ಸಿನಿಮಾ ಶೈಲಿಯಲ್ಲೇ ಕವನ ಗೀಚಿ ರಾಜಕೀಯ ನಿಲುವು ಸ್ಪಷ್ಟಪಡಿಸಿದ ವಿಕಟಕವಿ ಯೋಗರಾಜ್​ ಭಟ್​

ಬೆಂಗಳೂರು: ಮಂಡ್ಯ ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಬಹಳ ಹಿಂದಿನಿಂದಲೂ ನಂಟಿದ್ದು, ಅದಕ್ಕೆ ಅಂಬರೀಷ್ ಅವರೇ ಕಾರಣ​ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂಬರೀಷ್​ ನಂತರದ ಸ್ಥಾನವನ್ನು ಅವರ ಧರ್ಮಪತ್ನಿ ಸುಮಲತಾ ಅಂಬರೀಷ್​ ಅವರು ತುಂಬಲು ಕಾತುರರಾಗಿದ್ದು, ಈಗಾಗಲೇ ಸಿನಿಮಾ ರಂಗದ ಕೆಲವರು ಬೆಂಬಲ ಘೋಷಿಸಿದ್ದಾರೆ. ಆದರೆ, ಕೆಲವರು ನಮಗ್ಯಾಕೆ ಎಂದು ರಾಜಕೀಯದಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಸುಮಲತಾ ಅವರಿಗೆ ಬಹಿರಂಗವಾಗಿಯೇ ನಟ ದರ್ಶನ್​ ಹಾಗೂ ಯಶ್​ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ, ರಾಕ್​ಲೈನ್​ ವೆಂಕಟೇಶ್​ ಹಾಗೂ ಹಿರಿಯ ನಟ ದೊಡ್ಡಣ ಅವರು ಕೂಡ ಬೆನ್ನ ಹಿಂದೆ ನಿಂತರು. ನಟ ಸುದೀಪ್​​ ಟ್ವೀಟ್​ ಮೂಲಕ ಶುಭಕೋರಿ ಸುಮ್ಮನಾಗಿಬಿಟ್ಟರು. ಇದರ ಮಧ್ಯೆ ನಟ ಪುನೀತ್​ ರಾಜ್​ಕುಮಾರ್​ ನನ್ನನ್ನು ರಾಜಕೀಯಕ್ಕೆ ಎಳೆದು ತರಬೇಡಿ, ನಾನು ಯಾರಿಗೂ ಬೆಂಬಲ ನೀಡುವುದಿಲ್ಲ ಎಂದು ಫೇಸ್​ಬುಕ್​ ಮೂಲಕ ನೇರವಾಗಿ ಹೇಳಿಯೇ ಬಿಟ್ಟರು. ಇದೀಗ ಪ್ರಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ ಅವರ ಸರದಿ. ಎಂದಿನಂತೆ ಅವರು ಸಿನಿಮಾ ಶೈಲಿಯಲ್ಲೇ ರಾಜಕೀಯದಿಂದ ದೂರ ಎಂದಿದ್ದಾರೆ.

ತಮ್ಮ ಫೇಸ್​ಬುಕ್​ನಲ್ಲಿ ಕವನದ ಮೂಲಕ ಪ್ರಸ್ತುತ ರಾಜಕೀಯದ ಬಗ್ಗೆ ಸಂದೇಶ ರವಾನಿಸಿರುವ ಭಟ್ಟರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ನಾನು ರಾಜಕಾರಣದ ಆರಾಧಕನಲ್ಲ. ಎಡ-ಬಲ, ಮಧ್ಯೆ, ಮೇಲೆ-ಕೆಳಗೆ, ಜಾತಿ-ಪಾತಿ ಯಾವುದಕ್ಕೂ ನಾ ಸೇರಿಲ್ಲ. ನನ್ನ ಕೆಲವು ಕವನದ ಸಾಲುಗಳನ್ನು ಗಾದೆ ರೀತಿಯ ಬರಹಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ನನಗೆ ಇದೊಂತರ ಹಿಂಸೆಯಾಗಿದೆ. ಆದ್ದರಿಂದ ಓದುಗರು, ನೋಡುಗರು ನನ್ನನ್ನು ಯಾವುದೇ ಪಕ್ಷದ ರಾಜಕೀಯಕ್ಕೆ ಸೇರಿಸದೇ ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಯೋಗರಾಜ್​ ಭಟ್ಟರು ಕಳೆದ ವಿಧಾನಸಭೆಯ ಚುನಾವಣೆ ಸಮಯದಲ್ಲಿ ಚುನಾವಣಾ ರಾಯಭಾರಿ ಆಗಿದ್ದರು. ಅಲ್ಲದೆ, ಭಟ್ರು ಚುನಾವಣಾ ಆಯೋಗದ ಥೀಮ್ ಸಾಂಗ್ ಅನ್ನು ಬರೆದಿದ್ದರು. ವಿಕಟಕವಿ ಬರೆದಿದ್ದ ‘ಯಾವೊನೀಗ್ ವೋಟ್ ಹಾಕೋದೊ ಗೊತ್ತಾಗ್ತಿಲ್ಲ’ ಎಂಬ ಹಾಡು ಸಾಕಷ್ಟು ಕ್ರೇಜ್​ ಸೃಷ್ಟಿ ಮಾಡಿತ್ತು. (ದಿಗ್ವಿಜಯ ನ್ಯೂಸ್​)

🙏🙏🙏🙏🙏

Yogaraj Bhat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮಾರ್ಚ್ 25, 2019

Leave a Reply

Your email address will not be published. Required fields are marked *