ದಿಲ್ಲಿ ಕಣದಲ್ಲಿ ಕ್ರಿಕೆಟಿಗ ಬಾಕ್ಸರ್ ಸದ್ದು

ಇದೇ 12ರಂದು ಮತದಾನಕ್ಕೆ ಸಜ್ಜಾಗುತ್ತಿರುವ ದೆಹಲಿಯ 7 ಲೋಕಸಭೆ ಕ್ಷೇತ್ರಳಲ್ಲಿ ಮೂವರು ಅಭ್ಯರ್ಥಿಗಳು ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ದಕ್ಷಿಣ ದೆಹಲಿ ಕ್ಷೇತ್ರದ ಅಭ್ಯರ್ಥಿ ಬಾಕ್ಸರ್ ವಿಜೇಂದರ್ ಸಿಂಗ್, ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹಾಗೂ ನವದೆಹಲಿ ಕ್ಷೇತ್ರದಿಂದ ಮೀನಾಕ್ಷಿ ಲೇಖಿ ಕುರಿತಂತೆ ಜನಾಭಿಪ್ರಾಯ ಯಾವ ಕಡೆ ಹೊರಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

| ರಾಘವ ಶರ್ಮ ನಿಡ್ಲೆ ನವದೆಹಲಿ

ಗೌತಮ್ ಗಂಭೀರ್​ಗೆ ತ್ರಿಕೋನ ಸ್ಪರ್ಧೆ

ಗಂಭೀರ್ ಕಣದಲ್ಲಿರುವ ಪೂರ್ವ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆಯಿದೆ. ಆಪ್​ನಿಂದ ಆತಿಷಿ ಮರ್ಲೆನಾ ಹಾಗೂ ಕಾಂಗ್ರೆಸ್​ನಿಂದ ಅರವಿಂದರ್ ಸಿಂಗ್ ಲವ್ಲಿ ಸ್ಪರ್ಧಿಸಿದ್ದಾರೆ. ಪೂರ್ವ ದೆಹಲಿ ನಿವಾಸಿಗರಿಗೆ ಭೀಕರ ಸಮಸ್ಯೆಯಾಗಿ ಕಾಡಿರುವುದು ಗಾಜಿಪುರದಲ್ಲಿ ಪರ್ವತಾಕಾರದಲ್ಲಿ ಬೆಳೆದು ನಿಂತಿರುವ ಕಸದ ಗುಡ್ಡೆ. ಈ ಗುಡ್ಡೆ ವರ್ಷದಿಂದ ವರ್ಷಕ್ಕೆ ದೈತ್ಯಾಕಾರ ಪಡೆದುಕೊಳ್ಳುತ್ತಿದೆ. ಇದನ್ನು ಬೇರೆಡೆಗೆ ಸ್ಥಳಾಂತರಗೊಳಿಸಲು ಸ್ಥಳೀಯಾಡಳಿತ ಈವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ-ರಾಜ್ಯ ಸರ್ಕಾರದ ಅಸಹಕಾರದ ರಾಜಕೀಯದಲ್ಲಿ ಸ್ಥಳೀಯರು ರೋಗಪೀಡಿತರಾಗುತ್ತಿದ್ದಾರೆ. ತಾನು ಸಂಸದನಾಗಿ ಆಯ್ಕೆಯಾದರೆ ಈ ಕಸದ ಗುಡ್ಡೆಯನ್ನು ಹಸಿರು ತಾಣವನ್ನಾಗಿ ಪರಿವರ್ತಿಸುತ್ತೇನೆ ಎನ್ನುವ ಗಂಭೀರ್ ಮಾತನ್ನು ನಂಬುವುದು ಹೇಗೆ? 5 ವರ್ಷದಲ್ಲಿ ಕೇಂದ್ರ ಸರ್ಕಾರ, ಕಳೆದೆರಡು ವರ್ಷಗಳಲ್ಲಿ ಆಪ್ ಸರ್ಕಾರ ಮಾಡಿದ್ದೇನು ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಆಪ್ ಸರ್ಕಾರ ಗಮನಾರ್ಹ ಸಾಧನೆ ಮಾಡಿರುವುದನ್ನು ದೆಹಲಿ ನಿವಾಸಿಗರು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ ಅರವಿಂದ ಕೇಜ್ರಿವಾಲರದ್ದು ಎಲುಬಿಲ್ಲದ ನಾಲಿಗೆ ಎಂದು ಅನೇಕರು ಸಿಟ್ಟಾಗುತ್ತಾರೆ. ಆಮ್ ಆದ್ಮಿಗಳ ಶಿಕ್ಷಣ ಕ್ರಾಂತಿಗೆ ಆತಿಷಿ ಮರ್ಲೆನಾ ಕೊಡುಗೆ ದೊಡ್ಡದು ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾಗೆ ಅವರು ಸಲಹೆಗಾರರಾಗಿಯೂ ಕಾರ್ಯನಿವರ್ಹಿಸಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಆಪ್ ನಡುವಿನ ಮತ ವಿಭಜನೆ ಗಂಭೀರ್​ಗೆ ನೆರವಾಗಲಿದೆ ಎಂದೂ ಹೇಳಲಾಗುತ್ತಿದೆ.

ಗಂಭೀರ್-ಲೇಖಿ ಟಿಕೆಟ್ ಕಥೆ

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್​ಗೆ ಪೂರ್ವ ದೆಹಲಿ ಟಿಕೆಟ್ ಸಿಕ್ಕಿದ್ದೇ ಬಹಳ ಆಸಕ್ತಿಕರ ವಿಷಯ. ಅವರಿಗೆ ನವದೆಹಲಿ ಟಿಕೆಟ್ ಖಾತರಿಪಡಿಸಿಯೇ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮುಜುಗರ ಸೃಷ್ಟಿಸಿಯೇ ಮೀನಾಕ್ಷಿ ಲೇಖಿ ಟಿಕೆಟ್ ಗಿಟ್ಟಿಸಿಕೊಂಡರು ಎನ್ನಲಾಗುತ್ತಿದೆ. ವಾಸ್ತವದಲ್ಲಿ ಲೇಖಿಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ವರಿಷ್ಠರು ನಿರ್ಧರಿಸಿದ್ದರು. ಹೀಗಾಗಿ ಗಂಭೀರ್ ಪೂರ್ವ ದೆಹಲಿಗೆ ಹೋಗಬೇಕಾಯಿತು. ಕೊನೆಯ ಎಸೆತದಲ್ಲಿ ಎಲ್ಲರಿಗೂ ಸಿಕ್ಸರ್ ಬಾರಿಸಲು ಸಾಧ್ಯವಿಲ್ಲ. ಆದರೆ ಲೇಖಿ ಭಾರಿಸಿದ ಸಿಕ್ಸರ್ ಅವರಿಗೆ ಮಾತ್ರವಲ್ಲ, ಇಡೀ ದೇಶದಲ್ಲಿ ಬಿಜೆಪಿಗೆ ನೆರವಾಗುತ್ತಿದೆ. ಗಂಭೀರ್ ಬಂದಿದ್ದರ ಪರಿಣಾಮ ಪೂರ್ವ ದೆಹಲಿ ಸಂಸದ ಮಹೇಶ್ ಗಿರಿ ಅನಿವಾರ್ಯವಾಗಿ ತಮ್ಮ ಕ್ಷೇತ್ರ ಬಿಡಬೇಕಾಯಿತು. ಗಿರಿಗೆ ರಾಜ್ಯಸಭೆ ಸೀಟಿನ ಖಾತರಿ ನೀಡಿರುವ ಬಗ್ಗೆ ಮಾತುಗಳಿವೆ. ನವದೆಹಲಿ ಕ್ಷೇತ್ರದಲ್ಲಿ ಲೇಖಿಗೆ ಸುಗಮ ಹಾದಿಯೇನೂ ಇಲ್ಲ. ಕೇಂದ್ರ ಮಾಜಿ ಸಚಿವ ಅಜಯ್ ಮಾಕೆನ್ ಕಠಿಣ ಸವಾಲೊಡ್ಡಿದ್ದಾರೆ.

ವಿಪಕ್ಷ ನಾಯಕರನ್ನು ಮಾತಿನ ಬಾಣಗಳಿಂದಲೇ ತಿವಿಯುತ್ತಿರುವ ಗಂಭೀರ್, ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಪಡಿಸಬೇಕು ಎಂಬ ನಿಲುವು ಹೊರಹಾಕಿದ್ದನ್ನು ನಾನು ಸಂಪೂರ್ಣ ಬೆಂಬಲಿಸುತ್ತೇನೆ. ಗಂಭೀರ್-ಮೋದಿ ಜೋಡಿ ಚೆನ್ನಾಗಿದೆ.

| ವೀರೇಂದ್ರ ಕುಮಾರ್ ಚಕೂರ್ತಾ ಮಯೂರ್ ವಿಹಾರದ ನಿವಾಸಿ

ಬಾಕ್ಸರ್ ವಿಜೇಂದರ್ ಸಿಂಗ್ ಗೆಲ್ಲುತ್ತಾರಾ?

ದಕ್ಷಿಣ ದೆಹಲಿಯಲ್ಲಿ ಕಾಂಗ್ರೆಸ್ ಗೆ ಸೆಲೆಬ್ರಿಟಿ ಅಭ್ಯರ್ಥಿಯೊಬ್ಬರನ್ನು ಹುಡುಕುವುದು ಅನಿವಾರ್ಯವಾಗಿತ್ತು. ಏಕೆಂದರೆ, ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಬಿದೂರಿ ರಾಜ್ಯ ಬಿಜೆಪಿ ವಲಯದಲ್ಲಿ ತಮ್ಮ ಕೆಲಸದಿಂದಲೇ ಗುರುತಿಸಿಕೊಂಡವರು ಮತ್ತು ಕ್ಷೇತ್ರದ ಮೇಲೂ ಪ್ರಬಲ ಹತೋಟಿ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿದೂರಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್ ಹೀನಾಯವಾಗಿ ಸೋತಿದ್ದರು.ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ದಿನ ಹತ್ತಿರವಾಗುತ್ತಿದ್ದಂತೆ ಆಪ್ ಜತೆ ಮೈತ್ರಿ ಇಲ್ಲ ಎಂದು ಖಚಿತಪಡಿಸಿದ ಹೈಕಮಾಂಡ್, ಹರಿಯಾಣದ ಭಿವಾನಿ ಮೂಲದ ವಿಜೇಂದರ್ ಸಿಂಗ್​ರನ್ನು ನಾಮಪತ್ರ ಸಲ್ಲಿಕೆಯ ಹಿಂದಿನ ದಿನ ಅಭ್ಯರ್ಥಿಯನ್ನಾಗಿ ಘೊಷಿಸಿತು. ಬಾಕ್ಸಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೂ ವಿಜೇಂದರ್​ಗೆ ರಾಜಕೀಯ ಹೊಸತು. ಹೀಗಾಗಿ ಸಂಸದರಾದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗಳಿಗೆ ಅರಳು ಹುರಿದಂತೆ ಮಾತನಾಡುವುದು ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ, ಕ್ಷೇತ್ರದಲ್ಲಿ ಕ್ರೀಡಾ ಜನಪ್ರಿಯತೆ ಬಳಸಿಕೊಂಡು ಮತ ಬಾಚುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ವಿಜೇಂದರ್ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ರಾಘವ್ ಚಡ್ಡಾ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಟಿವಿ ಚರ್ಚೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲವಾಗಿ ಸಮರ್ಥಿಸಿಕೊಂಡು ಖ್ಯಾತರಾಗಿರುವ ರಾಘವ್ ಚಡ್ಡಾ, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಹಾಲಿ ಸಂಸದ ಬಿದೂರಿ 5 ವರ್ಷದಲ್ಲಿ ಕ್ಷೇತ್ರದ ಜನರಿಗೆ ಸಿಕ್ಕಿದ್ದು ಕಡಿಮೆ ಎಂಬ ಪ್ರಚಾರ ನಿರೂಪಣೆಯನ್ನು ಕಾಂಗ್ರೆಸ್ ಹಾಗೂ ಆಪ್ ವ್ಯವಸ್ಥಿತವಾಗಿ ಜಾರಿಗೊಳಿಸಿದ್ದರೂ, ಪ್ರಧಾನಿ ಮೋದಿ ಜನಪ್ರಿಯತೆಯನ್ನೇ ಕೇಸರಿಪಡೆ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಬಿದೂರಿ ಗುಜ್ಜರ್ ಸಮುದಾಯದವರಾಗಿದ್ದರೆ, ವಿಜೇಂದರ್ ಜಾಟ್ ಸಮುದಾಯಕ್ಕೆ ಸೇರಿದ್ದಾರೆ. ಆಮ್ ಆದ್ಮಿಗೆ ಜಾತಿ ರಾಜಕಾರಣ ಅಗತ್ಯವಿಲ್ಲ. ನಮ್ಮ ಕೆಲಸಗಳೇ ನಮ್ಮ ಸಾಧನೆಯನ್ನು ಸಾರಿ ಹೇಳುತ್ತಿವೆ ಎಂದು ರಾಘವ್ ಚಡ್ಡಾ ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದ 42 ಹಳ್ಳಿಗಳಲ್ಲಿ 18ರಲ್ಲಿ ಜಾಟ್ ಪ್ರಾಬಲ್ಯವಿದ್ದರೆ, 12ರಲ್ಲಿ ಗುಜ್ಜರ್ ಪ್ರಭಾವ ಫಲಿತಾಂಶದಲ್ಲಿ ನಿರ್ಣಾಯಕ ಎನಿಸಿಕೊಳ್ಳಲಿದೆ.