ಸ್ಪಷ್ಟವಾಗದ ರಾಯಚೂರು ಲೋಕಸಭೆ ಅಖಾಡ

ವೆಂಕಟೇಶ ಹೂಗಾರ್ ರಾಯಚೂರು
ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮೂರು ಪಕ್ಷಗಳಿಂದ ಯಾರು ಸ್ಪರ್ಧಿಸಲಿದ್ದಾರೆಂಬ ಸ್ಪಷ್ಟ ಚಿತ್ರಣ ಇಲ್ಲದ ಕಾರಣ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಏತನ್ಮಧ್ಯೆ ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಲಾರಂಭಿಸಿದೆ.

ಕಾಂಗ್ರೆಸ್‌ನ ಭದ್ರಕೋಟೆ ಯಾದ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ.23 ಮತದಾನ ನಡೆಯಲಿದೆ. ಈವರೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್ ರಾಯಚೂರು ಕ್ಷೇತ್ರ ಬಿಟ್ಟು ಕೊಡಬೇಕು ಎನ್ನುವ ಪಟ್ಟು ಹಿಡಿದಿದ್ದರಿಂದ ಹಾಲಿ ಸಂಸದ ಬಿ.ವಿ.ನಾಯಕಗೆ ಟಿಕೆಟ್ ಸಿಗುವುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಇತ್ತೀಚೆಗೆ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ರಾಜ್ಯದ ನಾಯಕರು ಬಿ.ವಿ.ನಾಯಕರೇ ಅಭ್ಯರ್ಥಿ, ಗೆಲ್ಲಿಸಲು ಸಿದ್ಧ್ದರಾಗಿ ಎಂದು ಹೇಳಿ ಹೋಗಿದ್ದರು. ಅದಾಗಿ 15 ದಿನಗಳ ನಂತರ ಜಿಲ್ಲೆಗೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ರಾಯಚೂರು ಕ್ಷೇತ್ರವನ್ನು ಪಕ್ಷಕ್ಕೆ ಬಿಟ್ಟು ಕೊಡುವಂತೆ ಕೇಳಲಾಗಿದೆ ಎಂದು ಹೇಳಿಕೆ ನೀಡಿದ್ದು, ಅಖಾಡ ಸ್ಪಷ್ಟವಾಗಿಲ್ಲ ಎನ್ನುವ ಸಂದೇಶ ಸಾರಿದಂತಾಗಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ರಾಜಾ ರಂಗಪ್ಪ ನಾಯಕ ಅಥವಾ ರವಿ ಪಾಟೀಲ್ ಸ್ಪರ್ಧೆಗೆ ಇಳಿಯುವ ಮಾತು ಕೇಳಿ ಬಂದಿದೆ. ಕೊನೇ ಗಳಿಗೆಯಲ್ಲಿ ಮತ್ತೊಬ್ಬರೂ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ ಎನ್ನುವುದಕ್ಕೆ ಈ ಹಿಂದೆ ಜೆಡಿಎಸ್ ವರಿಷ್ಠರು ನಡೆದುಕೊಂಡ ರೀತಿಯೇ ಸಾಕ್ಷಿಯಾಗಿದೆ.

ಇನ್ನೂ ಬಿಜೆಪಿ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡಿತ್ತು. ಈ ಬಾರಿ ಮೋದಿ ಅಲೆ ಜತೆಗೆ ಹಾಲಿ ಸಂಸದರ ಕಾರ್ಯವೈಖರಿ ಮುಂದಿಟ್ಟುಕೊಂಡು ಗೆಲ್ಲುವ ಕಾರ್ಯತಂತ್ರ ರೂಪಿಸುತ್ತಿ ದ್ದರೂ, ಯಾರು ಸ್ಪರ್ಧಿಸಲಿದ್ದಾರೆಂಬ ನಿರ್ಧಾರ ಹೊರಬಿದ್ದಿಲ್ಲ. ವಾರ ದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಹೇಳಿದ್ದ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪನವರ ಮಾತು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲಿದೆ. ಪಕ್ಷದ ಅಭ್ಯರ್ಥಿಯಾಗಿ ಕೆ.ಶಿವನಗೌಡ ನಾಯಕರ ಸಂಬಂಧಿ ಅನಂತ ರಾಜ ನಾಯಕ, ಹಿಂದೊಮ್ಮೆ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮಧ್ಯೆ ಪೈಪೋಟಿ ಇದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಕಳೆದೊಂದು ವಾರದಿಂದ ಬಳ್ಳಾರಿ ಶ್ರೀರಾಮುಲು ಸಂಬಂಧಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಹಾಗೂ ರಾಜುಗೌಡ ಸಂಬಂಧಿ ರಾಜಾ ಹನುಮಪ್ಪ ನಾಯಕರ ಹೆಸರು ಮುಂಚೂಣಿಗೆ ಬಂದಿದೆ. ಈ ನಡುವೆ ಮಾನ್ವಿ ಮಾಜಿ ಶಾಸಕ ಗಂಗಾಧರ ನಾಯಕ ತಾವೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಅಮರೇಶ್ವರ ನಾಯಕರ ಹೆಸರೂ ಕೇಳಿ ಬರುತ್ತಿದೆ. ಆದರೆ, ಪಕ್ಷದ ಕಾರ್ಯಕರ್ತರಲ್ಲಿ ಮಾತ್ರ ತೀವ್ರ ಗೊಂದಲ, ಕುತೂಹಲ ಮನೆ ಮಾಡಿದೆ.

ಒಂದೊಮ್ಮೆ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಸಾಧ್ಯವಾದರೆ ಕಾಂಗ್ರೆಸ್‌ನಲ್ಲಿ ಬಿ.ವಿ.ನಾಯಕರೇ ಆ ಪಕ್ಷಕ್ಕೆ ಅನಿವಾರ್ಯ, ಅಂತಿಮ ಎನ್ನುವಂತಿದೆ. ಆದರೆ, ಬಿಜೆಪಿಯ ಪರಿಸ್ಥಿತಿ ಮಾತ್ರ ಹಾಗಿಲ್ಲ. ಸದ್ಯ ತಿಪ್ಪರಾಜು ತಾವೇ ಅಭ್ಯರ್ಥಿ ಎಂದು ಪ್ರಚಾರಕ್ಕೆ ಇಳಿದಿದ್ದು, ಉಳಿದವರಾರು ಕಾಣಿಸಿಕೊಂಡಿಲ್ಲ ಎನ್ನುವುದಂತೂ ವಾಸ್ತವವಾಗಿದೆ. ಒಟ್ಟಾರೆ ಮೂರು ಪಕ್ಷದಲ್ಲಿ ಅಭ್ಯರ್ಥಿಗಳನ್ನು ಹೈಕಮಾಂಡ್ ಘೋಷಣೆ ಮಾಡದ್ದರಿಂದ ಯಾರ ಪರ ಪ್ರಚಾರ ಮಾಡಬೇಕೆಂಬ ಪ್ರಶ್ನೆ ಕಾರ್ಯಕರ್ತರದ್ದಾಗಿದ್ದು, ಪಕ್ಷಕ್ಕೆ ಬೆಂಬಲಿಸಲು ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಉತ್ತರಿಸಲಾಗದೆ ಸುಮ್ಮನಾಗುತ್ತಿದ್ದಾರೆ.

ಕೈ ಭದ್ರಕೋಟೆ
ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 4, ಕಾಂಗ್ರೆಸ್ 3 ಮತ್ತು ಜೆಡಿಎಸ್ ಒಬ್ಬ ಶಾಸಕರನ್ನು ಹೊಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಪ್ರಾಬಲ್ಯ ಹೊಂದಿದ್ದರೂ ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ಮಧ್ಯೆ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಕ್ಷೇತ್ರ ಕೈ ಭದ್ರಕೋಟೆ ಎನ್ನುವುದನ್ನು ತೋರಿಸಿದೆ.