ಮತದಾನ ಮಾಡಿ ಮತಗಟ್ಟೆಯಿಂದ ಹೊರಬಂದ ತಕ್ಷಣ ಮಹಿಳೆ ಸಾವು; ಚುನಾವಣಾಧಿಕಾರಿಗಳಿಬ್ಬರ ಮರಣ

ಬೆಳಗಾವಿ: ಹುಕ್ಕೇರಿ ತಾಲೂಕು ಕಣವಿಕಟ್ಟಿ ಗ್ರಾಮದಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸುರೇಶ್​ ಭೀಮಪ್ಪ ಸನದಿ (28) ಮೃತ. ಇವರು ಪಾಶ್ಚಾಪುರ ಕಂದಾಯ ಇಲಾಖೆಯ ಗ್ರಾಮ ಸಹಾಯಕರಾಗಿದ್ದಾರೆ. ಇದೇ ತಿಂಗಳು 26ರಂದು ಅವರ ಮದುವೆ ಕೂಡ ನಿಶ್ಚಯವಾಗಿತ್ತು. ಚುನಾವಣೆ ಕೆಲಸಕ್ಕೆ ಕಣವಿಕಟ್ಟಿ ಗ್ರಾಮಕ್ಕೆ ನಿಯೋಜನೆಗೊಂಡಿದ್ದರು.

ಶಿಕ್ಷಕ ಸಾವು

ಬಳ್ಳಾರಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಕೂಡ್ಲಿಗಿ ತಾಲೂಕಿನ ಶಿಕ್ಷಕ ಎನ್. ತಿಪ್ಪೇಸ್ವಾಮಿ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮತದಾನ ಮಾಡಲು ಬಂದ ಮಹಿಳೆ ಸಾವು

ಮತದಾನ ಮಾಡಲೆಂದು ವಿಜಯಪುರ ಜಿಲ್ಲೆಯ ಐರಸಂಗ ಗ್ರಾಮದ ಮತಗಟ್ಟೆಗೆ ಬಂದಿದ್ದ ಮಹಿಳೆ ಮಹಾದೇವಿ ಮಹದೇವಪ್ಪ ಸಿಂದಖೇಡ್​ (55) ಮೃತಪಟ್ಟಿದ್ದಾರೆ.
ವೋಟು ಹಾಕಿ ಹೊರಬಂದ ತಕ್ಷಣ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ.