ಸೋಲಿನ ಹೊಣೆ ನಾವೇ ಹೊರುತ್ತೇವೆ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಪ್ರಜೆಗಳ ತೀರ್ಪಿಗೆ ತೆಲೆಬಾಗುತ್ತೇವೆ. ಈ ಸೋಲಿನ ಹೊಣೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ ಎಂದು ಪರಾಜಿತ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ, ಪತಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಈ ಬಗ್ಗೆ ಯಾರ ಮೇಲಿಯೂ ಗೂಬೆ ಕುರಿಸುವ ಪ್ರಯತ್ನ ಮಾಡಲ್ಲ. ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಶಿವಾನಂದ ಪಾಟೀಲ, ಆರ್.ಬಿ. ತಿಮ್ಮಾಪುರ, ವಿ.ಪ. ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ಶ್ರಮಪಟ್ಟಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೀಣಾ ಕಾಶಪ್ಪನವರ ಮಾತನಾಡಿ, ಈ ಚುನಾವಣೆಯಲ್ಲಿ ಸೋಲಾಗಿದ್ದಕ್ಕೆ ನನಗೇನು ಬೇಜಾರಾಗಿಲ್ಲ. ಯಾರೂ ಬೇಜಾರ ಮಾಡಿಕೊಳ್ಳುವುದೂ ಬೇಡ. ಎಲ್ಲರೂ ಹುರುಪು, ಹುಮ್ಮಸ್ಸಿನಿಂದ ಕೆಲಸ ಮಾಡಿದ್ದಾರೆ. ಸೋಲಿನಿಂದ ಧೃತಿಗೆಟ್ಟಿಲ್ಲ. ಕ್ಷೇತ್ರದ ಮತದಾರರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಕುಗ್ಗುವ ಅವಶ್ಯಕತೆ ಇಲ್ಲ. ಯಾರೂ ಮನಸ್ತಾಪ ಮಾಡಿಕೊಳ್ಳುವುದು ಬೇಡ. ನನ್ನ ಮೇಲೆ ನಂಬಿಕೆ ಇಡಿ, ಜಿಲ್ಲೆಯ ಮನೆ ಮಗಳೆಂದು ಸ್ಥಾನ ನೀಡಿದ್ದೀರಿ. ಅದಕ್ಕೆ ಋಣಿಯಾಗಿದ್ದೇನೆ. ಚುನಾವಣೆಯಲ್ಲಿ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜನಾಂಗದವರು ನನಗೆ ಮತ ನೀಡಿದ್ದಾರೆ. ಬಿಜೆಪಿ ಗೆಲ್ಲುವ ನಿರೀಕ್ಷೆ ಇರಲಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ದೇಶದಲ್ಲಿ ಇಂಥ ಲಿತಾಂಶ ಬರುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿಯವರೂ ನಿರೀಕ್ಷಿಸಿರಲಿಲ್ಲ. ಲಿತಾಂಶದ ಬಗ್ಗೆ ಸಂದೇಹವಿದೆ. ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರಿಯಾದ ಉತ್ತರ ಬರಲಿಲ್ಲ. ಫಲಿತಾಂಶದ ಹಿಂದೆ ಯಾವುದೋ ಶಕ್ತಿಯಿದೆ. ಅದು ಯಾವುದು ಎಂಬುದು ಗೊತ್ತಿಲ್ಲ. ಈ ಹಿಂದೆ ಇಂದಿರಾಗಾಂಧಿ ಅವರ ಸಮಯದಲ್ಲಿ ದೊಡ್ಡ ಮಟ್ಟದ ಶಕ್ತಿ ಇತ್ತು. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರಲೇ ಬೇಕು. ಕಾದು ನೋಡಣ ಎಂದ ಅವರು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತೇವೆ. ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಮಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *