಂಜಾರ, ವೀರಶೈವ ಲಿಂಗಾಯತ, ಕೋಲಿ ಕಬ್ಬಲಿಗ ಸೇರಿ ಮೇಲ್ವರ್ಗದ ಬೆಂಬಲದಿಂದಾಗಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ್ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಡಾ.ಅವಿನಾಶ 69109 ಮತ ಪಡೆದು ಗೆಲುವಿನ ನಗೆ ಬೀರಿದರೆ, ಮೈತ್ರಿ ಪಕ್ಷದ ಅಭ್ಯರ್ಥಿ ಸುಭಾಷ ರಾಠೋಡ್ 61079 ಮತ ಪಡೆದು ಪರಾಭವಗೊಂಡಿದ್ದಾರೆ. 8030 ಮತ ಅಂತರದ ಗೆಲುವು ಇದಾಗಿದೆ. 18 ಅಭ್ಯರ್ಥಿಗಳು ಕಣದಲ್ಲಿದ್ದರೂ ಟಫ್ ಫೈಟ್ ನಡೆದಿದ್ದು ಮಾತ್ರ ಬಿಜೆಪಿ ಕಾಂಗ್ರೆಸ್ ಮಧ್ಯೆಯೇ. ಚುನಾವಣೆಗೆ ಮುನ್ನವೇ ಡಾ.ಅವಿನಾಶ ತಂದೆ ಡಾ.ಉಮೇಶ ಜಾಧವ್ ಗುಳೇ ಹೋದ ಮತದಾರ ಮನವೊಲಿಸಿದ್ದರು. ಇನ್ನು ಪಕ್ಷದ ಪರ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಘಟಾನುಘಟಿ ನಾಯಕರು ಪ್ರಚಾರ ಮಾಡಿದ್ದು ಡಾ.ಅವಿನಾಶ ನಿರಾಯಾಸ ಗೆಲುವು ಸಾಧಿಸುವಂತಾಗಿದೆ.

ಉ. ಕರ್ನಾಟಕದಲ್ಲಿ ಜೈ ಹೋ ಕಮಲ

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿದ ರೀತಿಯಲ್ಲಿ ಇಡೀ ಉತ್ತರ ಕರ್ನಾಟಕದಲ್ಲಿ ಮೋದಿ ಬಿರುಗಾಳಿ ಬೀಸಿರುವುದನ್ನು ಫಲಿತಾಂಶ ಸಾಬೀತುಪಡಿಸಿದೆ.

ಚಿಕ್ಕೋಡಿಯಲ್ಲಿ ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ನಿರೀಕ್ಷೆಯಂತೆ ಗೆದ್ದಿದ್ದಾರೆ. ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಜಾಧವ್​ರನ್ನು ಸೆಳೆದು ಬಿಜೆಪಿ ಟಿಕೆಟ್ ನೀಡಿದ್ದು ಫಲ ಕೊಟ್ಟಿತು. ಪ್ರತ್ಯೇಕ ಲಿಂಗಾಯತ ಧರ್ಮ ಆಂದೋಲನದಿಂದಾಗಿ ವಿಧಾನಸಭೆಯಲ್ಲಿ ಪೆಟ್ಟು ತಿಂದಂತೆ ಕಾಂಗ್ರೆಸ್ ಈಗಲೂ ಮುಖಭಂಗ ಅನುಭವಿಸಿತು. ವಿನಯ ಕುಲಕರ್ಣಿ, ಎಂ.ಬಿ. ಪಾಟೀಲರಂಥವರು ಧರ್ಮ ಆಂದೋಲನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಕಾಂಗ್ರೆಸ್​ನಲ್ಲೇ ವೈರುಧ್ಯಕ್ಕೆ ಕಾರಣವಾಯಿತು. ಇದನ್ನು ಬಿಜೆಪಿ ಇಡೀ ಉತ್ತರ ಕರ್ನಾಟಕದಲ್ಲಿ ಟಾಂ ಟಾಂ ಮಾಡಿತು. ವಿನಯ ಕುಲಕರ್ಣಿ ಸೋಲಿಗೆ ಇದೂ ಕಾರಣವಾಯಿತು.

ಹುಬ್ಬಳ್ಳಿಯಲ್ಲಿ ಮೋದಿ ಭರ್ಜರಿ ರ್ಯಾಲಿಯಿಂದಾಗಿ ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಮೊದಲಾದೆಡೆ ಎದ್ದ ಬಿರುಗಾಳಿ ಮೈತ್ರಿ ಪಕ್ಷದ ಪ್ರಭಾವವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿತು. ಉತ್ತರ ಕನ್ನಡ, ಹಾವೇರಿ, ವಿಜಯಪುರ,ಬಾಗಲಕೋಟೆ ಇತ್ಯಾದಿ ಕಡೆ ಬಿಜೆಪಿಗೆ ಪ್ರಬಲ ಎದುರಾಳಿಯೇ ಇಲ್ಲದಾಯಿತು. ಮೈತ್ರಿ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದರ ಪರಿಣಾಮ ಮತದಾರರು ತಕ್ಕ ಪಾಠ ಕಲಿಸಿದರು.

ಬಿಜೆಪಿ ಕಾರ್ಯಕರ್ತ ಸಾವು

ಹೊಸಪೇಟೆ (ಬಳ್ಳಾರಿ): ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಗೆಲುವಿನ ಹಿನ್ನೆಲೆಯಲ್ಲಿ ಕಮಲಾಪುರದ ಹಳ್ಳಿಕೆರೆಯಲ್ಲಿ ಕಾರ್ಯಕರ್ತರು ಗುರುವಾರ ಆಚರಿಸಿದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಆಟೋ ಚಾಲಕ ಗೋವಿಂದ (38) ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ರಾಜ್ಯದ ಜನತೆ ನೀಡಿರುವ ತೀರ್ಪನ್ನು ತಲೆಬಾಗಿಸಿ ಒಪ್ಪಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಅಡ್ಡ ಪರಿಣಾಮ ಆಗುತ್ತದೆ ಎಂಬ ಆತಂಕ ಉಂಟಾಗಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜನರಿಂದ ತಿರಸ್ಕೃತಗೊಳ್ಳುತ್ತೇವೆ ಎಂದು ಭಾವಿಸಿರಲಿಲ್ಲ. ಸೋಲಿಗೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲು ತೀರ್ವನಿಸಿದ್ದೆ. ಆದರೆ ವರಿಷ್ಠರು ಅದನ್ನು ಸ್ವೀಕರಿಸಿಲ್ಲ.

| ಎಚ್. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ

ಇದು ನನ್ನ ಗೆಲುವಲ್ಲ, ಇದು ಮತದಾರರ ಗೆಲುವು. ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಗೆಲುವು ದೊರೆತಿದೆ. ಈ ಗೆಲುವು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಸಲ್ಲಬೇಕು. ಇಲ್ಲಿ ಮೈತ್ರಿಗೆ ಯಾವ ಧಕ್ಕೆ ಉಂಟಾಗಿಲ್ಲ. ರಾಜ್ಯದಲ್ಲಿ ಪಕ್ಷ ಅನುಭವಿಸಿದ ಹಿನ್ನಡೆಯ ಕುರಿತು ವರಿಷ್ಠರು ವಿಮರ್ಶೆ ನಡೆಸಲಿದ್ದಾರೆ.

| ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಸಂಸದ

ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಲೆಕ್ಕಾಚಾರ ಹಾಕಿರಲಿಲ್ಲ. ಆದರೆ, ಗೆದ್ದೆ ಗೆಲ್ಲುತ್ತೇನೆಂಬ ಸಂಪೂರ್ಣ ವಿಶ್ವಾಸವಿತ್ತು. ಜಿಲ್ಲೆಯ ಜನರು ವಿಶ್ವಾಸವಿಟ್ಟು ನನಗೆ ಮತ ಹಾಕಿದ್ದಾರೆ. ಅವರ ಸಹಕಾರಕ್ಕೆ ಆಭಾರಿಯಾಗಿರುತ್ತೇನೆ. ನನ್ನ ಗೆಲುವಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಅಪಾರ ಶ್ರಮವಿದ್ದು, ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.

| ಪ್ರಜ್ವಲ್ ರೇವಣ್ಣ ಹಾಸನ ಸಂಸದ

ನಮ್ಮ ನಾಯಕರೊಂದಿಗೆ ಚರ್ಚೆ ಮಾಡಿ ರಾಜೀನಾಮೆ ಕೊಡುವುದಕ್ಕೂ ಸಿದ್ಧನಿದ್ದೇನೆ. ಚುನಾವಣೆಯಲ್ಲಿ ನಮಗೆ 12-13 ಸೀಟು ಬರುತ್ತೆ ಎಂದುಕೊಂಡಿದ್ದೆ. ಮತ್ತೆ ಮೋದಿ ಪ್ರಧಾನಿ ಆಗಲು ದೇಶದಲ್ಲಿ ಜನ ಆಶೀರ್ವಾದ ಮಾಡಿದ್ದಾರೆ. ಪುಲ್ವಾಮಾ ಘಟನೆ ಬಳಿಕ ತನ್ನಂತಹ ಉತ್ತಮ ನಾಯಕ ಅಗತ್ಯವಾಗಿ ಬೇಕೆಂದು ಮೋದಿ ಬಿಂಬಿಸಿಕೊಂಡರು. ಅದರಿಂದ ಗೆದ್ದರು.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಬಿಜೆಪಿಯ ಪ್ರಚಂಡ ಗೆಲುವನ್ನು ನೋಡಿದರೆ ಮೋದಿ ಅಲೆ ಮುಂದುವರಿದಿರುವುದನ್ನು ಸಾಬೀತುಪಡಿಸಿದೆ. ಪ್ರಧಾನಿ ಮೋದಿ ತೆಗೆದುಕೊಂಡ ದೃಢ ನಿರ್ಧಾರ, ಭ್ರಷ್ಟಾಚಾರ ಮುಕ್ತ ಆಡಳಿತ ಗೆಲುವಿಗೆ ಕಾರಣವಾಗಿದೆ. ಕಾಂಗ್ರೆಸ್​ನ ಕುಟುಂಬ ರಾಜಕಾರಣಕ್ಕೆ ದೇಶದ ಜನರಿಂದ ವಿರೋಧ ವ್ಯಕ್ತವಾಗಿದೆ.

| ಎಸ್.ಎಂ.ಕೃಷ್ಣ ಬಿಜೆಪಿ ಹಿರಿಯ ನಾಯಕ