ಆರನೇ ಹಂತದಲ್ಲಿ ಶೇ. 63.3 ರಷ್ಟು ಮತದಾನ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಬಿಜೆಪಿ ಕಾರ್ಯಕರ್ತ ಬಲಿ

ನವದೆಹಲಿ: 6ನೇ ಹಂತದ ದೇಶದ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ಇಂದು ಲೋಕಸಭಾ ಚುನಾವಣೆಯ ಮತದಾನ ನಡೆದಿದ್ದು, ಒಟ್ಟಾರೆ ಶೇ. 63.3ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಉತ್ತರ ಪ್ರದೇಶದ 14, ಹರಿಯಾಣದ ಎಲ್ಲ 10, ಬಿಹಾರದ 8, ಮಧ್ಯಪ್ರದೇಶದ 8 ಮತ್ತು ಪಶ್ಚಿಮ ಬಂಗಾಳದ 8, ದೆಹಲಿ ಮತ್ತು ಜಾರ್ಖಂಡ್‌ ರಾಜ್ಯಗಳ ತಲಾ 7 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಶೇ. 80.16, ದೆಹಲಿ ಶೇ. 58.01, ಹರಿಯಾಣ ಶೇ. 65.48, ಉತ್ತರ ಪ್ರದೇಶ ಶೇ. 54.24, ಬಿಹಾರ ಶೇ. 59.29, ಜಾರ್ಖಂಡ್‌ ಶೇ. 64.50 ಮತ್ತು ಮಧ್ಯಪ್ರದೇಶ ಶೇ. 62.50ರಷ್ಟು ಮತದಾನವಾಗಿದೆ.

ಮಧ್ಯ ಪ್ರದೇಶದಲ್ಲಿ ಹಿಂಸಾಚಾರ ವರದಿಯಾಗಿದೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ರಮೇನ್‌ ಸಿಂಗ್‌ ಎಂಬವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಪರಿಣಾಮವಾಗಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.

ಶಾಂತಿ ಕದಡುವ ಮಾತುಗಳನ್ನಾಡುತ್ತಿದ್ದರು ಎಂದು ಆರೋಪಿಸಿ ತಡೆದು ಅಟ್ಟಿಸಿಕೊಂಡು ಬಂದ ತೃಣಮೂಲ ಕಾಂಗ್ರೆಸ್‌ ಬೆಂಬಲಿಗರಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಘಟಾಲ್‌ನಲ್ಲಿ ದೇವಸ್ಥಾನದೊಳಗಡೆ ಆಶ್ರಯ ಪಡೆಯುವಂತಾಗಿತ್ತು. ಇದನ್ನು ಹೊರತುಪಡಿಸಿ ಉಳಿದೆಡೆ ಶಾಂತಿಯುತ ಮತದಾನವಾಗಿದ್ದು, ಆರನೇ ಹಂತದ ಮತದಾನ ಅಂತ್ಯವಾಗಿದೆ.

ಏಳನೇ ಹಂತದ ಮತ್ತು ಕೊನೆಯ ಲೋಕಸಭಾ ಚುನಾವಣೆ ಮೇ 19ರಂದು ನಡೆಯಲಿದ್ದು, ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)