ಮರ್ಮಾಘಾತ, ಕೈಗೆ ನೆಲೆಕಳೆದುಕೊಳ್ಳುವ ಆತಂಕ: ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕೆಳಹಂತದಲ್ಲಿ ಪಕ್ಷ ಸಂಘಟನೆ ಅನಿವಾರ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ರಾಜ್ಯದಲ್ಲಿ ಪಕ್ಷದ ಭವಿಷ್ಯಕ್ಕೇನು ಆತಂಕವಿಲ್ಲ ಎಂದು ಕಾಂಗ್ರೆಸ್ ನಾಯಕರು ಬಾಯ್ಮಾತಲ್ಲಿ ಹೇಳುತ್ತಿದ್ದಾರಾದರೂ ಒಳಗೊಳಗೆ ದುಗುಡು ಆವರಿಸಿಕೊಂಡಿದೆ. ಕರ್ನಾಟಕವು ಕಾಂಗ್ರೆಸ್ ಅನ್ನು ಎಂದಿಗೂ ಬಿಟ್ಟುಕೊಟ್ಟಿದ್ದೇ ಇಲ್ಲ. ಒಂದೊಮ್ಮೆ ಫಲಿತಾಂಶ ಏರಿಳಿತವಾದರೂ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿಲ್ಲ. ಮೋದಿ ಅಲೆ ಈ ಬಾರಿ ಕಾಂಗ್ರೆಸ್ ಕೊಚ್ಚಿಹೋಗುವಂತೆ ಮಾಡಿದೆ. ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯದ ಕೈ ನಾಯಕರಿದ್ದಾರೆ.

1951ರಿಂದ 1991ರವರೆಗೆ ಗರಿಷ್ಠ ಪ್ರಮಾಣದಲ್ಲಿ ರಾಜ್ಯದಿಂದ ಸಂಸತ್ತಿಗೆ ಸದಸ್ಯರನ್ನು ಕಳಿಸಿಕೊಟ್ಟ ರಾಜ್ಯ ಕಾಂಗ್ರೆಸ್, 1996ರ ಚುನಾವಣೆ ಬಳಿಕ ಕೊಂಚ ಪ್ರತಿನಿಧಿತ್ವ ಕಡಿಮೆ ಮಾಡಿಕೊಂಡಿತ್ತು. ಈ ಬಾರಿ ಒಬ್ಬ ಸದಸ್ಯನನ್ನು ಮಾತ್ರ ಗೆಲ್ಲಿಸಿಕೊಳ್ಳುವ ಮೂಲಕ ಅತಿ ಕನಿಷ್ಠ ಸಾಧನೆ ದಾಖಲಿಸಿದೆ. ಈ ಬೆಳವಣಿಗೆ ರಾಜ್ಯ ನಾಯಕರನ್ನು ಕಂಗಾಲು ಮಾಡಿದೆ. 16 ರಾಜ್ಯಗಳಲ್ಲಿ ಕಾಂಗ್ರೆಸ್ ಒಬ್ಬನೇ ಒಬ್ಬ ಸದಸ್ಯನ್ನೂ ಗೆಲ್ಲಿಸಿಕೊಂಡು ಬರಲಾಗಲಿಲ್ಲ. ನೆರೆಯ ಕೇರಳ, ಪಂಜಾಬ್ ರಾಜ್ಯಗಳು ಕೈ ಹಿಡಿಯದೆ ಇದ್ದರೆ ಪಕ್ಷದ ಸಾಧನೆ ಗಣನೀಯ ಇಳಿಕೆಯಾಗುವುದಿತ್ತು. ಇನ್ನು ಪಕ್ಕದ ತಮಿಳುನಾಡು, ಆಂಧ್ರದಲ್ಲೂ ಕಾಂಗ್ರೆಸ್ ನೆಲಕ್ಕಚ್ಚಿದೆ. ಕೆಲವೆಡೆ ಮೈತ್ರಿ ಊರುಗೋಲಿನಲ್ಲಿ ಉಳಿದುಕೊಂಡಿದೆ. ಇಂಥ ಪರಿಸ್ಥಿತಿ ರಾಜ್ಯದಲ್ಲೂ ಅನಿವಾರ್ಯವಾಗಿ ಬಿಡಬಹುದು, ಈ ಕಾರಣಕ್ಕೆ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದು ಆ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರೇ ಅಭಿಪ್ರಾಯಪಡುತ್ತಾರೆ.

ಸಚಿವರ ಸಭೆ: ಕಾಂಗ್ರೆಸ್ ನಾಯಕರೆಲ್ಲ ಆತ್ಮಾವಲೋಕನಕ್ಕೆ ಶುಕ್ರವಾರ ಬೆಳಗ್ಗೆ ಒಂದೆಡೆ ಸೇರಿದರು. ತಮ್ಮ ತಮ್ಮ ಕ್ಷೇತ್ರದ ಫಲಿತಾಂಶ, ಮತ ಹಂಚಿಕೆ ಬಗ್ಗೆ ಚರ್ಚೆ ನಡೆಸಿದರು. ಮೋದಿ ಅಲೆ ತಡೆಯಲು ನಿಶ್ಚಿತವಾಗಿ ಏನಾದರೂ ಮಾಡಲೇಬೇಕು, ಬಿಜೆಪಿ ರೀತಿ ಕೆಳ ಹಂತದ ಸಂಘಟನೆ ಬಲಗೊಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತೆನ್ನಲಾಗಿದೆ. ಫಲಿತಾಂಶದಿಂದ ಎಷ್ಟೇ ಆಘಾತವಾಗಿದ್ದರೂ ಅದನ್ನು ಹೊರಗೆ ತೋರ್ಪಡಿಸದೆ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಿ ಎಂದು ಪಕ್ಷದ ನಾಯಕರು ಸಚಿವರಿಗೆ ಸಲಹೆ ನೀಡಿದ್ದಾರೆ.

ಮಾಧ್ಯಮ ಚರ್ಚೆಗೆ ಹೋಗಬೇಡಿ ಎಂದ ಸಿಎಂ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಸೇರಿ ಯಾವುದೇ ವಿಚಾರ ಕುರಿತಂತೆ ದೃಶ್ಯ ಮಾಧ್ಯಮಗಳು ನಡೆಸುವ ಚರ್ಚೆಗಳಲ್ಲಿ ಜೆಡಿಎಸ್​ನಿಂದ ಸದ್ಯಕ್ಕೆ ಯಾರೂ ಪಾಲ್ಗೊಳ್ಳುವುದು ಬೇಡ. ಯಾರು ಪಾಲ್ಗೊಳ್ಳಬೇಕೆಂಬ ಬಗ್ಗೆ ಪಕ್ಷ ನಿರ್ಧರಿಸು ವವರೆಗೂ ಅಂತರ ಕಾಯ್ದುಕೊಳ್ಳಿ ಎಂದು ಸಿಎಂ ಕುಮಾರಸ್ವಾಮಿ ಪಕ್ಷದ ನಾಯಕರಿಗೆ ಫರ್ವನು ಹೊರಡಿಸಿದ್ದಾರೆ. ಈ ವಿಷಯವನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮೈತ್ರಿಯಲ್ಲಿ ಸಿಟ್ಟು

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಈಗ ದೋಸ್ತಿ ಪಕ್ಷಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆಯನ್ನು ಸಿದ್ದರಾಮಯ್ಯ ಹಣೆಗೆ ಕಟ್ಟಲು ವ್ಯವಸ್ಥಿತ ತಯಾರಿ ನಡೆದಿದೆ. ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೋಲಿಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಹಾಗೂ ಸಮುದಾಯದ ಮತಗಳನ್ನು ವರ್ಗಾವಣೆ ಮಾಡಿಸದಿರುವುದೇ ಪ್ರಮುಖ ಕಾರಣವೆಂಬ ಸಿಟ್ಟು ಜೆಡಿಎಸ್​ನಲ್ಲಿದೆ.

ಕಾಂಗ್ರೆಸ್​ನಲ್ಲಿ ಸಿಟ್ಟು: ಸೀಟು ಹಂಚಿಕೆಯಲ್ಲಿ ಮಾಡಿಕೊಂಡ ಗೊಂದಲದಿಂದಾಗಿ ಹೆಚ್ಚು ನಷ್ಟವಾಯಿತು, ಸೀಟು ಹಂಚಿಕೆ ವೇಳೆ ಮುಂದಾಳತ್ವ ವಹಿಸಿದ್ದ ಸಿದ್ದರಾಮಯ್ಯ ತಪ್ಪು ಹೆಜ್ಜೆ ಇಟ್ಟರು ಎಂಬುದು ಈಗ ಸ್ಪಷ್ಟವಾಗಿದೆ ಎಂಬ ವಾದ ಕಾಂಗ್ರೆಸ್​ನಲ್ಲಿದೆ. 2014ರಲ್ಲಿ ಗೆಲುವು ಸಾಧಿಸಿದ್ದ ತುಮಕೂರನ್ನು ಸುಲಭವಾಗಿ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣರಾದರು. ಒಂದು ವೇಳೆ ಮೈಸೂರು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದರೆ ಮೈತ್ರಿ ಅಭ್ಯರ್ಥಿ ಅಲ್ಲೂ ಗೆಲ್ಲಬಹುದಿತ್ತು, ಮಂಡ್ಯದಲ್ಲೂ ತಮ್ಮ ಬೆಂಬಲಿಗ ಮುಖಂಡರ ಮನವೊಲಿಸುವಲ್ಲಿ ಅವರು ವಿಫಲರಾದರು ಎಂಬ ಮಾತುಗಳು ಪಕ್ಷದ ವೇದಿಕೆಯಲ್ಲಿ ಕೇಳಿಬಂದಿದೆ. ಕಲಬುರಗಿಯಲ್ಲೂ ತಮ್ಮ ಸಮುದಾಯದ ಮತಗಳನ್ನು ಬಿಜೆಪಿಗೆ ಹಾಕಿಸಿದ್ದಾರೆ. ದಾವಣಗೆರೆ, ಕೊಪ್ಪಳ, ಬಾಗಲಕೋಟೆಯಲ್ಲಿ ಟಿಕೆಟ್ ಹಂಚಿಕೆ ಸರಿಯಾಗಿ ಮಾಡಲಿಲ್ಲ. ಧಾರವಾಡದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ತಪ್ಪಿಸಿದರು. ಪ್ರಚಾರ ಸಂದರ್ಭ ಪದೇ ಪದೆ ಯಡಿಯೂರಪ್ಪ ಹಾಗೂ ಮೋದಿ ಅವರನ್ನು ಟೀಕಿಸಬಾರದಿತ್ತು ಎಂಬುದು ಕಾಂಗ್ರೆಸ್​ನಲ್ಲಿ ಕೇಳಿ ಬರುತ್ತಿರುವ ವಾದವಾಗಿದೆ. ಸಂಪುಟದಲ್ಲಿ ಸ್ಥಾನ ಸಿಗದ ಹಿರಿಯ ನಾಯಕರೆಲ್ಲ ಸಿದ್ದರಾಮಯ್ಯರತ್ತ ಬೊಟ್ಟು ಮಾಡುತ್ತಿದ್ದು, ಕಳೆದ ವಿಧಾನಸಭೆಯಲ್ಲಿ ಸರ್ಕಾರವನ್ನು ಕಳೆದುಕೊಳ್ಳಲು ಕಾರಣರಾದ ಅವರು ಈಗ ಲೋಕ ಸಮರದಲ್ಲೂ ನೆಲೆ ಕಳೆದುಕೊಳ್ಳಲು ಕಾರಣ ಎಂದು ನೇರ ಹಣೆಪಟ್ಟಿ ಕಟ್ಟಲಾರಂಭಿಸಿದ್ದಾರೆ.

ಬಲವಾಗುತ್ತಿದೆ ಮೂಲ ವಲಸಿಗ

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಇಷ್ಟೊಂದು ಕಳಪೆ ಸಾಧನೆ ಮಾಡುತ್ತಿರಲಿಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಪಕ್ಷದೊಳಗೆ ಗೊಂದಲವಾಗಲು ಜೆಡಿಎಸ್​ನಿಂದ ವಲಸೆ ಬಂದವರೇ ಕಾರಣ ಎಂದು ಮೂಲನಿವಾಸಿಗಳು ದನಿ ಎತ್ತಿದ್ದಾರೆ. ಹಿಂದಿನ ಸರ್ಕಾರದ ಕೊನೆ, ಮೈತ್ರಿ ಸರ್ಕಾರ ಬಂದಾಗಿನಿಂದಲೂ ಉಂಟಾಗುತ್ತಿರುವ ಗೊಂದಲಗಳಲ್ಲಿ ಜೆಡಿಎಸ್​ನಿಂದ ಬಂದ ಮುಖಂಡರ ಪಾಲು ಹೆಚ್ಚು. ಇದು ಪಕ್ಷಕ್ಕೆ ಹೆಚ್ಚು ಹಾನಿ ಮಾಡುತ್ತಿದೆ. ಇನ್ನು ಈ ಮೈತ್ರಿ ಮುಂದುವರಿಸಿಕೊಂಡು ಹೋದರೆ ಪಕ್ಷದ ದೃಷ್ಟಿಯಿಂದ ನಷ್ಟವೇ ಹೆಚ್ಚು ಎಂಬ ವಾದ ಕಾರ್ಯಕರ್ತರ ಮಟ್ಟದಲ್ಲಿ ಬಲಗೊಳ್ಳುತ್ತಿದೆ.

One Reply to “ಮರ್ಮಾಘಾತ, ಕೈಗೆ ನೆಲೆಕಳೆದುಕೊಳ್ಳುವ ಆತಂಕ: ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕೆಳಹಂತದಲ್ಲಿ ಪಕ್ಷ ಸಂಘಟನೆ ಅನಿವಾರ್ಯ”

Leave a Reply

Your email address will not be published. Required fields are marked *