ಕೆಸಿಆರ್ ಅಲೆ ಮುಂದೆ ಉಳಿದೆಲ್ಲವೂ ಗೌಣ!

| ಕೆ. ರಾಘವ ಶರ್ಮ ನವದೆಹಲಿ

ಎರಡು ತಿಂಗಳ ಹಿಂದಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ತೆಲಂಗಾಣ ಸಿಎಂ, ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್) ನಾಯಕ ಕೆ. ಚಂದ್ರಶೇಖರ ಕಣ್ಣೀಗ ದೆಹಲಿ ಮೇಲೆ ಬಿದ್ದಿದೆ.

ಪ್ರಾದೇಶಿಕ ಪಕ್ಷಗಳೆಲ್ಲ ಸೇರಿಕೊಂಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಮೈತ್ರಿಕೂಟ ರಚಿಸಿ ಕೇಂದ್ರದಲ್ಲಿ ಅಧಿಕಾರ ನಡೆಸಬೇಕು. ಆ ಮೂಲಕ ರಾಜ್ಯಗಳ ಹಿತಾಸಕ್ತಿ ಕಾಪಾಡಬೇಕು ಎಂಬ ಕನಸು ಅವರದ್ದು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವೈಎಸ್​ಆರ್ ಕಾಂಗ್ರೆಸ್​ನ ಜಗನ್ ರೆಡ್ಡಿಯನ್ನು ಕೆಸಿಆರ್ ಭೇಟಿ ಮಾಡಿ ಮನದಾಳ ಹಂಚಿಕೊಂಡಿದ್ದಾರೆ.

ಆದರೆ, ಕೆಸಿಆರ್ ಕನಸನ್ನು ಈಡೇರಿಸಲು ಇತರೆ ಪ್ರಾದೇಶಿಕ ಪಕ್ಷಗಳು ಹೆಚ್ಚಿನ ಆಸಕ್ತಿ ತೋರಿದಂತಿಲ್ಲ. ಏಕೆಂದರೆ ಚುನಾವಣೋತ್ತರ ಸನ್ನಿವೇಶದಲ್ಲಿ (ಅಗತ್ಯಬಿದ್ದರೆ) ಕೆಸಿಆರ್ ಎನ್​ಡಿಎಗೆ ಕೂಡ ಬೆಂಬಲ ಸೂಚಿಸಬಲ್ಲರು ಎಂಬ ವಾಸ್ತವ ಈ ಪ್ರಾದೇಶಿಕ ಪಕ್ಷಗಳಿಗೆ ಗೊತ್ತಿಲ್ಲದೇನಿಲ್ಲ. ಮುಖ್ಯವಾಗಿ, ಕೆಸಿಆರ್-ಮೋದಿ ಸಂಬಂಧ ಚೆನ್ನಾಗಿರುವುದರಿಂದ ಕೆಸಿಆರ್​ನ್ನು ನಂಬುವ ಸ್ಥಿತಿಯಲ್ಲೂ ಪ್ರಾದೇಶಿಕ ಪಕ್ಷಗಳಿಲ್ಲ. ಹೀಗಾಗಿ, ಕೆಸಿಆರ್ ಆಹ್ವಾನವನ್ನು ಪ್ರಾದೇಶಿಕ ನಾಯಕರು ಸ್ವೀಕರಿಸಿದರೇ ವಿನಃ ಅನುಮೋದನೆ ಕೊಡಲಿಲ್ಲ! ಈ ನಡುವೆ ಚುನಾವಣಾ ದಿನಾಂಕ ಘೊಷಣೆ ಹತ್ತಿರವಿದ್ದರೂ, ಚುನಾವಣಾಪೂರ್ವ ಮೈತ್ರಿ ಬಗ್ಗೆ ವಿಪಕ್ಷಗಳು ನಿರ್ಧರಿಸಿಲ್ಲ. ಇದರಿಂದಾಗಿ, ಕೆಸಿಆರ್ ಕನಸು ಕನಸಾಗಿಯೇ ಉಳಿಯುವ ಲಕ್ಷಣಗಳಿವೆ.

ಪ್ರಚಂಡ ಅಲೆ: ರಾಜ್ಯವ್ಯಾಪಿ ಪ್ರಚಂಡವಾಗಿ ಹಬ್ಬಿರುವ ಕೆಸಿಆರ್ ಅಲೆಯ ಪರಿಣಾಮ ಈ ಬಾರಿ 17 ಲೋಕಸಭೆ ಸೀಟುಗಳಲ್ಲಿ 16ನ್ನು ಟಿಆರ್​ಎಸ್ ಗೆದ್ದುಕೊಂಡರೂ ಅಚ್ಚರಿ ಇಲ್ಲ. ವಿಧಾನಸಭೆ ಗೆಲುವಿನ ಮೂಡ್​ನಿಂದ ಹೊರಬಾರದ ಟಿಆರ್​ಎಸ್​ಗೆ ರಾಜ್ಯದ ಮಟ್ಟಿಗೆ ವಿರೋಧಿಗಳೇ ಇಲ್ಲ ಎನ್ನಬಹುದು! 2014ರ ಮೊದಲ ಲೋಕಸಭೆ ಚುನಾವಣೆಯಲ್ಲಿ (2014) ಟಿಆರ್​ಎಸ್ 13, ಕಾಂಗ್ರೆಸ್ 2, ಬಿಜೆಪಿ 1 ಹಾಗೂ ಮತ್ತೊಂದು ಸೀಟನ್ನು ಅಸಾದುದ್ದಿನ್ ಓವೈಸಿ ನೇತೃತ್ವದ ಮಜ್ಲಿಸ್-ಇ-ಇತ್ತ್ತೆಹುದೆಲ್ ಮುಸ್ಲಿಮೀನ್ (ಎಂಐಎಂ) ಪಕ್ಷ ಗೆದ್ದುಕೊಂಡಿತ್ತು. ಕಾಂಗ್ರೆಸ್ ಸಂಸದರಿರುವ ಕಮ್ಮಮ್ ಮತ್ತು ಮೆಹಬೂಬಾಬಾದ್ ಕ್ಷೇತ್ರದ ವ್ಯಾಪ್ತಿಗೆ ಬರುವ 4 ಶಾಸಕರು ಈಚೆಗೆ ಟಿಆರ್​ಎಸ್ ಸೇರಿಕೊಂಡಿರುವುದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಕಠಿಣ ಸವಾಲು ಎದುರಾಗಿದೆ. ಹೈದರಾಬಾದ್ ಸೀಟನ್ನು ಭದ್ರಕೋಟೆಯನ್ನಾಗಿ ಪರಿವರ್ತಿಸಿಕೊಂಡಿರುವ ಎಂಐಎಂಗೆ ಈ ಬಾರಿಯೂ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಅಭಿಪ್ರಾಯವಿದೆ.

2014ರ ವಿಧಾನಸಭೆ ಚುನಾವಣೆಯಲ್ಲಿ 60 ಕ್ಷೇತ್ರಗಳಲ್ಲಿ ಗೆದ್ದಿದ್ದ ಟಿಆರ್​ಎಸ್, 2018ರ ವಿಧಾನಸಭೆ ಚುನಾವಣೆಯಲ್ಲಿ 90 ಸೀಟುಗಳನ್ನು ಬಾಚಿಕೊಂಡಿತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್​ಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. 2014ರಲ್ಲಿ 5 ಶಾಸಕರನ್ನು ಹೊಂದಿದ್ದ ಬಿಜೆಪಿ 2018ರಲ್ಲಿ ಕೇವಲ 1 ಕ್ಷೇತ್ರಕ್ಕೆ ಕುಸಿಯಿತು!

‘‘ಲೋಕಸಭೆ ಚುನಾವಣೆಗೆ ‘ಮೋದಿ ವರ್ಸಸ್ ಕೆಸಿಆರ್ ವರ್ಸಸ್ ರಾಹುಲ್’ ಎಂಬ ವಾತಾವರಣ ನಿರ್ವಣವಾಗಿದ್ದರೂ, ಬಿಜೆಪಿಗೆ ಇಲ್ಲಿ ಸದೃಢ ನೆಲೆಯಿಲ್ಲ. ಇದು ಕೆಸಿಆರ್ ವರ್ಸಸ್ ರಾಹುಲ್ ಅಷ್ಟೇ. ತೆಲಂಗಾಣ ರಾಜ್ಯ ರಚನೆಗೆ ಕಾಂಗ್ರೆಸ್ ಮೂಲ ಕಾರಣ ಎಂಬ ಭಾವನಾತ್ಮಕ ಸೆಳೆತದ ಮೂಲಕ ಮತ ಗಳಿಸುವುದು ಕಾಂಗ್ರೆಸ್ ತಂತ್ರಗಾರಿಕೆ’ ಎಂದು ತೆಲಂಗಾಣದ ಪತ್ರಕರ್ತರೊಬ್ಬರು ಹೇಳುತ್ತಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಸೋನಿಯಾ ಗಾಂಧಿ ಒಪ್ಪಿಕೊಂಡಿದ್ದರಿಂದಲೇ ಹೊಸ ರಾಜ್ಯ ಸ್ಥಾಪನೆಯಾಯಿತು ಎಂಬ ಭಾವನೆ ರಾಜ್ಯದ ಅನೇಕರಲ್ಲಿದೆ. ಹೀಗಾಗಿ, ಲೋಕಸಭೆ ಚುನಾವಣೆ ವೇಳೆ ಸೋನಿಯಾ ಗಾಂಧಿ ಪ್ರಚಾರ ರ‍್ಯಾಲಿ ನಡೆಸಲೂಬಹುದು ಎಂದು ಹೇಳಲಾಗಿದೆ.

ಕವಿತಾ ಜನಪ್ರಿಯತೆ

ಕೆಸಿಆರ್ ಪುತ್ರಿ ಕಲ್ವಕುಂಟ್ಲ ಕವಿತಾ ನಿಜಾಮಾಬಾದ್ ಕ್ಷೇತ್ರದ ಸಂಸದೆ. ಯುನಿವರ್ಸಿಟಿ ಆಫ್ ಸದರ್ನ್ ಮಿಸಿಸಿಪ್ಪಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಕವಿತಾ 2004ರ ತನಕ ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಧುಮುಕಿ, ಜನಾಂದೋಲನದ ಮೂಲಕವೇ ಮನೆ ಮಾತಾದರು. 2014ರ ಲೋಕಸಭೆ ಚುನಾವಣೆಯಲ್ಲಿ ಕವಿತಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಧುಯಾಕ್ಷಿ ಗೌಡ್ ಠೇವಣಿ ಕಳೆದುಕೊಂಡರು. ನಿಜಾಮಾಬಾದ್ ಲೋಕಸಭೆ ವ್ಯಾಪ್ತಿಗೆ ಬರುವ ಏಳೂ ವಿಧಾನಸಭೆ ಕ್ಷೇತ್ರಗಳನ್ನು ಈ ಬಾರಿ ಟಿಆರ್​ಎಸ್ ಗೆದ್ದುಕೊಂಡಿರುವುದರಿಂದ ಮಧುಯಾಕ್ಷಿ ಗೌಡ್ ‘ನಾನು ಇಲ್ಲಿ ಸ್ಪರ್ಧಿಸಲಾರೆ’ ಎಂದು ಭುವನಗಿರಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ವಿಷಯಗಳ ಬಗ್ಗೆ ಜ್ಞಾನ ಹೊಂದಿರುವ ಕವಿತಾ ಸಂಸದರಾಗಿ ಭರವಸೆ ಮೂಡಿಸಿದ್ದಾರೆ.

ಓವೈಸಿ ವಿರುದ್ಧ ಅಜರ್?

ಎಂಐಎಂನ ಏಕೈಕ ಸಂಸದ ಅಸಾದುದ್ದಿನ್ ಓವೈಸಿ ಈ ಬಾರಿಯೂ ಹೈದರಾಬಾದ್​ನಿಂದ ಸ್ಪರ್ಧಿಸಲಿದ್ದಾರೆ. ಶೇ.70ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಈ ಕ್ಷೇತ್ರದ ಮತದಾರರು ಎಂಐಎಂ ಹೊರತುಪಡಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ವಿರಳ. ಅಸಾದುದ್ದಿನ್ ಸೋದರ ಅಕ್ಬರುದ್ದಿನ್ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಭಾಷಣಗಳಿಗೆ ಕುಖ್ಯಾತಿಯಾದವರು. ಆದರೆ ಅಸಾದುದ್ದಿನ್ ಆ ಹಾದಿ ಹಿಡಿದಿಲ್ಲ. ಸಂಸದರಾಗಿ ಸಕ್ರಿಯ ಕಾರ್ಯನಿರ್ವಹಣೆ ಗುರುತಿಸಿಯೆ ಅವರಿಗೆ 2014ರಲ್ಲಿ ‘ಸಂಸದ ರತ್ನ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಸಾದುದ್ದಿನ್ ಸೋಲಿಸಲು ಈ ಬಾರಿ ಕಾಂಗ್ರೆಸ್ ಮಾಜಿ ಕ್ರಿಕೆಟರ್, ಮಾಜಿ ಸಂಸದ ಮಹಮ್ಮದ್ ಅಜರುದ್ದಿನ್​ರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ.

ಬಿಹಾರದಲ್ಲಿ ಹೊಸ ಖದರ್

ಬಿಹಾರದಲ್ಲಿ ಬಿಜೆಪಿ ಮತ್ತು ಸಂಯುಕ್ತ ಜನತಾದಳ ನಡುವೆ ಸೀಟು ಹಂಚಿಕೆ ಸಾಕಷ್ಟು ಮುಂಚೆಯೇ ಇತ್ಯರ್ಥಗೊಂಡಿರುವುದು ಗೊತ್ತಿರುವಂಥದ್ದೇ. ಆದರೆ, ರಾಜಕೀಯದ ಕಾಲಚಕ್ರ ಎಷ್ಟು ವೇಗವಾಗಿ ಬದಲಾಗುತ್ತೆ ಅಂದ್ರೆ 2014ರ ಹೊತ್ತಲ್ಲಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದ ಬಿಹಾರ ಸಿಎಂ ನಿತೀಶ್​ಕುಮಾರ್ ಈಗ ಅದೇ ಮೋದಿಯವರೊಂದಿಗೆ ಲೋಕಸಭಾ ಚುನಾವಣೆಗಾಗಿ ಜಂಟಿ ಪ್ರಚಾರ ನಡೆಸಲು ಉತ್ಸುಕರಾಗಿದ್ದಾರೆ! ಈಗ ಹಲವು ವೇದಿಕೆಗಳಲ್ಲಿ ಮೋದಿ ಗುಣಗಾನ ಮಾಡುತ್ತಿರುವ ನಿತೀಶ್ ‘ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದ್ದು, ಅದನ್ನು ಮೋದಿ ನೀಡಬಲ್ಲರು’ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಹಳೇ ಸ್ನೇಹಿತರು ಹೊಸ ಖದರ್​ನಿಂದ ಪ್ರಚಾರರ್ಯಾಲಿಗಳನ್ನೂ ನಡೆಸಲಿದ್ದಾರೆ. ಈ ವಿದ್ಯಮಾನವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ‘ನಿತೀಶ್ ಸರಿಯಾದ ಸಮಯಕ್ಕೆ ಸೂಕ್ತ ನಿರ್ಣಯ ತಳೆಯುವುದರಲ್ಲಿ ನಿಷ್ಣಾತರು’, ‘ಲಾಲು ಪುತ್ರರ ಸಖ್ಯ ತೊರೆದ ಬಳಿಕ ಅವರಿಗೆ ಜ್ಞಾನೋದಯವಾಗಿದೆ’, ‘ನಿತೀಶ್​ರ ಪ್ರಧಾನಿ ಆಗುವ ಆಕಾಂಕ್ಷೆ ಈಗ ತಣ್ಣಗಾಗಿದೆ’ ಎಂಬೆಲ್ಲ ಟ್ವೀಟ್​ಗಳು ಸದ್ದು ಮಾಡಿವೆ.

ರಾಜೀವ್ ಹತ್ಯೆಯ ಕಹಿ ಅಧ್ಯಾಯ

10ನೇ ಲೋಕಸಭೆಗೆ 1991ರ ಮೇ ತಿಂಗಳಲ್ಲಿ ಚುನಾವಣೆಗೆ ಸಿದ್ಧತೆಗಳು ಸಾಗಿದ್ದವು. ಮೊದಲ ಹಂತದ ಮತದಾನ ಸಂಪನ್ನಗೊಂಡ ಒಂದು ದಿನದ ತರುವಾಯ, ದುರಂತವೊಂದು ಘಟಿಸಿತು. ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆಂದು ತೆರಳಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಎಲ್​ಟಿಟಿಇ ಉಗ್ರರು ಹೆಣೆದಿದ್ದ ಮೋಸದ ಜಾಲಕ್ಕೆ ಬಲಿಯಾಗಿ ಅಸುನೀಗಿದರು. ಹೀಗಾಗಿ ಚುನಾವಣಾ ದಿನಾಂಕಗಳನ್ನು ಜೂನ್ ಮಧ್ಯಭಾಗಕ್ಕೆ ಮುಂದೂಡಲಾಯಿತು. 12 ಮತ್ತು 15ರಂದು ಮತದಾನ ನಡೆಯಿತಾದರೂ, ಅಂದುಕೊಂಡಷ್ಟು ಉತ್ಸಾಹ ಇರಲಿಲ್ಲ. ಅದುವರೆಗಿನ ಸಂಸದೀಯ ಚುನಾವಣೆಗಳಲ್ಲೇ ಅತಿಕಮ್ಮಿ ಎನ್ನುವಂತೆ ಶೇ. 53ರಷ್ಟು ಮತಚಲಾವಣೆಯಾಯಿತು. ರಾಜೀವ್ ಹತ್ಯೆ-ಪೂರ್ವದ ಮತದಾನದಲ್ಲಿ ಕಳಪೆ ಪ್ರದರ್ಶನ ದಾಖಲಿಸಿದ ಕಾಂಗ್ರೆಸ್, ಹತ್ಯಾನಂತರದಲ್ಲಿ ಅನುಕಂಪದ ಅಲೆಯ ಪ್ರಯೋಜನವನ್ನು ದಕ್ಕಿಸಿಕೊಂಡಿತು. ಆದರೆ ‘ಭಾರಿ’ ಎನ್ನಬಹುದಾದಷ್ಟು ಸ್ಥಾನಗಳು ದಕ್ಕದ ಕಾರಣ ಕಾಂಗ್ರೆಸ್ ನೇತೃತ್ವದ ಅಲ್ಪಮತದ ಸರ್ಕಾರಕ್ಕೆ ‘ಗದ್ದುಗೆಭಾಗ್ಯ’ ದಕ್ಕಿತು. ಚುನಾವಣೆಗೂ ಮುನ್ನ ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದ ನರಸಿಂಹ ರಾಯರಿಗೆ, ಅವರಿಗಿದ್ದ ರಾಜಕೀಯ ಪ್ರೌಢಿಮೆಗೆ ಕೊನೆಗೂ ಪ್ರಧಾನಿಗಿರಿ ಒಲಿದುಬಂತು.