ಮಾ.1ಕ್ಕೆ ಸೀಟು ಸಮನ್ವಯ

ಬೆಂಗಳೂರು: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕಗ್ಗಂಟು ಬಿಡಿಸಿಕೊಳ್ಳಲು ಕಾಂಗ್ರೆಸ್ ತಹತಹಿಸುತ್ತಿರುವಾಗಲೇ ಜೆಡಿಎಸ್ 12 ಕ್ಷೇತ್ರಗಳ ಹೆಸರು ಮುಂದಿಟ್ಟು, ತನ್ನ ಆಕಾಂಕ್ಷೆಯನ್ನು ಮೊದಲ ಬಾರಿಗೆ ಅಧಿಕೃತ ವೇದಿಕೆಯಲ್ಲಿ ಹೊರಹಾಕಿದೆ. ಜೆಡಿಎಸ್ ಮತ್ತು ಕಾಂಗ್ರೆಸ್​ನ ರಾಜ್ಯಾಧ್ಯಕ್ಷರು, ಪ್ರಮುಖ ನಾಯಕರು ಸೋಮವಾರ ಕುಮಾರಕೃಪ ಅತಿಥಿಗೃಹದಲ್ಲಿ ಸಭೆ ನಡೆಸಿ, ಪಕ್ಷಗಳ ನಿಲುವನ್ನು ವಿನಿಯಮ ಮಾಡಿ ಕೊಂಡರು. ಕಾಂಗ್ರೆಸ್ ಪರವಾಗಿ ದಿನೇಶ್ ಗುಂಡೂರಾವ್, ಡಿಸಿಎಂ ಜಿ.ಪರಮೇಶ್ವರ್ ಇದ್ದರೆ, ಜೆಡಿಎಸ್ ಕಡೆಯಿಂದ ವಿಶ್ವನಾಥ್, ಸಚಿವ ರೇವಣ್ಣ ಇದ್ದರು. ಸಭೆ ಬಳಿಕ ನಾಲ್ವರು ಮಾಧ್ಯಮಗಳಿಗೆ ಒಟ್ಟಾಗಿ ಪ್ರತಿಕ್ರಿಯಿಸಿ, ಸಭೆಯ ಉದ್ದೇಶ ಮತ್ತು ತೀರ್ವನವನ್ನು ತಿಳಿಸಿದರು. ಪ್ರಮುಖವಾಗಿ ಎರಡೂ ಪಕ್ಷಗಳು ತಮ್ಮ ನಿಲುವನ್ನು ಪ್ರಸ್ತಾಪಿಸಿ ದರು. ಈ ವಿಚಾರದ ಮೇಲೆ ಆಯಾ ಪಕ್ಷದ ಮಟ್ಟದಲ್ಲಿ ಇನ್ನೆರಡು ದಿನಗಳಲ್ಲಿ ಚರ್ಚೆ ಆಗುತ್ತದೆ. ಮಾರ್ಚ್ 1 ಅಥವಾ 2ರಂದು ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಎರಡನೇ ಹಂತ ತೀರ್ಮಾನ ಮಾಡಲಾಗುತ್ತದೆ. ಅಂತಿಮವಾಗಿ ದೆಹಲಿಯಲ್ಲಿ ಎರಡೂ ಪಕ್ಷದ ವರಿಷ್ಠರು ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸಲಿದ್ದಾರೆ.

ಬ್ರೇಕ್​ಫಾಸ್ಟ್ ಚರ್ಚೆ

ಸಚಿವ ಕೃಷ್ಣಭೈರೇಗೌಡರು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಚಿವರಿಗೆ ಸೋಮವಾರ ಬೆಳಗ್ಗೆ ಉಪಹಾರಕೂಟ ಆಯೋಜಿಸಿದ್ದರು. ಡಿಸಿಎಂ ಪರಮೇಶ್ವರ್, ಸಚಿವ ಶಿವಶಂಕರ ರೆಡ್ಡಿ, ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಜಯಮಾಲಾ ಸೇರಿ ಬಹುತೇಕ ಸಚಿವರು, ಕೆಪಿಸಿಸಿ ಅಧ್ಯಕ್ಷರು ಪಾಲ್ಗೊಂಡಿದ್ದರು. ಸರ್ಕಾರದ ಬೆಳವಣಿಗೆಗಳು ಮತ್ತು ಸೀಟು ಹಂಚಿಕೆ ಬಗ್ಗೆ ಈ ವೇಳೆ ಅನೌಪಚಾರಿಕ ಚರ್ಚೆ ನಡೆಯಿತು.

ಸಭೇಲಿ ದೋಸ್ತಿ ನಾಯಕರಿಂದ ಕುರಿ ಚರ್ಚೆ

ಬೆಂಗಳೂರು: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಕುರಿ ವಿಚಾರವಾಗಿ ರ್ಚಚಿಸಿದ ಸ್ವಾರಸ್ಯಕರ ಪ್ರಸಂಗ ನಡೆದಿದೆ. ಕುಮಾರಕೃಪದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕುರಿ ಸಾಕಾಣಿಕೆ ಬಗ್ಗೆ ಚರ್ಚೆ ನಡೆಯಿತು. ‘ಕುರಿ ಮತ್ತು ಕುರಿ ಮೇಯಿಸುವವರು ಬುದ್ಧಿವಂತರು’ ಎಂದ ವಿಶ್ವನಾಥ್ ಮಾತಿನ ಸೂಕ್ಷ್ಮತೆ ಅರಿತ ಪರಮೇಶ್ವರ್ ನಗುತ್ತಲೇ ‘ಅದು ಗೊತ್ತು ಬಿಡಿ. ಅರ್ಥ ಆಗಿದೆ’ ಎಂದರು. ಇವರಿಬ್ಬರ ಮಾತಿನ ಒಳಾರ್ಥ ಗ್ರಹಿಸಿದ ಎಚ್.ಡಿ.ರೇವಣ್ಣ, ‘ನಾನು ನಿಮ್ಮಿಂದ ಇದೇ ಉತ್ತರ

ನಿರೀಕ್ಷೆ ಮಾಡಿದ್ದೆ’ ಎಂದು ಗಹಗಹಿಸಿ ನಗಲು ಆರಂಭಿಸಿದರು. ಜೋರಾಗಿ ನಗುತ್ತಿದ್ದ ರೇವಣ್ಣ ಮುಖವನ್ನೇ ದಿಟ್ಟಿಸಿ ನೋಡಿದ ಪರಮೇಶ್ವರ್, ‘ಯಾಕೋ ಈ ನಿಮ್ಮ ನಗು ತುಂಬಾ ಡೇಂಜರ್ ಇದೆ’ ಎಂದರು. ಇಡೀ ಮಾತುಕತೆಗಳು ಸಿದ್ದರಾಮಯ್ಯ ಕುರಿತಾಗಿದ್ದು ಎಂಬುದು ಗುಟ್ಟಾಗಿ ಉಳಿದ ವಿಚಾರವಾಗೇನು ಉಳಿದಿರಲಿಲ್ಲ.

12 ಸೀಟಿಗೆ ಬೇಡಿಕೆ ಇಟ್ಟಿದ್ದೇವೆ

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿ ಚುನಾವಣೆ ಎದುರಿಸಲಿದ್ದು, ನಾವು 12 ಕ್ಷೇತ್ರಗಳಿಗೆ ಬೇಡಿಕೆಯನ್ನಿಟ್ಟಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ಎರಡನೇ ಹಂತದ ಚರ್ಚೆಯೂ ನಡೆಯಲಿದೆ. ಅಗತ್ಯಬಿದ್ದರೆ ದೆಹಲಿ ಮಟ್ಟದಲ್ಲೂ ಚರ್ಚೆ ಮಾಡುತ್ತೇವೆ. ಪರಸ್ಪರ ಕೊಡುಕೊಳ್ಳುವಿಕೆ ಮೂಲಕ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಚುನಾವಣೆಗೆ ಹೋಗುವ ಬಗ್ಗೆ ಯಾವುದೇ ಅನುಮಾನವಿಲ್ಲವೆಂದು ಸ್ಪಷ್ಟಪಡಿಸಿದರು.

ಕೈ ವಾದವೇನು?

# ಬಿಜೆಪಿ ಸೋಲಿಸು ವುದೇ ಮೈತ್ರಿ ಪರಮೋದ್ದೇಶ ವಾಗಲಿ. ಪ್ರತಿಷ್ಠೆ ಮಾಡಿ ಕೊಳ್ಳುವುದು ಬೇಡ. ಗೆಲುವು ತಂದುಕೊಡುವುದೇ ಸೀಟು ಹಂಚಿಕೆ ಮಾನದಂಡವಾಗಲಿ.

# ಅಭ್ಯರ್ಥಿಗಳು ಯಾರೆಂಬ ಆಧಾರದಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆಯಾದರೆ ಉತ್ತಮ.

ಸೀಟು ಹಂಚಿಕೆ ಬಗ್ಗೆ ಪ್ರಾಥಮಿಕ ಚರ್ಚೆ ಮಾಡಿದ್ದೇವೆ, ಯಾವ ಕ್ಷೇತ್ರದಲ್ಲಿ ಹೆಚ್ಚು ಗೆಲ್ಲುವ ಅವಕಾಶವಿದೆಯೋ ಅಂತ ಅಭ್ಯರ್ಥಿಗಳಿಗೆ ಅವಕಾಶ. ಆದಷ್ಟು ಬೇಗ ಅಂತಿಮವಾಗಲಿದೆ. ಇಂದು ಆಶಾದಾಯಕ ಸಭೆ ನಡೆದಿದೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಹಾಲಿ ಸಂಸದರಿಗೆ ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಈಗ ಚರ್ಚೆ ಬೇಡ ನಮಗೆ ಸೀಟು ಹಂಚಿಕೆಯ ಅಂಕಿ-ಸಂಖ್ಯೆ ಮುಖ್ಯ ಆಗಲ್ಲ. ವಿಶಾಲ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಂಡು ಮುಂದುವರಿಯ ಲಾಗುವುದು. ಸಂಖ್ಯೆ ಪ್ರಶ್ನೆ ಇಲ್ಲ, ಇಗೋ ಪ್ರಶ್ನೆಯೂ ಇಲ. 28 ಕ್ಷೇತ್ರಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದ್ದೇವೆ.

| ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು ಎನ್ನುವುದೊಂದೇ ನಮ್ಮ ಉದ್ದೇಶ. ಅಷ್ಟು ಸೀಟು, ಇಷ್ಟು ಸೀಟು ಅನ್ನೋ ಪ್ರಶ್ನೆ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ನಾವು ಗೆಲ್ಲಬೇಕು ಎಂಬುದಷ್ಟೇ ಉದ್ದೇಶ. ಮುಖ್ಯಮಂತ್ರಿ ಮತ್ತು ದೇವೇಗೌಡರ ಅಭಿಪ್ರಾಯವೂ ಇದೇ ಆಗಿದೆ.

| ಎಚ್.ಡಿ.ರೇವಣ್ಣ ಸಚಿವ

ಇದು ಮೊದಲ ಹಂತದ ಸಭೆ. ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಮುಂದೆ ನಾಯಕರೆಲ್ಲ ಒಟ್ಟಾಗಿ ಕುಳಿತು ಚರ್ಚೆ ಮಾಡಿ ತೀರ್ವನಿಸುತ್ತೇವೆ.

| ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ

ಮಾ.9ಕ್ಕೆ ರಾಹುಲ್

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 9ರಂದು ಹಾವೇರಿಗೆ ಆಗಮಿಸಲಿದ್ದು, ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಶಾಮನೂರು ಶಿವಶಂಕರಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲು ಸಮರ್ಥರಿದ್ದಾರೆ ಎಂದಿದ್ದಾರೆಯೇ ಹೊರತು ರಾಹುಲ್ ಅಸಮರ್ಥರು ಎಂದಿಲ್ಲ. ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಎಂದು ಭವಿಷ್ಯ ನುಡಿದರು. ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಕೂಡ ಸ್ಪರ್ಧೆ ಮಾಡು ಎಂದು ನನಗೆ ಹೇಳಿಲ್ಲ. ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಸುಮಲತಾರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡುವಂತೆ ಅಂಬಿ ಅಭಿಮಾನಿಗಳ ಒತ್ತಾಯ ಜಾಸ್ತಿಯಾಗಿದೆ. ಇನ್ನೂ ಯಾವುದೇ ತೀರ್ವನವಾಗಿಲ್ಲ. ಇದೆಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರಿಗೆ ಹೇಳಿದ್ದೇನೆ ಎಂದರು.