ಮತಯಂತ್ರ ಸೇರಿದ ಲೋಕ ಭವಿಷ್ಯ: ರಾಜ್ಯದ ಎರಡನೇ ಹಂತದಲ್ಲಿ ಶೇ. 67.44 ಮತದಾನ, ಅಲ್ಲಲ್ಲಿ ಕೈಕೊಟ್ಟ ಇವಿಎಂಗಳು

ಬೆಂಗಳೂರು: 17ನೇ ಲೋಕಸಭೆಗೆ ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ಮಂಗಳವಾರ ತೆರೆ ಬಿದ್ದಿದೆ.

ಕಲಬುರಗಿ, ರಾಯಚೂರು, ಬೀದರ್ ಮತ್ತಿತರ ಕಡೆ ರಣರಣ ರಾಚುವ ಬಿಸಿಲು ಮತ್ತು ಅಕಾಲಿಕ ಮಳೆ ನಡುವೆಯೂ ಜನ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ಹಲವೆಡೆ ಇವಿಎಂ ದೋಷ, ಕೆಲವೆಡೆ ತಡವಾಗಿ ಮತದಾನ ಆರಂಭ, ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಕರಿಬಾವಿ ಮತಗಟ್ಟೆ ಸಂಖ್ಯೆ 31ರಲ್ಲಿ ಕಂಟ್ರೋಲ್ ಯುನಿಟ್ ಧ್ವಂಸ ಸೇರಿ ಚಿಕ್ಕಪುಟ್ಟ ಅಹಿತಕರ ಪ್ರಕರಣ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗಳ ನಡುವೆಯೂ ರಾಜ್ಯದಲ್ಲಿ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದ್ದು, ಎಲ್ಲೂ ಮರುಮತದಾನ ಇಲ್ಲ. ಈ ಹಂತದಲ್ಲಿ ಅಂದಾಜು ಶೇ. 67.44 ಮತದಾನವಾಗಿದ್ದು, 237 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿವೆ.

ರಾಜ್ಯದ 14 ಕ್ಷೇತ್ರ ಗಳಿಗೆ ನಡೆದ ಮೊದಲ ಹಂತದಲ್ಲಿ ಶೇ.68.80 ಮತದಾನ ಆಗಿತ್ತು. ಎರಡನೇ ಹಂತದಲ್ಲಿ ಮತದಾನದ ಪ್ರಮಾಣ ಶೇ.67.44 ಆಗಿದೆ. ಅಂದರೆ ಮೊದಲ ಹಂತಕ್ಕಿಂತ ಶೇ.1.36 ಕಡಿಮೆ ಮತದಾನ ವರದಿಯಾಗಿದೆ. ಒಟ್ಟಾರೆ ರಾಜ್ಯದ 28 ಕ್ಷೇತ್ರದಲ್ಲಿ ಸರಾಸರಿ ಶೇ.68.12 ಮತದಾನವಾದಂತಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿ ಹಲವು ಘಟಾನುಘಟಿ ನಾಯಕರ ಸ್ಪರ್ಧೆಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಮೇ 23ಕ್ಕೆ ಮತದಾರರು ಯಾರಿಗೆ ಜೈ ಎಂದಿದ್ದಾರೆ ಎಂಬುದು ಪ್ರಕಟಗೊಳ್ಳಲಿದೆ. ಈ ಹಂತದ ಕ್ಷೇತ್ರಗಳಲ್ಲಿ 2.43 ಕೋಟಿ ಮತದಾರರಿದ್ದು, 1.22 ಕೋಟಿ ಪುರುಷರು, 1.20 ಕೋಟಿ ಮಹಿಳೆಯರು, 2022 ಇತರ ಮತದಾನದ ಹಕ್ಕು ಹೊಂದಿದ್ದರು. 28,022 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಚುನಾವಣಾ ಕಾರ್ಯಕ್ಕೆ 1,43, 580 ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

# ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು.
# ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ಉತ್ತರಕನ್ನಡ ಜಿಲ್ಲೆಯ ಹಲವೆಡೆ ಇವಿಎಂಗಳಲ್ಲಿ ನ್ಯೂನತೆ ಕಂಡು ಬಂದು ಮತದಾನ ಆರಂಭ ವಿಳಂಬವಾಗಿತ್ತು.

ಮತದಾನಕ್ಕೆ ಅಡ್ಡಿಪಡಿಸಿದ ಮಳೆ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಮುಂಡಗೋಡ, ಶಿರಸಿ, ಯಲ್ಲಾಪುರದಲ್ಲಿ ಮಧ್ಯಾಹ್ನವೇ ಸುರಿದ ಭಾರಿ ಮಳೆ ಮತ್ತು ಭಾರಿ ಗಾಳಿಯಿಂದ ಮತದಾನಕ್ಕೆ ಅಡ್ಡಿಯಾಯಿತು. ಪಕ್ಕದಲ್ಲಿಯೇ ಇದ್ದರ ಎರಡು ಮನೆಗಳೂ ಜಖಂಗೊಂಡಿವೆ. ಭಟ್ಕಳದ ಜಾಮೀಯಾಬಾದಿನಲ್ಲಿ ಇದ್ದ ಸಖಿ ಮತದಾನ ಕೇಂದ್ರ ಕುಸಿದು ಬಿದ್ದಿದೆ.ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆ ಸುರಿದಿದ್ದು, ತಾಳಗುಪ್ಪ ಭಾಗದಲ್ಲಿ ಮತದಾನಕ್ಕೆ ಹಿನ್ನಡೆಯಾಯಿತು.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪತ್ನಿ ಸಮೇತ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಚುನಾವಣೆ ಗೌಪ್ಯತೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತ್ವದ ನಿಯೋಗ ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ದೂರು ನೀಡಿದೆ. ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 128ರ ಅನ್ವಯ ಯಾವುದೇ ವ್ಯಕ್ತಿ ತನ್ನ ಮತದಾನದ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಗೌಪ್ಯತೆ ಕಾಪಾಡುವುದು ಆತನ ಕರ್ತವ್ಯ ಕೂಡ ಆಗಿರುತ್ತದೆ. ಯಾವುದೇ ವ್ಯಕ್ತಿ ಮತ ಚಲಾಯಿಸುವಾಗ ಮತದಾನ ಸ್ಥಳದಲ್ಲಿ ಒಬ್ಬನೇ ಇರತಕ್ಕದ್ದು. ಅನುಭವಿ ರಾಜಕಾರಣಿಯಾಗಿರುವ ಖರ್ಗೆ ಪತ್ನಿ ಸಮೇತ ಏಕಕಾಲಕ್ಕೆ ಮತ ಚಲಾಯಿಸಿದ್ದಾರೆ. ಇದರಿಂದ ಪಾರದರ್ಶಕ ಮತದಾನ ಸಾಧ್ಯವಿಲ್ಲ. ಮತದಾನ ಪ್ರಕ್ರಿಯೆ ನಡೆಸುವ ಅಧಿಕಾರಿಗಳೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಲಾಗಿದೆ.

ಫಲಿತಾಂಶಕ್ಕೆ ಒಂದು ತಿಂಗಳು!

17ನೇ ಲೋಕಸಭೆಗೆ ರಾಷ್ಟ್ರಾದ್ಯಂತ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏ.11 ರಿಂದ ಆರಂಭವಾಗಿದ್ದು, ಮೇ 19 ಚುನಾವಣೆ ಕೊನೆಗೊಳ್ಳಲಿದೆ. ಮೇ 23ಕ್ಕೆ ಏಕಕಾಲಕ್ಕೆ ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಏ.18 ಮತ್ತು 23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ.

ಶಾಸಕಿ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲು

ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಂಗಳವಾರ ನೀತಿ ಸಂಹಿತೆ ಜಾರಿ ತಂಡ ದೂರು ದಾಖಲಿಸಿದೆ. ಮತದಾನ ಸಂದರ್ಭ ಕುಟುಂಬ ಸಮೇತರಾಗಿ ಮತ ಚಲಾಯಿಸಿ ಮರಳುವಾಗ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.

ಬೇಡಿಕೆ -ಬಹಿಷ್ಕಾರ

# ಆಳಂದ ತಾಲೂಕಿನ ದೇಗಾಂವ ಗ್ರಾಮದಲ್ಲಿ ಮತದಾನ ಬಹಿಷ್ಕಾರ. ಗ್ರಾಪಂ ಕೇಂದ್ರ ಸ್ಥಾನಕ್ಕಾಗಿ ಬೇಡಿಕೆ.

# ಬೀದರ್ ತಾಲೂಕಿನ ಸುಲ್ತಾನಪುರ (ಜೆ) ಗ್ರಾಮಸ್ಥರು ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದರು.

# ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಾವೇರಿ ತಾಲೂಕಿನ ಎಂ.ಜಿ.ತಿಮ್ಮಾಪುರ ಗ್ರಾಮದ 35ಕ್ಕೂ ಅಧಿಕ ದಲಿತ ಸಮುದಾಯದವರು ಮತದಾನ ಬಹಿಷ್ಕಾರ ಹಾಕಿದರು.

# ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಯಚೂರು ತಾಲೂಕಿನ ಯದ್ಲಾಪುರದಲ್ಲಿ ಮತದಾನದಿಂದ ಬಹುತೇಕರು ದೂರ ಉಳಿದರು. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೂತ್ಕೂರು ಗ್ರಾಮಸ್ಥರು ಪ್ರತ್ಯೇಕ ಮತಗಟ್ಟೆ ನೀಡದಿರುವುದನ್ನು ಖಂಡಿಸಿ ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಮಾಡಿದರು.

# ತಾಂಡಾದಿಂದ ಮತಗಟ್ಟೆ 3 ಕಿ.ಮೀ. ದೂರದಲ್ಲಿದೆ ಎಂದು ಆರೋಪಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರ ತಾಂಡಾ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದರು.

# ಮೂಲಭೂತ ಸೌಲಭ್ಯ ಇಲ್ಲದಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ಭೀಮಗಡ ವನ್ಯಧಾಮದ ಚಾಪೋಲಿ ಮತ್ತು ಗವಾಳಿ ಮತಗಟ್ಟೆಗಳಲ್ಲಿ 11 ಗ್ರಾಮಗಳ ಗ್ರಾಮಸ್ಥರಿಂದ ಮತದಾನ ಸಂಪೂರ್ಣ ಬಹಿಷ್ಕಾರ. 1854 ಮತದಾರರಲ್ಲಿ ಕೇವಲ ಇಬ್ಬರೇ ಮತದಾನ ಮಾಡಿದ್ದಾರೆ.

# ಚನ್ನಗಿರಿ ತಾಲೂಕು ಎನ್.ಬಸವನಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯ ನೀರು ಒದಗಿಸಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಗ್ರಾಮಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ದಾವಣಗೆರೆ ತಾಲೂಕು ಬೋರಗೊಂಡನಹಳ್ಳಿ, ಹರಪನಹಳ್ಳಿ ತಾಲೂಕಿನ ಕರೇಕಾನಹಳ್ಳಿ ಗ್ರಾಮಸ್ಥರು ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದರು.

ಸಾವು-ನೋವು

# ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ತಿಪ್ಪೇಸ್ವಾಮಿ (50) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

# ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಐರಸಂಗದಲ್ಲಿ ಮತ ಚಲಾಯಿಸಿ ಹೊರ ಬರುತ್ತಿದ್ದಂತೆ ಮಹಾದೇವಿ ಮಹಾದೇವಪ್ಪ ಸಿಂದಖೇಡ (55) ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

# ಹಾವೇರಿಯ ಹಂಸಭಾವಿ ಗ್ರಾಮದಲ್ಲಿ ಮತದಾನ ಮಾಡಿ ವಾಪಸ್ ಮನೆಗೆ ಮರಳುತ್ತಿದ್ದ ಸಂದರ್ಭ ಬೈಕ್​ನಿಂದ ಆಯತಪ್ಪಿ ಕೆಳಗೆ ಬಿದ್ದು ನಿಂಗಮ್ಮ ಸಣ್ಣಕ್ಕಿ (80) ಎಂಬುವರು ಮೃತಪಟ್ಟಿದ್ದಾರೆ.

# ಚಿತ್ತಾಪುರ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಕಾಳಗಿ ತಾಯಿ ಸಾವಿನ ಮಧ್ಯೆಯೂ ಕುಟುಂಬಸ್ಥರೊಂದಿಗೆ ತೆರಳಿ ಹಕ್ಕು ಚಲಾಯಿಸಿದರು.

# ಔರಾದ್ ತಾಲೂಕಿನ ನಾಗೂರ (ಎಂ) ಗ್ರಾಮದಲ್ಲಿ ತಾಯಿ ಸಾವಿನ ಮಧ್ಯೆಯೂ ಮಕ್ಕಳು ಮತದಾನ ಮಾಡಿದರು.

# ಸಿಂಧನೂರು ತಾಲೂಕು ಸೋಮಲಾಪುರ ಗ್ರಾಮದಲ್ಲಿ ತಂದೆ ನಿಧನರಾದ ದುಃಖದಲ್ಲಿದ್ದರೂ ಶವಸಂಸ್ಕಾರದ ನಂತರ ನಾಲ್ವರು ಮಕ್ಕಳಾದ ಹುಚ್ಚಮ್ಮ, ರಡ್ಡೆಪ್ಪ, ವೀರೇಶ, ಮುದುಕಪ್ಪ ಮತದಾನ ಮಾಡಿದರು.

# ಹುಬ್ಬಳ್ಳಿಯ ಶಕ್ತಿ ಕಾಲನಿಯಲ್ಲಿ ಉಮಾಬಾಯಿ ಉಪಕಾರಿ (73) ಎಂಬುವರು ಮೃತಪಟ್ಟಿದ್ದರೂ, ಪುತ್ರ ಅಶೋಕ ಉಪಕಾರಿ, ಸೊಸೆ ದೀಪಾ, ಮೊಮ್ಮಗ ಅನಿರುದ್ಧ ಸೇರಿ ಮನೆಯ 8 ಸದಸ್ಯರು ಮತ ಚಲಾಯಿಸಿದರು. ಬಳಿಕ ತಾಯಿಯ ಅಂತ್ಯ ಸಂಸ್ಕಾರ ವಿಧಿ ವಿಧಾನ ನೆರೆವೇರಿಸಿದರು.

# ಹುಬ್ಬಳ್ಳಿಯ ಎಆರ್​ಟಿ ನಗರದ ಚಂದ್ರಶೇಖರ ಧಗೆ (95) ಮೃತಪಟ್ಟಿದ್ದು, ಪುತ್ರ ವಸಂತ ಧಗೆ ಹಾಗೂ ಪತ್ನಿ ಮತ ಚಲಾಯಿಸಿದರು.

ಪೊಲೀಸರಿಗೆ ವಿಶೇಷ ವೋಟಿಂಗ್ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಸಿಕೊಟ್ಟ ಪೊಲೀಸರಿಗೆ ಎಲ್ಲೆಡೆ ಪ್ರಸಂಶೆ ವ್ಯಕ್ತವಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಿರತರಾಗಿದ್ದ ಪೊಲೀಸರಿಗೆ ನಿಗದಿತ ಮತಕೇಂದ್ರದಲ್ಲಿ ಮತ ಚಲಾಯಿಸಲು ಸಾಧ್ಯವಾಗದೆ ಇದ್ದಾಗ ಇದ್ದಲ್ಲಿಯೇ ವೋಟ್ ಮಾಡಲು ವಿಶೇಷ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿತ್ತು. ಉತ್ತರ ಕನ್ನಡ ಕ್ಷೇತ್ರದ ಶಿರಸಿ ವಿಧಾನಸಭಾ ವ್ಯಾಪ್ತಿಯ ಪೊಲೀಸ್ ಪ್ರದೀಪ್ ಈಶ್ವರ ನಾಯ್್ಕ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಹಿನ್ನೆಲೆ ನಿಗದಿತ ಮತಗಟ್ಟೆಯಲ್ಲಿ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಆಯೋಗ, ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿಯೇ ಮತದಾನ ಮಾಡಲು ವಿಶೇಷ ಅವಕಾಶ ನೀಡಿ ಪ್ರಮಾಣ ಪತ್ರ ವಿತರಿಸಿತ್ತು. ಇದೇ ರೀತಿ ನೂರಾರು ವಿಶೇಷ ಅವಕಾಶ ಕೊಟ್ಟಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಘರ್ಷಣೆ

# ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಾರವಾರದ ಸವೋದಯನಗರ ಮತಗಟ್ಟೆ ಎದುರು ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಂಡರು.

# ಸೇಡಂನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ.

# ವೃದ್ಧೆಯೊಬ್ಬರಿಂದ ಮತ ಚಲಾಯಿಸುವ ಸಂಬಂಧ ಮುಂಡರಗಿ ತಾಲೂಕಿನ ಹಾರೋಗೇರಿ 163ರ ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ.

# ಹಾವೇರಿ ತಾಲೂಕು ಅಗಡಿ ಗ್ರಾಮದಲ್ಲಿ ಮತಗಟ್ಟೆ ಬಳಿ ಜನರು ಗುಂಪು ಗುಂಪಾಗಿ ಸಂಚರಿಸುತ್ತಿದ್ದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ನಿಯಂತ್ರಣಕ್ಕೆ ತಂದರು.

ಜನಪ್ರತಿನಿಧಿಗಳ ವಾಗ್ವಾದ

# ಗುರುತಿನ ಚೀಟಿ ತರದ ಸಲುವಾಗಿ ಶಾಸಕ ಸಿ.ಎಂ.ಉದಾಸಿ, ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಹಾಗೂ ಚುನಾವಣಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಯಿತು.

# ಧಾರವಾಡದ ಮಂಜುನಾಥನಗರ ಮತಗಟ್ಟೆಯಲ್ಲಿ ಮತದಾರರಿಗೆ ಏಕವಚನದಲ್ಲಿ ಮಾತನಾಡಿದ ಹಳೇ ಹುಬ್ಬಳ್ಳಿ ಠಾಣೆ ಇನ್ಸ್​ಪೆಕ್ಟರ್ ಎಸ್.ಎಸ್.ಕೌಜಲಗಿ ಹಾಗೂ ಸಂಸದ ಪ್ರಲ್ಹಾದ ಜೋಶಿ ನಡುವೆ ವಾಗ್ವಾದ ನಡೆದಿದೆ.

ಕಾರ್ವಿುಕರಿಗೆ ಮತಭಾಗ್ಯವಿಲ್ಲ

ವಿದ್ಯುತ್ ಉತ್ಪಾದನೆ ಸ್ಥಗಿತ ಸಾಧ್ಯವಿಲ್ಲದ್ದರಿಂದ ವಿಜಯಪುರ ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ (ಎನ್​ಟಿಪಿಸಿ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 20ಕ್ಕೂ ಅಧಿಕ ಕಾರ್ವಿುಕರು ಮತದಾನದಿಂದ ದೂರ ಉಳಿದರು. ಕಾರ್ವಿುಕರಿಗೆ ರಜೆ ಘೊಷಿಸಲಾಗಿದ್ದರೂ, ಕಂಪನಿ ರಜೆ ನೀಡಿರಲಿಲ್ಲ.

ಅಂಗವಿಕಲರಿಂದ ಮತದಾನ

# ವಿದ್ಯುತ್ ರ್ಸ³ಸಿ ಎರಡೂ ಕೈ ಕಳೆದುಕೊಂಡಿರುವ ದಯಾನಂದ ಹರಿಜನ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ಅವರ ಎಡಗಾಲಿನ ಬೆರಳಿಗೆ ಶಾಹಿ ಹಚ್ಚಲಾಯಿತು.

# ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮದಲ್ಲಿ ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ ಕಾಲಿನಿಂದ ಮತದಾನ, ಬೆಳಗಾವಿಯ ಸೊಪ್ಪಡ್ಲ ಗ್ರಾಮದ ಮತಗಟ್ಟೆಯಲ್ಲಿ ಮೊದಲ ಬಾರಿಗೆ 16 ಅಂಗವಿಕಲರು ಮತಚಲಾಯಿಸಿದರು.

ಬಾಣಂತಿಯರಿಂದ ಮತದಾನ

ರಾಯಚೂರು ಜಿಲ್ಲೆ ಹಟ್ಟಿಚಿನ್ನದಗಣಿಯಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ 8 ಗಂಟೆಗಳ ಅಂತರದಲ್ಲಿ ಬಾಣಂತಿ ಚಂದ್ರಕಲಾ ಅಮರೇಶ ರತ್ನಗಿರಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಮಸ್ಕಿ ಪಟ್ಟಣದಲ್ಲಿ ಬಾಣಂತಿ ಶಿವಲೀಲಾ, ಕೊಪ್ಪಳ ಜಿಲ್ಲೆ ಹನುಮಸಾಗರದಲ್ಲಿ ಬಾಣಂತಿ ಸಂಗೀತಾ ಪರಶುರಾಮ ಕುಕನೂರಿನಿಂದ ಬಂದು ಮತ ಚಲಾಯಿಸಿದರು.

ಮದುವೆ ಮತ ಸಂಭ್ರಮ

# ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ಹಸೆಮಣೆ ಏರಿದ ವರ ಅನಿಲಕುಮಾರ ಗರಡಕರ್ ಅವರಿಂದ ಮತದಾನ.

# ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ಮಧುಮಗಳು ಅನಿತಾ ಅಡಗಂಟಿ ಅರಿಷಿಣ ಹಚ್ಚಿಕೊಂಡು ಕುಟುಂಬಸ್ಥರೊಂದಿಗೆ ಬಂದು ಮತದಾನ ಮಾಡಿದರು.

# ಇತ್ತೀಚೆಗೆ ಮದುವೆಯಾಗಿದ್ದ ಬಾಗಲಕೋಟೆಯ ವರುಣ ಬೇತಾಳ-ಪ್ರಿಯಾ ಬೇತಾಳ ಮದುವೆ ಧಿರಿಸಿನಲ್ಲಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

# ಕಲಬುರಗಿಯಲ್ಲಿ ಹಸೆಮಣೆ ಏರಿದ ಒಂದೇ ಗಂಟೆಯಲ್ಲಿ ಮತ ಚಲಾಯಿಸಿದ ಪೂಜಾ ಠಾಕೂರ್-ರಂಜೀತ್.

ಜಾಲತಾಣದಲ್ಲಿ ಫೋಟೋ, ವಿಡಿಯೋ ವೈರಲ್

ಕೊಪ್ಪಳ ಜಿಲ್ಲೆ ಬೂದುಗುಂಪಾ ಗ್ರಾಮದಲ್ಲಿ ಮಲ್ಲಯ್ಯ ಎಂಬುವರು ರಾಜಶೇಖರ ಹಿಟ್ನಾಳ್​ಗೆ ಮತ ಹಾಕುವ ಫೋಟೋ, ಕುಷ್ಟಗಿ ತಾಲೂಕಿನಲ್ಲಿ ಮುರಳೀಧರ ಮೇಲಿನಮನಿ ಎಂಬುವರು ಬಿಎಸ್ಪಿಗೆ ಮತ ಹಾಕಿದ ವಿಡಿಯೋ, ಕುಕನೂರಿನ ಅಮರೇಶ ನಿಟ್ಟಾಲಿಯಿಂದ ಸಂಗಣ್ಣ ಕರಡಿಗೆ ಮತಹಾಕಿದ ಫೋಟೋ, ದ್ಯಾಂಪುರದ ಮಂಜುನಾಥ ಮುರಡಿ ಎಂಬುವರು ಕಾಂಗ್ರೆಸ್​ಗೆ ಮತಹಾಕಿದ ಫೋಟೋ, ಲಿಂಗಸುಗೂರಿನ ಅಮರೇಶ ಎಂಬುವರು ಬಿಜೆಪಿಗೆ ಮತ ಹಾಕಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂರು ಪ್ರಕರಣ ದಾಖಲು: ಮತದಾನದ ವಿಡಿಯೋ ಮಾಡಿಕೊಂಡು ಜಾಲತಾಣಗಳಲ್ಲಿ ಹರಿಬಿಟ್ಟ ಮೂವರ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿವೆ. ಯುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ, ವೀರಾಪುರ ಓಣಿಯ ರಜನಿಕಾಂತ ಬಿಜವಾಡ ಹಾಗೂ ಬಿಜೆಪಿ ಕಾರ್ಯಕರ್ತ ಗೋಕುಲ ಗ್ರಾಮದ ನಿವಾಸಿ ಮಂಜು ಮ್ಯಾಗೇರಿ ವಿಡಿಯೋ, ಫೋಟೊ ಹರಿಬಿಟ್ಟ ಆರೋಪಿಗಳು. ಮತದಾನದ ಗೌಪ್ಯತೆ ಕಾಪಾಡುವ ಬದಲು ನಿಷೇಧದ ನಡುವೆಯೂ ಮತಗಟ್ಟೆಯಲ್ಲಿ ಮೊಬೈಲ್ ಬಳಸಿ ವಿಡಿಯೋವನ್ನು ಹರಿಬಿಟ್ಟಿದ್ದರು.

51 ಲಕ್ಷ ರೂ. ಮದ್ಯ ವಶ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಧೂಳಖೇಡ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಲಾರಿ ತಡೆದ ಅಬಕಾರಿ ಅಧಿಕಾರಿಗಳು, 51,37,367 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಸನ್ಮಾನ

# ಕಲಬುರಗಿ ಬೂತ್ 247, 560ರಲ್ಲಿ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿದ ಮತದಾರರಿಗೆ ವಚನೋತ್ಸವ ಪ್ರತಿಷ್ಠಾನದಿಂದ ಪುಸ್ತಕ ವಿತರಿಸಿ ಸನ್ಮಾನ.

# ಹಲಸೂರು ತಾಲೂಕಿನ ಮಿರಕಲ್ ಗ್ರಾಮದಲ್ಲಿ ಮತದಾನ ನಡೆಯುವ ಶಾಲೆಗೆ ಅಧಿಕಾರಿಗಳು ತೋರಣ ಕಟ್ಟಿ ಗಮನ ಸೆಳೆದರು. ಅಂಗವಿಕಲ ಮತದಾರರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.