22.5 C
Bangalore
Friday, December 13, 2019

ರಾಷ್ಟ್ರದ 3ನೇ ಹಂತದಲ್ಲಿ ಶೇ. 63.24 ಹಾಗೂ ರಾಜ್ಯದ 2ನೇ ಹಂತದಲ್ಲಿ ಶೇ. 67.21 ರಷ್ಟು ಮತದಾನ: ಫಲಿತಾಂಶ ಮೇ 23ಕ್ಕೆ

Latest News

ಅಜ್ಞಾನದ ಕತ್ತಲೆ ಕಳೆಯುವುದೇ ಕಾರ್ತಿಕೋತ್ಸವ

ಶಿರಹಟ್ಟಿ: ಅಂತರಂಗದ (ಅಜ್ಞಾನದ) ಕತ್ತಲೆ ಹೋಗಲಾಡಿಸಿ ಜ್ಞಾನದ ಅರಿವು ಪಡೆಯುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ ಎಂದು ವರವಿ ಮಠದ ಶ್ರೀ ವಿರೂಪಾಕ್ಷ ಸ್ವಾಮಿಗಳು...

ಜಾತ್ರೆಯ ಯಶಸ್ಸಿಗೆ ಸಹಕರಿಸಿ

ಮುಂಡರಗಿ: ಮನುಷ್ಯನು ಬದುಕಿನಲ್ಲಿ ಸೇವಾ ಮನೋಭಾವ ಹೊಂದಿ ಉತ್ತಮ ವಿಚಾರ ಚಿಂತನೆಗಳ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ...

ಅಧ್ಯಾತ್ಮ ಸಾರ್ವತ್ರಿಕರಣವಾಗಲಿ

ಗದಗ: ಎಲ್ಲರಲ್ಲಿಯೂ ದೇವರಿದ್ದಾನೆ ಜತೆಗೆ ದೈವತ್ವದ ಕಿಡಿ ಇದೆ. ಎಲ್ಲರೂ ಒಂದೇ ಎಂದು ತಿಳಿಯಬೇಕು, ವಿಭಿನ್ನತೆಯಲ್ಲಿ ಏಕತೆ ಕಾಣುವುದೇ ನಿಜವಾದ ಧರ್ಮ. ಅಧ್ಯಾತ್ಮ...

ಮಾನವರು ದ್ವೇಷ, ಅಸೂಯೆ ಬಿಡಲಿ

ಚಾಮರಾಜನಗರ: ಶ್ರೀಕೃಷ್ಣ ಪ್ರತಿಷ್ಠಾನದಿಂದ ಮೊಸರು ಮಡಕೆ ಒಡೆಯುವ ಉತ್ಸವದ ಅಂಗವಾಗಿ ಶುಕ್ರವಾರ ನಗರದ ಚೆನ್ನಿಪುರಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹೂ...

ಅರಣ್ಯ ರಕ್ಷಣೆಗೆ ಡ್ರೋನ್ ಕಣ್ಗಾವಲು

ಗುಂಡ್ಲುಪೇಟೆ: ಮುಂದಿನ ಬೇಸಿಗೆಯಲ್ಲಿ ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಬೇಸಿಗೆಯಲ್ಲಿ ಬೆಂಕಿ ಹರಡುವುದನ್ನು ಕೂಡಲೇ ಗುರುತಿಸಲು ಇದೇ ಮೊದಲ ಬಾರಿಗೆ...

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನದ ಮಹಾಯುದ್ಧ ಮಂಗಳವಾರ ಮುಕ್ತಾಯವಾಗಿದೆ. ಏಪ್ರಿಲ್​ 18ರಂದು 14 ಕ್ಷೇತ್ರಗಳಿಗೆ ರಾಜ್ಯದ ಮೊದಲ ಹಂತದ ಮತದಾನದ ಶಾಂತಿಯುತವಾಗಿ ನಡೆದಿತ್ತು. ಇಂದು ಉಳಿದ 14 ಕ್ಷೇತ್ರಗಳಿಗೆ ನಡೆದ 2ನೇ ಹಂತದ ಮತದಾನ ಸಂಜೆ ಆರು ಗಂಟೆಗೆ ಮುಕ್ತಾಯವಾಗಿದ್ದು, ಇಲ್ಲಿಯವರೆಗೆ ಶೇ. 67.21 ಮತದಾನವಾಗಿದೆ ಎಂದು ಅಂದಾಜಿಸಲಾಗಿದ್ದು, ರಾಷ್ಟ್ರದ ಮೂರನೇ ಹಂತದಲ್ಲಿ ಶೇ. 63.24 ರಷ್ಟು ಮತದಾನವಾಗಿದೆ. ರಾಜ್ಯದ ಎರಡನೇ ಹಂತದ ಮತದಾನವೂ ಕೂಡ ಮತಯಂತ್ರ ದೋಷ ಸೇರಿದಂತೆ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ, ಪ್ರಲ್ಹಾದ ಜೋಷಿ, ಜಿ.ಎಂ.ಸಿದ್ದೇಶ್ವರ್ ಹಾಗೂ ರಮೇಶ್ ಜಿಗಜಿಣಗಿ ಸೇರಿ ಅನೇಕ ಘಟಾನುಘಟಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತದ ಕದನ ಕಲಿಗಳು
ಮೊದಲ ಹಂತದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸುಮಲತಾ ಅಂಬರೀಷ್, ನಿಖಿಲ್​ ಕುಮಾರಸ್ವಾಮಿ, ಡಿ.ಕೆ.ಸುರೇಶ್​, ಪ್ರತಾಪಸಿಂಹ, ಪ್ರಜ್ವಲ್ ರೇವಣ್ಣ ಮತ್ತಿತರರು ಕಣದಲ್ಲಿದ್ದ ಪ್ರಮುಖ ಅಭ್ಯರ್ಥಿಗಳು.

ರಾಷ್ಟ್ರದ 3ನೇ ಹಂತದ ಮತದಾನವೂ ಶಾಂತಿಯುತ
ರಾಷ್ಟ್ರದ 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಸೇರಿದಂತೆ ಒಟ್ಟು 116 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ರಾಷ್ಟ್ರದ ಮೂರನೇ ಹಂತದ ಚುನಾವಣೆಯು ಕೂಡ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ರಾಷ್ಟ್ರದ 3ನೇ ಹಂತದಲ್ಲಿ ಶೇ. 63.24 ರಷ್ಟು ಮತದಾನವಾಗಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಹಾಗೂ ವಿತ್ತ ಸಚಿವ ಅರುಣ್​ ಜೇಟ್ಲಿ​ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಇಂದು ತಮ್ಮ ಮತದಾನದ ಹಕ್ಕನ್ನೂ ಚಲಾಯಿಸಿದರು.

https://twitter.com/PIB_India/status/1120682525607677952

6:09 PM- ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮಹಾಯುದ್ಧ ಮುಕ್ತಾಯ. 2ನೇ ಹಂತದ 14 ಕ್ಷೇತ್ರಗಳ ಮತದಾನ ಸಂಜೆ 6 ಗಂಟೆಗೆ ಅಂತ್ಯವಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ಪ್ರಲ್ಹಾದ ಜೋಶಿ ಸೇರಿ ಅನೇಕ ದಿಗ್ಗಜರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

6:08 PM- ಮತದಾನ ಮುಗಿಯುತ್ತಿದ್ದಂತೆ ಅಸ್ಸಾಂನ ಧುಬ್ರಿ ಮತಗಟ್ಟೆ ನಂ. 199ರಲ್ಲಿನ ಇವಿಎಂ ಹಾಗೂ ವಿವಿಪ್ಯಾಟ್​ಗಳನ್ನು ಪ್ಯಾಕ್​ ಮಾಡುತ್ತಿರುವ ಚುನಾವಣಾ ಸಿಬ್ಬಂದಿ.

6:05 PM- ಕ್ರಿಕೆಟ್​ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ರಾಜಕೀಯಕ್ಕೆ ಧುಮುಕಿ ಬಿಜೆಪಿ ಪಕ್ಷ ಸೇರಿರುವ ಗೌತಮ್​ ಗಂಭೀರ್​ ಅವರು ಪೂರ್ವ ದೆಹಲಿಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಅನೇಕ ಬೆಂಬಲಿಗರು ಗಂಭೀರ್​ಗೆ ಸಾಥ್​ ನೀಡಿದರು.

5:55 PM- ರಾಷ್ಟ್ರದಲ್ಲಿ ನಡೆಯುತ್ತಿರುವ ಮೂರನೇ ಹಂತದ ಮತದಾನ ಅಂತಿಮ ಹಂತಕ್ಕೆ ಬಂದಿದ್ದು, 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಸೇರಿದಂತೆ ಒಟ್ಟು 116 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5:30 ರವೆರೆಗೆ ಶೇ.61.31 ಮತದಾನವಾಗಿದೆ.

5:54 PM – ಒಡಿಸ್ಸಾದ ಕೆಂದ್ರಪರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈಜಯಂತ್​ ಜಯ್​ ಪಂಡಾ ಅವರು ಒಡಿಸ್ಸಾದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೆ ಭುವನೇಶ್ವರದ ಮತಗಟ್ಟೆ 19ರಲ್ಲಿ ಮತ ಚಲಾಯಿಸಿದರು.

5:49 PM- ರಾಷ್ಟ್ರದಲ್ಲಿ ನಡೆಯುತ್ತಿರುವ ಮೂರನೇ ಹಂತದ ಮತದಾನ ಅಂತಿಮ ಹಂತಕ್ಕೆ ಬಂದಿದೆ. 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಸೇರಿದಂತೆ ಒಟ್ಟು 116 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ಯ 5ರವೆರೆಗೆ ನಡೆದ ಶೇಕಡವಾರು ಮತದಾನದ ಪ್ರಮಾಣ ಹೀಗಿದೆ…

5:41 PM ಗುಜರಾತ್​: ಜುನಾಗಢದ ಗಿರ್​ ಅರಣ್ಯ ಪ್ರದೇಶದಲ್ಲಿ ಒಬ್ಬ ಮತದಾರನಿಗಾಗಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತದಾರ ಭರತ್​ದಾಸ್​ ಬಾಪು ಎಂಬುವರು ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಒಂದು ವೋಟ್​ಗಾಗಿ ಸರ್ಕಾರ ಹಣವನ್ನು ವ್ಯಯಿಸಿದೆ. ನಾನು ಮತ ಚಲಾಯಿಸುವ ಮೂಲಕ ಇಲ್ಲಿ ಶೇ. ನೂರಕ್ಕೆ ನೂರು ಮತದಾನ ಮಾಡಿದಂತಾಗಿದೆ. ಇದೇ ರೀತಿ ಎಲ್ಲೆಡೆ ಮತದಾನವಾಗಬೇಕು. ಎಲ್ಲರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಹೋಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ.

5:23 PM- ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಜಗದೀಶ್​ ಶೆಟ್ಟರ್​ ಅವರು ಹುಬ್ಬಳ್ಳಿ ಧಾರವಾಡದ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

5:12 PM- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆವರೆಗೆ ಶೇ. 56.90 ಮತದಾನವಾಗಿದೆ.
# ಚಿಕ್ಕೋಡಿ-59.43%, ಬೆಳಗಾವಿ-54.55%
# ಬಾಗಲಕೋಟೆ-63.60%, ವಿಜಯಪುರ-43.83%
# ಕಲಬುರಗಿ-49.54%, ರಾಯಚೂರು-49.82%
# ಬೀದರ್-51.21%, ಕೊಪ್ಪಳ-60.66%
# ಬಳ್ಳಾರಿ-60.72%, ಹಾವೇರಿ-ಗದಗ-63.22%
# ಧಾರವಾಡ-57.92%, ಉತ್ತರಕನ್ನಡ-63.46%
# ದಾವಣಗೆರೆ-59.55%, ಶಿವಮೊಗ್ಗ-62.81%

5:00 PM- ಉತ್ತರ ಪ್ರದೇಶದ ಪಿಲಿಭಿತ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್​ ಗಾಂಧಿ ಅವರು ಪಿಲಿಭಿತ್​ನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರ ಬಂದ ಬಳಿಕ ತಮ್ಮ ಬೆಂಬಲಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

5:00 PM- ತಮ್ಮ ಹಕ್ಕನ್ನು ಚಲಾಯಿಸಿದ ಖುಷಿಯಲ್ಲಿ ಕ್ಯಾಮರಾಗೆ ಪೋಸ್​ ನೀಡುತ್ತಿರುವ ಮಂಗಳಮುಖಿಯರು

4:58 PM- ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.51.48 % ರಷ್ಟು ಮತದಾನವಾಗಿದೆ.
# ನವಲಗುಂದ -50.80%
# ಕುಂದಗೋಳ – 51.83%
# ಧಾರವಾಡ – 53.56%
# ಹುಬ್ಬಳ್ಳಿ ಧಾರವಾಡ ಪೂರ್ವ-52.32%
# ಹುಬ್ಬಳ್ಳಿ ಧಾರವಾಡ ಸೆಂಟ್ರಲ್- 50.43%
# ಹುಬ್ಬಳ್ಳಿ ಧಾರವಾಡ ಪಶ್ಚಿಮ- 48.29%
# ಕಲಘಟಗಿ-54.65%
# ಶಿಗ್ಗಾಂವ್- 51.19%

4:57 PM- ದಾವಣಗೆರೆ ಲೋಕಸಭಾ ಕ್ಷೇತ್ರ ಮಧ್ಯಾಹ್ನ 03 ಗಂಟೆಯವರೆಗೆ ಶೇ.53.90 ರಷ್ಟು ಮತದಾನವಾಗಿದೆ.
# ಜಗಳೂರು- 55.07%
# ಹರಪನಹಳ್ಳಿ- 53.60%
# ಹರಿಹರ – 53.65%
# ದಾವಣಗೆರೆ ಉತ್ತರ 50.83%
# ದಾವಣಗೆರೆ ದಕ್ಷಿಣ- 48.02%
# ಮಾಯಕೊಂಡ – 56.81%
# ಚನ್ನಗಿರಿ – 53.68%
# ಹೊನ್ನಾಳಿ-60.95%

4:55 PM-  ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಕ್ಕೆ ಶೇ.45.95 ರಷ್ಟು ಮತದಾನ.
ವಿಧಾನಸಭೆ ಕ್ಷೇತ್ರವಾರು ಮತದಾನ:
# ಸುರಪುರ ಶೇ.47.64
# ಶಹಾಪುರ ಶೇ.46.13
# ಯಾದಗಿರಿ ಶೇ. 45.06
# ರಾಯಚೂರು ಗ್ರಾಮೀಣ ಶೇ. 49.19
# ರಾಯಚೂರು ನಗರ ಶೇ. 43.24
# ಮಾನ್ವಿ ಶೇ. 43.78
# ದೇವದುರ್ಗ ಶೇ. 46.85
# ಲಿಂಗಸೂಗುರು ಶೇ. 45.51

4:47 PM- ಮತದಾನದ ಬಳಿಕ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಅಹ್ಮದ್​ ಪಟೇಲ್​ ಪಕ್ಷ ಹೇಳಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಹೇಳಿದ್ದಾರೆ. ಈ ಬಗ್ಗೆ ಪಕ್ಷ ಬಹು ಬೇಗ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಪಕ್ಷದ ಇತರೆ ಪ್ರಮುಖರೊಂದಿಗೆ ಚರ್ಚಿಸಿ ಕಾಂಗ್ರೆಸ್​ ಮುಖ್ಯಸ್ಥ ರಾಹುಲ್​ ಗಾಂಧಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಗುಜರಾತ್​ನ ಭರೂಚ್ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

4:30 PM- ರಾಜ್ಯದ ಎರಡನೇ ಹಂತದ ಕೊಪ್ಪಳ ಲೋಕಸಭಾ ಕ್ಷೇತ್ರದ ಮತದಾನದ ಶೇಕಡವಾರು ಪ್ರಮಾಣ(ಮಧ್ಯಾಹ್ನ 3ರವರೆಗೆ)

4:30 PM- ಹಸೆಮಣೆ ಏರಿದ ಒಂದೇ ಗಂಟೆಯಲ್ಲಿ ಮತದಾನ ಮಾಡಲು ಆಗಮಿಸಿದ ನವ ವಧು. ಕಲಬುರಗಿಯ ನವವಧು ಪೂಜಾ ಠಾಕೂರ್ ಅವರಿಂದ ಮತದಾನ. ನಗರದ ವಿ.ಜಿ ಮಹಿಳಾ ಕಾಲೇಜಿನ ಮತಗಟ್ಟೆ ಸಂಖ್ಯೆ 166/167 ರಲ್ಲಿ ಮತದಾನ ಮಾಡಿದ ಪೂಜಾ ಠಾಕೂರ್. ಹೈದರಬಾದ್ ನಗರದ ರಜೀತ್ ಎಂಬುವರ ಜತೆ ವಿವಾಹ ನಡೆದಿದೆ.

4:27 PM- ರಾಷ್ಟ್ರದಲ್ಲಿ ನಡೆಯುತ್ತಿರುವ ಮೂರನೇ ಹಂತದ ಮತದಾನ ಅಂತಿಮ ಹಂತಕ್ಕೆ ಬಂದಿದ್ದು, 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಸೇರಿದಂತೆ ಒಟ್ಟು 116 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ಯ 3:30 ರವೆರೆಗೆ ಶೇ.51.15 ಮತದಾನ ವಾಗಿದೆ.

4:23 PM- ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ರಾಮ್​ಪುರ ಕ್ಷೇತ್ರದ ಎಸ್​-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿ ಪಕ್ಷದ ಅಭ್ಯರ್ಥಿ ಅಬ್ದುಲ್ಲಾ ಅಜಂ ಖಾನ್​ ಅವರು ರಾಮ್​ಪುರ ಜಿಲ್ಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

4:19 PM- ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಅಹ್ಮದ್​ ಪಟೇಲ್​ ಅವರು ಗುಜರಾತ್​ನ ಭರೂಚ್ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

4:16 PM- ಮದುವೆಗೂ ಮುನ್ನ ಮಹಾರಾಷ್ಟ್ರದ ಶ್ರದ್ಧಾ ಎಂಬ ವಧು ಪುಣೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ವಧು ಮತದಾನ ನಮ್ಮ ಕರ್ತವ್ಯ. ನನಗೆ ಸ್ವಲ್ಪ ಸುಸ್ತಾಗಿದ್ದರೂ ಕೂಡ ನಾನು ಇಷ್ಟಪಟ್ಟು ಮತ ಚಲಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮತದಾನಕ್ಕೆ ಮಳೆರಾಯನ ಅಡ್ಡಿ
4: 05 PM- ಶಿರಸಿಯಲ್ಲೂ ಆರ್ಭಟಿಸುತ್ತಿರುವ ಗುಡುಗು-ಸಿಡಿಲು ಸಹಿತ ಭಾರಿ ಮಳೆಗೆ ಮರಗಳು ಧರೆಗುರುಳಿವೆ. ಮಿಂಚು-ಸಿಡಿಲಿಗೆ ಹೆದರಿ ಸಾರ್ವಜನಿಕರ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿದೆ. ಮತದಾರರು ಬರದೆ ಮತಗಟ್ಟೆಗಳು ಬಿಕೋ ಎನ್ನುತ್ತಿವೆ. ಮತ ಚಲಾಯಿಸಲು ಬಂದು ವೃದ್ಧರೊಬ್ಬರು ಮಳೆಗೆ ಸಿಕ್ಕಿ ಹಿಂದಿರುಗಲು ಹರಸಾಹಸ ಪಡುತ್ತಿದ್ದಾರೆ. ಸತತ ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

3:59 PM- ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯ ರಾಣಿನಗರ ಪ್ರದೇಶದ ಮತಗಟ್ಟೆ ಸಂಖ್ಯೆ 27,28ರ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕಚ್ಛಾ ಬಾಂಬ್​ ಎಸೆದಿರುವ ಘಟನೆ ನಡೆದಿದೆ.

3.30 PM –  ಡಿಸ್​ಪುರ್​: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅಸ್ಸಾಂನ ಡಿಸ್​ಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಿಗಿ ಭದ್ರತೆಯಲ್ಲಿ ಮತಗಟ್ಟೆಗೆ ಆಗಮಿಸಿದ ಅವರು ಮತ ಹಾಕಿ ತೆರಳಿದರು.

3.30 PM –  ಬೆಳಗಾವಿ: 25 ವರ್ಷಗಳಿಂದ ದುಬೈನಲ್ಲಿ ವೈದ್ಯರಾಗಿರುವ ಡಾ. ಬಸವರಾಜ ಹೊಂಗಲ, ಡಾ. ಶೈಲಜಾ ಹೊಂಗಲ ದಂಪತಿ ಮೊದಲ ಬಾರಿಗೆ ದುಬೈನಿಂದ ಆಗಮಿಸಿ ಬೆಳಗಾವಿ ರಾಮತೀರ್ಥ ನಗರದ ಮತಗಟ್ಟೆ ಸಂಖ್ಯೆ 62ರಲ್ಲಿ ಮತಚಲಾಯಿಸಿದರು. ರಾಷ್ಟ್ರೀಯ ಅಭಿಮಾನ ಹಾಗೂ ಬಲಿಷ್ಠ ಸರ್ಕಾರಕ್ಕಾಗಿ ತಾವು ಮತ ಚಲಾಯಿಸಿದ್ದಾಗಿ ಹೇಳಿದರು.

3.00 PM – ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಮತಗಟ್ಟೆ ಸಂಖ್ಯೆ 25ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

2.57 PM – ನವದೆಹಲಿ: ಮತಗಟ್ಟೆಯ ಭದ್ರತೆಗಾಗಿ ನಿಯೋಜಿತರಾಗಿದ್ದ ಸಿಆರ್​ಪಿಎಫ್​ ಸಿಬ್ಬಂದಿಯೊಬ್ಬರು ಮತದಾರೊಬ್ಬರ ಮಗುವನ್ನು ಕೆಲ ಕಾಲ ನೋಡಿಕೊಳ್ಳುವ ಮೂಲಕ ಮಹಿಳೆಗೆ ಮತಚಲಾಯಿಸಲು ನೆರವಾದರು.

2.55 PM – ಬಾಗಲಕೋಟೆ: ನಗರದ ಪಂಕಾ ಮಸೀದಿ ಬಳಿಯ ಮತಗಟ್ಟೆ 2 ರ ಬಳಿ ಮತಚಲಾಯಿಸುವ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು.

2.45 PM – ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅನಂತನಾಗ್​ ಜಿಲ್ಲೆಯ ಬಿಜ್​ಬೆಹ್ರಾ ಪ್ರದೇಶದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.

2.30 PM – ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಮೂರನೇ ಹಂತದ ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಚಲಾವಣೆಯಾದ ಮತದಾನ ಪ್ರಮಾಣ ಹೀಗಿದೆ.

2.20 PM – ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಐರಸಂಗ ಗ್ರಾಮದ ಮತಗಟ್ಟೆ 32ರಲ್ಲಿ ಮತದಾನ ಮಾಡಲು ಆಗಮಿಸಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ಧಾರೆ. ಮಹಾದೇವಿ ಮಹಾದೇವಪ್ಪ ಸಿಂದಖೇಡ್​ (55) ಮೃತ ಮಹಿಳೆ. ಮತದಾನ ಮುಗಿಸಿ ಮತಗಟ್ಟೆಯಿಂದ ಹೊರಬಂದ ಮಹಿಳೆ ಕುಸಿದು ಬಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಹಾದೇವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

2.10 PM – ಬೆಂಗಳೂರು: ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮಧ್ಯಾಹ್ನ 01 ಗಂಟೆಯವರೆಗೆ ಚಲಾಯಿಸಲಾಗಿರುವ ಮತದಾನದ ಪ್ರಮಾಣ.

2.10 PM – ಧಾರವಾಡ: ನಗರದ ಬೋವಿ ಗಲ್ಲಿ ನಿವಾಸಿ ಮೀನಾಜ್ ಸಯ್ಯದ್ ಅವರು ಮದುವೆ ಸಂಭ್ರಮದ ನಡೆವೆಯೂ ಮತದಾನ ಮಾಡಿದರು. ವಿವಾಹ ಆರತಕ್ಷತೆಗೂ ಮುನ್ನ ವಧು ಮೀನಾಜ್​ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮಾಳಾಪುರದ ಪಠಾಣ್​ ಹಾಲ್​ನಲ್ಲಿ ಮದುವೆ ನಡೆಯಲಿದೆ.

2.06 PM –  ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಮತ ಚಲಾಯಿಸಿದರು.

2.05 PM – ಬೀದರ್: ಬೀದರ್​ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಒಟ್ಟು ಶೇ.33.39 ರಷ್ಟು ಮತದಾನವಾಗಿದೆ. ಎಂಟು ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ: ಚಿಂಚೋಳಿಯಲ್ಲಿ ಶೇ.27.21, ಆಳಂದದಲ್ಲಿ ಶೇ. 32.15, ಬಸವಕಲ್ಯಾಣ‌ದಲ್ಲಿ ಶೇ. 36.12, ಹುಮನಾಬಾದ್​ನಲ್ಲಿ ಶೇ. 34.26, ಬೀದರ್​ ದಕ್ಷಿಣದಲ್ಲಿ ಶೇ. 31.71, ಬೀದರ್​ನಲ್ಲಿ ಶೇ. 34.92, ಭಾಲ್ಕಿಯಲ್ಲಿ ಶೇ.35.22, ಔರಾದ್​ನಲ್ಲಿ ಶೇ.34.47 ಮತದಾನವಾಗಿದೆ.

1.59 PM – ಬೆಳಗಾವಿ: ಬೆಳಗಾವಿ ಲೋಕಸಭೆ ‌ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 29. 30 ರಷ್ಟು ಮತದಾನವಾಗಿದೆ.

1.59 PM – ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ. 38 ರಷ್ಟು ಮತದಾನವಾಗಿದೆ.

1.56 PM –  ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 37.39 ಮತದಾನವಾಗಿದೆ.

1.54 PM – ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ರವರೆಗೆ ಶೇ.33.14 ಮತದಾನವಾಗಿದೆ.

1.52 PM – ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.38.09 ಮತದಾನವಾಗಿದೆ.

1.42 PM – ಉತ್ತರ ಕನ್ನಡ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 39.87 ಮತದಾನವಾಗಿದೆ.


1.42 PM –
ಬೆಳಗಾವಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕನವಿನಟ್ಟಿ ಗ್ರಾಮದ ಮತಗಟ್ಟೆ 99ರಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್​ ಭೀಮಪ್ಪಾ ಸನದಿ (28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ಮೂರು ದಿನಗಳಲ್ಲಿ ಅವರ ವಿವಾಹ ನಿಶ್ಚಯವಾಗಿತ್ತು.

1.36 PM – ಶೀಲಾ ದೀಕ್ಷಿತ್​, ಅಜಯ್​ ಮಾಕೆನ್​ ನಾಮಪತ್ರ ಸಲ್ಲಿಕೆ
ದೆಹಲಿಯ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರ ಹಾಗೂ ನವದೆಹಲಿ ಲೋಕಸಭಾ ಕ್ಷೇತ್ರದಿಮದ ಆಯ್ಕೆ ಬಯಸಿ ಕಾಂಗ್ರೆಸ್​ನ ಶೀಲಾ ದೀಕ್ಷಿತ್​ ಮತ್ತು ಅಜಯ್​ ಮಾಕೆನ್​ ಮಂಗಳವಾರ ನಾಮಪತ್ರ ಸಲ್ಲಿಸಿದರು.

1.28 PM –  ಬಿಜೆಪಿಯ ಹಿರಿಯ ಮುಖಂಡ ಮಾಜಿ ಉಪಪ್ರಧಾನಿ ಲಾಲ್​ಕೃಷ್ಣ ಆಡ್ವಾಣಿ ಅಹಮದಾಬಾದ್​ನ ಶಹಾಪುರ್​ ಹಿಂದಿ ಸ್ಕೂಲ್​ನಲ್ಲಿ ತಮ್ಮ ಹಕ್ಕು ಚಲಾಯಿಸಿದರು. 

1.18 PM – ಭೋಪಾಲ್​ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್​ ಅವರಿಂದ ಭರ್ಜರಿ ರೋಡ್​ ಶೋ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿ.

1.10 PM – ಬೆಳಗಾವಿ: ಬೆಳಗಾವಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕನವಿನಹಟ್ಟಿ ಗ್ರಾಮದ ಮತಗಟ್ಟೆ 99ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಸಹಾಯಕ ಸುರೇಶ ಭೀಮಪ್ಪಾ ಸನದಿ(28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೇ ತಿಂಗಳ 26ರಂದು ಇವರ ಮದುವೆ ನಿಶ್ಚಯವಾಗಿತ್ತು.

12.45 PM – ಕಣ್ಣೂರು: ಕಣ್ಣೂರು ಲೋಕಸಭೆ ಕ್ಷೇತ್ರದ ಮೇಯಿಲ್ ಕಂದಾಕ್ಕೈನಲ್ಲಿನ ಮತಗಟ್ಟೆಯಲ್ಲಿ ವಿವಿಪ್ಯಾಟ್​ ಯಂತ್ರದೊಳಗೆ ಸಣ್ಣ ಹಾವು ಪತ್ತೆಯಾಗಿದೆ. ಹಾವು ಪತ್ತೆಯಾದ ಹಿನ್ನೆಲೆಯಲ್ಲಿ ಮತದಾರರು ಮತ್ತು ಚುನಾವಣೆ ಸಿಬ್ಬಂದಿ ಆತಂಕಕ್ಕೊಳಗಾದರು. ಇದರಿಂದಾಗಿ ಕೆಲಕಾಲ ಮತದಾನವನ್ನು ತಡೆಹಿಡಿಯಲಾಗಿತ್ತು. ಹಾವನ್ನು ಹಿಡಿದು ಹೊರಬಿಟ್ಟ ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.

12.45 PM – ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 4.79ರಷ್ಟು ಮತದಾನವಾಗಿವೆ.

12.43 PM – ನವದೆಹಲಿ: 3ನೇ ಹಂತದ ಮತದಾನದಲ್ಲಿ ಮಧ್ಯಾಹ್ನ 11 ಗಂಟೆಯವರೆಗೆ ಶೇ. 23.55ರಷ್ಟು ಮತದಾನವಾಗಿದೆ.

12.35 PM –  ಹುಬ್ಬಳ್ಳಿ: ಗದಗ ರಸ್ತೆಯ ರೈಲ್ವೆ ಪ್ರೌಢ ಶಾಲೆಗೆ ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ಕುಟುಂಬ ಸಮೇತರಾಗಿ ತೆರಳಿ ಮತ ಚಲಾಯಿಸಿದರು.

12.24 PM –  ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ಇಂದಿರಾ ನಗರದ ಮತಗಟ್ಟೆ ಸಂಖ್ಯೆ 217ರಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಮತದಾನ ಮಾಡಲು ನಾ ಮುಂದು ತಾ ಮುಂದು ಎಂದು ಗಲಾಟೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

12.20 PM –  ಬೆಂಗಳೂರು: ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಚಲಾಯಿಸಲಾಗಿರುವ ಮತದಾನದ ಪ್ರಮಾಣ.

12.11 PM – ಹಾವೇರಿ: ಈ ಬಾರಿ ಲೋಕಸಭಾ ಚುನಾವಣೆಯ ಮತ ಜಾಗೃತಿ ಅಭಿಯಾನದ ಹಾವೇರಿ ಕ್ಷೇತ್ರದ ರಾಯಭಾರಿ ಜನಪದ ಗಾಯಕ, ಕುರಿಗಾಹಿ ಹನುಮಂತ ಲಮಾಣಿ ಇಂದು ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ಮತದಾನ ಮಾಡಿದರು.

12.11 PM – ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಿ ಹೋಬಳಿಯ ಕೃಷ್ಣಾ ನದಿ ನಡುಗಡ್ಡೆ ನೀಲಕಂಠರಾಯನ ಗಡ್ಡಿ ಗ್ರಾಮದ 257 ಮತದಾರರಿಂದ ಮತಚಲಾವಣೆ. ಮಳೆಗಾಲದಲ್ಲಿ ಗ್ರಾಮದ ಎರಡು ಭಾಗದಲ್ಲಿ ನೀರು ಹರಿಯುವುದರಿಂದ ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಡುತ್ತಾರೆ. ಇವರಿಂದ ಮತದಾನ ಮಾಡಿಸಲು ವಿಶೇಷ ಕಾಳಜಿ ವಹಿಸಿದ ಚುನಾವಣಾ ಸಿಬ್ಬಂದಿ ಟ್ರ್ಯಾಕ್ಟರ್​ ಮೂಲಕ ಮತದಾರರನ್ನು ಕರೆತಂದು ಮತದಾನ ಮಾಡಿಸಿದ್ದಾರೆ.

12.11 PM – ದೆಹಲಿ: ಬಾಕ್ಸರ್​ ವಿಜೇಂದರ್​ ಸಿಂಗ್​ ಕಾಂಗ್ರೆಸ್​ನಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಇವರು ಕಣಕ್ಕಿಳಿಯಲಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ. ಜನಸೇವೆ ಮಾಡಲು ಕಾಂಗ್ರೆಸ್​ ನನಗೆ ಅವಕಾಶ ಕೊಡುತ್ತಿದೆ. ಆಟೋ ಚಾಲಕರಾಗಿದ್ದವರ ಪುತ್ರ ನನಗೆ ಬಡವರ ಕಷ್ಟಗಳ ಅರಿವಿದೆ. ಅವರ ಸಮಸ್ಯೆ ಪರಿಹರಿಸುವ ಮೂಲಕ ಜನರನ್ನು ತಲುಪಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

https://twitter.com/ANI/status/1120575951182503938

12.10 PM – ದೆಹಲಿ: ಬಾಲಿವುಡ್​ ಹಿರಿಯ ನಟ ಸನ್ನಿ ಡಿಯೋಲ್​ ದೆಹಲಿಯಲ್ಲಿ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರ ಸಚಿವರಾದ ಪಿಯೂಷ್​ ಗೋಯಲ್​ ಮತ್ತು ನಿರ್ಮಲಾ ಸೀತಾರಾಮನ್​ ಅವರು ಡಿಯೋಲ್​ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

11.48 AM – ಬಳ್ಳಾರಿ: ಮೊದಲ ಬಾರಿಗೆ ಮತ ಚಲಾಯಿಸಿದ ನಂತರ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಪುತ್ರ ಕಿರಿಟಿ. ಮತ ಚಲಾಯಿಸಿದ ನಂತರ ಮಾತನಾಡಿದ ಕಿರಿಟಿ ‘ಮತದಾನ ಪ್ರತಿಯೊಬ್ಬರ ಹಕ್ಕು, ನಾನು ಲಂಡನ್​ನಿಂದ ಬಂದು ಮತದಾನ ಮಾಡಿದ್ದೇನೆ. ಮೊದಲ ಬಾರಿಗೆ ಹಕ್ಕು ಚಲಾಯಿಸಿರುವುದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.

11.48 AM – ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ118ರಲ್ಲಿ ಎರಡೂ ಕೈಗಳಿಲ್ಲದ ಕುಮಾರಿ ಲಕ್ಷ್ಮೀದೇವಿ ಕಾಲಿನಿಂದ ಮತ ಚಲಾಯಿಸಿದರು.

11.48 AM – ಹಾವೇರಿ: ಹಾವೇರಿ ತಾಲೂಕಿನ ಅಗಡಿಯಲ್ಲಿ ಲಘು ಲಾಠಿ ಪ್ರಹಾರ. ಮತಗಟ್ಟೆ ಬಳಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಲಾಠಿ ಪ್ರಹಾರ ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

11.48 AM – ತಿರುವನಂತಪುರಂ: ಕೇರಳದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 20.5ರಷ್ಟು ಮತದಾನವಾಗಿದೆ.

11.45 AM – ಕಲಬುರಗಿ: ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯ ಮತಗಟ್ಟೆ ಸಂಖ್ಯೆ 119ರಲ್ಲಿ ಮತಚಲಾಯಿಸಿದರು.

11.40 AM – ಕೊಪ್ಪಳ: ಕುಷ್ಟಗಿ ತಾಲೂಕಿನ ಜುಮಲಾಪುರದ ಬೂತ್ ನಂಬರ್ 143ರಲ್ಲಿ ಮತದಾನ ಮಾಡಿದವರ ಬಲಗೈ ತೋರು ಬೆರಳಿಗೆ ಶಾಯಿ ಹಾಕುವ ಮೂಲಕ ಚುನಾವಣೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಚುನಾವಣಾ ಆಯೋಗದ ನಿಯಮದಂತೆ ಎಡಗೈ ತೋರುಬೆರಳಿಗೆ ಶಾಯಿ ಹಾಕಬೇಕು.

11.40 AM – ಬಳ್ಳಾರಿ: ಸಿರಗುಪ್ಪ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಕೂಡ್ಲಿಗಿ ತಾಲೂಕಿನ ಎನ್. ತಿಪ್ಪೇಸ್ವಾಮಿ ಎಂಬ ಶಿಕ್ಷಕ ಕಡಿಮೆ ರಕ್ತದೊತ್ತಡ ದಿಂದ ಮೃತಪಟ್ಟಿದ್ದಾರೆ. ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

11.32 AM –  ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 21.71 ರಷ್ಟು ಮತದಾನವಾಗಿದೆ.

11.32 AM –  ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.20.07 ರಷ್ಟು ಮತದಾನ ನಡೆದಿದೆ.

11.32 AM –  ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 20.33 ಮತದಾನವಾಗಿದೆ.

11.28 AM –  ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 18.99 ಮತದಾನವಾಗಿದೆ.

11.24 AM – ಉತ್ತರ ಕನ್ನಡ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 22.22 ಮತದಾನವಾಗಿದೆ.

11.20 AM – ಧಾರವಾಡ: ಧಾರವಾಡದಲ್ಲಿ ಒಂದು ದಿನದ ಮಗುವಿನೊಂದಿಗೆ ಬಂದು ಮತದಾನ ಮಾಡಿದ ಬಾಣಂತಿ. ಪರ್ವತಿಕರ ಅವರು ನಿನ್ನೆಯಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದರು.

11.18 AM – ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ 21.03 ರಷ್ಟು ಮತದಾನವಾಗಿದೆ.

11.15 AM – ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 10.39 ರಷ್ಟು ಮತದಾನವಾಗಿದೆ.

11.10 AM – ಬೆಂಗಳೂರು: ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಆಗಿರುವ ಮತದಾನದ ಪ್ರಮಾಣ

11.10 AM – ಅಹಮದ್​ನಗರ: ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ರಾಲೇಗಾವ್​ ಸಿದ್ಧಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ ಚಲಾಯಿಸಿದರು.

11.00 AM – ಧಾರವಾಡ: ನಗರದ ಕರ್ನಾಟಕ ವ್ಯಾಯಾಮ ಶಾಲೆ ಬಳಿಯ ನಿವಾಸಿ ಕೃಷ್ಣಮ್ಮ ಶೆಟ್ಟಿ (85) ಎಂಬ ವೃದ್ಧೆಯೊಬ್ಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದರೂ ಅವರು ಇಂದು ಆಂಬ್ಯುಲೆನ್ಸ್​ನಲ್ಲಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.

10.47 AM – ನವದೆಹಲಿ: ಮೊದಲ ಹಂತದ ಮತದಾನದ ವೇಳೆ ಮತಚಲಾಯಿಸಲು ಆಗಮಿಸದ ಮಾಜಿ ಸಂಸದೆ ರಮ್ಯಾ ಅವರು ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

10.38 AM – ಧಾರವಾಡ: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ್​ ಅವರು ಪತ್ನಿ ಲಲಿತಾ ಸಂಕೇಶ್ವರ ಜತೆ ಹುಬ್ಬಳ್ಳಿಯಲ್ಲಿ ಮತದಾನ ಮಾಡಿದರು.

10.33 AM – ಶಿರಸಿ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ, ಪತ್ನಿ ರೂಪಾ ಶಿರಸಿಯ ವಿವೇಕಾನಂದನಗರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

10.33 AM –  ಕೋಲ್ಕತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಡೋಮ್ಕಲ್​ನಲ್ಲಿ ನಾಡ ಬಾಂಬ್​ ಸ್ಫೋಟದಲ್ಲಿ ಮೂವರು ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ಗಾಯಗೊಂಡಿದ್ದಾರೆ.

10.30 AM – ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ನ ರೈಸನ್​ನ ಮತಗಟ್ಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರು ಮತಚಲಾಯಿಸಿದರು.

10.17 AM – ನವದೆಹಲಿ: ರಾಜ್ಯದ 14 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 7.42 ಮತದಾನವಾಗಿದೆ.

10.17 AM – ಬೀದರ್​: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಲಿಯಾಬಾದ್ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ. ಜಿಲ್ಲಾ ಪಂಚಾಯತಿ ಸಿಇಓ ಮಹಾತೇಶ ಬಿಳಗಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮನವೊಲಿಕೆಗೆ ಒಪ್ಪದ ಗ್ರಾಮಸ್ಥರು ಮತದಾನ ಮಾಡದಿರಲು ನಿರ್ಧಾರಿಸಿದ್ದಾರೆ.

10.13 AM – ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಸೂಕ್ಷ್ಮ ಲೋಕಸಭೆ ಕ್ಷೇತ್ರ ಎಂದು ಗುರುತಿಸಲ್ಪಟ್ಟಿರುವ ಅನಂತನಾಗ್​ ಲೋಕಸಭೆ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಅನಂತ್​ನಾಗ್​ ಕ್ಷೇತ್ರದಲ್ಲಿ ಒಟ್ಟು 3 ಹಂತದಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಆದರೆ ಮತದಾರರು ಮತಚಲಾಯಿಸಲು ನಿರುತ್ಸಾಹ ತೋರುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳು ಜನರಿಲ್ಲದೆ ಭಣಗುಟ್ಟುತ್ತಿವೆ.

10.03 AM – ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ್​ ಅವರು ದೇವದುರ್ಗ ತಾಲೂಕಿನ ಅರಕೆರಾ ಗ್ರಾಮದ ಮತಗಟ್ಟೆ ಸಂಖ್ಯೆ 187ರಲ್ಲಿ ಮತ ಚಲಾಯಿಸಿದರು.

10.01 AM – ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 6.83ರಷ್ಟು ಮತದಾನವಾಗಿದೆ.

9.59 AM – ಕಲಬುರಗಿ: ಕಲಬುರಗಿ ಗ್ರಾಮಾಂತರ ಮತಗಟ್ಟೆ 197ರಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಮತದಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಬೆಳಗ್ಗೆ ಒಟ್ಟು 13 ಮತದಾರರು ಮತ ಚಲಾಯಿಸಿದ್ದರು. ಆದರೆ ಮತಯಂತ್ರ ಕೇವಲ ಒಂದು ಮತ ಚಲಾವಣೆಯಾಗಿದೆ ಎಂದು ತೋರಿಸುತ್ತಿತ್ತು. ಆ ನಂತರ ಅಧಿಕಾರಿಗಳು ಎಲ್ಲಾ 13 ಮತದಾರರಿಗೆ ಮರು ಮತದಾನಕ್ಕೆ ಅವಕಾಶ ಕಲ್ಪಿಸಿದರು.

9.52 AM – ಬೆಳಗಾವಿ: ಜಿಲ್ಲೆಯ ಅಂಕಲಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮತಗಟ್ಟೆ ಸಂಖ್ಯೆ 79 ರಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮತ್ತು ಅವರ ಪತ್ನಿ ಮತ ಚಲಾಯಿಸಿದರು.

9.48 AM – ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 8.62 ರಷ್ಟು ಮತದಾನವಾಗಿದೆ.

9.45 AM – ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.6.48 ರಷ್ಟು ಮತದಾನವಾಗಿದೆ.

9.38 AM – ನವದೆಹಲಿ: ಬೆಳಗ್ಗೆ 9 ಗಂಟೆಯವರೆಗೆ ದೇಶದ 117 ಲೋಕಸಭೆ ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ.

9.37 AM – ಧಾರವಾಡ: ಧಾರವಾಡ ನಗರದ ಮತಗಟ್ಟೆ ಸಂಖ್ಯೆ 75ರಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಪತ್ನಿ ಶಿವಲೀಲಾ ಹಾಗೂ ಮಕ್ಕಳೊಂದಿಗೆ ಆಗಮಿಸಿ ಮತ ಚಲಾಯಿಸಿದರು.

9.34 AM – ದಾವಣಗೆರೆ: ದಾವಣಗೆರೆ ಜಿಲ್ಲೆ ಬೋರಗೊಂಡನಹಳ್ಳಿಯಲ್ಲಿ ಮತದಾನ ಬಹಿಷ್ಕಾರ. ಮಾಯಕೊಂಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಐಗೂರು ಗ್ರಾಮ ಪಂಚಾಯತಿಯ ಬೋರಗೊಂಡನಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.

9.32 AM – ಅಹಮದಾಬಾದ್​: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಅವರ ಪತ್ನಿ ಸೋನಾಲ್​ ಷಾ ಅವರು ಅಹಮದಾಬಾದ್​ನ ನಾರಾಣ್​ಪುರ ಉಪವಲಯದಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

9.31 AM – ಧಾರವಾಡ: ಹುಬ್ಬಳ್ಳಿ- ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 8.17 ರಷ್ಟು ಮತದಾನವಾಗಿದೆ.  ಧಾರವಾಡ ಜಿಲ್ಲೆಯ ಏಳು ಹಾವೇರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಕ್ಷೇತ್ರ.

9.30 AM – ಉತ್ತರ ಕನ್ನಡ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 8.47 ರಷ್ಟು ಮತದಾನವಾಗಿದೆ. ಖಾನಾಪುರದಲ್ಲಿ ಶೇ. 7.6, ಕಿತ್ತೂರಿನಲ್ಲಿ ಶೇ. 4.6, ಹಳಿಯಾಳದಲ್ಲಿ ಶೇ. 7.6, ಕಾರವಾರದಲ್ಲಿ ಶೇ. 8.7, ಕುಮಟಾದಲ್ಲಿ ಶೇ. 9.9, ಭಟ್ಕಳದಲ್ಲಿ ಶೇ. 9, ಶಿರಸಿಯಲ್ಲಿ ಶೇ. 12.2, ಯಲ್ಲಾಪುರದಲ್ಲಿ ಶೇ. 7.6 ರಷ್ಟು ಮತದಾನವಾಗಿದೆ.

9.25 AM – ವಿಜಯಪುರ: ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 2.20 ಮತದಾನವಾಗಿದೆ.

9.24 AM – ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ.7ರಷ್ಟು ಮತದಾನವಾಗಿದೆ.

9.22 AM – ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊಸಯಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಮತದಾನ ಚಲಾಯಿಸಿದರು.

9.19 AM – ಕೊಪ್ಪಳ: ಭೂತಾನ್​ನಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್​ ಆಗಿರುವ ಅನುಪಮಾ ಮಸಾಲಿ ಅವರು ಮತದಾನಕ್ಕಾಗಿ ತವರಿಗೆ ಆಗಮಿಸಿದ್ದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮತಚಲಾಯಿಸಿದರು.

9.15 AM – ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶದ 10, ಬಿಹಾರ್​ನ 5, ಅಸ್ಸಾಂನ 4, ಗುಜರಾತ್​ನ 26, ತ್ರಿಪುರಾದ 1, ದಮನ್​ ಮತ್ತು ಡಿಯುನ 1, ದಾದ್ರ​ ಮತ್ತು ನಗರ್​ ಹವೇಲಿಯ 1, ಪಶ್ಚಿಮ ಬಂಗಾಳದ 5, ಮಹಾರಾಷ್ಟ್ರದ 14, ಒಡಿಶಾದ 6, ಗೋವಾದ 2, ಕರ್ನಾಟಕದ 14, ಕೇರಳದ 20 ಮತ್ತು ಛತ್ತೀಸ್​ಗಢದ 11 ಕ್ಷೇತ್ರಗಳು ಸೇರಿ ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲೆಡೆ ಶಾಂತಿಯುವಾಗಿ ಮತದಾನವಾಗುತ್ತಿದೆ.

9.09 AM – ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಪತ್ನಿ ಕಾಂಗ್ರೆಸ್ ಜಿಪಂ ಸದಸ್ಯೆ ಸುಶೀಲಮ್ಮ ಜತೆ ಮತ ಚಲಾಯಿಸಿದರು.

9.08 AM – ರಾಜ್​ಕೋಟ್​: ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಮತ್ತು ಅವರ ಪತ್ನಿ ಅಂಜಲಿ ಅವರು ರಾಜ್​ಕೋಟ್​ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

9.07 AM – ಬೀದರ್​: ಜಿಲ್ಲೆಯ ಔರಾದ್​ ತಾಲೂಕಿನ ಬೋಂಥಿ ತಾಂಡಾದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 31ರಲ್ಲಿ ಶಾಸಕ ಪ್ರಭು ಚವ್ಹಾಣ್ ಹಾಗೂ ಅವರ ಪತ್ನಿ, ಪುತ್ರನ ಜತೆ ಆಗಮಿಸಿ ಮತ ಚಲಾಯಿಸಿದರು.

9.05 AM – ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್​ ಅವರು ಮತದಾನಕ್ಕೂ ಮುನ್ನ ರುದ್ರಮುನಿ ಸ್ವಾಮಿ‌ಜಿ ಮಠ, ಮಲ್ಲಿಕಾರ್ಜುನ ದೇವಸ್ಥಾನ, ಹಾಗೂ ಮಾವ ದಿವಂಗತ ಎಸ್.ಆರ್.ಕಾಶಪ್ಪನವರ್ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

9.02 AM – ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದುಗುಂಪಾ ಗ್ರಾಮದಲ್ಲಿ ಮಲ್ಲಯ್ಯ ಎಂಬ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಮತಗಟ್ಟೆಯೊಳಗೆ ಮೊಬೈಲ್​ ನಿಷೇಧವಿದ್ದರೂ ಚುನಾವಣಾ ಸಿಬ್ಬಂದಿ ನಿರ್ಲಕ್ಷ್ಯದಿಂದ ಮತದಾರ ಫೋಟೋ ಕ್ಲಿಕ್ಕಿಸಿದ್ದಾನೆ.

8.59 AM – ಅಹಮದಾಬಾದ್​: ಭಯೋತ್ಪಾದಕರ ಆಯುಧ ಐಇಡಿ ಆಧರೆ, ಪ್ರಜಾಪ್ರಭುತ್ವದ ಶಕ್ತಿ ವೋಟರ್​ ಐಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತಚಲಾಯಿಸಿದ ನಂತರ ತಿಳಿಸಿದರು.

8.47 AM – ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ಬೆಳಗಿನ ಜಾವದಿಂದಲೇ ಮತಗಟ್ಟೆಗೆ ಆಗಮಿಸಿ ಹುರುಪಿನಿಂದ ಮತದಾನ ಮಾಡುತ್ತಿದ್ದಾರೆ. ಕಲಬುರಗಿ ನಗರದ ಐವಾನ್ ಶಾಹಿಯಲ್ಲಿನ ಸಮಾಜ ಸೇವಾ ಶಾಲೆಯಲ್ಲಿ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್​ ಪತ್ನಿ ಸಮೇತವಾಗಿ ಆಗಮಿಸಿ ಮತದಾನ ಮಾಡಿದರು. ಈಗಿನ ಮಾಹಿತಿಯಂತೆ ಶೇ. 8 ರಷ್ಟು ಮತದಾನವಾಗಿದೆ.

8.41 AM – ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಲಿಂಗಸುಗೂರು ತಾಲೂಕಿನ ಗುರುಗುಂಟಾದಲ್ಲಿ ಮತ ಚಲಾಯಿಸಿದರು.

8.31 AM – ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಹಮದಾಬಾದ್​ನ ರಾಣಿಪ್​ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

8.21 AM – ಹುಬ್ಬಳ್ಳಿ: ಹುಬ್ಬಳ್ಳಿಯ ಮಡಿವಾಳ ನಗರದ ನಿವಾಸಿ ಸಿ.ಎನ್​. ನಾಯಕ ಅವರು ತಮ್ಮ ತಾಯಿಯ ಸಾವಿನ ನೋವಿನಲ್ಲೂ ಮತಚಲಾಯಿಸಿದ್ದಾರೆ. ಭವಾನಿ ನಗರದ ಮತಗಟ್ಟೆ ಸಂಖ್ಯೆ 110ರಲ್ಲಿ ಸಿ.ಎನ್​. ನಾಯಕ ಮತ್ತು ಅವರ ಪತ್ನಿ ಇಂದಿರಾ ನಾಯಕ ಮತ ಚಲಾಯಿಸಿದರು. ಇವರ ತಾಯಿ ವಿಮಲಾ ನಾಯಕ (89) ಮೃತಪಟ್ಟಿದ್ದರು.

8.21 AM – ಬೆಳಗಾವಿ: ವಿಶ್ವೇಶ್ವರಯ್ಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸದ ಸುರೇಶ್ ಅಂಗಡಿ ತಮ್ಮ ಕುಟುಂಬದೊಂದಿಗೆ ಬಂದು ಮತದಾನ ಮಾಡಿ ಮತಹಬ್ಬದ ಸಂಭ್ರಮ ಆಸ್ವಾದಿಸಿದರು. ನನಗೆ ಜನರ ಆಶೀರ್ವಾದವಿದೆ. ಮೋದಿ ಬಲವಿದೆ‌. ಈ ಬಾರಿ ಗೆಲುವು ನನ್ನದೇ‌‌..‌ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ‌.

8.16 AM – ಬೆಳಗಾವಿ: ಬೆಳಗಾವಿಯ ಹುಕ್ಕೇರಿಯ ಮತಗಟ್ಟೆಯೊಂದರಲ್ಲಿ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿದರು. 

8.08 AM – ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಶಿರಮಗೊಂಡನಹಳ್ಳಿ ಮತಗಟ್ಟೆಯಲ್ಲಿ ಮತಯಂತ್ರಗಳಲ್ಲಿ ದೋಷ. ಮತದಾನ ವಿಳಂಬ

8.01 AM – ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಾಂಧಿನಗರದ ತಾಯಿಯ ಮನೆಗೆ ತೆರಳಿ ಆಶೀರ್ವಾದ ಪಡೆದರು. ನಂತರ ಅವರು ಅಹಮದಾಬಾದ್​ಗೆ ತೆರಳಿ ಮತದಾನ ಮಾಡಲಿದ್ದಾರೆ.

7.58 AM – ವಿಜಯಪುರ: ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಮತಗಟ್ಟೆ ಹೊರಭಾಗದಲ್ಲಿ ಐವರು ಮುತ್ತೈದೆಯರು ಬೆಳಗ್ಗೆ ಆರತಿ ಬೆಳಗಿ ನಂತರ ಮತ ಚಲಾಯಿಸಿದರು. ಈ ಭಾಗದಲ್ಲಿ ಮುತ್ತೈದೆಯರು, ಹಾಲುಮತಸ್ಥರು ಮೊದಲ ಮತ ಚಲಾಯಿಸಿದರೆ ಒಳಿತಾಗಲಿದೆ ಎಂಬ ಭಾವ ಎಲ್ಲರಲ್ಲೂ ಮನೆ ಮಾಡಿದೆ.

7.56 AM – ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಳಕಲ್​ ನಗರದ ಮತಗಟ್ಟೆ ಸಂಖ್ಯೆ 162ರಲ್ಲಿ ನಿಯೋಜಿತರಾಗಿದ್ದ ಚುನಾವಣಾ ಸಿಬ್ಬಂದಿ ಶ್ರೀನಾಥ್​ ಡವಳಗಿ ಎಂಬುವವರು ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

7.54 AM – ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರೇಕಾನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದಿರುವುದಕ್ಎಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮತಗಟ್ಟೆಗೆ ಬಂದಿಲ್ಲ. ಗ್ರಾಮಸ್ಥರು ಮತದಾನದಿಂದ ದೂರ‌‌ ಉಳಿಯುವ ಬಗ್ಗೆ ಚರ್ಚಿಸುತ್ತಿದ್ದಾರೆ.

7.51 AM – ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮತಗಟ್ಟೆ ನಂಬರ್ 261 ರಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದು ಚುನಾವಣಾ ಸಿಬ್ಬಂದಿ ಮತಯಂತ್ರ ಸರಿಪಡಿಸುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಸಿಲೇರುವ ಮುನ್ನ ಮತ ಚಲಾಯಿಸಲೆಂದು ಮತದಾರರು ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ.

7.47 AM – ಶಿವಮೊಗ್ಗ​: ಶಿಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಶಿಕಾರಿಪುರ ತಾಪಂ ಕಾರ್ಯಾಲಯದ ಬಳಿ ಮತಗಟ್ಟೆ ಸಂಖ್ಯೆ 134ರಲ್ಲಿ ಮತ ಚಲಾಯಿಸಿದರು.

7.47 AM – ಅಹಮದಾಬಾದ್​: ಅಹಮದಾಬಾದ್​ನ ರಾಣಿಪ್​ನ ನಿಶಾನ್​ ಹೈಯರ್​ ಸೆಕೆಂಡರಿ ಸ್ಕೂಲ್​ನ ಮತಗಟ್ಟೆಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ. ಅಮಿತ್​ ಷಾ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

7.44 AM – ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಮತಗಟ್ಟೆ ಸಂಖ್ಯೆ 95ರಲ್ಲಿ ಮತ ಚಲಾಯಿಸಿದ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ.

7.43 AM – ಬಾಗಲಕೋಟೆ: ಬಾಗಲಕೋಟೆ ನಗರದ ಮತಗಟ್ಟೆ ಸಂಖ್ಯೆ 106, ಇಳಕಲ್​ ನಗರದ ಮತಗಟ್ಟೆ ಸಂಖ್ಯೆ 162, ಕಂದಗಲ್ಲ ಗ್ರಾಮದ ಮತಗಟ್ಟೆ ಸಂಖ್ಯೆ 233ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ. ಇನ್ನೂ ಆರಂಭವಾಗದ ಮತದಾನ. ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ‌ ನಿಂತಿರುವ ಮತದಾರರು.

7.34 AM – ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್​ ಜೊಲ್ಲೆ, ಶಶಿಕಲಾ ಜೊಲ್ಲೆ ಮಕ್ಕಳಾದ ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಪ್ರಸಾದ್ ಜೊಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮತಗಟ್ಟೆ ಸಂಖ್ಯೆ 27 ರಲ್ಲಿ ಮತಚಲಾಯಿಸಿದರು.

7.31 AM – ಗಾಂಧಿನಗರ: ಗಾಂಧಿನಗರದ ತಮ್ಮ ತಾಯಿಯ ಮನೆ ತಲುಪಿದ ಪ್ರಧಾನಿ ನರೇಂದ್ರ ಮೋದಿ. ತಮ್ಮ ತಾಯಿಯ ಜತೆ ಅಹಮದಾಬಾದ್​ಗೆ ತೆರಳಿ ಮತದಾನ ಮಾಡಲಿರುವ ಪ್ರಧಾನಿ.

7.30 AM – ಧಾವರಾಡ: ನವಲಗುಂದು ತಾಲೂಕು ಮೊರಬದ ಮತಗಟ್ಟೆ ಸಂಖ್ಯೆ 62ರಲ್ಲಿ  ಕೈಕೊಟ್ಟ ಮತಯಂತ್ರ. ಆರಂಭಗೊಳ್ಳದ ಮತದಾನ.

7.28 AM – ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಮತಗಟ್ಟೆ ಸಂಖ್ಯೆ 18 ರಲ್ಲಿ ಮತಯಂತ್ರ ದೋಷದಿಂದಾಗಿ ಮತದಾನ ಪ್ರಕ್ರಿಯೆ ಸ್ಥಗಿತ. ಮತದಾನ ಸ್ಥಗಿತಗೊಂಡಿದ್ದರಿಂದ ಸಾಲುಗಟ್ಟಿ ನಿಂತ ಮತದಾರರು.

7.20 AM – ಧಾರವಾಡ: ಧಾರವಾಡ ಜಿಲ್ಲೆ ಮೊರಬದ ಮತಗಟ್ಟೆ ಸಂಖ್ಯೆ 62ರಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದು, ಚುನಾವಣಾ ಸಿಬ್ಬಂದಿ ಮತಯಂತ್ರ ಸರಿಪಡಿಸುತ್ತಿದ್ದಾರೆ.

7.18 AM – ಅಹಮದಾಬಾದ್​: ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಬೇಕು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರತಿಯೊಂದು ಮತವೂ ದೇಶವನ್ನು ಸರಿದಾರಿಗೆ ಕರೆದೊಯ್ಯಲು ನೆರವಾಗುತ್ತದೆ. ನಾನು ಅಹಮದಾಬಾದ್​ನಲ್ಲಿ ಮತ ಚಲಾಯಿಲಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟರ್​ ಮೂಲಕ ಮತದಾರರಿಗೆ ಮನವಿ ಮಾಡಿದ್ದಾರೆ.

7.10 AM – ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಮತದಾನಕ್ಕೆ ತೆರಳುವ ಮುನ್ನ ಶಿಕಾರಿಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

7.05 AM – ಕಲಬುರಗಿ – ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್​ ಜಾಧವ್​ ಅವರು ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

7.00 AM – ಮತದಾನ ಆರಂಭ


ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳಿಗೆ ಸೇರಿ 117 ಲೋಕಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಇಂದು ನಡೆಯುತ್ತಿರುವ ಮತದಾನದ ಸಂಪೂರ್ಣ ಚಿತ್ರಣವನ್ನು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ 24×7 ನಿಮ್ಮ ಮುಂದೆ ಹೊತ್ತು ತರಲಿವೆ. ಮತದಾನ ಪ್ರಕ್ರಿಯೆ ಕ್ಷಣಕ್ಷಣದ ವಿವರಕ್ಕಾಗಿ www.vijayavani.net ಅನ್ನು ಫಾಲೋ ಮಾಡಿ.

ಇಂದು ರಾಜ್ಯದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್​, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.


ರಾಜ್ಯದಲ್ಲಿಂದು ಫೈನಲ್ ಫೈಟ್: 14 ಕ್ಷೇತ್ರಕ್ಕೆ 2ನೇ ಹಂತದ ಮತದಾನ

ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳಿಂದ ಲೋಕಸಭೆ ಚುನಾವಣೆ ಕಾವಿನಲ್ಲಿ ಬಿಸಿಯೇರಿದ್ದ ಕರ್ನಾಟಕದ ಮತಕದನಕ್ಕೆ ಮಂಗಳವಾರ ತೆರೆಬೀಳಲಿದೆ. 14 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನ ನಿರೀಕ್ಷೆಗೂ ಮೀರಿ ಯಶ ಕಂಡ ಬೆನ್ನಲ್ಲೇ ಮಂಗಳವಾರ ಉಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ರಮೇಶ ಜಿಗಜಿಣಗಿ ಸೇರಿ 237 ಅಭ್ಯರ್ಥಿಗಳ ಭವಿಷ್ಯವನ್ನು 2.43 ಕೋಟಿ ಮತದಾರರು ನಿರ್ಣಯಿಸಲಿದ್ದಾರೆ. ಮೊದಲ ಹಂತದಲ್ಲಿ ಶೇ.68 ಮತದಾನವಾಗಿತ್ತು. ಇದನ್ನೂ ಮೀರಿಸುವಂತೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

14 ಕ್ಷೇತ್ರಗಳಲ್ಲಿ ಬಿಜೆಪಿ ಎಲ್ಲ ಕಡೆ ಸ್ಪರ್ಧಿಸಿದ್ದರೆ, ದೋಸ್ತಿ ಪಕ್ಷಗಳಾದ ಜೆಡಿಎಸ್ ಮೂರು ಹಾಗೂ ಕಾಂಗ್ರೆಸ್ 11 ಕಡೆ ಸ್ಪರ್ಧಿಸಿವೆ. ಶಿವಮೊಗ್ಗ ಹಾಗೂ ದಾವಣಗೆರೆ ಹೊರತುಪಡಿಸಿದರೆ ಉಳಿದ 12 ಕ್ಷೇತ್ರಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. ಈ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಯಾಗಿದ್ದು, ಪ್ರಬಲ ಪೈಪೋಟಿ ನೀಡಲು ಮೈತ್ರಿ ಪಕ್ಷಗಳು ತೊಡೆತಟ್ಟಿವೆ.

ಶಿವಮೊಗ್ಗ ಹಾಗೂ ಕಲಬುರಗಿ ಕ್ಷೇತ್ರಗಳಲ್ಲಿ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಕಲಬುರಗಿಯಲ್ಲಿ ಖರ್ಗೆ ಎದುರು ಬಿಜೆಪಿಯಿಂದ ಡಾ. ಉಮೇಶ ಜಾಧವ್ ಸ್ಪರ್ಧಿಸಿದರೆ ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ ಅವರಿಗೆ ಬಿಜೆಪಿಯ ದೇವೇಂದ್ರಪ್ಪ ಪೈಪೋಟಿ ಒಡ್ಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸುಲಲಿತ ಗೆಲುವಿಗೆೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಸ್ಪರ್ಧೆಯೊಡ್ಡಿದ್ದಾರೆ. ಇತರ ಕ್ಷೇತ್ರಗಳಲ್ಲೂ ಬಲಾಬಲದ ಪರೀಕ್ಷೆಗೆ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಸೆಣಸಾಟಕ್ಕಿಳಿದಿದ್ದಾರೆ.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....