ವಿಐಪಿ ಕ್ಷೇತ್ರಗಳಲ್ಲಿ ರೋಚಕ ಫಲಿತಾಂಶ: ಪ್ರಜ್ಞಾ, ಸಾಕ್ಷಿ ಮಹಾರಾಜ್​ಗೆ ಗೆಲುವು, ಸಿಂಧಿಯಾ, ಮೆಹಬೂಬಾ ಮುಫ್ತಿ ಪರಾಭವ

ಪ್ರಮುಖ ನಾಯಕರು, ಸಿನಿ ತಾರೆಗಳು ಮತ್ತು ಕ್ರೀಡಾಳುಗಳ ಸ್ಪರ್ಧೆಯಿಂದ ದೇಶದ ಹಲವು ಕ್ಷೇತ್ರಗಳು ‘ವಿಐಪಿ ಕ್ಷೇತ್ರ’ವೆಂದೇ ಕುತೂಹಲ ಕೆರಳಿಸಿದ್ದವು. ಇವುಗಳ ಫಲಿತಾಂಶದತ್ತ ಎಲ್ಲರ ಚಿತ್ತವಿತ್ತು. ಹೊಸ ಮುಖಗಳಿಗೆ ಸೈ ಎಂದಿರುವ ಮತದಾರರು, ಸಿನಿಮಾ ನಟರ ಪಾಲಿಗೆ ಸಿಹಿ-ಕಹಿ ಎರಡೂ ನೀಡಿದ್ದಾರೆ. ಹಲವು ಘಟಾನುಘಟಿ ನಾಯಕರು ಸೋಲಿನ ಮುಖ ಕಂಡಿದ್ದರೆ, ಆಡಳಿತ ಪಕ್ಷದ ಪ್ರಮುಖ ನಾಯಕರು ಗೆಲುವಿನ ನಗೆ ಬೀರಿದ್ದಾರೆ. ಕ್ರೀಡಾಳುಗಳ ಪಾಲಿಗೂ ಫಿಪ್ಟಿ-ಫಿಪ್ಟಿ ಫಲಿತಾಂಶ. ಚುನಾವಣೆ ಹೊತ್ತಲ್ಲಿ ತರಾತುರಿಯಿಂದ ಪಕ್ಷಾಂತರ ಮಾಡಿದ್ದ, ದಿಢೀರ್ ರಾಜಕೀಯ ಪ್ರವೇಶಿಸಿದವರ ಪಾಲಿಗೂ ಹಲವು ಸಂದೇಶ ರವಾನೆಯಾಗಿದೆ. ಇಂಥ ಪ್ರಮುಖ ಕ್ಷೇತ್ರಗಳ ಚಿತ್ರಣ ಇಲ್ಲಿದೆ.

ಇತಿಹಾಸ ಸೃಷ್ಟಿಸಿದ ಅಮಿತ್ ಷಾ

ರಾಷ್ಟ್ರಾದ್ಯಂತ ನೂರಾರು ರ‍್ಯಾಲಿ ನಡೆಸಿ, ಪ್ರಚಾರ ತಂತ್ರಗಳನ್ನು ಅನುಷ್ಠಾನಗೊಳಿಸಿದ, ಸ್ಪಷ್ಟ ಬಹುಮತ ಬರಲು ಅಗತ್ಯ ಯೋಜನೆ ರೂಪಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಪಕ್ಷ ಸಂಘಟನೆಯಲ್ಲೇ ನಿರತವಾಗಿದ್ದ ಅವರು, ಈಗ ಸರ್ಕಾರದ ಭಾಗವಾಗುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆಯೇ ಷಾ ರೋಡ್ ಷೋ ಮತ್ತು ರ‍್ಯಾಲಿ ನಡೆಸಿ ಗಮನ ಸೆಳೆದಿದ್ದರು. ಅಲ್ಲದೆ, ಯುವಕರಾಗಿದ್ದಾಗ ಷಾ ಗಾಂಧಿನಗರದಲ್ಲೇ ಬೂತ್ ಏಜೆಂಟ್​ರಾಗಿ ಕಾರ್ಯನಿರ್ವಹಿಸಿದ್ದರು. ಬಿಜೆಪಿಯ ಹಿರಿಯ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ (6 ಬಾರಿ) ಪ್ರತಿನಿಧಿಸಿದ್ದ ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಷಾ ಭರ್ಜರಿ ಜಯ ದಾಖಲಿಸಿದ್ದಾರೆ. 8,89,925 ಮತ ಪಡೆದ ಷಾ ಪ್ರತಿಸ್ಪರ್ಧಿ ಕಾಂಗ್ರೆಸಿನ ಡಾ.ಸಿ.ಜೆ.ಚಾವ್ಡಾ ವಿರುದ್ಧ 5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 1991ರಿಂದ ಆಡ್ವಾಣಿ ಸತತವಾಗಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಷಾಗೆ ಕೇಂದ್ರ ಸಂಪುಟದಲ್ಲಿ ಮಹತ್ವದ ಖಾತೆ ದೊರೆಯುವ ಸಾಧ್ಯತೆಯಿದೆ.

ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಗೆ ಜನರು ಉತ್ತಮ ರೀತಿಯಲ್ಲಿ ತೀರ್ಪು ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಮೋದಿ ನಾಯಕತ್ವದಲ್ಲಿ ಭಾರತ ಮತ್ತಷ್ಟು ಪ್ರಗತಿಯತ್ತ ಸಾಗಲಿದೆ

| ಅಮಿತ್ ಷಾ ಬಿಜೆಪಿ ರಾಷ್ಟ್ರಾಧ್ಯಕ್ಷ

ವಾರಾಣಸಿಯಲ್ಲಿ ಮೋದಿ ದಿಗ್ವಿಜಯ

ಕಳೆದ ಐದು ವರ್ಷಗಳಿಂದ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ವಾರಾಣಸಿ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತೊಮ್ಮೆ ದಾಖಲೆ ಜಯ ಸಾಧಿಸಿದ್ದಾರೆ. ‘ಗಂಗಾ ಮೈಯ್ಯಾನೇ ಬುಲಾಯಾ ಹೈ’ ಎಂದು ಕಳೆದ ಬಾರಿ ಭಾವುಕರಾಗಿ ನುಡಿದಿದ್ದ ಮೋದಿ ಆ ಬಳಿಕ ವಾರಾಣಸಿಗೆ ಹಲವು ಬಾರಿ ಭೇಟಿ ನೀಡಿ ಗಂಗಾ ಸ್ವಚ್ಛತೆ ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದರು. ಹಾಗಾಗಿ, ಕ್ಷೇತ್ರದ ಜನ ಮೋದಿ ಬಗ್ಗೆ ಭಾರಿ ಅಭಿಮಾನ ಇರಿಸಿಕೊಂಡಿದ್ದರು. ಈ ಬಾರಿ ನಾಮಪತ್ರ ಸಲ್ಲಿಕೆಯ ವೇಳೆ ನಡೆಸಿದ ರೋಡ್ ಶೋ ಮೂಲಕವೇ ಗಮನ ಸೆಳೆದಿದ್ದರು. ನಾಲ್ಕು ಲಕ್ಷಕ್ಕಿಂತಲೂ ಅಧಿಕ ಜನ ಅಂದು ಮೋದಿ ವಿಜಯಕ್ಕೆ ಸಂಕಲ್ಪ ಮಾಡಿದ್ದರು. ಗಂಗಾ ಆರತಿಯಂಥ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವ ಮೂಲಕ ವಾರಾಣಸಿಯನ್ನು ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. 2014ರಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ 3.37 ಲಕ್ಷ ಮತಗಳ ಅಂತರದಿಂದ ಜಯಿಸಿದ್ದ ಮೋದಿ, ಈ ಬಾರಿಗೆ 4.78 ಲಕ್ಷ ಮತಗಳ ಅಂತರದಿಂದ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಜಯಭೇರಿ ಬಾರಿಸಿದರು.

ಜನತೆ ತೀರ್ಪು ನೀಡಿದ್ದಾರೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಬಿಜೆಪಿಯ ಗೆಲುವಿಗಾಗಿ ನರೇಂದ್ರ ಮೋದಿ ಮತ್ತು ಆ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಅವಲೋಕನ ನಡೆಸುತ್ತೇವೆ. ತರಾತುರಿಯಲ್ಲಿ ಈಗಲೇ ಏನೂ ಹೇಳುವುದಿಲ್ಲ. ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದಗಳು.

| ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಗಾಂಧಿ ಕುಟುಂಬದ ಭದ್ರಕೋಟೆ ಧ್ವಂಸ

ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಲು ಅನುಭವಿಸಿದ್ದಾರೆ. 2014ರಲ್ಲಿ ರಾಹುಲ್ ವಿರುದ್ಧ ಸೋತಿದ್ದರೂ, ಅಮೇಠಿಗೆ ಹಲವು ಬಾರಿ ಭೇಟಿ ನೀಡಿ ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭರ್ಜರಿ ಗೆಲುವು ಕಂಡಿದ್ದಾರೆ. ರೋಚಕ ಸ್ಪರ್ಧೆಗೆ ಸಾಕ್ಷಿಯಾದ ಅಮೇಠಿಯಲ್ಲಿ ಮೊದಲ ಕೆಲ ಸುತ್ತು ರಾಹುಲ್ ಮುನ್ನಡೆ ಕಾಯ್ದುಕೊಂಡರಾದರೂ, ನಂತರದ ಸುತ್ತುಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು. ಒಮ್ಮೆ ರಾಹುಲ್ ಮುನ್ನಡೆ ಸಾಧಿಸಿದರೆ, ಮಗದೊಮ್ಮೆ ಸ್ಮೃತಿ. ಕಡೆಗೂ ವಿಜಯಲಕ್ಷ್ಮಿ ಒಲಿದದ್ದು ಸ್ಮೃತಿ ಇರಾನಿಗೆ. ಈ ಸೋಲು ಕಾಂಗ್ರೆಸ್ ಮತ್ತು ರಾಹುಲ್ ಪಾಲಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ದೇಶಾದ್ಯಂತ ಕಾಂಗ್ರೆಸ್ ಸಾಧನೆ ನಿರಸವಾಗಿದ್ದರೂ, ಪಕ್ಷದ ಹಳೆಕೋಟೆಯನ್ನು ಉಳಿಸಿಕೊಳ್ಳಲು ಆ ಪಕ್ಷದ ಅಧ್ಯಕ್ಷರೇ ವಿಫಲರಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಸ್ಮೃತಿ ಅಮೇಠಿ ಮತದಾರರ ಮನಕ್ಕೆ ಹತ್ತಿರವಾಗಿದ್ದರಿಂದ ರಾಹುಲ್​ಗೆ ಸೋಲಿನ ಸುಳಿವು ಮೊದಲೇ ದೊರೆತಿತ್ತು ಎನ್ನಲಾಗಿದೆ. ಹಾಗಾಗಿಯೇ, ದಕ್ಷಿಣ ಭಾರತದಲ್ಲಿ ಸುರಕ್ಷಿತ ಕ್ಷೇತ್ರ ಅರಸಿ ಕೇರಳದ ವಾಯ್ನಾಡ್​ಗೆ ಬಂದ ರಾಹುಲ್, ಅಲ್ಲಿಂದ ಸ್ಪರ್ಧಿಸಿದರು. ಉತ್ತರಪ್ರದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಅಮೇಠಿಯ ಗೆಲುವು ಮತ್ತಷ್ಟು ಹುಮ್ಮಸ್ಸು ತಂದುಕೊಟ್ಟಿದೆ. ರಾಹುಲ್ ಅಮೇಠಿ ಕ್ಷೇತ್ರವನ್ನು 2004ರಿಂದ ಪ್ರತಿನಿಧಿಸುತ್ತಿದ್ದರು.

ವಯನಾಡಲ್ಲಿ ದಾಖಲೆ

ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ದಾಖಲೆಯ ಜಯ ಸಾಧಿಸಿದ್ದಾರೆ. 12,76,945 ಮತ ಪಡೆದ ರಾಹುಲ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಪಿಪಿ ಸುನೀರ್​ರನ್ನು 7,99,162 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ. 2009ರಲ್ಲಿ ವಯನಾಡ್ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, ಈ ಹಿಂದಿನ ಎರಡೂ ಅವಧಿಯಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು.

ಕಾಂಗ್ರೆಸ್​ಗಿಲ್ಲ ಅಧಿಕೃತ ಪ್ರತಿಪಕ್ಷದ ಸ್ಥಾನ!

2014ರ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿಯೂ ಚೇತರಿಸಿಕೊಂಡಿಲ್ಲ. ಕಳೆದ ಬಾರಿಗಿಂತ ಕೆಲ ಸೀಟು ಹೆಚ್ಚು ಗಳಿಸಿದ್ದರೂ, ಅಧಿಕೃತ ಪ್ರತಿಪಕ್ಷದ ಸ್ಥಾನ ದೊರೆತಿಲ್ಲ. ಹಾಗಾಗಿ, ಕಾಂಗ್ರೆಸ್ ಯಾವ ಸ್ಥಿತಿಗೆ ತಲುಪಿದೆ ಎಂಬ ನಿಷ್ಕರ್ಷಕ್ಕೆ ಬರಬಹುದು. ಪ್ರತಿಪಕ್ಷದ ಅಧಿಕೃತ ಸ್ಥಾನ ಸಿಗಬೇಕಾದರೆ ಲೋಕಸಭೆಯ ಒಟ್ಟು ಸ್ಥಾನದ ಪೈಕಿ ಶೇಕಡ ಹತ್ತು ಸ್ಥಾನಗಳನ್ನಾದರೂ (55) ಪಡೆಯಬೇಕು. 2014ರಲ್ಲಿ 44 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ 52 ಸ್ಥಾನಗಳಿಗೆ ಸೀಮಿತವಾಗಿದೆ. ಹಾಗಾಗಿ, ಈ ಬಾರಿಯೂ ಅಧಿಕೃತ ಪ್ರತಿಪಕ್ಷದ ಸ್ಥಾನ ದೊರೆಯುವುದಿಲ್ಲ.

ರಾಹುಲ್ ಟೀಮ್ೆ ಸೋಲು!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಂನ ಬಹುತೇಕ ಸದಸ್ಯರು ಹೀನಾಯ ಸೋಲು ಅನುಭವಿಸಿದ್ದಾರೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೋಲಾಪುರ ಕ್ಷೇತ್ರದಲ್ಲಿ ಎದುರಾಳಿ ಬಿಜೆಪಿಯ ಡಾ.ಜೈ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಎದುರು ಪರಾಭವಗೊಂಡಿದ್ದಾರೆ. ಮುಂಬೈ ದಕ್ಷಿಣದಿಂದ ಮಿಲಿಂದ್ ದೇವಡಾ, ಭೋಪಾಲ್​ನಿಂದ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದ ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿ ಈಶಾನ್ಯದಿಂದ ಶೀಲಾ ದೀಕ್ಷಿತ್ ಸೋಲು ಕಂಡಿದ್ದಾರೆ.

ಗೆಲುವಿನ ಹೊಸ ಎತ್ತರ ತಲುಪಿದ ಬಿಜೆಪಿ

ಎರಡೇ ಎರಡು ಲೋಕಸಭಾ ಸದಸ್ಯಬಲದ ಮೂಲಕ ರಾಜಕೀಯ ಪಯಣ ಆರಂಭಿಸಿದ್ದ ಭಾರತೀಯ ಜನತಾ ಪಾರ್ಟಿ ಸ್ವಂತಬಲದ ಮೇಲೆ 300ರ ಗಡಿ ದಾಟಿದ್ದು, 2014ರ ದಾಖಲೆಯನ್ನು ಮುರಿದಿದೆ. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ, ಈ ಬಾರಿ 302 ಕ್ಷೇತ್ರಗಳಲ್ಲಿ ವಿಜಯದ ಕಹಳೆ ಮೊಳಗಿಸಿದೆ. ನರೇಂದ್ರ ಮೋದಿ ಅಲೆ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಚುನಾವಣಾತಂತ್ರ ಹಾಗೂ ಪ್ರಚಾರವೈಖರಿ ಮತ್ತೊಮ್ಮೆ ಮೋಡಿ ಮಾಡಿದೆ. ಉತ್ತರಪ್ರದೇಶದಲ್ಲಿ ಮಹಾಮೈತ್ರಿ ಎದುರು ಉತ್ತಮ ಸಾಧನೆ ತೋರಿರುವ ಪಕ್ಷ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸೀಟುಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪಕ್ಷದ ಬೇರು ಗಟ್ಟಿಗೊಳ್ಳುವುದರೊಂದಿಗೆ, ಹೊಸ ಪ್ರದೇಶಗಳಿಗೂ ವಿಸ್ತರಣೆಯಾಗಿದೆ. 2014ರಲ್ಲಿ ‘ಹಿಂದಿ ಹೃದಯ’ ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ದಾಖಲಿಸಿದ್ದ ಪಕ್ಷ, ಈ ಬಾರಿಯೂ ಆ ಸಾಧನೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ಇದನ್ನು ಸಾಧಿಸಿದ್ದೀರಿ. ದೇವರು ಒಳ್ಳೆಯದು ಮಾಡಲಿ.

| ರಜನೀಕಾಂತ್ ತಮಿಳು ಸೂಪರ್ ಸ್ಟಾರ್

ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಮೋದಿಯವರ ಐದು ವರ್ಷಗಳ ಉತ್ತಮ ಆಡಳಿತ, ಅಭಿವೃದ್ಧಿ ಕಾರ್ಯಗಳು ಜನಮನ ಗೆದ್ದಿವೆ. ಹಲವು ರಂಗಗಳಲ್ಲಿ ದೇಶ ಮುನ್ನಡೆ ಸಾಧಿಸಿದೆ. ರಾಷ್ಟ್ರವಾದದ ಭಾವನೆ ಬೆಳೆದಿದೆ. ದೇಶದ ಶತ್ರುಗಳಿಗೂ ತಕ್ಕ ಸಂದೇಶ ರವಾನಿಸಲಾಗಿದೆ. ಮತದಾರರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ಬಿಜೆಪಿಗೆ ಆಶೀರ್ವದಿಸಿದ್ದಾರೆ.

| ಯೋಗಿ ಆದಿತ್ಯನಾಥ ಉತ್ತರಪ್ರದೇಶ ಮುಖ್ಯಮಂತ್ರಿ

ಮತದಾನೋತ್ತರ ಸಮೀಕ್ಷೆಗಳು ನಿಜವಾಗಿವೆ. ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟಕ್ಕೆ ಅಭಿನಂದನೆಗಳು. ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಜೋಡಿ ವೃತ್ತಿಪರತೆಯಿಂದ ನಡೆಸಿದ ಪ್ರಚಾರದಿಂದಾಗಿ ಬಿಜೆಪಿ ಜಯಗಳಿಸಿದೆ.

| ಉಮರ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ

ಬಿಜೆಪಿ ಘೋಷವಾಕ್ಯ ‘ಅಬ್ ಕಿ ಬಾರ್, 300 ಪಾರ್’ನಂತೆ ಬಿಜೆಪಿ ಅದ್ಭುತ ಗೆಲುವು ದಾಖಲಿಸಿದೆ. ಈ ಗೆಲುವು ಹಿಂದುತ್ವದ ಅಲೆಯಿಂದ ಆಗಿರುವುದೇ ಹೊರತು ಮೋದಿ ಅಲೆಯಿಂದ ಅಲ್ಲ. ಏಕೆಂದರೆ ದೇಶದ ಯುವಜನತೆ ಜಾತಿಯ ಬಗ್ಗೆ ಯೋಚಿಸದೆ ರಾಷ್ಟ್ರೀಯವಾದಿಗಳಾಗಿದ್ದಾರೆ.

| ಸುಬ್ರಮಣಿಯನ್ ಸ್ವಾಮಿ ರಾಜ್ಯಸಭಾ ಸದಸ್ಯ

ಬಿಜೆಪಿಯ ಅಭೂತಪೂರ್ವ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಹಾರ್ದಿಕ ಅಭಿನಂದನೆಗಳು. ಬಿಜೆಪಿ ಸಂದೇಶವನ್ನು ಮತದಾರರ ಮನೆ-ಮನೆಗೆ ಮುಟ್ಟಿಸಲು ಅಗಾಧ ಪ್ರಯತ್ನ ಮಾಡಿದ ಪಕ್ಷದ ಅಧ್ಯಕ್ಷ ಅಮಿತ್ ಷಾ ಕಾರ್ಯ ಶ್ಲಾಘನೀಯ.

| ಲಾಲ್​ಕೃಷ್ಣ ಆಡ್ವಾಣಿ ಬಿಜೆಪಿ ಹಿರಿಯ ನಾಯಕ

Leave a Reply

Your email address will not be published. Required fields are marked *