ನೀಚ ಹೇಳಿಕೆಯನ್ನು ಸಮರ್ಥಿಸಿಕೊಂಡ ಹಿರಿಯ ಕಾಂಗ್ರೆಸ್​ ಮುಖಂಡ ಮಣಿಶಂಕರ್

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು 2017ರಲ್ಲಿ ನೀಚ ಎಂದು ಜರಿದಿದ್ದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ, ಅದು ಈಗ ಭವಿಷ್ಯವಾಣಿಯಂತಾಗಿಲ್ಲವೇ ಎಂದು ಅಯ್ಯರ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಗುಜರಾತ್ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಅಯ್ಯರ್ ಅವರನ್ನು ಕಾಂಗ್ರೆಸ್​ನಿಂದ ಉಚ್ಚಾಟಿಸಲಾಗಿತ್ತು. ಆದರೆ ಚುನಾವಣೆ ನಂತರ ಮತ್ತೆ ಪಕ್ಷಕ್ಕೆ ರಾಹುಲ್ ಕರೆಯಿಸಿಕೊಂಡಿದ್ದರು. ಆದರೆ ಈಗ ಸ್ಯಾಮ್ ಪಿತ್ರೋಡಾ ಬಳಿಕ ಕಾಂಗ್ರೆಸ್​ಗೆ ಮತ್ತೊಮ್ಮೆ ತಲೆನೋವಾಗಿದ್ದಾರೆ.

ನ್ಯೂಸ್ ಪೋರ್ಟಲ್​ವೊಂದಕ್ಕೆ ಬರೆದಿರುವ ಬ್ಲಾಗ್​ನಲ್ಲಿ ಮೋದಿಯನ್ನು ಕಟುವಾಗಿ ನಿಂದಿಸಿದ್ದಾರೆ. ಮೋದಿ ಹೇಗಿದ್ದರೂ ಮೇ 23ರ ಬಳಿಕ ಮತದಾರರಿಂದ ಮೂಲೆಗುಂಪಾಗಲಿದ್ದಾರೆ. ಇದು ಕೊಳಕು ಮಾತಿನ ಪ್ರಧಾನಿಗೆ ತಕ್ಕಶಾಸ್ತಿಯಾಗಲಿದೆ. 2017ರ ಡಿಸೆಂಬರ್ 7ರಂದು ನಾನು ಪ್ರಧಾನಿಯನ್ನು ಹೇಗೆ ಬಣ್ಣಿಸಿದ್ದೆ ಎಂಬುದನ್ನು ನೆನಪಿಸಿಕೊಳ್ಳಿ. ನಾನು ಭವಿಷ್ಯ ನುಡಿದಂತಾಗಲಿಲ್ಲವೇ? ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿಯನ್ನು ‘ನೀಚ’ ಎಂದು ಕರೆದ ಹೇಳಿಕೆಯನ್ನು ಭವಿಷ್ಯವಾಣಿ ಎನ್ನುವ ಮೂಲಕ ಗಾಂಧಿ ಕುಟುಂಬದ ಮುಕುಟ‘ಮಣಿ’ ಕೊನೆಗೂ ರಾಹುಲ್ ಗಾಂಧಿಯ ‘ಪ್ರೀತಿಯ ರಾಜಕಾರಣ’ಕ್ಕೆ ತನ್ನ ಕೊಡುಗೆ ನೀಡಿದೆ.

| ಸಂಬಿತ್ ಪಾತ್ರಾ ಬಿಜೆಪಿ ವಕ್ತಾರ

ಎಲ್ಲ ಪ್ರಚಾರವನ್ನು ಸ್ಯಾಮ್ ಪಿತ್ರೋಡಾ ಪಡೆದುಕೊಳ್ಳುತ್ತಿರುವುದನ್ನು ಸಹಿಸದ ಮಣಿಶಂಕರ್ ಅಯ್ಯರ್, ಮತ್ತೆ ತಮ್ಮ ಬೈಗುಳದ ಹೇಳಿಕೆ ಮುಂದುವರಿಸಿದ್ದಾರೆ.

| ಅಮಿತ್ ಮಾಳವಿಯಾ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ

ರಾಹುಲ್ ಗಾಂಧಿ ತುರ್ತು ತಪ್ಪೊಪ್ಪಿಗೆ

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಿದ್ದು ತಪು್ಪ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯೇ ಹೇಳಿ ಕ್ಷಮೆ ಕೇಳಿದ್ದರು. ಅಂತೆಯೇ ನಾನೂ ಕೂಡ ಅದನ್ನೊಂದು ತಪು್ಪ ಎಂದೇ ಒಪ್ಪಿಕೊಳ್ಳುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಇದಲ್ಲದೇ, 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡವೂ ಅತ್ಯಂತ ದುಃಖದಾಯಕ ಸಂಗತಿ ಎಂದು ಸಂದರ್ಶನವೊಂದರಲ್ಲಿ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ನನಗೆ ಯಾವುದೇ ದ್ವೇಷಭಾವನೆಗಳಿಲ್ಲ. ಅವರ ದ್ವೇಷಕ್ಕೆ ಪ್ರೀತಿಯಿಂದಲೇ ಉತ್ತರ ಕೊಟ್ಟಿದ್ದೇನೆ. ಪ್ರೀತಿ, ಭಾತೃತ್ವ, ಸಹಬಾಳ್ವೆ, ಸಾಮೂಹಿಕವಾಗಿ ಸಾಗುವ ತತ್ವಗಳ ಆಧಾರದಲ್ಲಿ ಸರ್ಕಾರ ನಡೆಯಬೇಕು. ಆದರೆ, ಮೋದಿ ಕಳೆದೈದು ವರ್ಷಗಳಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.

ಮೋದಿಗೆ 56 ಇಂಚಿನ ಎದೆಯಿದೆ. ಆದರೆ ಕಾಂಗ್ರೆಸ್ ಹಾಗೂ ನನಗೆ 56 ಇಂಚಿನ ಹೃದಯವಿದೆ. ಅದಕ್ಕೆ ರೈತರ ಸಾಲ ಮನ್ನಾ ಮಾಡಿದ್ದೇವೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಪ್ರಿಯಾಂಕಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಿತ್ರ ವಿರೂಪಗೊಳಿಸಿ ಫೇಸ್​ಬುಕ್​ನಲ್ಲಿ ಪ್ರಕಟಿಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ವಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಬಿಡುಗಡೆ ವೇಳೆ ಲಿಖಿತವಾಗಿ ಕ್ಷಮೆಯಾಚಿಸಬೇಕೆಂದು ಕೋರ್ಟ್ ಸೂಚಿಸಿದೆ. ಕ್ಷಮೆ ಯಾಚಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ವಕೀಲರು ವಾದಿಸಿದರೂ, ಸುಪ್ರೀಂ ಕೋರ್ಟ್ ಅದನ್ನು ಮನ್ನಿಸಲಿಲ್ಲ.

Leave a Reply

Your email address will not be published. Required fields are marked *