ಲೋಕಸಮರಕ್ಕೆ ಕಮಲ ಕಾಲ್​ಸೆಂಟರ್ ಶುರು

| ರಮೇಶ ದೊಡ್ಡಪುರ

ಬೆಂಗಳೂರು: ಪಂಚರಾಜ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶದಿಂದ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ಕಾಳಜಿ ವಹಿಸಿರುವ ಬಿಜೆಪಿ, ಫಲಿತಾಂಶ ಹೊರಬಂದ 24 ಗಂಟೆಯಲ್ಲೇ ತಯಾರಿ ನಡೆಸಿದೆ.

ಸೋಲಿನ ಅವಲೋಕನಕ್ಕೆ ಕೂರುವ ಸಮಯ ಇದಲ್ಲ ಎಂದು ರಾಜ್ಯ ಘಟಕಗಳಿಗೂ ಸೂಚನೆ ನೀಡಿರುವ ರಾಷ್ಟ್ರೀಯ ನಾಯಕರು, ಡಿ.15ರಿಂದ ದೇಶಾದ್ಯಂತ 100ಕ್ಕೂ ಹೆಚ್ಚು ಕಾಲ್​ಸೆಂಟರ್​ಗಳನ್ನು ತೆರೆದು ಸಂಘಟನೆ ಬಲವರ್ಧನೆ ಕೆಲಸ ಆರಂಭಿಸಲು ತಿಳಿಸಿದ್ದಾರೆ.

ರಾಜ್ಯದಲ್ಲಿ ಐದು ಕಾಲ್​ಸೆಂಟರ್​ಗಳ ಮೂಲಕ 54 ಸಾವಿರ ಬೂತ್​ಗಳಲ್ಲಿರುವ ಸುಮಾರು 4.5 ಲಕ್ಷ ಸದಸ್ಯರು, ರಾಜ್ಯ ಮಟ್ಟದವರೆಗೆ ಸುಮಾರು 5 ಸಾವಿರ ಪದಾಧಿಕಾರಿಗಳ ಕಾರ್ಯದ ಮೇಲುಸ್ತುವಾರಿ ನೋಡಲಾಗುತ್ತದೆ.

ಸಂಘಟನೆ ಮೂಲಮಂತ್ರ: ಯಾವುದೇ ಚುನಾವಣೆಯಲ್ಲಿ ಬಿಜೆಪಿ ಮೂರು ಅಂಶಗಳ ಸೂತ್ರ ಅನುಸರಿಸುತ್ತಿದೆ. ಮೊದಲನೆಯದು ಕೇಡರ್ (ಕಾರ್ಯಕರ್ತರು), ಎರಡನೆಯದ್ದು ಕ್ಯಾಂಪೇನ್ (ಪ್ರಚಾರ), ಮೂರನೇಯದು ಪ್ರಧಾನಿ ಮೋದಿ ಅಲೆ.

ಕರ್ನಾಟಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆ ಪಡೆದರೂ ಅಧಿಕಾರ ಸಿಗಲಿಲ್ಲ ಎಂಬ ಕೊರಗು ಕಾರ್ಯಕರ್ತರಲ್ಲಿದೆ. ಎರಡನೆಯದಾಗಿ ರಾಜ್ಯ ಬಿಜೆಪಿಯ ಸಂಯೋಜನೆ ಕೊರತೆಯಿಂದ ಇತ್ತೀಚೆಗೆ ನಡೆದ ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಗಾಯದ ಮೇಲೆ ಉಪು್ಪ ಸುರಿದಂತೆ ಇದೀಗ ಪಂಚರಾಜ್ಯ ಚುನಾವಣೆಯಲ್ಲಿ ಮೂರು ಪ್ರಮುಖ ರಾಜ್ಯಗಳು ಕೈತಪು್ಪವುದರ ಜತೆಗೆ ತೆಲಂಗಾಣದಲ್ಲೂ ಹಿನ್ನಡೆಯಾಗಿದೆ. ಇದರಿಂದ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕುಂದಿದೆ. ಪ್ರತಿ ಕಾರ್ಯಕರ್ತನನ್ನು ಮಾತನಾಡಿಸಿ ಬಲಪಡಿಸಿದರೆ ಮಾತ್ರ ಚುನಾವಣೆಗೆ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸೂಚನೆ ನೀಡಿದ್ದು, ಕಾಲ್​ಸೆಂಟರ್ ಮೂಲಕ ಸಂಘಟನೆಗೆ ಒತ್ತು ನೀಡಲು ತಿಳಿಸಿದ್ದಾರೆ.

ವಿಕೇಂದ್ರೀಕೃತ ವ್ಯವಸ್ಥೆ

ಪ್ರತಿ ಚುನಾವಣೆಯಲ್ಲೂ ಬಿಜೆಪಿ ಕಾಲ್​ಸೆಂಟರ್ ಆರಂಭಿಸುತ್ತದೆ. ಬೆಂಗಳೂರಿನಲ್ಲಿ ಇರುತ್ತಿದ್ದ ಕಾಲ್​ಸೆಂಟರ್ ವ್ಯವಸ್ಥೆಯನ್ನು 5 ಕ್ಲಸ್ಟರ್​ಗಳಾಗಿ ವಿಕೇಂದ್ರೀಕರಿಸಿದೆ. ಬೆಂಗಳೂರಿನ ಜತೆಗೆ ಶಿವಮೊಗ್ಗ, ಕಲಬುರಗಿ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಕಾಲ್​ಸೆಂಟರ್ ಆರಂಭವಾಗಲಿವೆ. 4-5 ಲೋಕಸಭೆ ಕ್ಷೇತ್ರಕ್ಕೆ ಒಂದು ಕಾಲ್​ಸೆಂಟರ್ ಇರಲಿದೆ. ಪ್ರತಿ ಕೇಂದ್ರದಲ್ಲೂ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ಎರಡು ಪಾಳಿಯಲ್ಲಿ ಐದೂ ಕೇಂದ್ರ ಸೇರಿ ಒಟ್ಟು 600 ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಬಿಜೆಪಿ ಐಟಿ ಸೆಲ್, ಸಾಮಾಜಿಕ ಜಾಲತಾಣ ವಿಭಾಗ, ಯುವ ಮೋರ್ಚಾ ಕಾರ್ಯಕರ್ತರು, ಟೆಕ್ಕಿಗಳು ಡಿ.15ರಿಂದ 2019ರ ಜೂನ್ 15ರವರೆಗೆ ಸ್ವಯಂಸೇವಕರಾಗಿ ಶ್ರಮಿಸಲಿದ್ದಾರೆ.

ಫಾಲೋಅಪ್, ಅಭಿಪ್ರಾಯ

ಕಾಲ್​ಸೆಂಟರ್​ಗಳಿಂದ ಪ್ರಮುಖವಾಗಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೇಂದ್ರದಿಂದ ಬಂದ ಸೂಚನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ. ಚುನಾವಣೆ ಇನ್ನೆರಡು ತಿಂಗಳು ಇರುವಂತೆ ಕೇಂದ್ರದ ಉಜ್ವಲಾ, ಉಜಾಲಾ, ಸ್ಟಾರ್ಟಪ್ ಇಂಡಿಯಾ, ಸ್ಟಾ್ಯಂಡ್ ಅಪ್ ಇಂಡಿಯಾ, ಜನಧನ್, ಮುದ್ರಾದಂತಹ ಯೋಜನೆ ಫಲಾನುಭವಿಗಳ ಜಿಲ್ಲಾವಾರು ಸಮಾವೇಶಗಳ ಫಾಲೋಅಪ್ ಮಾಡಲಾಗುತ್ತದೆ. 2 ವರ್ಷ ಹಿಂದೆ ನಡೆದ ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕದ 80 ಲಕ್ಷ ಜನ ನೋಂದಣಿಯಾಗಿದ್ದು, ಪ್ರದೇಶ, ಉದ್ಯೋಗ, ವಯೋಮಾನವಾರು ಆಯ್ಕೆ ಮಾಡಿ ಅಂಥವರನ್ನು ಸಂರ್ಪಸಿ ಕೇಂದ್ರ ಸರ್ಕಾರದ ಕುರಿತು ಅಭಿಪ್ರಾಯ ಪಡೆಯಲಾಗುತ್ತದೆ. ಸಂಪೂರ್ಣ ವರದಿಯನ್ನು ಪೋರ್ಟಲ್ ಮೂಲಕ ನೇರವಾಗಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಧಿವೇಶನ ನಂತರ ಬಿಜೆಪಿ ಸಭೆ

ಬೆಳಗಾವಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಕೇಂದ್ರ ಬಿಜೆಪಿ ನೀಡುವ ನಿರ್ದೇಶನವನ್ನು ಪರಿಣಾಮಕಾರಿ ಜಾರಿ ಮಾಡುವ ಸಲುವಾಗಿ ರಾಜ್ಯ ಮುಖಂಡರು ವಿಶೇಷ ಸಭೆ ನಡೆಸಲಿದ್ದಾರೆ.

ಬೆಳಗಾವಿ ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ರಾಜ್ಯ ಬಿಜೆಪಿ ಮುಖಂಡರು ಕೋರ್ ಕಮಿಟಿ ಸಭೆ ಸೇರಿ ಲೋಕಸಭಾ ಚುನಾವಣೆೆ ಸಿದ್ಧತೆ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ನಿರಂತರ ಹೋರಾಟ: ಬಿಜೆಪಿ ಮುಖಂಡರ ಪ್ರಕಾರ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಬಲ ಹೊಂದಿರುವ 8-10 ಕ್ಷೇತ್ರಗಳಲ್ಲಿ ಆತಂಕವಿದೆ. ಉಳಿದ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್​ನೊಂದಿಗೆ ನೇರವಾಗಿ ಪೈಪೋಟಿ ಇದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಚುನಾವಣೆ ತನಕ ನಿರಂತರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವುದು, ಕೇವಲ ಮೋದಿ ಅಲೆ ನೆಚ್ಚಿಕೊಳ್ಳದೆ ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡುವುದು, ಸಂಘಟನೆಯನ್ನು ಬಲಗೊಳಿಸುವುದು ಬಿಜೆಪಿಯ ಉದ್ದೇಶ ಎಂದು ಮೂಲಗಳು ಹೇಳುತ್ತವೆ.

ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತಂತೆ ಅಧಿವೇಶನ ಮುಗಿದ ಕೂಡಲೇ ಸಭೆ ಸೇರಿ ಚರ್ಚೆ ನಡೆಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ.

| ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ

 

ಮಿತ್ರ, ಪ್ರತಿಪಕ್ಷದಿಂದ ಆತಂಕವಿಲ್ಲ

ಬೆಳಗಾವಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಸ್ವತಃ ಕಾಂಗ್ರೆಸ್​ಗಿಂತ ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್​ಗೆ ಹೆಚ್ಚಿನ ಖುಷಿ ತಂದಿದೆ. ಸರ್ಕಾರ ಯಾವಾಗ ಬಿದ್ದು ಹೋಗುವುದೋ ಎಂಬ ಆತಂಕದಲ್ಲಿಯೇ ಇದ್ದ ಜೆಡಿಎಸ್ ಮುಖಂಡರಿಗೆ ಈಗ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕಡೆಯಿಂದಲೂ ಸಮಸ್ಯೆ ಎದುರಾಗುವುದಿಲ್ಲವೆಂಬ ವಿಶ್ವಾಸ ವೃದ್ಧಿಯಾಗಿದೆ.

ಜೆಡಿಎಸ್ ಖುಷಿಗೆ ಎರಡು ಕಾರಣ

1. ಬಿಜೆಪಿ ಈಗ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಯಾವುದೇ ಶಾಸಕರೂ ಬಿಜೆಪಿ ಜತೆ ಹೋಗುವುದಿಲ್ಲ. ಆಪರೇಷನ್ ಕಮಲ ಆಗಿಯೇ ಆಗುತ್ತದೆ, ಇದೇ ಅವಧಿಯಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಮಾತನ್ನು ಬಿಜೆಪಿ ಮುಖಂಡ ಆರ್. ಅಶೋಕ್ ಮಾತ್ರ ಹೇಳುತ್ತಾರೆ. ಆದರೆ ಜೆಡಿಎಸ್ ಮುಖಂಡರು ಇದಕ್ಕೆ ನಗುವಿನ ಉತ್ತರ ನೀಡುತ್ತಾರೆ.

2. ಕಾಂಗ್ರೆಸ್ ಹೈಕಮಾಂಡ್ ಬಲವಾಗಿದೆ. ರಾಜ್ಯ ಮುಖಂಡರ ಮಾತು ಕೇಳುವ ಅನಿವಾರ್ಯತೆಯಿಲ್ಲ. ರಾಜ್ಯದಲ್ಲಿ ಸರ್ಕಾರ ಇರುವುದು ರಾಹುಲ್ ಅವರಿಗೆ ಪ್ರಮುಖವಾದ ಕಾರಣ ರಾಜ್ಯ ಕಾಂಗ್ರೆಸ್ ಮುಖಂಡರು ಮೌನವಾಗಿ ಸಾಗಬೇಕಾಗಿದೆ.