ಶಶಿ ಮಂಗಳ ಯೋಗ ನಮೋ ರಾಜಯೋಗ

ರಾಜಕೀಯ ಲೆಕ್ಕಾಚಾರಗಳ ಮೂಲಕ ಚುನಾವಣೆಯಲ್ಲಿ ಯಾರ ಗೆಲುವು, ಯಾರ ಸೋಲು ಎಂದು ನಿರ್ಧರಿಸುವ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆ ಬೇರೆ. ಭಾರತೀಯ ಜ್ಯೋತಿಷ ವಿಜ್ಞಾನದ ಆಧಾರದಲ್ಲಿ ಗ್ರಹಗಳ ಕಾರಣದಿಂದ ಉಂಟಾಗುವ ಪರಿಣಾಮದ ಲೆಕ್ಕಾಚಾರ ಬೇರೆ. ನಿಜಕ್ಕೂ ನರೇಂದ್ರ ಮೋದಿಯವರ ಗ್ರಹಗಳ ಬಲವನ್ನು ಮೀರಿ ರಾಹುಲ್ ಗಾಂಧಿಯವರ ಗ್ರಹಗಳು ಮಧ್ಯಪ್ರದೇಶ, ರಾಜಸ್ಥಾನ, ಅಷ್ಟೇ ಏನು ಕರ್ನಾಟಕದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ತೇಜಸ್ಸನ್ನು ಪಡೆಯಹತ್ತಿದ್ದು, ಲೋಕಸಭಾ ಚುನಾವಣೆಯ ಹೊತ್ತಿಗೆ ಮಂಕಾಗುತ್ತ ಹೋದದ್ದು ಯಾಕೆ? ಮಂಕಾಗಲಿದೆ ಎಂಬುದನ್ನು, ಕೆಲಮಟ್ಟಿಗೆ ರಾಹುಲ್ ಪ್ರಖರವಾಗುವ ಸೂಚನೆಗಳನ್ನು ಕರ್ನಾಟಕದಿಂದಲೇ ಪ್ರಾರಂಭಿಸಬಹುದೆಂಬುದನ್ನು ಇದೇ ಪತ್ರಿಕೆಯ ನನ್ನ ಅಂಕಣಗಳಲ್ಲಿ ಹೊಸ ವರ್ಷ, ಹೊಸ ಸಂವತ್ಸರಗಳ ಪ್ರಾರಂಭದಲ್ಲಿ ಬರೆದಿದ್ದೆ. ಆದರೆ ಲೋಕಸಭಾ ಚುನಾವಣೆ ಹೊತ್ತಿಗೆ ನಿಗೂಢವಾದ ಶಕ್ತಿಯೊಂದು, ಸಾತ್ವಿಕ ಚೌಕಟ್ಟಿನೊಂದಿಗೆ ಮೋದಿಯವರನ್ನು ಸುತ್ತುವರಿಯುತ್ತದೆ ಎಂದೂ ದಾಖಲಿಸಿದ್ದೆ. ಇದು ಸತ್ಯ ಎಂಬುದು ಇದೀಗ ಫಲಿತಾಂಶದಲ್ಲಿ ಗೋಚರಿಸಿದೆ. ಶಶಿ ಮಂಗಳ ಯೋಗವು ನಿಗೂಢವಾದ ಸಾತ್ವಿಕ ಶಕ್ತಿಯನ್ನು (ಏಳೂವರೆ ವರ್ಷಗಳ ಸಾಡೇಸಾತಿಕಾಟ ಇದ್ದರೂ, ನೀಚಸ್ಥಿತಿಯ ಚಂದ್ರ ದಶಾ ನಡೆಯುತ್ತಿದ್ದರೂ) ಅವರಿಗೆ ಕಡೆಗೂ ಒದಗಿಸಿಕೊಟ್ಟಿದೆ.

ಜನವರಿಯಲ್ಲಿ ಕರ್ನಾಟಕದ ಮೈತ್ರಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತದೆ, ಆದರೆ ಅದು ಸಾಧ್ಯವಾಗದು; ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಪ್ರಯತ್ನ ಒಂದು ಸರ್ಕಾರದ ಪತನಕ್ಕೆ (ಮೈತ್ರಿ ಸರ್ಕಾರ) ಕರ್ನಾಟಕದಲ್ಲಿ ವೇದಿಕೆಯನ್ನು ಗಟ್ಟಿಗೊಳಿಸಬಹುದೇನೋ ಎಂದೂ ಬರೆದಿದ್ದೆ. ರಾಜಯೋಗದ ಧಾತುಗಳು ದೇವೇಗೌಡರ ಜನ್ಮಕುಂಡಲಿಯಲ್ಲಿ, ಅವರ ಮಗ ಕುಮಾರಸ್ವಾಮಿಯವರ ಜನ್ಮಕುಂಡಲಿಯಲ್ಲಿ ಅಧಿಕಾರದ ಅವಧಿಯನ್ನು, ದೀರ್ಘಕಾಲಾವಧಿಯ ಸಂಪನ್ನ ಘಟ್ಟಕ್ಕೆ ಒಯ್ಯಲು ಅವಕಾಶ ಒದಗಿಸುವುದು ಕಷ್ಟಕರವಾಗುವ ರೀತಿಯಲ್ಲಿ ಸಂಯೋಜನೆ ಪಡೆದಿವೆ.

ಅನುಮಾನವೇ ಇಲ್ಲ, ದೇವೇಗೌಡರಾಗಲಿ, ಕುಮಾರಸ್ವಾಮಿಯವ ರಾಗಲಿ ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿಗಳು. ಅದೃಷ್ಟಶಾಲಿ ರಾಜಕಾರಣಿಗಳೂ ಹೌದು. ಆದರೆ ಅದೃಷ್ಟ ಎದ್ದಲ್ಲಿಯೇ ಸರ›ನೆ ಬೀಳಿಸುವ ಕಂಪನಗಳನ್ನು ನಿರಂತರವಾಗಿ ಸೃಷ್ಟಿಸುತ್ತಲೇ ಇರುತ್ತವೆ. ಈ ವರ್ಷದ (2019) ಪ್ರಾರಂಭದ ದಿನದ ನನ್ನ ಲೇಖನದಲ್ಲಿ ರಾಷ್ಟ್ರೀಯ ಪಕ್ಷ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ಅಪ್ರಸ್ತುತವಾಗುತ್ತದೆ ಎಂದು ಬರೆದಿದ್ದೆ. ಈಗ ಕಾಂಗ್ರೆಸ್ ಅವಸ್ಥೆ ಗಮನಿಸಿದರೆ ಆ ವಿಚಾರದ ಸತ್ಯಾಸತ್ಯತೆ ಅರಿವಾಗುತ್ತದೆ. ಈ ಲೇಖನ ಈಗ ಬರೆಯುವ ಹೊತ್ತಿಗೆ ಪ್ರಸ್ತುತದ ಮೈತ್ರಿ ಸರ್ಕಾರ ಪತನವಾಗಿಲ್ಲ. ಆದರೆ ಮುಂದೆ ಹೇಗೆ ಎಂಬುದು (ಬಹುಮಟ್ಟಿಗೆ ಪತನ ಖಚಿತ) ಕಂಪನದ ರಿಕ್ಟರ್ ಸ್ಕೇಲ್ ಮಾಹಿತಿಯ ಮೇಲೆ ಹೇಳುವುದಾದರೆ ಯಾರಾದರೂ ಊಹಿಸಬಹುದಾದಂಥದ್ದು. ಏಪ್ರಿಲ್ ತಿಂಗಳಿನಲ್ಲಿ ಸರ್ಕಾರದ ಪತನಕ್ಕೆ ಶುರುಗೊಂಡ ಪ್ರಯತ್ನಗಳೇ ಮೈತ್ರಿ ಪಕ್ಷಗಳನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉರಿಯುವ ಕೆಂಡದ ಮೇಲೆ ನಿಲ್ಲಿಸಿದ್ದು.

ಹಾಗಾದರೆ, 104 ಸೀಟುಗಳನ್ನು ಗೆದ್ದಿದ್ದ ಭಾಜಪ ಕಡೆಗೂ 2018 ಮೇದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಯಾಕೆ? (ಮೂರೇ ದಿನಗಳಲ್ಲಿ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಕುಮಾರಸ್ವಾಮಿ ಅವರಿಗೆ ದಾರಿ ಮಾಡಿಕೊಟ್ಟರು) ರಾಹುಲ್ ಶಕ್ತಿ ಆಗ ಮೋದಿಯವರನ್ನು ಮೀರಿ ವೃದ್ಧಿಗೊಂಡಿತ್ತು, ಕುಂಡಲಿಯ ಗ್ರಹಗಳ ನೆಲೆಯಲ್ಲಿ. ಹೀಗಾಗಿ, ಭಾಜಪ ಅಧಿಕಾರ ಸಿಗದ ಸ್ಥಿತಿಗೆ ತಲುಪಿತು. ಅದೇ ಗ್ರಹಗಳು ಕಾಂಗ್ರೆಸ್ಸನ್ನು ಇನ್ನಷ್ಟು ಹಾಸ್ಯಾಸ್ಪದ ಸ್ಥಿತಿಗೆ ತಲುಪಿಸುವುದು ನಿಶ್ಚಿತವಾದುದರಿಂದ ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲೀ ದೀರ್ಘಕಾಲ ಅಧಿಕಾರದಲ್ಲಿ ಇರಲಾರರು ಎಂಬ (ಇವರಿಬ್ಬರ ಕುಂಡಲಿಯ ಚಂದ್ರ ಹಾಗೂ ಕೇತು ಗ್ರಹಗಳು ಇವರ ಅಧಿಕಾರಾವಧಿಗೆ ಅಸ್ಥಿರತೆಯನ್ನು ತಂದೇ ತೀರುತ್ತವೆ ಎಂಬುದು ಸ್ಪಷ್ಟ) ವಿಚಾರದ ಎಳೆಯೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ನೆಲಕಚ್ಚಿದವು.

ಮೋದಿ ಜನ್ಮಕುಂಡಲಿಯಲ್ಲಿನ ನಿಗೂಢ ಶಕ್ತಿ: ಹಾಗಾದರೆ ನರೇಂದ್ರ ಮೋದಿಯವರ ಜಾತಕದಲ್ಲಿನ, ಅವರಿಗೆ ವರವಾಗಿ ಸುಮಾರು ಎರಡು ದಶಕಗಳಿಂದಲೂ ಒದಗಿ ಬರುತ್ತಿರುವ ನಿಗೂಢ ಸಾತ್ವಿಕ ಶಕ್ತಿಯ ಕಥೆ ಏನು? ಹೇಗೆ ಒದಗಿ ಬರುತ್ತಿದೆ? ಇದು ಅಂಗಾರಕ ಮತ್ತು ನೀಚಭಂಗ ರಾಜಯೋಗ ಪಡೆದ ಚಂದ್ರ (ಚಂದ್ರ ಇವರ ಭಾಗ್ಯಾಧಿಪತಿ) ಇವರನ್ನು ವೈರಿಗಳಿಂದ ಸದಾ ರಕ್ಷಿಸುವ ವಜ್ರಾಯುಧವಾಗಿವೆ. ಇನ್ನು ಕರ್ಮದ ಅಧಿಸ್ಥಾನಪತಿಯಾದ ರವಿ, ಲಾಭ ಸ್ಥಾನಾಧಿಪ ಬುಧ, ಹಾಗೆಯೇ ವಿಘ್ನಗಳನ್ನು ಪರಿಹರಿಸುವ ಕೇತು ಗ್ರಹಗಳು ಏಕಾದಶ ಸ್ಥಾನ (ಲಾಭ ಸ್ಥಾನ)ದಲ್ಲಿ ಕುಳಿತಿವೆ. ಚಂದ್ರ ದಿಢೀರಾದ ನಿರ್ಣಯ ತಳೆಯಲು, ಕುಜ ಸಾತ್ವಿಕವಾದ ರೋಷ ಉಪಯೋಗಿಸಿಕೊಂಡು ಎದುರಾಳಿಯನ್ನು ನಿಗ್ರಹಿಸುವ ಸಂಕಲ್ಪ ಶಕ್ತಿ ಪಡೆದೇ ತೀರಲು ಶಕ್ತಿ ಒದಗಿಸುತ್ತಾರೆ. ಹಾಗೆ ನೋಡಿದರೆ, ವಿರೋಧಿಗಳನ್ನು ಹಣಿಯಬಹುದಾದ ಶಕ್ತಿ ಅವರಿಗೆ 2028ರ ತನಕವೂ ಅಬಾಧಿತ (ಕುಜ ದಶಾದ ಅಂತ್ಯದವರೆಗೂ ಕೂಡ.)

ಇಷ್ಟಾದರೂ ಅವರು ಪ್ರಧಾನಮಂತ್ರಿಯಾದಲ್ಲಿಂದ ಒಂದು ಚುನಾವಣೆಯಲ್ಲಿ ಗೆಲುವು, ಇನ್ನೊಂದು ಕಡೆ ಸೋಲು ಎದುರಿಸುತ್ತಲೇ ಇದ್ದರು. ಕರ್ಮಸ್ಥಾನದಲ್ಲಿರುವ ಶನೈಶ್ಚರ ಈ ಉಬ್ಬರ ಇಳಿತಗಳಿಗೆ ಸದ್ದಿರದೆ ಅಡಿಪಾಯ ಒದಗಿಸುತ್ತಾನೆ. ಇನ್ನೂ ಸುಮಾರು 8 ತಿಂಗಳು ಸಾಡೇಸಾತಿ ಶನಿ ಕಾಟ ಇದೆ. ನಿಗೂಢ ಶಕ್ತಿಯ ರಕ್ಷಾಕವಚದ ಹೊರತಾಗಿಯೂ ಸುಖಕ್ಕೆ ಆತಂಕ ತರುವ ಕಂಪನಗಳನ್ನು ನಿರ್ವಿುಸುತ್ತಿರುತ್ತಾನೆ. ಪ್ರಾಣಕ್ಕೆ ಕೂಡಾ ಧಕ್ಕೆ ತರಬಹುದಾಗಿದೆ. ಮಾತೇ ಇವರ ದೊಡ್ಡ ಶಕ್ತಿ. ಆದರೆ ಆರ್ಥಿಕ ವಿಚಾರದಲ್ಲಿ ಜಾಗ್ರತೆಯ ಹೆಜ್ಜೆಗಳು ಬೇಕು. ಆರ್ಥಿಕ ವಿಚಾರವಾಗಿ ಗುರುವನ್ನು ದುರ್ಬಲಗೊಳಿಸುವ ಶನೈಶ್ಚರ ಜನಪ್ರಿಯತೆಯನ್ನು ದಿಢೀರನೆ ನೆಲಕಚ್ಚುವ ಹಾಗೆ ಮಾಡುವ ಸಾಧ್ಯತೆಗಳಿರುತ್ತವೆ. ಏಕಾಏಕಿ ನೋಟು ಅಮಾನ್ಯೀಕರಣದಂತಹ ಸೂಕ್ಷ್ಮ ವಿಚಾರಕ್ಕೆ ಕೈ ಹಾಕಬಾರದು.

ಲೋಕಸಭಾ ಚುನಾವಣೆಯ ಅದ್ಭುತ ಜಯ ಅಸಾಧ್ಯ ಎಂದು ಆರು ತಿಂಗಳುಗಳ ಹಿಂದೆ ಸಮೀಕ್ಷೆಗಳು ಹೇಳುತ್ತಿದ್ದಾಗಲೇ ಪುಲ್ವಾಮಾ ಘಟನೆ (ಸೈನಿಕರ ಮೇಲಿನ ಭಯೋತ್ಪಾದಕರ ನಿರ್ದಯ ದಾಳಿ) ಪಾಕಿಸ್ತಾನವನ್ನು ನೇರವಾಗಿ ಎದುರಿಸಿಯೇ ತೀರುವ ಎದೆಗಾರಿಕೆಯನ್ನು ಮೋದಿಯವರಲ್ಲಿ (ಈ ಘಟನೆ ಅವರಿಗೆ ಇಷ್ಟದ ವಿಷಯವಾಗಿರದಿದ್ದರೂ) ಸ್ಪಷ್ಟಿಸಿತ್ತು. ಇದರಲ್ಲಿ ಗೆಲುವು ಸಾಧಿಸಿ, ಅಂತಾರಾಷ್ಟ್ರೀಯ ಬೆಂಬಲಪಡೆದರು. ಜನ್ಮ ಕುಂಡಲಿಯ ಶಶಿ ಮಂಗಳ ಯೋಗ ನಿಗೂಢ ಶಕ್ತಿಯನ್ನು ಅವರಿಗೆ ಸೃಷ್ಟಿಸಿಕೊಟ್ಟಿತು. ಕುಜ ಯಾವಾಗಲೂ ಯುದ್ಧ, ದಿಢೀರಾದ ಕಾರ್ಯಾಚರಣೆಗಾಗಿನ ಧೈರ್ಯ, ಗಟ್ಟಿಯಾದ ಮನೋದಾರ್ಢ್ಯ ಒದಗಿಸುವ ಚಂದ್ರನಿದ್ದಾಗ ಸುಲಭವಾಗಿ ಕೊಡುತ್ತಾನೆ. ಕೇತು ಈ ಸ್ಥೈಯರ್å, ಧೈರ್ಯ, ದಾರ್ಢ್ಯತೆಗಳ ಕಾರ್ಯಾಚರಣೆಗಳ ಸಂದರ್ಭದಲ್ಲಿ ವಿಘ್ನಗಳನ್ನು ನಾಶಮಾಡುತ್ತಾನೆ.

ರಾಹುಲ್ ಗಾಂಧಿ ದಾರಿ ಹೇಗೆ ಎತ್ತ?: ರಾಹುವಿನ ಕಾರಣದಿಂದಾಗಿ ರಾಹುಲ್ ಮಾತಿನಲ್ಲಿ ಎಡವುತ್ತಾರೆ. ಮೋದಿಯವರನ್ನು ಎದುರಿಸುವ ಸಾಮರ್ಥ್ಯ ಅವರ ಮಾತಿಗಳಿಗೆ ಎಂದೂ ಕಷ್ಟವೇ. ಆದರೂ ಅವರ ಜಾತಕದ ಶನೈಶ್ಚರ ಒಂದಲ್ಲ ಒಂದು ದಿನ ಅವರನ್ನು ಮೇಲ್ಮಟ್ಟಕ್ಕೆ ಏರಿಸುವ ಶಕ್ತಿ ಇದ್ದೇ ಇದೆ. ದುಷ್ಟರಾದರೂ ಕುಜ ಹಾಗೂ ರವಿ ವಿಪರೀತ ರಾಜಯೋಗ ಒದಗಿಸಿದ್ದಾರೆ. ಶುಕ್ರ ಗ್ರಹ ಅವರನ್ನು ನಿರ್ಲಕ್ಷಿಸಲು ಸಾಧ್ಯವಾಗದು. ಆರ್ಥಿಕ ಯೋಜನೆಗಳಲ್ಲಿ ಮೋದಿ ಇಡಬಹುದಾದ (ಶನೈಶ್ಚರನ ಕಾರಸ್ಥಾನದಿಂದಾಗಿ )ತಪ್ಪು ಹೆಜ್ಜೆಗಳು ರಾಹುಲರಿಗೆ ನೆರವು ನೀಡುವ ಮಾಯಾದಂಡವಾಗಿ ನಿಲ್ಲುವ ಸಾಧ್ಯತೆಗಳಿರುತ್ತವೆ. ಆದರೆ ಪ್ರಚಂಡ ಗೆಲುವಿನಲ್ಲಿರುವ ಮೋದಿಯವರಿಗೆ, ಇದರ ಬಗೆಗಿನ ಅರಿವು ಇದ್ದೇ ಇರಲಿ ಎಂದು ಹಾರೈಕೆ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

Leave a Reply

Your email address will not be published. Required fields are marked *