ಸುಮಲತಾ ಸ್ಪರ್ಧೆ ಡಿಕೆಶಿ ಮಧ್ಯಪ್ರವೇಶ

ಬೆಂಗಳೂರು: ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿಲ್ಲದ ಜೆಡಿಎಸ್, ಹಠ ಕಟ್ಟಿ ಸುಮಲತಾ ಅಂಬರೀಷ್ ಅವರ ತೀರ್ಮಾನ ಬದಲಿಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಲಾರಂಭಿಸಿದೆ.

ಮಂಡ್ಯದಿಂದ ಕಣಕ್ಕಿಳಿಯುವ ಬಗ್ಗೆ ಸುಮಲತಾ ನೀಡಿರುವ ಹೇಳಿಕೆಗಳಿಂದ ಅಧೀರರಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಂದಾಗಬಹುದಾದ ತೀವ್ರತರಹದ ಬೆಳವಣಿಗೆ ಅರಿತು ಈಗಲೇ ಈ ಬೆಳವಣಿಗೆಗೆ ಫುಲ್​ಸ್ಟಾಪ್ ಇಡಲು ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಇದೀಗ ಕಾಂಗ್ರೆಸ್​ನ ನಾಯಕರು ಸುಮಲತಾ ಸಂಪರ್ಕದಲ್ಲಿರುವ ಚಿತ್ರರಂಗದ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದು, ತೀರ್ವನದಿಂದ ಹಿಂದೆ ಸರಿಯುವಂತೆ ಸುಮಲತಾ ಮನವೊಲಿಸಲು ತಂತ್ರ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಕಡೆ ಅವಕಾಶ ಮಾಡಿಕೊಡಲಾಗುತ್ತದೆ. ಮಂಡ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಬಿಡುವಂತೆ ಸುಮಲತಾರಿಗೆ ಕಾಂಗ್ರೆಸ್ ಸಂದೇಶ ಕಳಿಸಿದೆ.

ಜೆಡಿಎಸ್ ಆಕ್ರೋಶ: ಸುಮಲತಾ ಸ್ಪರ್ಧಿಸದಂತೆ ನೋಡಿ ಕೊಳ್ಳುವ ಜವಾಬ್ದಾರಿ ಡಿಕೆಶಿ ಹೆಗಲಿಗೆ ಹಾಕಲಾಗಿದ್ದು, ಅವರು ದೇವೇಗೌಡರೊಂದಿಗೂ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧೆಯ ಹೇಳಿಕೆಯಿಂದ ಗೊಂದಲ ಉಂಟಾಗಿ, ದೊಡ್ಡ ಹೊಡೆತ ಬೀಳಲಿದೆ. ನಮ್ಮದೇ ಸಮುದಾಯದವರು ನಮಗೇ ಮುಳುವಾಗಲಿದ್ದಾರೆ. ಇದುವರೆಗೂ ಸುಮಲತಾ ನಮ್ಮ ಬಳಿ ಬಂದು ಏನೂ ಚರ್ಚೆ ಮಾಡಿಲ್ಲ. ನಿಮ್ಮದೇ ಪಕ್ಷದ ಕೆಲವರು ನಿಲ್ಲುವಂತೆ ಪ್ರಚೋದನೆ ಮಾಡುತ್ತಿದ್ದಾರೆ. ಅವರು ಕಣಕ್ಕೆ ಇಳಿಯದಂತೆ ನೋಡಿಕೊಳ್ಳಬೇಕೆಂದು ದೇವೇಗೌಡರು ಡಿ.ಕೆ.ಶಿವಕುಮಾರ್​ಗೆ ಹೇಳಿದ್ದಾರೆಂದು ತಿಳಿದುಬಂದಿದೆ. ದೇವೇಗೌಡ ಭೇಟಿ ಬೆನ್ನಲ್ಲೇ ನಿರ್ವಪಕ ರಾಕ್​ಲೈನ್ ವೆಂಕಟೇಶ್ ಜತೆ ಡಿಕೆಶಿ ಚರ್ಚೆ ನಡೆಸಿದ್ದಾರೆ. ಮೈತ್ರಿ ಸೂತ್ರದಂತೆ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಕಾಗಿದೆ. ಬರುವ ದಿನಗಳಲ್ಲಿ ಅವರಿಗೆ ಕಾಂಗ್ರೆಸ್​ನಲ್ಲೇ ಯಾವುದಾದರೂ ಸ್ಥಾನಮಾನ ಸಿಗಲಿದೆ. ಸದ್ಯಕ್ಕೆ ಚುನಾವಣೆಗೆ ಕಣಕ್ಕಿಳಿಯದಂತೆ ಮನವೊಲಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಮನೆ ಖರೀದಿ?

ಮಂಡ್ಯ: ಜೆಡಿಎಸ್ ಭದ್ರಕೋಟೆಯಲ್ಲಿ ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ಸಿಎಂ ಕುಮಾರಸ್ವಾಮಿ ಕಾರ್ಯಕ್ರಮ ರೂಪಿಸುತ್ತಿರುವ ಬೆನ್ನಲ್ಲೇ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿರುವ ದಿ.ಅಂಬರೀಷ್ ಪತ್ನಿ ಸುಮಲತಾ ಮಂಡ್ಯದಲ್ಲಿ ಮನೆ ಖರೀದಿಗೆ ನಿರ್ಧರಿಸಿದ್ದಾರೆ. ಸುಮಲತಾ ಆರಂಭದಲ್ಲಿ ಬಾಡಿಗೆ ಮನೆ ಮಾಡುವ ಇರಾದೆಯಲ್ಲಿದ್ದರು. ಆದರೆ, ಹಿಂದೆ ಅಂಬರೀಷ್ ಬಾಡಿಗೆ ಮನೆ ಮಾಡಿ ಅಲ್ಲಿ ಒಂದು ದಿನವೂ ಉಳಿದಿರಲಿಲ್ಲ. ಸ್ವಂತ ಮನೆ ಇದ್ದರೆ ಒಳ್ಳಯದು ಎಂಬ ಅಭಿಮಾನಿಗಳ ಒತ್ತಾಸೆಗೆ ಒಪ್ಪಿದ್ದಾರೆ.

ಈಗಾಗಲೇ ಮಂಡ್ಯದಲ್ಲಿ ಬೇರೆ ನಿರ್ಧಾರ ಮಾಡಲಾಗಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದೆ. ಅಲ್ಲಿನ ನಮ್ಮ ಕೆಲ ಕಾರ್ಯಕರ್ತರು ಸುಮಲತಾರನ್ನ ಒತ್ತಾಯಿಸಿದ್ದಾರೆ. ನಾವು ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರಿಗೂ ಬುದ್ಧಿ ಹೇಳುತ್ತೇವೆ.

| ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವ

Leave a Reply

Your email address will not be published. Required fields are marked *