ಬರಲಿದೆ ಟೀಂ ಮೋದಿ

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಪರವಾಗಿ ಸಾಮಾಜಿಕ ಜಾಲತಾಣದಿಂದ ಮೊದಲುಗೊಂಡು ಗ್ರಾಮೀಣ ಭಾಗದ ವರೆಗೆ ಪ್ರಚಾರ ನಡೆಸಿದ್ದ ನಮೋ ಬ್ರಿಗೇಡ್ ಇದೀಗ ‘ಟೀಂ ಮೋದಿ’ಯಾಗಿ ಕೆಲಸ ಆರಂಭಿಸಲಿದೆ.

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಚಾಲನೆಗೊಳ್ಳುವ ಟೀಂ ಮೋದಿ ವೇದಿಕೆಗೆ 300 ಕಡೆಗಳಲ್ಲಿ ಬೈಕ್ ರ್ಯಾಲಿಗಳನ್ನು ಆಯೋಜಿಸಲಾಗಿದೆ.

ಈ ಹಿಂದೆ ದೇಶದ ಯುವಜನತೆಗೆ ಗುಜರಾತ್ ಸಿಎಂ ಆಗಿ ಮೋದಿ ಸಾಧನೆಯನ್ನು ಮನವರಿಕೆ ಮಾಡಿ, ಇಂಥವರೇ ನಮ್ಮ ಪ್ರಧಾನಿಯಾಗಬೇಕು ಎಂಬುದನ್ನು ಖಚಿತಪಡಿಸುವಲ್ಲಿ ಬ್ರಿಗೇಡ್ ಯಶಸ್ವಿಯಾಗಿತ್ತು.

ಇದೀಗ 5 ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೈಗೊಂಡಿರುವ ಉತ್ತಮ ಕಾರ್ಯಗಳನ್ನು ಜನರಿಗೆ ಮುಟ್ಟಿಸುವುದು ಟೀಂ ಮೋದಿ ಪ್ರಮುಖ ಅಜೆಂಡಾ ಎಂದು ಮೂಲಗಳು ತಿಳಿಸಿವೆ.

‘ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿ ಮೋದಿ ಪ್ರಧಾನಿಯಾಗಬೇಕೆಂದು ಇಚ್ಛಿಸುವ ತರುಣರನ್ನೆಲ್ಲ ಒಟ್ಟುಗೂಡಿಸುವ ಪ್ರಯತ್ನ ನಾವೀಗ ಮಾಡುತ್ತಿದ್ದೇವೆ. ಐದು ವರ್ಷಗಳಲ್ಲಿ ಈ ದೇಶ ಸಾಧಿಸಿದ ಪ್ರಗತಿಯ ಕಹಳೆ ತಿಳಿಸಲಿದ್ದೇವೆ. ಪ್ರತಿಪಕ್ಷಗಳು ಹಬ್ಬಿಸಲು ಪ್ರಯತ್ನಿಸುತ್ತಿರುವ ಸುಳ್ಳನ್ನು ತಡೆಯಬೇಕೆಂದು ನಿಶ್ಚಯಿಸಿದ್ದೇವೆ. ವಿಶ್ವದೆಲ್ಲೆಡೆ ಇರುವ ಕನ್ನಡಿಗರೂ ಟೀಂ ಮೋದಿಗೆ ಬೆಂಬಲ ಸೂಚಿಸಿ ತಾವೂ ಜೊತೆಯಾಗುವ ಭರವಸೆ ಕೊಟ್ಟಿದ್ದಾರೆ. ನೂರಾರು ಯುವಕರು ತಮ್ಮ ಕೆಲಸಗಳಿಂದ ವಿರಾಮ ಪಡೆದು, ಕೆಲಸದ ನಡುವೆಯೇ ನಾಲ್ಕೈದು ತಿಂಗಳು ಇದೇ ಕಾರ್ಯದಲ್ಲಿ ತೊಡಗಲಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗದಿದ್ದರೆ ದೇಶಕ್ಕಾಗುವ ಅನಾಹುತವನ್ನೂ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ವಿರೋಧಿಗಳು ಹೇಳುವ ಸುಳ್ಳುಗಳಿಗೆ ತಕ್ಷಣ ಉತ್ತರ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಪ್ರಮುಖರೊಬ್ಬರು ತಿಳಿಸಿದ್ದಾರೆ.

ಡಿ.16ಕ್ಕೆ ರಾಜ್ಯದ 300 ಕ್ಕೂ ಹೆಚ್ಚು ಕಡೆಗಳಲ್ಲಿ ಸಂಜೆ 4 ರಿಂದ 6 ಗಂಟೆಯೊಳಗೆ ಬೈಕ್ ರ್ಯಾಲಿಯ ಮೂಲಕ ಟೀಂ ಮೋದಿ ಚಾಲನೆ ಪಡೆಯಲಿದೆ.

Leave a Reply

Your email address will not be published. Required fields are marked *