ದೆಹಲಿ, ಪಂಜಾಬ್​ಗಳಲ್ಲಿ ಆಪ್​ ಜತೆ ಮೈತ್ರಿಗೆ ಕಾಂಗ್ರೆಸ್​ ಮುಂದಡಿ: ರಾಹುಲ್​ ಗಾಂಧಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

ನವದೆಹಲಿ: ಲೋಕಸಭೆ ಚುನಾವಣೆಗೆ ದೆಹಲಿಯ ಆಮ್​ ಆದ್ಮಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್​ ಮನಸ್ಸು ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಮೈತ್ರಿ ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಲು ಪಕ್ಷದ ದೆಹಲಿ ಘಟಕದ ನಾಯಕರೊಂದಿಗೆ ಇಂದು ಮಧ್ಯಾಹ್ನ ಮಹತ್ವದ ಸಭೆ ನಡೆಸಲಿದ್ದಾರೆ.

ಮೂಲಗಳ ಪ್ರಕಾರ ಅರವಿಂದ ಕೇಜ್ರಿವಾಲ್​ ಅವರ ಪಕ್ಷ ದೆಹಲಿಯಲ್ಲಿ ಎರಡು ಸೀಟುಗಳನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ಹೇಳಿದೆ ಎನ್ನಲಾಗಿದ್ದು, ಕಾಂಗ್ರೆಸ್​ ಮೂರು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಹಾಗೇನಾದರೂ ಮೈತ್ರಿ ಸಾಧ್ಯವಾದರೆ ಅದು ಪಂಜಾಬ್​ಗೂ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

“ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿ ಸಾಕಾಯಿತು,” ಎಂದು ಹೇಳಿದ್ದ ಕೇಜ್ರಿವಾಲ್​ ದೆಹಲಿಯ ಏಳು ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಇತ್ತೀಚೆಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ದೆಹಲಿಯ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು.