ಚುನಾವಣಾ ಅಕ್ರಮಗಳಲ್ಲಿ ಎಣ್ಣೆ ಗೆ ಮೊದಲ ಆದ್ಯತೆ: ಮತ ಸೆಳೆಯಲು ಮದ್ಯದ ಹೊಳೆ

| ವಿಲಾಸ ಮೇಲಗಿರಿ ಬೆಂಗಳೂರು

ಚುನಾವಣೆ ಎಂದರೆ ಅಲ್ಲಿ ಮದ್ಯ ಇರಲೇಬೇಕೆಂಬ ಅಲಿಖಿತ ನಿಯಮ ಪ್ರತಿ ಬಾರಿಯೂ ಇರುವಂತೆ ಪ್ರಸಕ್ತ ಸಾಲಿನಲ್ಲೂ ಮದ್ಯಾರಾಧನೆ ಇದೆ ಎಂಬುದು ಈಗಿನ ಬೆಳವಣಿಗೆಯಲ್ಲೇ ಕಂಡುಬರುತ್ತಿದೆ. ಕೇವಲ 5 ವರ್ಷದಲ್ಲಿ 10 ಪಟ್ಟು ಮದ್ಯವನ್ನು ಬರಿ ಹತ್ತೇ ದಿವಸಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರೆ ಮತದಾರರಿಗೆ ಇದು ಎಚ್ಚರಿಕೆ ಗಂಟೆ ಎಂದೇ ಹೇಳಬಹುದು.

2013ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ತಂಡಗಳು 62,952 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದರೆ, 2018ರಲ್ಲಿ ಚುನಾವಣೆಯಲ್ಲಿ ಇದರ ಪ್ರಮಾಣ 5.83 ಲಕ್ಷ ಲೀ. ಆಗಿತ್ತು. ಅಚ್ಚರಿ ಎಂದರೆ 2019ರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ 10 ದಿನದಲ್ಲೇ 6,04,298 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ರ್ಯಾಲಿಗಳಲ್ಲಿ ಮದ್ಯದ ಘಮಲು: ಬಹುತೇಕ ರ್ಯಾಲಿಗಳಲ್ಲಿ ಮದ್ಯದ ಘಮಲು ಮತ್ತು ಅಮಲು ಮಾಮೂಲಾಗಿದೆ. ರ್ಯಾಲಿಗೆ ಹೊರಡುವ ವಾಹನಗಳನ್ನು ಏರುವ ಮುನ್ನವೇ ಜನರಿಗೆ ಮದ್ಯದ ಬಾಟಲು ಸರಬರಾಜಾಗುತ್ತವೆ. ಅಕ್ರಮ ಮದ್ಯವನ್ನು ಗೋದಾಮು, ತೋಟದ ಮನೆ, ಮಳಿಗೆಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಏಕಕಾಲಕ್ಕೆ ಭಾರೀ ಪ್ರಮಾಣದ ಮದ್ಯ ಖರೀದಿ ಮಾಡಿದರೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ರಾಜಕೀಯ ನಾಯಕರು ಚುನಾವಣೆಗೆ ಮುನ್ನವೇ ಮದ್ಯ ಖರೀದಿಯಲ್ಲಿ ಕರಾಮತ್ತು ತೋರುತ್ತಾರೆ. ಸನ್ನದುದಾರರಿಂದ ಹೆಚ್ಚಿನ ಇಂಡೆಂಟ್ ಹಾಕಿಸಿ ಮದ್ಯ ಖರೀದಿಸಿ ದಾಸ್ತಾನು ಮಾಡುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಮದ್ಯದ ಹಾವಳಿ ಹೆಚ್ಚುತ್ತಿರುವುದು ಆಯೋಗದ ಗಮನದಲ್ಲಿದೆ. ವಿಶೇಷ ಕಾರ್ಯಪಡೆ, ತನಿಖಾ ತಂಡಗಳನ್ನು ರಚಿಸಿ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದೆ. ಅದರ ಫಲವಾಗಿ ಈ ಬಾರಿ 10 ದಿನಗಳಲ್ಲಿ 6.04 ಲಕ್ಷ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

| ಸಂಜೀವ್​ಕುಮಾರ್ ಮುಖ್ಯ ಚುನಾವಣಾಧಿಕಾರಿ

ನೀತಿ ಸಂಹಿತೆ ಉಲ್ಲಂಘಿಸಿ ಯಾರಾದರೂ ಮದ್ಯ ಮಾರಾಟ, ಸಾಗಣೆ ಮಾಡುವ ದೂರುಗಳು ಬಂದರೆ 24 ಗಂಟೆ ಒಳಗಾಗಿಯೇ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ದೂರು ನೀಡಲು ಹೆಲ್ಪ್​ಲೈನ್-18004252550 ನೀಡಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ದೂರು ಬಂದಿದ್ದು, 70-80 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

| ಎಸ್.ಎಲ್.ರಾಜೇಂದ್ರ ಪ್ರಸಾದ್ ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ

ವಾಹನಗಳಿಗೆ ಜಿಪಿಎಸ್

ಮದ್ಯ ಸಾಗಣೆ ವಾಹನಗಳಿಗೂ ಜಿಪಿಎಸ್ ತಂತ್ರಜ್ಞಾನ ಅಳವಡಿಸಿ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂಬು ದರ ಮೇಲೆ ಅಬಕಾರಿ ಇಲಾಖೆ ನಿಗಾ ಇರಿಸುತ್ತದೆ. ಮದ್ಯದ ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿ ಚಲನವಲನ ಗಮನಿಸಲಾಗುತ್ತದೆ. ಚೆಕ್​ಪೋಸ್ಟ್ ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿ ನೇರ ನಿಗಾ ವಹಿಸಲಾಗುತ್ತದೆ. ಈ ಚುನಾವಣೆಯಲ್ಲೆ ಮೊದಲ ಬಾರಿಗೆ ಅಕ್ರಮ ಮದ್ಯ ಸಾಗಣೆ ಮತ್ತು ಮಾರಾಟದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ, ಅಕ್ರಮ ಮದ್ಯ ತಡೆಗಟ್ಟಲು ರಾಜ್ಯಾ ದ್ಯಂತ 33 ಸ್ಕಾ್ವಡ್ ಮತ್ತು 449 ಚೆಕ್​ಪೋಸ್ಟ್ ನಿರ್ವಿುಸಲಾಗಿದೆ.

ಸೂಕ್ಷ್ಮ ಸನ್ನದು ಮೇಲೆ ಕಣ್ಣು

ರಾಜ್ಯದ ಗಡಿ ಪ್ರದೇಶದ 5 ಕಿ.ಮೀ. ವ್ಯಾಪ್ತಿಯ 3 ಸಾವಿರ ಸನ್ನದುಗಳನ್ನು ಸೂಕ್ಷ್ಮ ಸನ್ನದುಗಳೆಂದು ಗುರುತಿಸಿ ವಿಶೇಷ ಗಮನ ಇರಿಸಿ ಯಾವುದೇ ರೀತಿಯಲ್ಲಿ ಅಕ್ರಮ ಮಾರಾಟ, ಸಾಗಣೆ ಮತ್ತು ದುರ್ಬಳಕೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಸಾಗಣೆಯಾಗುವ ಮದ್ಯ ಮತ್ತು ಬೇರೆ ರಾಜ್ಯಗಳಿಂದ ರಾಜ್ಯ ಕರ್ನಾಟಕ ಹಾಗೂ ಕರ್ನಾಟಕದ ಮಾರ್ಗವಾಗಿ ಕೇರಳ ಮತ್ತಿತರ ಕಡೆಗೆ ಸಾಗಣೆ ಮಾಡುವ ಮದ್ಯದ ವಾಹನಗಳನ್ನು ಗಂಭೀರವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ವಿಡಿಯೋ ಕಾನ್ಪರೆನ್ಸ್

ಚುನಾವಣೆ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಅಬಕಾರಿ ಇಲಾಖೆ ಕೇಂದ್ರ ಕಚೇರಿಯಿಂದ ಅಧೀನ ಅಧಿಕಾರಿಗಳ ಜತೆ ಆಗಾಗ ವಿಡಿಯೋ ಕಾನ್ಪರೆನ್ಸ್ ನಡೆಸಿ ಅಗತ್ಯ ಸೂಚನೆ ಕೊಡುತ್ತದೆ. ಅಲ್ಲದೆ, ಪ್ರಗತಿಪರಿಶೀಲನೆ ನಡೆಸಿ ರಾಜ್ಯವ್ಯಾಪಿ ಚಿತ್ರಣವನ್ನು ವರದಿ ಮಾಡಲಾಗುತ್ತದೆ. ಮದ್ಯ ತಯಾರಿಕಾ ಕಾರ್ಖಾನೆಗಳ ಉತ್ಪಾದನೆ ಹಾಗೂ ಮಾರಾಟದ ಪ್ರಮಾಣ, ಜತೆಗೆ

ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಮಾರಾಟ ಮತ್ತು ದಾಸ್ತಾನನ್ನು ತಪಾಸಣೆಗೆ ಒಳಪಡಿಸಿ ಅಕ್ರಮಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಹಾಗೂ ಚುನಾವಣಾ ತನಿಖಾ ತಂಡಗಳು ಮುಂದಾಗಿವೆ. ತನಿಖಾ ತಂಡಗಳ ವಿಶೇಷ ಕಾರ್ಯಾಚರಣೆ ಕೇಂದ್ರ ಚುನಾವಣಾ ಆಯೋಗದ ಮೆಚ್ಚುಗೆಗೂ ಪಾತ್ರವಾಗಿವೆ.

Leave a Reply

Your email address will not be published. Required fields are marked *