ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭವಿಷ್ಯ ಖಗ್ರಾಸ: ಕಾಂಗ್ರೆಸ್ ಅಂಗಳಕ್ಕೆ ಚೆಂಡು ತಳ್ಳಲು ಜೆಡಿಎಸ್ ನಿರ್ಧಾರ

ಬೆಂಗಳೂರು: ಲೋಕ ಸಮರದ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಗಾಢ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಮೇಲೆ ಭಾರ ಹಾಕಲು ಜೆಡಿಎಸ್ ನಿರ್ಧರಿಸಿದೆ. ಕಾಂಗ್ರೆಸ್ ಸಹ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ಅಂಗಳಕ್ಕೆ ತಳ್ಳಿದೆ.

ರಾಜ್ಯದ ವಿಧಾನಸಭೆಯಲ್ಲಿ 105 ಶಾಸಕ ಬಲ ಹೊಂದಿರುವ ಬಿಜೆಪಿ, ಸರ್ಕಾರ ರಚಿಸಲು ತಕ್ಷಣವೇ ಪ್ರಯತ್ನ ನಡೆಸಲಿದೆಯೇ? ಫಲಿತಾಂಶದ ಆಧಾರದಲ್ಲಿ ಹಾಲಿ ಸರ್ಕಾರವನ್ನು ಕಾಂಗ್ರೆಸ್ ಉರುಳಿಸಲಿದೆಯೇ? ಕಾಂಗ್ರೆಸ್ ಜತೆಗಿನ ಸಂಬಂಧ ಕಡಿದುಕೊಂಡು ಜೆಡಿಎಸ್, ಬಿಜೆಪಿ ಜತೆ ಹೋಗಬಹುದೇ? ಕಾಂಗ್ರೆಸ್- ಜೆಡಿಎಸ್​ನಲ್ಲಿರುವ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಬಹುದೇ? ಇಂಥ ಹತ್ತಾರು ಪ್ರಶ್ನೆಗಳು ಜನಸಾಮಾನ್ಯರಲ್ಲಿ ಸುಳಿದಾಡಿವೆ. ಆದರೆ, ಇವಕ್ಕೆ ಉತ್ತರವಾಗುವಂಥ ಯಾವುದೇ ಸುಳಿವು ಅಥವಾ ಕುರುಹು ಈವರೆಗೆ ಕಾಣಿಸಿಲ್ಲ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಜಂಘಾಬಲವೇ ಉಡುಗಿಹೋಗಿದ್ದು, ಜೆಡಿಎಸ್ ಕೂಡ ಪೆಚ್ಚಾಗಿ ಕುಳಿತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಹೇಳಿದ್ದನ್ನು ಬಿಟ್ಟರೆ, ಬೇರೇನೂ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಎರಡೂ ಪಕ್ಷದ ನಾಯಕರಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳಬೇಕೋ? ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಸ್ಪಷ್ಟತೆ ಮೂಡಿಲ್ಲ. ಹೈಕಮಾಂಡ್ ಏನು ತೀರ್ವನಿಸುತ್ತದೋ ಅಂತೆಯೇ ನಾವು ನಡೆಯುತ್ತೇವೆಂದು ರಾಜ್ಯ ನಾಯಕರು ಅನೌಪಚಾರಿಕವಾಗಿ ಭಾವನೆ ವ್ಯಕ್ತಪಡಿಸಿದ್ದಾರೆ.

ಏನಿದೆ ಅವಕಾಶ?

1. ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ಬಿಜೆಪಿ ಬಲ 105ಕ್ಕೇರಿದೆ. ಇಬ್ಬರು ಪಕ್ಷೇತರರರ ಬೆಂಬಲ ಪಡೆದರೆ ಬಲ 107 ಆಗುತ್ತದೆ. ಸರ್ಕಾರದಲ್ಲಿ ಬಹುಮತ ಸಾಬೀತುಪಡಿಸಲು ಇನ್ನೂ 6 ಶಾಸಕರ ಕೊರತೆ ಬೀಳಲಿದೆ.

2. ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿಯಬೇಕೆಂದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ 104ಕ್ಕೆ ಇಳಿಯಬೇಕು. ಅಂದರೆ ಮೈತ್ರಿ ಪಕ್ಷಗಳ ಕನಿಷ್ಠ 12 ಶಾಸಕರು ರಾಜೀನಾಮೆ ಕೊಡಬೇಕಾಗುತ್ತದೆ.

ರೋಷನ್ ಬೇಗ್ ನಡೆ ಏನು?

ರಾಜ್ಯ ಮುಖಂಡರ ವಿರುದ್ಧ ತಿರುಗಿ ಬಿದ್ದಿರುವ ಶಾಸಕ ಆರ್.ರೋಷನ್​ಬೇಗ್ ನಡೆ ಏನು ಎಂಬುದು ಇನ್ನೂ ತಿಳಿದಿಲ್ಲ. ಬಿಜೆಪಿ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟರ್ ಮೂಲಕ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಅವರು ಉಳಿಯುವರೇ ಅಥವಾ ಬಿಜೆಪಿಗೆ ಹೋಗುವರೇ ಎಂಬುದು ಮುಂದಿನ ಬೆಳವಣಿಗೆಗಳನ್ನು ಅವಲಂಬಿಸಿದೆ.

ಪಕ್ಷಗಳ ಮೂಡ್ ಏನಿದೆ?

  • 105 ಸದಸ್ಯ ಬಲ ಹೊಂದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. ಕಾಂಗ್ರೆಸ್​ನ ಅತೃಪ್ತ ಶಾಸಕರಿಗೆ ಕೆಂಪುಹಾಸಿನ ಸ್ವಾಗತ ನೀಡಿ, ಹೊಸ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಭರವಸೆಯೊಂದಿಗೆ ಪಕ್ಷಕ್ಕೆ ಸೇರಿಸಿಕೊಳ್ಳಲೂ ಸಿದ್ಧವಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿರುವ ಅತೃಪ್ತ, ಅಸಮಾಧಾನಿತರ ಪಟ್ಟಿ ಸಿದ್ಧಪಡಿಸಿದ್ದು ಅವರನ್ನು ಸಂರ್ಪಸುವ ಕೆಲಸವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
  • ಫಲಿತಾಂಶದ ನಂತರ ದೇವೇಗೌಡರ ಮನೆಯಲ್ಲಿ ಸಭೆ ಸೇರಿದ್ದ ಮುಖಂಡರು ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್​ನವರ ಮುಂದೆ ಸರ್ಕಾರ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಯನ್ನು ಇಟ್ಟು ನಿರ್ಧಾರ ತೆಗೆದುಕೊಳ್ಳುವಂತೆ ಗೌಡರು ಪುತ್ರ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಶುಕ್ರವಾರದ ಸಭೆ ಅತ್ಯಂತ ಮುಖ್ಯವಾಗಿದೆ.
  • ಮೈತ್ರಿ ಮಾಡಿಕೊಂಡರೆ ಜನ ಒಪ್ಪಲ್ಲ ಎಂಬ ಉತ್ತರವನ್ನು ಲೋಕಸಭಾ ಚುನಾವಣೆ ಫಲಿತಾಂಶದ ಮೂಲಕ ಪಡೆದುಕೊಂಡಿರುವ ಕಾಂಗ್ರೆಸ್​ಗೆ, ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಗೊಂದಲಕ್ಕೆ ಸಿಲುಕಿದೆ. ಮೈತ್ರಿ ಮುಂದುವರಿಸಿದರೆ ಪಕ್ಷಕ್ಕೆ ಇನ್ನಷ್ಟು ಹಾನಿಯಾಗಬಹುದೆಂಬ ಆತಂಕವೂ ಇದೆ. ರಾಜ್ಯ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳುವ ಆಸಕ್ತಿ ಇಲ್ಲ. ಹೈಕಮಾಂಡ್​ಗೆ ಮಾತ್ರ ಸರ್ಕಾರ ಉಳಿಯಲಿ ಎಂಬ ಇರಾದೆ ಇದೆ.

ಅತೃಪ್ತರ ನಡೆ ಗೌಪ್ಯ

ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಸಿದ್ಧರಿದ್ದು, ಅವರೊಂದಿಗೆ ಎಷ್ಟು ಶಾಸಕರು ಇದ್ದಾರೆಂಬುದು ಇನ್ನೂ ನಿಗೂಢ. ಲೋಕಸಮರ ಫಲಿತಾಂಶದಿಂದ ಪ್ರಭಾವಿತರಾಗಿ 10ಕ್ಕಿಂತ ಹೆಚ್ಚು ಶಾಸಕರು ರಮೇಶ್ ಜತೆ ಬಂದರಷ್ಟೇ ಹೊಸ ಸರ್ಕಾರ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರವಿದೆ. ಸಚಿವ ಸ್ಥಾನ, ನಿಗಮ-ಮಂಡಳಿ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್​ನ 5-6 ಶಾಸಕರು ಅಸಮಾಧಾನಿತರಿದ್ದು, ಅವರೆಲ್ಲರೂ ಬಿಜೆಪಿ ಗಾಳಕ್ಕೆ ಸಿಕ್ಕುತ್ತಾರೆಯೇ ಎಂಬುದು ಕುತೂಹಲದ ಸಂಗತಿ. ಅತೃಪ್ತ ಶಾಸಕರನ್ನು ಹಿಡಿದಿಡುವ ಪ್ರಯತ್ನದ ಅಂಗವಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಡಾ.ಕೆ.ಸುಧಾಕರ್ ಮನೆಗೆ ತೆರಳಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ.

ಇಂದು ಸಂಪುಟ ಸಭೆ, ಜೆಡಿಎಲ್​ಪಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರಿ ಮುಖಭಂಗವಾದ ಬೆನ್ನಲ್ಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ (ಮೇ 24) ತುರ್ತು ಸಚಿವ ಸಂಪುಟ ಸಭೆ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬೆಳಗ್ಗೆ 12.30ಕ್ಕೆ ಸಂಪುಟ ಸಭೆ ಕರೆದಿದ್ದು, ಮೈತ್ರಿಕೂಟ ಸರ್ಕಾರಕ್ಕೆ ಆಗಿರುವ ಸೋಲಿನ ಪರಾಮರ್ಶೆ ನಡೆಸುವ ಸಾಧ್ಯತೆಗಳಿವೆ. ಈ ಅನೌಪಚಾರಿಕ ಸಭೆಯಲ್ಲಿ ರಾಜಕೀಯ ಹೊರತು ಬೇರೆ ಯಾವುದೇ ವಿಷಯಗಳಿಲ್ಲ, ಅಧಿಕಾರಿಗಳಿಗೂ ಪ್ರವೇಶವಿಲ್ಲ. ಮಧ್ಯಾಹ್ನ 1 ಗಂಟೆಗೆ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​ನಲ್ಲಿ ಉರಿ ಉರಿ

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಹೆಚ್ಚು ಉತ್ಸಾಹ ತೋರಿದ್ದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್. ರಾಹುಲ್ ಗಾಂಧಿಗೆ ಈ ಬಗ್ಗೆ ಹೆಚ್ಚು ಆಸಕ್ತಿ ಕೆರಳುವಂತೆ ಮಾಡಿದ್ದೇ ವೇಣು. ಇದೀಗ ರಾಜ್ಯದ ಕಾಂಗ್ರೆಸ್ ನಾಯಕರು ವೇಣು ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇನ್ನೊಂದು ವಾರದಲ್ಲಿ ದೆಹಲಿಯಲ್ಲಿ ನಡೆಯುವ ಪಕ್ಷದ ನಾಯಕರ ಸಭೆಯಲ್ಲಿ ಮೈತ್ರಿ ಕಡಿದುಕೊಳ್ಳುವ, ವೇಣು ವಿರುದ್ಧ ದೂರು ನೀಡಲು ರಾಜ್ಯದ ಕೈ ನಾಯಕರ ಒಂದು ತಂಡ ಸಜ್ಜಾಗಿದೆ. ಕಾಂಗ್ರೆಸ್ ಹಿನ್ನಡೆಗೆ ವೇಣುಗೋಪಾಲ್ ಕಾರಣ ಎಂಬುದು ಒಂದು ಸಾಲಿನ ಅಭಿಪ್ರಾಯ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ದಲಿತ ಸಿಎಂ ಅಸ್ತ್ರ ದೋಸ್ತಿ ತಂತ್ರ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳಲು ಭಾರಿ ರಣತಂತ್ರ ರೂಪಿಸುತ್ತಿರುವ ಮೈತ್ರಿಪಕ್ಷಗಳು, ಆಪರೇಶನ್ ಕಮಲಕ್ಕೆ ಪ್ರತಿಯಾಗಿ ‘ದಲಿತ ಮುಖ್ಯಮಂತ್ರಿ’ ದಾಳ ಉರುಳಿಸುವ ಚಿಂತನೆ ನಡೆಸಿವೆ.

ಲೋಕಸಭಾ ಚುನಾವಣೆಯಲ್ಲಿ ಆಗಿರುವ ಭಾರಿ ಮುಖಭಂಗದಿಂದ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುವುದಲ್ಲದೆ, ಕ್ರಮೇಣ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಹೋಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಆಗಿ ಪ್ರತಿಷ್ಠಾಪಿಸಲು ಗಂಭೀರ ಆಲೋಚನೆ ನಡೆದಿದೆ. ಆ ಮೂಲಕ ದಲಿತ ಮುಖ್ಯಮಂತ್ರಿಯ ಸರ್ಕಾರವನ್ನು ಆಪರೇಷನ್ ಕಮಲ ಆಹುತಿ ತೆಗೆದುಕೊಂಡಿತು ಎಂಬ ಆರೋಪವನ್ನು ಬಿಜೆಪಿ ಹೊರಬೇಕಾಗುತ್ತದೆ. ಆಗ ಆಪರೇಶನ್ ಕಮಲಕ್ಕೆ ಹಿನ್ನಡೆ ಆಗಬಹುದು, ಬಿಜೆಪಿ ಹೈಕಮಾಂಡ್ ಇಂತಹ ಪ್ರಯತ್ನಕ್ಕೆ ಹಸಿರು ನಿಶಾನೆ ತೋರಲಾರದು ಎಂಬುದು ಮೈತ್ರಿ ಕಾರ್ಯತಂತ್ರ ಎನ್ನಲಾಗಿದೆ.

ಸದ್ಯದ ರಣತಂತ್ರ ಪ್ರಕಾರ, ಜೂನ್ ಮೊದಲ ವಾರದವರೆಗೆ ಬಿಜೆಪಿಯ ಮುಂದಿನ ನಡೆಯನ್ನು ಕಾದು ನೋಡುವುದು, ಮೈತ್ರಿ ಪಕ್ಷದ ಶಾಸಕರು ವಲಸೆ ಆರಂಭಿಸಿದರೆ ಕೂಡಲೇ ಸಿಎಂ ಬದಲಿಸಿ ದಲಿತ ಮುಖ್ಯಮಂತ್ರಿ ದಾಳ ಉರುಳಿಸಲು ಮುಂದಾಗುವ ಸಾಧ್ಯತೆಗಳಿವೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಯತ್ನಿಸಿದರೆ ಕಾಂಗ್ರೆಸ್​ನ ಪರಮೇಶ್ವರ್​ಗೆ ಸಿಎಂ ಹುದ್ದೆ ನೀಡಿ, ಜೆಡಿಎಸ್​ನಿಂದ ಎಚ್.ಡಿ.ರೇವಣ್ಣ ಅವರನ್ನು ಡಿಸಿಎಂ ಮಾಡಿದರೆ ಪಕ್ಷಕ್ಕೆ ಬಲ ತುಂಬಲು ಅನುಕೂಲ ಆಗುತ್ತದೆ ಎಂಬುದು ರಣತಂತ್ರದ ಹಿಂದಿರುವ ಉದ್ದೇಶವಾಗಿದೆ. ತತ್​ಕ್ಷಣ ವಿಧಾನಸಭೆ ವಿಸರ್ಜಿಸಿದರೆ ಅದರಿಂದ ಬಿಜೆಪಿಗೆ ಹೆಚ್ಚು ಲಾಭ ಆಗುವ ಸಾಧ್ಯತೆ ಇರುವುದರಿಂದ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಆದರೆ ಸರ್ಕಾರ ಉಳಿಯಬೇಕಾದರೆ ಶಾಸಕರನ್ನು ಹಿಡಿದಿಡುವ ಕೆಲಸ ಅಷ್ಟು ಸುಲಭವಲ್ಲ. ಆದ್ದರಿಂದ ಕಾಂಗ್ರೆಸ್​ಗೆ ಸಿಎಂ ಹುದ್ದೆ ಕೊಟ್ಟರೆ, ಅದರಲ್ಲೂ ಪರಮೇಶ್ವರ್ ಸಿಎಂ ಆಗಿದ್ದೇ ಆದರೆ ಶಾಸಕರು ಪಕ್ಷ ಬಿಟ್ಟು ಹೋಗಲು ನೆಪ ಇಲ್ಲದಂತಾಗುತ್ತದೆ. ಆ ಮೂಲಕ ಆಪರೇಷನ್ ಕಮಲ ಯತ್ನವೂ ವಿಫಲವಾಗುತ್ತದೆ, ಮೈತ್ರಿ ಸರ್ಕಾರವೂ ಉಳಿಯುತ್ತದೆ ಎಂಬುದು ‘ದಲಿತ ಮುಖ್ಯಮಂತ್ರಿ’ ರಣತಂತ್ರದ ಹಿಂದಿನ ಗುರಿಯಾಗಿದೆ ಎಂದು ಜೆಡಿಎಸ್​ನ ಉನ್ನತ ಮೂಲಗಳ ತಿಳಿಸಿವೆ.

ಶೀಘ್ರವೇ ಸಮನ್ವಯ ಸಮಿತಿ ಪುನಾರಚನೆ

ಪತನದ ಆತಂಕ ಎದುರಿಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಕ್ಷಣೆಗಾಗಿ ಶೀಘ್ರದಲ್ಲೇ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಪುನಾರಚನೆ ನಡೆಯಲಿದೆ. ಈಗಾಗಲೇ ಡ್ಯಾನಿಷ್ ಅಲಿ ಉತ್ತರಪ್ರದೇಶದಿಂದ ಲೋಕಸಭೆಗೆ ಸಮಾಜವಾದಿ ಪಾರ್ಟಿಯಿಂದ ಆಯ್ಕೆಯಾಗಿದ್ದು, ಅವರಿಂದ ತೆರವಾದ ಸ್ಥಾನ ಖಾಲಿಯಾಗಿದೆ. ಆ ಸ್ಥಾನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಬಹಿರಂಗವಾಗಿ ಗುಟುರು ಹಾಕಿದ್ದಾರೆ. ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗೆ ಪೂರಕವಾಗಿ ಸಮನ್ವಯ ಸಮಿತಿ ಪುನಾರಚನೆಯಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ದೇವೇಗೌಡ-ಸಿಎಂ ಚರ್ಚೆ

ಮೈತ್ರಿಕೂಟಕ್ಕೆ ಭಾರಿ ಸೋಲುಂಟಾದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಪದ್ಮನಾಭನಗರಕ್ಕೆ ತೆರಳಿ ಎಚ್.ಡಿ. ದೇವೇಗೌಡರನ್ನು ಭೇಟಿಯಾದರು. ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಅನಿರೀಕ್ಷಿತ ಸೋಲಿನ ಕುರಿತಂತೆ ಉಭಯ ಮುಖಂಡರು ರ್ಚಚಿಸಿದರಲ್ಲದೆ, ಮುಂದೆ ಅನುಸರಿಸಬಹುದಾದ ಕ್ರಮಗಳ ಕುರಿತಾಗಿಯೂ ಪರಾಮರ್ಶೆ ನಡೆಸಿದರು ಎನ್ನಲಾಗಿದೆ. ಸಚಿವ ಸಾ.ರಾ.ಮಹೇಶ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಶಾಸಕ ವೈ.ಎಸ್.ವಿ.ದತ್ತ ಮತ್ತಿತರರು ಹಾಜರಿದ್ದರು. ಈ ನಡುವೆ, ಕಾಂಗ್ರೆಸ್​ನಿಂದ ಸಿಎಂಗೆ ಸಂದೇಶವೊಂದು ರವಾನೆಯಾಗಿದ್ದು ಶಾಸಕರನ್ನು ಹಿಡಿದಿಟ್ಟುಕೊಳ್ಳುವಂತೆ ತಿಳಿಸಲಾಗಿದೆ.

ಎರಡು ಪಕ್ಷಗಳಿಂದ ಸಮಾಲೋಚನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ರಾಜ್ಯದಲ್ಲಿ ಭಾರಿ ಹಿನ್ನಡೆಯಾದ್ದರಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಟ್ವಿಟರ್ ಮೂಲಕವೇ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ಅಭ್ಯರ್ಥಿಗಳ ಸೋಲಿನ ಕುರಿತು ಎರಡೂ ಪಕ್ಷಗಳ ನಾಯಕರು ರ್ಚಚಿಸುತ್ತೇವೆ ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಲೋಕಸಭಾ ಫಲಿತಾಂಶ ಅನಿರೀಕ್ಷಿತ. ಇದನ್ನು ಗೌರವಿಸುತ್ತೇನೆ ಹಾಗೂ ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ನಮ್ಮ ಪಕ್ಷ ಹಲವು ಸೋಲು-ಗೆಲುವುಗಳನ್ನು ಕಂಡಿದೆ. ಸೋಲಿನಿಂದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸಲು ಶ್ರಮಿಸೋಣ ಎಂದಿದ್ದಾರೆ. ಅಲ್ಲದೆ ಚುನಾವಣೆ ಸಂದರ್ಭ ಸಹಕರಿಸಿದ ಮೈತ್ರಿ ಪಕ್ಷಗಳ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಎಂದಿರುವ ಸಿಎಂ, ಕಾಂಗ್ರೆಸ್ ನಾಯಕರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಮೋದಿ ಅಲೆಯ ಗಾಢತೆ ಅರಿವು

ಬೆಂಗಳೂರು: ಘಟಾನುಘಟಿ ನಾಯಕರಾದ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವಿ.ಮುನಿಯಪ್ಪ ಅಂಥವರೇ ಸೋಲುಂಡಿರುವುದನ್ನು ಕಂಡರೆ ರಾಜ್ಯದಲ್ಲಿ ಮೋದಿ ಅಲೆ ಎಷ್ಟು ಗಾಢವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ತಮ್ಮ ನಿಷ್ಠೆ ತೋರಿಸಿದ್ದಕ್ಕಾಗಿ ಮೊದಲನೆಯದಾಗಿ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಹೇಳುತ್ತೇನೆ ಹಾಗೂ ಅಭಿನಂದಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾ ಇತಿಹಾಸದಲ್ಲಿಯೇ ಕರ್ನಾಟಕದ ಮತದಾರರು ಬಿಜೆಪಿಗೆ ಬಹುಮತದ ಅಂದರೆ, ಶೇ.54 ಮತಗಳನ್ನು ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸೇತರ ರಾಷ್ಟ್ರೀಯ ಪಕ್ಷ ಅದರಲ್ಲೂ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಪ್ರದರ್ಶನ ತೋರಿದೆ. ಆಡಳಿತಾರೂಢ ಮೈತ್ರಿ ಸರ್ಕಾರದ ತಾರತಮ್ಯ ಹಾಗೂ ಜನವಿರೋಧಿ ನೀತಿಯನ್ನು ಸಹಿಸುವುದಿಲ್ಲ ಎಂಬುದನ್ನು ಮುಖಕ್ಕೆ ಹೊಡೆದಹಾಗೆ ಹೇಳಿದ್ದಾರೆ. ಸುಮಲತಾ ಅಂಬರೀಷ್ ಗೆಲುವು 24 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಗೆಲುವಿನ ಸಂತಸಕ್ಕಿಂತ ಹೆಚ್ಚು ಖುಷಿ ತಂದಿದೆ ಎಂದರು.

ಸರ್ಕಾರ ಬದಲಾವಣೆ ಮಾತಿಲ್ಲ ರಾಜ್ಯದಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ಮೈತ್ರಿ ಸರ್ಕಾರದಲ್ಲೇ ಕಿತ್ತಾಟ ನಡೆಯುತ್ತಿದ್ದು, ಎರಡು ದಿನ ಕಾದು ನೋಡೋಣ.

| ಬಿ.ಎಸ್.ಯಡಿಯೂರಪ್ಪ

ನೆಲೆಯೇ ಇಲ್ಲ, ಶಿಕ್ಷೆ ಇನ್ನೆಲ್ಲಿ!

ಬೆಂಗಳೂರು: ಮೈತ್ರಿ ಧಿಕ್ಕರಿಸಿ ಪಕ್ಷದ ಹತ್ತಾರು ಶಾಸಕರು ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಳ್ಳದೆ ಇದ್ದಿದ್ದು ಸ್ಪಷ್ಟವಾಗಿದ್ದು, ಅವರ ವಿರುದ್ಧ ಕ್ರಮಕೈಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲವಾಗಿದೆ. ನಮ್ಮ ಅನೇಕ ಶಾಸಕರು, ಮುಖಂಡರು ಅನೇಕ ಕಡೆಗಳಲ್ಲಿ ಮನಸ್ಸಿಟ್ಟು ಕೆಲಸ ಮಾಡಿಲ್ಲ. ಈ ಬಗ್ಗೆ ದೂರುಗಳು ಬಂದಿವೆ. ಆದರೆ, ಈ ಸಂದರ್ಭದಲ್ಲಿ ಅವರ ಮೇಲೆ ಕ್ರಮಕೈಗೊಂಡರೆ ಪಕ್ಷಕ್ಕೇ ನಷ್ಟ. ಈಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದೆ ಹೋಗುವುದೊಂದೇ ಉಳಿದಿರುವ ದಾರಿ ಎಂದು ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದರು. ಚುನಾವಣೆ ಆರಂಭವಾದಾಗಿನಿಂದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರಿಗೆ ನೋಟಿಸ್ ನೀಡಲಾಗಿತ್ತು. ಕೆಲವರನ್ನು ಉಚ್ಛಾಟಿಸಲಾಗಿತ್ತು. ನೋಟಿಸ್ ಕೊಟ್ಟವರ ಮೇಲೆಲ್ಲ ಕ್ರಮಕೈಗೊಳ್ಳುತ್ತ ಹೋದರೆ ಪಕ್ಷ ಉಳಿಯಬೇಕಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಬೆಂಗಳೂರು ಉತ್ತರದಲ್ಲಿ ಕೈ ತತ್ತರ

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕೈವಶದಲ್ಲಿದ್ದವು. ಆದರೂ ಕಾಂಗ್ರೆಸ್ ಅಭ್ಯರ್ಥಿ ಸಚಿವ ಕೃಷ್ಣ ಬೈರೇಗೌಡ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿಯ ಡಿ.ವಿ.ಸದಾನಂದಗೌಡರಿಗೆ ನಗರದ ಅದರಲ್ಲೂ ವಿಶೇಷವಾಗಿ ಯುವ ಮತದಾರರು ಕೈಹಿಡಿದಿದ್ದಾರೆ.

ಯಾರು ಎಲ್ಲಿ ಕೈಕೊಟ್ಟರು?

ಬೆಂಗಳೂರು: ಮೈತ್ರಿ ಪಕ್ಷಗಳ ನಡುವೆ ಪರಸ್ಪರ ನಂಬಿಕೆ ಮೂಡಲಿಲ್ಲ. ಸರ್ಕಾರ ರಚನೆ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಮೈತ್ರಿ ಎಂಬ ನಿರ್ಧಾರವಾಗಿತ್ತು. ಒಂದು ವರ್ಷದಷ್ಟು ಸಮಯ ಇದ್ದರೂ ಕಾರ್ಯಕರ್ತರನ್ನು ಮೈತ್ರಿಗೆ ಸಜ್ಜುಗೊಳಿಸಲಿಲ್ಲ. ಮೈಸೂರಿನಲ್ಲಿ ಕಳೆದ ಬಾರಿ ಪ್ರತಾಪ್ ಸಿಂಹ ಗೆದ್ದಿದ್ದು ಸುಮಾರು 30 ಸಾವಿರ ಮತಗಳಿಂದ. ಆಗ ಜೆಡಿಎಸ್ 1.20 ಲಕ್ಷ ಮತ ಗಳಿಸಿತ್ತು. ಈ ಬಾರಿ ಜೆಡಿಎಸ್ ಮತಗಳು ಕಾಂಗ್ರೆಸ್​ಗೆ ಬಾರದೆ ಇರುವುದರಿಂದ ಲಕ್ಷಕ್ಕೂ ಅಧಿಕ ಮತಗಳಿಂದ ಸಿಂಹ ಗೆಲುವು ಸಾಧಿಸಿದ್ದಾರೆ. ಮಂಡ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದರು. ಈ ಬಾರಿ ಕಾಂಗ್ರೆಸ್ ಮತಗಳು ಸುಮಲತಾ ಕೈ ಹಿಡಿದ್ದಿದ್ದರಿಂದ ನಿಖಿಲ್ 1.20 ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದರು. ತುಮಕೂರಿನಲ್ಲಿ ಕಾಂಗ್ರೆಸ್​ನವರು ದೇವೇಗೌಡರಿಗೆ ಕೈಕೊಟ್ಟರು. ಕೋಲಾರದಲ್ಲಿ ಕಾಂಗ್ರೆಸ್​ನವರೇ ಬಿಜೆಪಿ ಪರ ಕೆಲಸ ಮಾಡಿದರು. ಚಿತ್ರದುರ್ಗ, ಬಳ್ಳಾರಿ, ಬೀದರ್, ಕಲಬುರಗಿ, ದಾವಣಗೆರೆ, ಬಾಗಲಕೋಟೆ, ಧಾರವಾಡ, ಹಾವೇರಿ, ಕೊಪ್ಪಳಗಳಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಸೇರಲಿಲ್ಲ. ಶಿವಮೊಗ್ಗ, ವಿಜಯಪುರ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗ ಳೂರಿನಲ್ಲಿ ಜೆಡಿಎಸ್ ಪರವಾಗಿ ಕಾಂಗ್ರೆಸ್ ನಾಯಕರು ಮನಃಪೂರ್ವಕವಾಗಿ ಕೆಲಸ ಮಾಡಲಿಲ್ಲ.

ಸೇಡು ತೀರಿಸಿಕೊಂಡ ಸಿದ್ದರಾಮಯ್ಯ?

ಬೆಂಗಳೂರು: ಚಾಮುಂಡೇಶ್ವರಿ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇಡು ತೀರಿಸಿಕೊಂಡರೇ? ಇಂಥದ್ದೊಂದು ಪ್ರಶ್ನೆ ಎದ್ದಿದೆ. ತುಮಕೂರಿನಲ್ಲಿ ಎಚ್.ಡಿ. ದೇವೇಗೌಡ, ಮಂಡ್ಯದಲ್ಲಿ ಅವರ ಮೊಮ್ಮಗ ನಿಖಿಲ್​ಗೆ ಹಿನ್ನಡೆಯಾಗಲು ಕಾಂಗ್ರೆಸ್​ನ ಸಹಕಾರ ಪೂರ್ಣ ಪ್ರಮಾಣದಲ್ಲಿ ಸಿಗಲಿಲ್ಲ ಎಂಬ ಮಾತಿದೆ. ಈ ಬೆಳವಣಿಗೆ ಹಿಂದೆ ಸಿದ್ದರಾಮಯ್ಯ ಕೈವಾಡ ಇರಬಹುದು ಎಂಬ ಅನುಮಾನ ಜೆಡಿಎಸ್ ನಾಯಕರ ಅಭಿಪ್ರಾಯ. ಸಿದ್ದರಾಮಯ್ಯ ತಮ್ಮ ಬಳಗದವರನ್ನು ಬಳಸಿಕೊಂಡಿದ್ದರೆ ಈ ಫಲಿತಾಂಶ ಬರುತ್ತಿರಲಿಲ್ಲ ಎಂಬ ಮಾತಿದೆ. ಇನ್ನು ಸೀಟು ಹಂಚಿಕೆ ಸಂದರ್ಭ ಮೈಸೂರಿನ ಮೇಲೆ ಜೆಡಿಎಸ್ ಕಣ್ಣಿಟ್ಟಿತ್ತು. ಸಿದ್ದರಾಮಯ್ಯ ಹಠ ಹಿಡಿದು ಮೈಸೂರು ಉಳಿಸಿಕೊಂಡು ವಿಜಯಶಂಕರ್​ಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಕೆಲಸ ಮಾಡಿಲ್ಲ ಎಂಬುದು ಅದಾಗಲೇ ಬಹಿರಂಗವಾಗಿತ್ತು. ಮಂಡ್ಯ, ತುಮಕೂರಲ್ಲಿ ನಮ್ಮ ಅಭ್ಯರ್ಥಿ ಪರ ಕಾಂಗ್ರೆಸ್ ತೊಡಗಿಸಿಕೊಂಡರೆ, ಮೈಸೂರಿನಲ್ಲಿ ನಮ್ಮ ನೆರವು ನಿಮಗೆ ಸಿಗಲಿದೆ ಎಂದು ಜೆಡಿಎಸ್ ಸಂದೇಶ ರವಾನಿಸಿತ್ತು. ಇಷ್ಟಾದರೂ ಪರಿಸ್ಥಿತಿ ಸುಧಾರಿಸಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್​ಗೆ ನೆಲೆ ನಿಲ್ಲಲು ಅವಕಾಶ ಕೊಡದೆ ಇರುವಲ್ಲಿ ಜೆಡಿಎಸ್ ಕೊಡುಗೆ ಎದ್ದು ಕಾಣಿಸುತ್ತಿದ್ದು, ಆ ಮೂಲಕ ಸಿದ್ದರಾಮಯ್ಯ ವಿರುದ್ಧ ದಳಪತಿಗಳು ಸೇಡು ತೀರಿಸಿಕೊಂಡಿದೆ ಎಂಬ ವಿಶ್ಲೇಷಣೆಯೂ ಇದೆ.

ದೇಶದಲ್ಲೇ ಮೊದಲ ಫಲಿತಾಂಶ ಘೊಷಿಸಿದ ಕೀರ್ತಿ ಹಾವೇರಿಗೆ

ದೇಶದಲ್ಲೇ ಅಧಿಕೃತವಾಗಿ ಫಲಿತಾಂಶ ಘೊಷಣೆ ಮಾಡಿದ ಮೊದಲ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಹಾವೇರಿ ಲೋಕಸಭಾ ಕ್ಷೇತ್ರ ಪಾತ್ರವಾಗಿದೆ. ಮಧ್ಯಾಹ್ನ 3.30ಕ್ಕೆ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಕೇಂದ್ರ ಚುನಾವಣಾ ಆಯೋಗದಿಂದ ಫಲಿತಾಂಶ ಘೊಷಣೆಯಾಗಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ 1.40 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಆಯೋಗ ಘೊಷಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ 5 ಮತಗಟ್ಟೆಗಳ ವಿವಿ ಪ್ಯಾಟ್ ಎಣಿಕೆ ಕಾರ್ಯವೂ ಇದೇ ಅವಧಿಯಲ್ಲಿ ಪೂರ್ಣಗೊಂಡಿದ್ದು, ಇವಿಎಂ ಮತ್ತು ವಿವಿ ಪ್ಯಾಟ್ ನಡುವಿನ ಮತಗಳ ಸಂಖ್ಯೆಯಲ್ಲಿಯೂ ತಾಳೆಯಾಗಿದೆ. ಒಟ್ಟು 20 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಗಿದ್ದು, ಎಲ್ಲಿಯೂ ಸಮಸ್ಯೆಯಾಗಿಲ್ಲ. ಸುಸೂತ್ರವಾಗಿ ಎಣಿಕೆ ಕಾರ್ಯ ಮುಗಿದಿದ್ದು, ದೇಶದಲ್ಲೇ ಮೊದಲು ಫಲಿತಾಂಶ ಘೊಷಣೆಯಾದ ಕ್ಷೇತ್ರ ಎಂಬುದು ನಮಗೂ ಸಂತಸ ತಂದಿದೆ. ಇದಕ್ಕೆ ಎಲ್ಲ ಸಿಬ್ಬಂದಿ ಶ್ರಮಿವಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಕುಟುಂಬ ರಾಜಕಾರಣ

ಕುಟುಂಬ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಮರು ಆಯ್ಕೆಯಾಗಿದ್ದಾರೆ. ಕಲಬುರಗಿ ಕ್ಷೇತ್ರದಲ್ಲಿ ಡಾ.ಉಮೇಶ್ ಜಾಧವ್ ಲೋಕಸಭೆಗೆ ಆಯ್ಕೆಯಾದರೆ, ಅವರ ಪುತ್ರ ಡಾ.ಅವಿನಾಶ್ ಜಾಧವ್ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪರಾಭವಗೊಂಡರೆ, ಅವರ ಸ್ವಕ್ಷೇತ್ರ ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುಂಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮೂರನೇ ಬಾರಿಗೆ ಗೆದ್ದಿದ್ದಾರೆ. ಬಿಎಸ್​ವೈ ಪುತ್ರನನ್ನು ಗೆಲ್ಲಿಸಿಕೊಂಡಿದ್ದರೆ, ಎಸ್.ಬಂಗಾರಪ್ಪ ಪುತ್ರ ಮಧು ಸೋತಿದ್ದಾರೆ.

ಪ್ರಧಾನಿ ಮೋದಿ ಅವರ ವಿದೇಶ ನೀತಿ, ದೇಶದ ಸುರಕ್ಷತೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಜಯವಿದು. ಮೋದಿ ನೇತೃತ್ವದಲ್ಲಿ ಭಾರತ ಮತ್ತೆ ವಿಶ್ವಗುರುವಾಗಲು ಧಾಪುಗಾಲು ಹಾಕುತ್ತದೆ. ಮುಂದೆ ನದಿಗಳ ಜೋಡಣೆ ಜತೆಗೆ ಗುಜರಾತ್ ಮಾದರಿಯಲ್ಲಿ ಜನಪರ ಯೋಜನೆಗಳಿಗೆ ಒತ್ತು ಕೊಡಬೇಕಿದೆ.

| ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರುಗಳು ಶ್ರೀಶೈಲ

ಗೆದ್ದಿದ್ದು ಇಬ್ಬರೇ ಸ್ತ್ರೀ!

ಈ ಚುನಾವಣೆಯಲ್ಲಿ ಮೂರು ಪಕ್ಷಗಳು ತಲಾ ಒಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿದ್ದವು. ಪಕ್ಷೇತರ ರಾಗಿ ಸುಮಲತಾ ಅಂಬರೀಷ್ ಕಣದಲ್ಲಿದ್ದರು. ಅದರಲ್ಲಿ ಗೆದ್ದವರು ಇಬ್ಬರು ಮಾತ್ರ, ಮಂಡ್ಯದಲ್ಲಿ ಸುಮಲತಾ ಹಾಗೂ ಉಡುಪಿ- ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕೆ ಇಳಿದಿದ್ದ ವೀಣಾ ಕಾಶಪ್ಪನವರ್, ವಿಜಯಪುರ ದಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಡಾ.ಸುನೀತಾ ಚವ್ಹಾಣ್ ಹಾಗೂ ಚಿಕ್ಕಬಳ್ಳಾಪುರದಲ್ಲಿ ಎಡಪಕ್ಷಗಳಿಂದ ಕಣಕ್ಕೆ ಇಳಿದಿದ್ದ ವರಲಕ್ಷ್ಮೀ ಸೋಲು ಅನುಭವಿಸಿದ್ದಾರೆ.

ನಿಜವಾಯಿತೇ ಕೋಡಿ ಶ್ರೀ ಭವಿಷ್ಯ?

ಭವಿಷ್ಯದ ಮೂಲಕ ದೇಶದ ಗಮನ ಸೆಳೆದಿರುವ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕಳೆದ ತಿಂಗಳು ಕಲಬುರಗಿಯಲ್ಲಿ ನುಡಿದ ಭವಿಷ್ಯ ನಿಜವಾಯಿತೆ? ಫಲಿತಾಂಶ ಗಮನಿಸಿದರೆ ಅವರ ನುಡಿ ನಿಜವಾಗಿದೆ ಎಂದೇ ಹೇಳಬೇಕಾಗುತ್ತದೆ. ಶಾಸಕ ಬಿ.ಜಿ.ಪಾಟೀಲ್ ಮನೆಗೆ ವಿಶೇಷ ಪೂಜೆಗೆ ಬಂದಿದ್ದ ಶ್ರೀಗಳನ್ನು ಭೇಟಿ ಮಾಡಿದ ಬಿಜೆಪಿಯ ಡಾ.ಉಮೇಶ್ ಜಾಧವ್, ‘ನಾನು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ನಿಮ್ಮ ಆಶೀರ್ವಾದ ಇರಲಿ’ ಎಂದು ಪ್ರಾರ್ಥಿಸಿದ್ದರು. ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಬರುತ್ತದೆ. ನೀನು ಸಹ ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗುತ್ತಿ ಹೋಗು’ ಎಂದು ಆಶೀರ್ವದಿಸಿದ್ದರು. ಅವರು ಹೇಳಿದಂತೆ ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ಡಾ.ಉಮೇಶ್ ಜಾಧವ್ ಜಯವನ್ನೂ ಗಳಿಸಿದ್ದಾರೆ. ಇನ್ನು ಕೇಂದ್ರದಲ್ಲಿ ಮಂತ್ರಿ ಆಗುವುದೊಂದೇ ಬಾಕಿ ಉಳಿದಿದೆ.

ಬಿಜೆಪಿ ಗೆಲುವಿಗೆ ಮೋದಿ ಬೆಂಬಲ ಕಾರಣವಾಗಿದೆ. ಮುಖ್ಯವಾಗಿ ಕಾರ್ಯಕರ್ತರು ಎರಡೆರಡು ಬಾರಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಸಂದೇಶ ತಲುಪಿಸಿದ್ದಾರೆ. ಗೋ ಬ್ಯಾಕ್ ಹೇಳಿದವರಿಗೆ ಮತದಾರರು ಉತ್ತರ ನೀಡಿದ್ದಾರೆ. ನನಗೆ ಸಚಿವ ಸ್ಥಾನ ನೀಡುವುದು ಪ್ರಧಾನಿಗೆ ಬಿಟ್ಟದ್ದು, ಈ ಬಗ್ಗೆ ನಿರೀಕ್ಷೆಗಳಿಲ್ಲ.

| ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ

ಜೆಡಿಎಸ್ ಸಹವಾಸ ಕಾಂಗ್ರೆಸ್​ಗೆ ಉಪವಾಸ ಎನ್ನುವಂತಾಗಿದೆ. ಅಪವಿತ್ರ ಮೈತ್ರಿ ಸರ್ಕಾರವನ್ನು ರಾಜ್ಯದ ಜನ ಧಿಕ್ಕರಿಸಿದ್ದಾರೆ. ದೇಶದ ಜನ ಮತ್ತೊಮ್ಮೆ ಮೋದಿ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಅಪವಿತ್ರ ಮೈತ್ರಿ ಎನ್ನುವುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ.

| ಆರ್. ಅಶೋಕ್ ಮಾಜಿ ಡಿಸಿಎಂ

ಸಿದ್ದರಾಮಯ್ಯ ಅವರು ಎಲ್ಲಿ ಕೈ ಇಡುತ್ತಾರೆ ಅಲ್ಲಿ ಕಾಂಗ್ರೆಸ್ ಸೋಲುತ್ತಾ ಬಂದಿದೆ. ನಿರೀಕ್ಷೆಯಂತೆ ಬಾಗಲಕೋಟೆ ಕೂಡ ಬಿಜೆಪಿ ಪಾಲಾಗಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮತದಾರ ಪ್ರಭು ಜೈ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಅವರ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.

| ಗೋವಿಂದ ಕಾರಜೋಳ ಬಿಜೆಪಿ ರಾಜ್ಯ ಉಪಾಧ್ಯಕ್ಷ

ಚಿಂಚೋಳಿ, ಕಲಬುರಗಿ ಜನತೆಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ನನ್ನ ಗೆಲುವನ್ನು ಪ್ರಿಯಾಂಕ್ ಖರ್ಗೆಗೆ ಸಮರ್ಪಿಸುತ್ತೇನೆ. ಪ್ರಿಯಾಂಕ್ ಫೋಟೋ ನನ್ನ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವರು ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸದಿದ್ದರೆ ನಾನು ಎಂಪಿ, ನನ್ನ ಮಗ ಎಂಎಲ್​ಎ ಆಗುತ್ತಿರಲಿಲ್ಲ. ನೂರಕ್ಕೆ ನೂರರಷ್ಟು 8 ದಿನಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗ್ತಾರೆ.

| ಡಾ.ಉಮೇಶ್ ಜಾಧವ್ ನೂತನ ಸಂಸದ ಕಲಬುರಗಿ

ಈ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಮತ್ತು ಮುಖ್ಯಪಾತ್ರ ವಹಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ ಐದು ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.

| ಸಿದ್ದರಾಮಯ್ಯ ಮಾಜಿ ಸಿಎಂ

ಲಿಂಬೆಕಾಯಿ ರೇವಣ್ಣ ಮಠ ಕಟ್ಟುತ್ತಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದ ಜೋಡೆತ್ತುಗಳು ಸೇರಿ ಸಿದ್ದರಾಮಯ್ಯ ಕೂಡ ಆ ಮಠ ಸೇರಿಕೊಳ್ಳಲಿ. ಮೋದಿ ಮತ್ತೆ ಪ್ರಧಾನಿಯಾದರೆ ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಸಚಿವ ರೇವಣ್ಣ ಆ ಕೆಲಸ ಮಾಡಲಿ. ಮೈತ್ರಿ ಸರ್ಕಾರ ತುಂಬಾ ದಿನ ಇರಲ್ಲ. ಶೀಘ್ರ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

| ಬಿ.ಶ್ರೀರಾಮುಲು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ

Leave a Reply

Your email address will not be published. Required fields are marked *