ಚುನಾವಣೆ ವೇಳೆ ವಲಸೆ ಭೂತ ಪ್ರತ್ಯಕ್ಷ: ಗುಡ್ಡಗಾಡಿನ ಉತ್ತರಾಖಂಡದ ಹಳ್ಳಿಗಳ ಕಥೆ-ವ್ಯಥೆ

ವಲಸೆ ಸಮಸ್ಯೆ ತೀವ್ರವಾಗಿದ್ದರಿಂದಲೇ ಉತ್ತರಪ್ರದೇಶದಿಂದ ಬೇರ್ಪಟ್ಟು ಉತ್ತರಾಖಂಡ ಹೊಸ ರಾಜ್ಯವಾಯಿತು. ಆದರೆ, ಈ ಸಮಸ್ಯೆಗೆ ಪರಿಹಾರ ಸಿಗುವ ಬದಲು ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಸಾವಿರಾರು ಹಳ್ಳಿಗಳು ಜನರೇ ಇಲ್ಲದೆ ಭಣಗುಡುತ್ತಿವೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಈ ವಲಸೆ ಸಮಸ್ಯೆ ಮುನ್ನೆಲೆಗೆ ಬರುತ್ತದೆ. ರಾಜಕೀಯ ಲಾಭಕ್ಕಾಗಿ ಈ ಸಮಸ್ಯೆ ಬಳಸಿಕೊಳ್ಳ ಲಾಗುತ್ತಿದ್ದು, ಜನರ ಕಷ್ಟಕ್ಕೆ ಕೊನೆಯಿಲ್ಲ ಎಂಬಂತಾಗಿದೆ. ಈ ಚುನಾವಣೆಯಲ್ಲೂ ವಲಸೆ ಸಮಸ್ಯೆ ಪ್ರಮುಖವಾಗಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಸ್ತವ ಕಂಡುಕೊಳ್ಳಲು ಉತ್ತರಾ ಖಂಡದ ಪೌರಿ ಗಡ್ವಾಲ್ ಜಿಲ್ಲೆಯ ಅನಾಥ, ನಿರ್ಜನ ಹಳ್ಳಿಗಳಿಗೆ ಭೇಟಿ ನೀಡಿದ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಅಲ್ಲಿನ ಕರಾಳ ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಸಾಮೂಹಿಕ ವಲಸೆ ಉತ್ತರಾಖಂಡವನ್ನು ವಿಪರೀತವಾಗಿ ಬಾಧಿಸತೊಡಗಿದೆ. ಕಿರಿದಾದ ರಸ್ತೆ, ಭೂಕುಸಿತದ ಭೀತಿ, ಬೆಟ್ಟ-ಗುಡ್ಡ, ಕಾಡು-ಮೇಡುಗಳ ಮಧ್ಯೆ ಆತಂಕದ ಬದುಕು, ಕೈಕೊಡುವ ಕೃಷಿ, ಹವಾಮಾನ ವೈಪರೀತ್ಯ, ರಸ್ತೆ-ಆಸ್ಪತ್ರೆ-ಶಾಲೆಗಳ ಸೌಕರ್ಯದ ಕೊರತೆ… ದಶಕಗಳಿಂದ ಮೂಲಸೌಲಭ್ಯಗಳಿಂದ ವಂಚಿತರಾಗಿ, ನೋವು ನುಂಗಿಕೊಂಡು ಬದುಕಿದ ಮನಸ್ಸುಗಳು ಹೊಸ ಬದುಕನ್ನು ಅರಸಿ ಪೇಟೆ-ಪಟ್ಟಣ, ನಗರಗಳತ್ತ ಮುಖ ಮಾಡಿವೆ/ಮಾಡುತ್ತಿವೆ. ಕೆಲವು ಹಿರಿಯ ಜೀವಗಳು ಮಾತ್ರ ‘ಏನೇ ಕಷ್ಟ ಬರಲಿ ಹಳ್ಳಿ ಬಿಟ್ಟು ಬರಲಾರೆ’ ಎನ್ನುತ್ತಿದ್ದರೆ, ಎರಡನೇ ತಲೆಮಾರಿನ ಮಂದಿ ‘ಸಾಕಪ್ಪಾ ಹಳ್ಳಿ ಸಹವಾಸ’ ಎಂದು ಪಟ್ಟಣಗಳಲ್ಲಿ ಗೂಡು ಕಟ್ಟಿಕೊಂಡಿದ್ದಾರೆ. ಗ್ರಾಮಗಳು ಖಾಲಿಯಾಗುತ್ತಿದ್ದರೆ, ನಗರಗಳು ತುಂಬುತ್ತಿವೆ. ಇದು ಗುಡ್ಡಗಾಡಿನ ಎತ್ತರ ಪ್ರದೇಶದಲ್ಲಿರುವ ಉತ್ತರಾಖಂಡದ ಹಳ್ಳಿಗಳ ಕಥೆ-ವ್ಯಥೆ. ಜನರಿಂದ ತುಂಬಿದ್ದ ಗ್ರಾಮಗಳು ನಿರ್ಜನ ಪ್ರದೇಶಗಳಾಗಿರುವುದರಿಂದಲೇ ಅವುಗಳನ್ನು ‘ದೆವ್ವದ ಹಳ್ಳಿಗಳು’ (ಹಿಂದಿಯಲ್ಲಿ ‘ಭೂತಿಯಾ ಗಾಂವ್’) ಎಂದೇ ಕರೆಯಲಾಗುತ್ತಿದೆ. ರಾಜ್ಯದ ಪೌರಿ ಗಡ್ವಾಲ್ ಜಿಲೆಯಲ್ಲಿ ವಲಸೆ ಮಿತಿ ಮೀರುತ್ತಿದೆ. ಈ ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಸಿ. ಖಂಡೂರಿ, ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಹೇಳಿದರೂ, ‘ಹಳ್ಳಿಗಳ ದಯನೀಯ ಸಾವು’ ಮಾತ್ರ ಮುಂದುವರಿದಿದೆ. ವಾಸ್ತವದಲ್ಲಿ ಇಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ವಲಸೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಮಕ್ಕಳ ಒತ್ತಾಯ: ವಿದ್ಯಾಭ್ಯಾಸ ಪಡೆದು ಉದ್ಯೋಗಕ್ಕಾಗಿ ಡೆಹರಾಡೂನ್, ಜೈಪುರ, ಮುಂಬೈ, ದೆಹಲಿ, ಗುರುಗ್ರಾಮ, ನೋಯ್ಡಾ, ಲಖನೌ ಸೇರಿ ವಿವಿಧ ನಗರಗಳಿಗೆ ಹೋದವರು ಹೇಗೆ ತಾನೆ ವಾಪಸ್ ಬರುತ್ತಾರೆ? ಹಳ್ಳಿಗೆ ಬಂದೇನು ಮಾಡುವುದು? ಹೀಗಾಗಿ ಅಪ್ಪ-ಅಮ್ಮನಿಗೂ ಹಳ್ಳಿ ಬಿಡಬೇಕೆಂಬ ಧರ್ಮಸಂಕಟ! ಕೃಷಿಕಾರ್ಯಕ್ಕೆ ಹೆಗಲು ಕೊಡಲು ಯಾರೂ ಇಲ್ಲದಿದ್ದಾಗ ಹಿರಿಯ ಜೀವಗಳು ಏನು ತಾನೆ ಮಾಡಬೇಕು? ‘ರಸ್ತೆಸಂಪರ್ಕ, ಆರೋಗ್ಯ ಕೇಂದ್ರಗಳು ಕಿ.ಮೀ.ಗಟ್ಟಲೆ ದೂರದಲ್ಲಿವೆ. ಆರೋಗ್ಯ ಕೆಟ್ಟರೆ ಆಸ್ಪತ್ರೆ ಸೇರಿಸುವ ಮುನ್ನ ರಸ್ತೆಯಲ್ಲೇ ಪ್ರಾಣ ಬಿಡುವ ಎಷ್ಟೋ ಮಂದಿಯನ್ನು ನಾನು ನೋಡಿದ್ದೇನೆ. ನಾಳೆ ನನ್ನ ಕಥೆ ಏನು ಗೊತ್ತಿಲ್ಲ. ಹೀಗಾಗಿ ಮಕ್ಕಳು ನಾವಿದ್ದಲ್ಲಿಗೆ ಬಂದು ಬಿಡಿ ಎಂದು ಒತ್ತಾಯಿಸುತ್ತಾರೆ’ ಎಂದು ಸೈನಾರ್ ಹಳ್ಳಿಯ 80 ವರ್ಷದ ತ್ರಿಲೋಕ್ ಸಿಂಗ್ ಹೇಳಿದರು. ‘ಸೈನಾರ್​ನಲ್ಲಿ ಹಿಂದೆ ಕೂಡು ಕುಟುಂಬಗಳಿದ್ದವು. ಹತ್ತಾರು ಸಂಖ್ಯೆಯಲ್ಲಿ ಸಂಬಂಧಿಕರಿ ರುತ್ತಿದ್ದರು. ಆದರೆ, ಕಾಲ ಬದಲಾದಂತೆ ಅಣ್ಣ-ತಮ್ಮಂದಿರು ಬೇರ್ಪಟ್ಟರು. ಕೆಲಸಕ್ಕಾಗಿ ನಗರಮುಖಿಯಾದರು. ಮೂಲಭೂತ ಸೌಕರ್ಯದ ಕೊರತೆಯೊಂದೇ ಅಲ್ಲ. ವಲಸೆ ಬಿಕ್ಕಟ್ಟಿಗೆ ಹಲವು ಆಯಾಮಗಳಿವೆ’ ಎಂದು ಮಧ್ಯ ವಯಸ್ಸಿನ ಮನಮೋಹನ್ ವಿವರಿಸಿದರು.

ಲೋಕಸಭೆ ಚಿತ್ರಣ

ಪೌರಿ ಗಡ್ವಾಲ್ ಲೋಕಸಭೆ ಈ ಬಾರಿ ವಿಚಿತ್ರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬಿಜೆಪಿ ಸಂಸದ ಬಿ.ಸಿ. ಖಂಡೂರಿ ಪುತ್ರ ಮನೀಷ್ ಖಂಡೂರಿ ಕೈ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಬಿ.ಸಿ. ಖಂಡೂರಿಗೆ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯ ಘಟಕದ ಮಾಜಿ ಅಧ್ಯಕ್ಷ, ಖಂಡೂರಿಯವರ ಒಂದು ಕಾಲದ ಶಿಷ್ಯ ತೀರಥ್ ಸಿಂಗ್ ರಾವತ್ ಕಣದಲ್ಲಿದ್ದಾರೆ. ‘ಟಿಕೆಟ್ ಇಲ್ಲ’ ಎಂದು ವರಿಷ್ಠರು ಸಂದೇಶ ರವಾನಿಸಿದ ಬಳಿಕ ಖಂಡೂರಿ ಪುತ್ರ ನಿಗೆ ಟಿಕೆಟ್ ಕೇಳಿದ್ದರು. ಆದರೆ ವರಿಷ್ಠರು ಒಪ್ಪಿರ ಲಿಲ್ಲ. ಹೀಗಾಗಿಯೇ ಜೂನಿ ಯರ್ ಖಂಡೂರಿ ಕಾಂಗ್ರೆಸ್ ಸೇರಿದ್ದಾರೆ. ಖಂಡೂರಿ ಪುತ್ರಿ ಪೌರಿ ಗಡ್ವಾಲ್ ಜಿಲ್ಲೆ ಯಮಕೇಶ್ವರ್ ಕ್ಷೇತ್ರದ ಶಾಸಕಿ.

ವಲಸೆಗೆ ಕಾರಣ?

# ಹವಾಮಾನ ವೈಪರೀತ್ಯ, ಕೃಷಿನಾಶ
# ಜಾಗತಿಕ ತಾಪಮಾನ ಏರಿಕೆ
# ನೀರಿನ ಕೊರತೆ
# ರಸ್ತೆ ಸಂಪರ್ಕವಿಲ್ಲದಿರುವುದು
# ತಕ್ಷಣಕ್ಕೆ ಸ್ಪಂದಿಸಬಲ್ಲ ಆರೋಗ್ಯ ವ್ಯವಸ್ಥೆಯ ಅಲಭ್ಯತೆ
# ಕಾಡುಪ್ರಾಣಿಗಳ ಕಾಟ
# ಯುವಕರ ನಿರುದ್ಯೋಗ
# ಬಡತನದಿಂದ ಬೇಸತ್ತು ಹಣ ಸಂಪಾದನೆಗಾಗಿ ಪೇಟೆಗೆ
# ಎರಡನೇ ತಲೆಮಾರಿಗೆ ಬೇಡವಾದ ಹಳ್ಳಿ ಬದುಕು
# ಕೂಡು ಕುಟುಂಬಗಳು ಒಡೆಯುತ್ತಿರುವುದು
# ಖಾಸಗಿಯಾದ, ಸುಖಕರ ಬದುಕಿನ ಕನಸು. ನವ ವಿವಾಹಿತರು ನಗರಕ್ಕೆ ವಲಸೆ
# ಕೃಷಿ ಕೆಲಸಗಳಿಗೆ ಕಾರ್ವಿುಕರು ಸಿಗುತ್ತಿಲ್ಲ

ಯಾವ್ಯಾವ ಜಿಲ್ಲೆಗಳಿಂದ ವಲಸೆ?

-ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ, ತೆಹ್ರಿ ಗಡ್ವಾಲ್, ಪೌರಿ ಗಡ್ವಾಲ್, ಡೆಹರಾಡೂನ್, ಪಿತೋರಾಗಢ, ಬಾಗೇಶ್ವರ, ಅಲ್ಮೋರಾ, ಚಂಪಾವತ್, ನೈನಿತಾಲ್, ಉಧಮ್ಂಗ್ ನಗರ್, ಹರಿದ್ವಾರ

ನ ಪಾನಿ, ನ ಕುಛ್ ಸುವಿಧಾ…!

‘ಕೌನ್ ರಹೇಗಾ ಇಸ್ ಗಾವೋ ಮೇ? ಪತ್ಥರ್ ಹೀ ಪತ್ಥರ್ ಹೇ… ನ ಪಾನಿ, ನ ಕುಛ್ ಸುವಿಧಾ…(ಯಾರು ಇರುತ್ತಾರೆ ಈ ಹಳ್ಳಿಗಳಲ್ಲಿ, ಬರೀ ಕಲ್ಲುಗಳಿವೆ. ನೀರಿಲ್ಲ, ಇತರೆ ಯಾವುದೇ ಸೌಕರ್ಯಗಳಿಲ್ಲ) ನಮ್ಮ ಮಕ್ಕಳಿಗೆ ಇದು ಬೇಕಾಗಿಲ್ಲ. ನಮ್ಮ ನಂತರ ಈ ಹಳ್ಳಿಗಳಲ್ಲಿ ಯಾರೂ ಇರಲಾರರು’ ಎಂದು ಆತನೊಂದಿಗೆ ಬಂದಿದ್ದ ಕೃಪಾಲ್ ಭವಿಷ್ಯದ ಭಯಾನಕ ಚಿತ್ರಣ ಮುಂದಿಟ್ಟರು. ಉತ್ತರಾಖಂಡದ ಶೇ.60ಷ್ಟು ಮಂದಿಗೆ ಈಗಲೂ ಕೃಷಿಯೇ ಜೀವನಾಧಾರ. ಕೇಂದ್ರ ಕೃಷಿ ಸಚಿವಾಲಯ ಈ ಹಿಂದೆ ನೀಡಿದ್ದ ವರದಿಯೊಂದರ ಪ್ರಕಾರ 2000-2001 7,69,944 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿಭೂಮಿ 2013-14ಕ್ಕೆ 7,01,030ಕ್ಕೆ ಕುಸಿದಿದೆ. ಕಳೆದ ಏಳು ವರ್ಷಗಳಲ್ಲಿ ಬೇಸಾಯದ ಮತ್ತಷ್ಟು ಜಮೀನುಗಳು ಖಾಲಿಯಾಗಿವೆ. ಆಡಳಿತ ವ್ಯವಸ್ಥೆಯಿಂದ ನಿರ್ಲಕ್ಷ್ಯ್ಕೆ ಒಳಗಾಗಿದ್ದರೂ, ಹಳ್ಳಿ ಜನರಿಗೆ ಚುನಾವಣೆ ಬಗ್ಗೆ ಉತ್ಸಾಹವಿದೆ. ‘ಹೌದು, ವೋಟು ಹಾಕಿ ಯಾವುದೇ ಪ್ರಯೋಜನವಿಲ್ಲ. ಆದರೂ ಮತ ಹಾಕುತ್ತೇವೆ, ಅದು ನಮ್ಮ ಕರ್ತವ್ಯ’ ಎನ್ನುವ 75 ವರ್ಷದ ಸುಶೀಲಾದೇವಿ, ‘ದೇಶಹಿತಕ್ಕಾಗಿ ಮೋದಿ ಗೆಲ್ಲಬೇಕು. ಮೋದಿಯವರನ್ನು ನೋಡಿಲ್ಲ. ಆದರೆ ಒಳ್ಳೆಯ ನಾಯಕ ಎಂಬ ಮಾತುಗಳು ನನ್ನ ಕಿವಿಗೂ ಬಿದ್ದಿದೆ’ ಎಂದರು.

ರಂಗೇರಿದೆ ಚುನಾವಣಾ ಕಣ

ಉತ್ತರಾಖಂಡದಲ್ಲಿ ಹರಿದ್ವಾರ, ನೈನಿತಾಲ್-ಉಧಮ್ಂಗ್ ನಗರ, ಪೌರಿ ಗಡವಾಲ್, ತೆಹ್ರಿ ಗಡ್ವಾಲ್, ಅಲ್ಮೊರಾ ಎಂಬ 5 ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಪರಿಣಾಮ ಐದೂ ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಬದಲಾವಣೆಗೆ ಮತ ಹಾಕುವ ಮನಸ್ಥಿತಿ ಈ ರಾಜ್ಯದ ಜನರದ್ದು. ಐದೂ ಕ್ಷೇತ್ರಗಳಿಗೆ ನಾಳೆ (ಏ.11) ಮತದಾನ ನಡೆಯಲಿದೆ. ನೈನಿತಾಲ್​ನಿಂದ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಹರೀಶ್ ರಾವತ್ ಸ್ಪರ್ಧಾಕಣದಲ್ಲಿದ್ದಾರೆ. ಹರಿದ್ವಾರದಲ್ಲಿ ಬಿಜೆಪಿಯ ರಮೇಶ್ ಪೊಕ್ರಿಯಾಲ್ ನಿಷಾಂಕ್ ಸ್ಪರ್ಧಿಸುವ ಮೂಲಕ ಕದನ ಕುತೂಹಲ ಜೋರಾಗಿದೆ. ಮೋದಿ ಸರ್ಕಾರದ ಪಾಕ್​ವಿರೋಧಿ ನಿಲುವೇ ಹೆಚ್ಚು ಚರ್ಚೆಯಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಸೇನಾನಿಗಳ ಕುಟುಂಬವಿರುವ ಉತ್ತರಾಖಂಡದಲ್ಲಿ ಬಿಜೆಪಿ ಈ ಮತಗಳನ್ನೂ ಸೆಳೆಯುತ್ತಿದೆ. ನಿವೃತ್ತ ಸೈನಿಕರಿಗೆಂದೇ ಜಾರಿ ಮಾಡಲಾಗಿರುವ ‘ಏಕ ಶ್ರೇಣಿ ಏಕ ಪಿಂಚಣಿ’ ಯೋಜನೆಯ ಹೆಚ್ಚು ಫಲಾನುಭವಿಗಳು ಇದೇ ರಾಜ್ಯದಲ್ಲಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದರೆ, ಕಾಂಗ್ರೆಸ್ ರಾಜ್ಯ ಘಟಕದ ಘಟಾನುಘಟಿ ನಾಯಕರನ್ನೇ ಅವಲಂಬಿಸಿದೆ.

20 ಕಿಮೀ ನಡೆಯುತ್ತಿದ್ದೆವು!

ಸೈನಾರ್​ನ 80 ವರ್ಷದ ತ್ರಿಲೋಕ್ ಸಿಂಗ್ ಪ್ರೊವಿನ್ಷಿಯಲ್ ಆಮರ್್​ಡ್ ಫೋರ್ಸಸ್​ನಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದಾರೆ. ‘ಪಾಕ್ ವಿರುದ್ಧದ 1965 ಮತ್ತು 71 ಯುದ್ಧದಲ್ಲಿ ಹೋರಾಡಿದ ಹೆಮ್ಮೆಯಿದೆ. ಅದಕ್ಕಾಗಿ ಸರ್ಕಾರ ಕೊಟ್ಟ ಪದಕವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತೆಗೆದಿಟ್ಟಿದ್ದೇನೆ’ ಎನ್ನುವ ತ್ರಿಲೋಕ್ ಸಿಂಗ್ 34 ವರ್ಷಗಳ ಹಿಂದೆ ನಿವೃತ್ತಿಯಾಗಿ ಹಳ್ಳಿಯಲ್ಲಿ ಪತ್ನಿಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಪುತ್ರಿ ಅಂಗವೈಕಲ್ಯದಿಂದ ಬಳಲುತ್ತಿದ್ದಾಳೆ. ಮಗ ಮದುವೆಯಾಗಿ ಡೆಹರಾಡೂನ್​ನಲ್ಲಿ ಪತ್ನಿ ಜತೆ ನೆಲೆಸಿದ್ದಾನೆ. ಮೋದಿ ಸರ್ಕಾರದ ‘ಏಕ ಶ್ರೇಣಿ ಏಕ ಪಿಂಚಣಿ’ ಯೋಜನೆಯಿಂದಾಗಿ ನಾನೀಗ -ಠಿ; 10 ಸಾವಿರ ಪಿಂಚಣೆ ಪಡೆಯುತ್ತಿದ್ದೇನೆ’ ಎಂದವರು ವಿವರಿಸಿದರು. ‘ಒಂದೆರಡು ವರ್ಷಗಳ ಹಿಂದೆ ಸೈನಾರ್​ನ್ನು ಮಣ್ಣಿನ ರಸ್ತೆಯಿಂದ ಸಂರ್ಪಸಲಾಯತು. ವಾಹನ, ದೂರವಾಣಿ, ರಸ್ತೆ ಸಂಪರ್ಕವಿಲ್ಲದಿದ್ದ ದಿನಗಳಲ್ಲಿ ಮನೆ ಸಾಮಗ್ರಿಗಾಗಿ ಹಳ್ಳಿಯವೆಲ್ಲರೂ 15-20 ಕಿಮೀ ದೂರದಲ್ಲಿರುವ ಸತ್ಪುಲಿ ಪಟ್ಟಣಕ್ಕೆ ಕಾಡುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಕಾಡುಪ್ರಾಣಿಗಳು ಯಾವಾಗ ಬೇಕಾದರೂ ಆಕ್ರಮಣ ಮಾಡುವ ಆತಂಕವಿರುತ್ತಿತ್ತು. ಜೀವ ಕೈಯಲ್ಲಿ ಹಿಡಿದು ಮನೆ ಸೇರುತ್ತಿದ್ದೆವು’ ಎಂದು ಕಷ್ಟದ ದಿನಗಳನ್ನು ಸ್ಮರಿಸಿಕೊಂಡರು. ವಲಸೆ ಬಿಕ್ಕಟ್ಟು ಉತ್ತರಾಖಂಡಕ್ಕೆ ಹೊಸತೇನಲ್ಲ. ಆದರೆ, ಹಳ್ಳಿಗೆ ಹಳ್ಳಿಗಳೇ ಖಾಲಿಯಾಗು ತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಯುವಜನಾಂಗಕ್ಕೆ ಕೃಷಿಗಿಂತ ಹೆಚ್ಚು ಆಕರ್ಷಕ ಸಂಪಾದನೆಯ ಹತ್ತಾರು ದಾರಿಗಳು ಹುಟ್ಟಿಕೊಂಡಿವೆ. ಉತ್ತರಾಖಂಡದ ಹಳ್ಳಿಗಳೀಗ ‘ದೆವ್ವದ ಹಳ್ಳಿ’ಗಳಾಗಿ ಬದಲಾಗುತ್ತಿರುವುದು ಇದೇ ಕಾರಣಕ್ಕೆ!

ಗಂಭೀರ ಸಮಸ್ಯೆ

ವಲಸೆ ಬಿಕ್ಕಟ್ಟು ಪ್ರತಿ ಚುನಾವಣೆಯಲ್ಲೂ ಚರ್ಚೆಯಾಗುವ ಅಂಶ. ಸಿಎಂ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಬಿಜೆಪಿ ಸರ್ಕಾರ ‘ಮೊದಲ ಬಾರಿಗೆ ನಾವು ರಾಜ್ಯ ವಲಸೆ ಆಯೋಗ ರಚಿಸಿದ್ದೇವೆ. ಕಳೆದ 10 ವರ್ಷಗಳ ವಲಸೆ ಪ್ರಮಾಣ ಪತ್ತೆ ಹಚ್ಚಿ ಇದಕ್ಕೆ ಪೂರಕ ಕ್ರಮಗಳನ್ನು ಆಯೋಗ ಶಿಫಾರಸು ಮಾಡಲಿದೆ. ಆ ಮೂಲಕ ವಲಸೆ ತಡೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಹೇಳುತ್ತಿದೆ. ಹಾಗಾದರೆ ವಲಸೆ ಏಕೆ ಕಡಿಮೆಯಾಗಿಲ್ಲ? ಮುಂದಿನ 8-10 ವರ್ಷಗಳಲ್ಲಿ ಹತ್ತಾರು ಹಳ್ಳಿಗಳು ಇತಿಹಾಸದ ಪುಟ ಸೇರುವ ಆತಂಕವಿದೆ. 2011ರ ಜನಗಣತಿ ವರದಿ ಪ್ರಕಾರ ಉತ್ತರಾಖಂಡದ 16793 ಹಳ್ಳಿಗಳಲ್ಲಿ 1053 ಹಳ್ಳಿಗಳು ಮನುಷ್ಯರಿಲ್ಲದೆ ನಿರ್ಜನ ಪ್ರದೇಶಗಳಾಗಿವೆ! 405 ಹಳ್ಳಿಗಳು 10ಕ್ಕಿಂತ ಕಡಿಮೆ ಕುಟುಂಬ ಗಳಿಗೆ ಸಾಕ್ಷಿಯಾಗಿವೆ. ಈ ವರದಿಯಲ್ಲಿರುವಂತೆ, ರಾಜ್ಯದಲ್ಲಿ 1.1 ಕೋಟಿ ಜನಸಂಖ್ಯೆಯಿದೆ. ವಲಸೆ ಆಯೋಗದ ಪ್ರಕಾರ ಕಳೆದ 10 ವರ್ಷಗಳಲ್ಲಿ 1,18,981 ಮಂದಿ ಹಳ್ಳಿ ಬಿಟ್ಟಿದ್ದಾರೆ. 2013ರ ಉತ್ತರಾಖಂಡದ ಪ್ರವಾಹದ ಬಳಿಕವಂತೂ ಖಾಲಿಯಾಗಿರುವ ಹಳ್ಳಿಗಳ ಸಂಖ್ಯೆ 3500ಕ್ಕೆ ಏರಿದೆ.

One Reply to “ಚುನಾವಣೆ ವೇಳೆ ವಲಸೆ ಭೂತ ಪ್ರತ್ಯಕ್ಷ: ಗುಡ್ಡಗಾಡಿನ ಉತ್ತರಾಖಂಡದ ಹಳ್ಳಿಗಳ ಕಥೆ-ವ್ಯಥೆ”

 1. Very good news coverage story Sir. 🙏
  But what is a Reason?
  1) Political People
  2) Government Employees
  3) Casttisum etc..
  4) people,s

Comments are closed.