ಕಲ್ಲಿನ ಕೋಟೆಯಲ್ಲಿ ಕೈ-ಕಮಲ ಬಲಾಬಲ

ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್, ಪ್ರಚಾರದಲ್ಲಿ ಬಿಜೆಪಿ ಮುಂದೆ

|ನಾಗರಾಜ ಶ್ರೇಷ್ಠಿ ಚಿತ್ರದುರ್ಗ

ಜೆಡಿಎಸ್ ಬೇಡಿಕೆಯ ರಾಜ್ಯದ 12 ಕ್ಷೇತ್ರಗಳ ಪೈಕಿ ಚಿತ್ರದುರ್ಗವೂ ಒಂದಾಗಿತ್ತು. ದೋಸ್ತಿ ಪಕ್ಷಗಳ ವರಿಷ್ಠರ ಮಾತುಕತೆಯಲ್ಲೂ ಪ್ರಸ್ತಾಪವಾಗಿತ್ತು. ಆದರೆ, ಸ್ಥಳೀಯ ಕಾಂಗ್ರೆಸಿಗರ ಬಿಗಿಪಟ್ಟಿನಿಂದ ಬಿ.ಎನ್.ಚಂದ್ರಪ್ಪಗೆ ಟಿಕೆಟ್ ಕಾಯಂ ಆಗಿದೆ. ಈ ಹಿನ್ನೆಲೆಯಲ್ಲಿ ಅವರೀಗ ಹೊಸ ಹುರುಪಿನೊಂದಿಗೆ ಹಗಲಿರುಳು ಕ್ಷೇತ್ರ ಸುತ್ತುತ್ತಿದ್ದಾರೆ. ಅವರ ಈ ಉಲ್ಲಾಸ-ಉತ್ಸಾಹಕ್ಕೆ ಇನ್ನೊಂದು ಕಾರಣ ರಾಜ್ಯದ ಮೈತ್ರಿ ಸರ್ಕಾರ. ಕಳೆದ ಬಾರಿ ಮೋದಿ ಅಲೆ ಎನ್​ಕ್ಯಾಶ್ ಮಾಡಿಕೊಳ್ಳುವಲ್ಲಿ ಎಡವಿದ ಬಿಜೆಪಿ, ಈ ಸಲ ಆ ಪ್ರಮಾದ ಮರುಕಳಿಸಬಾರದೆಂಬ ಎಚ್ಚರಿಕೆಯಲ್ಲಿ ಸಮರಾಭ್ಯಾಸ ಆರಂಭಿಸಿದೆ. ‘ನರೇಂದ್ರ ಮೋದಿ ಮತ್ತೆ ಪ್ರಧಾನಿ’ ಅಭಿಯಾನದ ಬಿರುಗಾಳಿ ಚಿತ್ರದುರ್ಗದ ಕೋಟೆ ಮೇಲೆ ಗೆಲುವಿನ ಪತಾಕೆ ಹಾರಿಸಲಿದೆ ಎಂಬ ಅದಮ್ಯ ವಿಶ್ವಾಸವೇ ಟಿಕೆಟ್​ಗೆ ಆಕಾಂಕ್ಷಿಗಳು ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ. ಪೈಪೋಟಿಗೂ ಒಡ್ಡಿದೆ.

ಮಾನಸಿಕವಾಗಿ ತಯಾರಾಗಿ: ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿರಾ ಹೊರತು ಬೇರೆಲ್ಲೂ ಜೆಡಿಎಸ್ ಶಾಸಕರಿಲ್ಲ. ಆದರೂ, ಚಿತ್ರದುರ್ಗವನ್ನು ವರಿಷ್ಠರು ಕೇಳಿದ್ದರು. ಇಷ್ಟರ ಮೇಲೂ ಕಾಂಗ್ರೆಸ್​ಗೆ ಸೀಟು ಹಂಚಿಕೆಯಾಗಿದ್ದು, ಕೈ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ದುಡಿಯಬೇಕಿದೆ. 2009ರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ.ಬಿ.ತಿಪ್ಪೇಸ್ವಾಮಿ ಮತ್ತೊಮ್ಮೆ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ, ಹಾಲಿ ಸಂಸದರಿಗೇ ಪಕ್ಷ ಮಣೆಹಾಕಿದೆ.

ಸಂಸದರ ಸಾಧನೆ

ಸಂಸದರ ಪ್ರದೇಶಾಭಿವೃದ್ಧಿ ನಿಧಿಯ 25 ಕೋಟಿ ರೂ. ಅನ್ನು ಬಸ್ ತಂಗುದಾಣ, ಶುದ್ಧ ಕುಡಿಯುವ ನೀರು ಘಟಕ ಹಾಗೂ 10 ನೀರು ಪೂರೈಕೆ ಟ್ಯಾಂಕರ್​ಗಳು, ಬೀದಿದೀಪಗಳು, ಶೌಚಗೃಹ ಮತ್ತು ಸಮುದಾಯ ಭವನಗಳಿಗೆ ಖರ್ಚು ಮಾಡಲಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ ಸಿಆರ್​ಪಿಎಫ್ ನಿಧಿಯಲ್ಲಿ ರಸ್ತೆಗಳ ಅಭಿವೃದ್ಧಿ, ಎಸ್​ಇಪಿ, ಟಿಎಸ್​ಪಿ ಯೋಜನೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಲನಿಗಳ ಅಭಿವೃದ್ಧಿ, ಚಿತ್ರದುರ್ಗ ನಗರದ ರಸ್ತೆಗಳಿಗೆ 8 ಕೋಟಿ ರೂ., 10 ಕೋಟಿ ರೂ. ವೆಚ್ಚದಲ್ಲಿ ವಿವಿಧೆಡೆ ಸಮುದಾಯ ಭವನ, 200 ಜನರಿಗೆ ಗಂಗಾ ಕಲ್ಯಾಣ ಯೋಜನೆ, 10 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ, ಚಿತ್ರದುರ್ಗದಲ್ಲಿ ಪಾಸ್​ಪೋರ್ಟ್ ಕಚೇರಿ ಆರಂಭ, ಕೇಂದ್ರೀಯ ವಿದ್ಯಾಲಯ ಹಾಗೂ ತುಂಗಭದ್ರಾ ಹಿನ್ನೀರಿಂದ ಮೊಳಕಾಲ್ಮೂರು, ಚಳ್ಳಕೆರೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಸದರ ಅವಧಿಯಲ್ಲಿ ಮಂಜೂರಾತಿ ದೊರೆತಿದೆ.

ಗೆಲುವಿನ ಲೆಕ್ಕಾಚಾರ

ಚಿತ್ರದುರ್ಗದಲ್ಲಿ ಪಕ್ಷದ ಗೆಲುವು ಸುಲಭವೆಂಬ ವಾದ ಬಿಜೆಪಿಯದು. ಕ್ಷೇತ್ರದ ಇತಿಹಾಸದಲ್ಲಿ 2009ರಲ್ಲಿ ಜನಾರ್ದನ ಸ್ವಾಮಿ ಹೊರತುಪಡಿಸಿ ಈವರೆಗೂ ಬಿಜೆಪಿ ಗೆದ್ದಿಲ್ಲ. ಬಿಜೆಪಿಯ ಮೊದಲ ಎಂಪಿ ಎಂಬ ಕೀರ್ತಿ ಹಾಗೂ 2014ರ ಚುನಾವಣೆಯಲ್ಲಿ ಮೋದಿ ಅಲೆ ಇದ್ದರೂ ಪಕ್ಷ ಸೋಲಿಸಿದರೆಂಬ ಅಪಕೀರ್ತಿಯೂ ಅವರ ಮೇಲಿದೆ. ಕ್ಷೇತ್ರ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಆರು, ತುಮಕೂರು ಜಿಲ್ಲೆಯ ಪಾವಗಡ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳು ಸೇರಿವೆ. ಅಲ್ಲದೆ ಆಗ ಜೆಡಿಎಸ್​ನಿಂದ ಸ್ಪರ್ಧಿಸಿ 2 ಲಕ್ಷ ಮತ ಪಡೆದಿದ್ದ ಗೂಳಿಹಟ್ಟಿ ಶೇಖರ್ ಪ್ರಸಕ್ತ ಹೊಸದುರ್ಗದ ಬಿಜೆಪಿ ಶಾಸಕ. ಈ ಎಲ್ಲ ಲೆಕ್ಕಾಚಾರಗಳನ್ನು ಅಳೆದು ತೂಗುತ್ತಿರುವ ಬಿಜೆಪಿ, ಕೋಟೆಯಲ್ಲಿ ಖಚಿತವಾಗಿ ಕಮಲ ಅರಳಿಸುವ ವಿಶ್ವಾಸದಲ್ಲಿದೆ. ಆಗ ಮಂತ್ರಿಯಾಗಿದ್ದ ಆಂಜನೇಯರ ಕ್ಷೇತ್ರದಲ್ಲೇ 15 ಸಾವಿರ ಮತಗಳ ಹಿನ್ನಡೆ ಕಂಡರೂ ಸಂಸದರ ಗೆಲುವು ಸಾಧ್ಯವಾಗಿದೆಯಲ್ಲ? ವಿಧಾನಸಭಾ, ಲೋಕಸಭಾ ಚುನಾವಣೆಗಳ ಮತ ಲೆಕ್ಕಾಚಾರಗಳೇ ಬೇರೆ ಎಂಬುದು ಕಾಂಗ್ರೆಸ್ ಪ್ರತಿ ವಾದವಾಗಿದೆ.

ಗಂಗಸಮುದ್ರಕ್ಕೆ ಸಾಗರದಷ್ಟೇ ನಿರ್ಲಕ್ಷ್ಯ

ಮಾಜಿ ಸಚಿವ ಎಚ್.ಆಂಜನೇಯರ ಕ್ಷೇತ್ರ ವ್ಯಾಪ್ತಿಯ ಹೊಳಲ್ಕೆರೆ ತಾಲೂಕು ಗಂಗಸಮುದ್ರ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿತ್ತು. ಈ ಗ್ರಾಪಂ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಚಂದ್ರಪ್ಪ ಅವರ ಅನುದಾನದಲ್ಲಿ ನಯಾ ಪೈಸೆ ಬಳಸಿಲ್ಲ. ಇತರೆಡೆ ಆದಂತೆ ಒಂದಷ್ಟು ಯೋಜನೆಗಳನ್ನು ಕ್ರೋಡೀಕರಿಸಿ ಅಂದಾಜು 3 ಕೋಟಿ ರೂ. ಅನ್ನು ಐದು ವರ್ಷಗಳಲ್ಲಿ ಖರ್ಚು ಮಾಡಲಾಗಿದೆ.

ನೇರ ರೈಲಿಲ್ಲ, ಮೆಡಿಕಲ್ ಕಾಲೇಜೂ ಇಲ್ಲ

ತುಮಕೂರು-ದಾವಣಗೆರೆ ನೇರ ರೈಲುಮಾರ್ಗ ಅನುಷ್ಠಾನವಾಗದ ಬಗ್ಗೆ ಜನರಲ್ಲಿ ಬೇಸರವಿದೆ. ಕಾಂಗ್ರೆಸ್ ಸರ್ಕಾರ, ತುಮಕೂರು ಸಂಸದ ಮುದ್ದಹನುಮೇಗೌಡ ಹಾಗೂ ಸಚಿವರೊಂದಿಗೆ ಸಿದ್ದರಾಮಯ್ಯರ ಮೇಲೆ ಒತ್ತಡ ತಂದು ರೈಲುಮಾರ್ಗ ಅನುಷ್ಠಾನಕ್ಕೆ ಶಕ್ತಿ ಮೀರಿ ಪ್ರಯತ್ನಿಸಬಹುದಾಗಿತ್ತು. ಈ ಮಾರ್ಗದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೇ ಅತೀ ಹೆಚ್ಚು ಭೂಮಿ ವಶಪಡಿಸಿಕೊಂಡು ರಾಜ್ಯಸರ್ಕಾರ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ನಿರಾಸಕ್ತಿ ತೋರಿಸಿದ್ದರು. ವೈಯಕ್ತಿಕವಾಗಿ ಅತ್ಯಂತ ಸರಳ ನಡತೆಯ ಚಂದ್ರಪ್ಪ ಮೆಡಿಕಲ್ ಕಾಲೇಜು ಆರಂಭಕ್ಕೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಕಾಳಜಿ ವಹಿಸಲಿಲ್ಲವೆನೋ ಎಂಬ ಕೊರಗು ಜನರಲ್ಲಿದೆ.

ಬಿಜೆಪಿ ಆಕಾಂಕ್ಷಿಗಳು

ಮಾಜಿ ಸಚಿವ ಅನೇಕಲ್ ನಾರಾಯಣ ಸ್ವಾಮಿ, ಮಾಜಿ ಸಂಸದ ಜನಾರ್ದನ ಸ್ವಾಮಿ, ಲಿಂಗಸುಗೂರು ಮಾಜಿ ಶಾಸಕ ಮಾನಪ್ಪ ವಜ್ಜಲ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಸೇರಿ 18 ಮಂದಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ವಜ್ಜಲ್ ಹಾಗೂ ನಾರಾಯಣಸ್ವಾಮಿ ದುರ್ಗದಲ್ಲಿ ಬಾಡಿಗೆ ಮನೆ ಹುಡುಕಾಟದಲ್ಲಿದ್ದಾರೆ. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗಿದೆ. ಶಾಸಕ ತಿಪ್ಪಾರೆಡ್ಡಿ ಹಾಗೂ ಇತರ ಶಾಸಕರು, ಪಕ್ಷದ ಜಿಲ್ಲಾ ಪ್ರಮುಖರ ಅಭಿಪ್ರಾಯ ಅಭ್ಯರ್ಥಿ ಆಯ್ಕೆಯಲ್ಲಿ ನಿರ್ಣಾಯಕವಾಗಲಿದೆ. ಬಿಜೆಪಿ ಮೂಲಗಳ ಪ್ರಕಾರ, ಮೂವರ ಹೆಸರು ಸ್ಕ್ರೀನಿಂಗ್ ಕಮಿಟಿಗೆ ರವಾನೆಯಾಗಿದೆ.

ಬಲಾಬಲ

ಪಾವಗಡ, ಚಳ್ಳಕೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಶಿರಾದಲ್ಲಿ ಜೆಡಿಎಸ್, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹಿರಿಯೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.