ಟಿಕೆಟ್​ಗೆ ಸಮೀಕ್ಷೆ ಆಧಾರ

| ರಮೇಶ ದೊಡ್ಡಪುರ ಬೆಂಗಳೂರು

ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆಯೇ ಚುನಾವಣಾ ತಂತ್ರದ ಜತೆಜತೆಗೆ ಟಿಕೆಟ್ ಆಯ್ಕೆ ಪ್ರಕ್ರಿಯೆಯನ್ನೂ ಚುರುಕುಗೊಳಿಸಿರುವ ಬಿಜೆಪಿ, ರಾಜ್ಯದ ಹಾಲಿ ಸಂಸದರಿಂದ ಕಳೆದ ನಾಲ್ಕೂವರೆ ವರ್ಷದ ರಿಪೋರ್ಟ್ ಕಾರ್ಡ್ ತರಿಸಿಕೊಂಡಿದೆ.

ಸ್ವಯಂ ಮೌಲ್ಯಮಾಪನ: ನಾಲ್ಕೂವರೆ ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಿಗೆ, ಲೋಕಸಭಾ ಕ್ಷೇತ್ರಗಳಿಗೆ ನೀಡಲಾಗಿರುವ ಯೋಜನೆಗಳ ಸಂಪೂರ್ಣ ಪಟ್ಟಿಯನ್ನು ಕೇಂದ್ರ ಸರ್ಕಾರದ ಮೂಲಕ ಬಿಜೆಪಿ ಪಡೆದುಕೊಂಡಿದೆ. ನೇರವಾದ ಯೋಜನೆಗಳನ್ನು ಹೊರತುಪಡಿಸಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್), ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿ ಮಾಡಿದ ಯೋಜನೆಗಳು, ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿ ಗಳು, ನನೆಗುದಿಗೆ ಬಿದ್ದಿದ್ದ ಕಾಮಗಾರಿ ಪೂರ್ಣಗೊಳಿಸಿದ್ದು ಸೇರಿ ಅನೇಕ ವಿಚಾರಗಳನ್ನು ಸಂಸದರೇ ನೇರವಾಗಿ ನೀಡಲು ತಿಳಿಸಲಾಗಿತ್ತು.

ಅವರವರ ಕಾರ್ಯದ ಕುರಿತು ಸ್ವಯಂಮೌಲ್ಯಮಾಪನ ಮಾಡಿಕೊಂಡು ರಿಪೋರ್ಟ್ ಕಾರ್ಡ್ ನೀಡಲು ಎಲ್ಲ ಸಂಸದರಿಗೆ ಫೆ.20ರ ಗಡುವು ನೀಡಲಾಗಿತ್ತು. 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ 17 ಬಿಜೆಪಿ ಸಂಸದರಿದ್ದರು. ಇದೀಗ ಬಳ್ಳಾರಿ ಕಾಂಗ್ರೆಸ್ ಕೈನಲ್ಲಿದ್ದು, ಬೆಂಗಳೂರು ದಕ್ಷಿಣ ತೆರವಾಗಿದೆ. ಶಿವಮೊಗ್ಗದಲ್ಲಿ ಸಂಸದರು ಬದಲಾಗಿದ್ದಾರೆ. ಈ ಕ್ಷೇತ್ರಗಳ ವರದಿಯನ್ನೂ ಕೇಂದ್ರದ ವರಿಷ್ಠರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

8 ಏಜೆನ್ಸಿಗಳಿಂದ ಸಮೀಕ್ಷೆ: ಲೋಕಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಷ್ಟ್ರೀಯ ಬಿಜೆಪಿ ಒಂದಲ್ಲ ಎರಡಲ್ಲ ಬರೊಬ್ಬರಿ 8 ಖಾಸಗಿ ಏಜೆನ್ಸಿಗಳನ್ನು ನೇಮಕ ಮಾಡಿಕೊಂಡಿದೆ. ಹಾಲಿ ಸಂಸದರ ಕ್ಷೇತ್ರವೂ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಯಾರಾದರೆ ಉಪಯೋಗ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಸದ್ಯ ಅನ್ಯ ಪಕ್ಷಗಳಲ್ಲಿರುವ, ಬಿಜೆಪಿಗೆ ಆಗಮಿಸಿದರೆ ಅನುಕೂಲ ಎನ್ನಲಾಗುವ, ಈಗಾಗಲೇ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವವರ ಹೆಸರನ್ನೂ ಸಮೀಕ್ಷೆ ತಿಳಿಸಬಹುದು. ಹಾಲಿ ಸಂಸದರ ಕ್ಷೇತ್ರಗಳಲ್ಲೂ ಟಿಕೆಟ್ ಕೇಳುತ್ತಿರುವವರನ್ನು ಪರಿಗಣಿಸಲಾಗುತ್ತದೆ. ಹಾಲಿ ಸಂಸದರು ನಾಲ್ಕೂವರೆ ವರ್ಷಗಳಿಂದ ಜನರಿಗೆ ಪರಿಚಯ ಇರುವ ಕಾರಣ ಅವರಿಗೆ ಟಿಕೆಟ್ ದೊರಕುವ ಸಾಧ್ಯತೆ ತುಸು ಹೆಚ್ಚಿರುತ್ತದೆ. ತೀರಾ ಆಡಳಿತ ವಿರೋಧಿ ಹಾಗೂ ಕಾರ್ಯಕರ್ತರ ವಿರೋಧ ಕಟ್ಟಿಕೊಂಡಿರುವವರ ಬದಲಾವಣೆ ಆದರೂ ಆಶ್ಚರ್ಯ ಇಲ್ಲ. ಯಾವುದೇ ಗುಂಪು, ಶಿಫಾರಸು ಇಲ್ಲದಂತೆ ಅತ್ಯಂತ ವೈಜ್ಞಾನಿಕವಾಗಿ ಟಿಕೆಟ್ ಆಯ್ಕೆ ನಡೆಯುತ್ತದೆ ಎನ್ನಲಾಗಿದೆ.

8 ಅಂಶಗಳ ಪರಿಗಣನೆ

ಟಿಕೆಟ್ ನೀಡಲು 7-8 ಅಂಶಗಳನ್ನು ಪರಿಗಣಿಸಲಾಗುತ್ತದೆ. ರಿಪೋರ್ಟ್ ಕಾರ್ಡ್, ಏಜೆನ್ಸಿಗಳ ಸಮೀಕ್ಷೆ, ಸಂಭಾವ್ಯ ಎದುರಾಳಿ ಅಭ್ಯರ್ಥಿ ಹಿನ್ನೆಲೆ, ಶಕ್ತಿ ಕಾರ್ಯಕರ್ತರ ಹಾಗೂ ಪ್ರಮುಖ ನಾಯಕರ ಅಭಿಪ್ರಾಯಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನಲಾಗಿದೆ.

ಸಂಪೂರ್ಣ ಸಮಯ ಮೀಸಲಿಡಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೇವಲ 7 ವಾರವಷ್ಟೇ ಬಾಕಿಯಿದ್ದು, ರಾಜ್ಯದಲ್ಲಿ 22 ಸ್ಥಾನ ಜಯಿಸಲು ಎಲ್ಲರೂ ಸಂಫೂರ್ಣ ಸಮಯ ನೀಡಿ ಕೆಲಸ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳ ಶಕ್ತಿಕೇಂದ್ರ ಪ್ರಮುಖರಿಗೆ ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶದ 4,250 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಅವರ ಜತೆಗೆ ಸಂವಾದ ಅತ್ಯುತ್ತಮವಾಗಿ ನಡೆದಿದೆ. ಚುನಾವಣೆ ಯಾವುದೇ ಕ್ಷಣದಲ್ಲಿ ಘೊಷಣೆಯಾಗಬಹುದು. ಈ ಏಳು ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಪೂರ್ಣ ಸಮಯ ನೀಡಬೇಕು. ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದ 28ರಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸುವ ವಾತಾವರಣವಿದೆ. ಅದಕ್ಕೆ ನಾವು ಸನ್ನದ್ಧರಾಗಿರಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವ ಕಾರ್ಯಕರ್ತರು ಚರ್ಚೆ ಮಾಡಬಾರದು. ಅದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಚುನಾವಣಾ ಸಮಿತಿಗಳಿವೆ. ಕೇಂದ್ರದ ಪ್ರಮುಖರು ಗಮನ ನೀಡುತ್ತಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುವ ಬಗ್ಗೆ ತೀರ್ಮಾನ ಆಗಿಲ್ಲ. ಪಕ್ಷದ ತೀರ್ವನಕ್ಕೆ ನಾನು ಬದ್ಧ. ಸ್ಪರ್ಧಿಸಬೇಕೇ? ಬೇಡವೇ? ಎಂಬುದನ್ನು ಹೈಕಮಾಂಡ್ ತೀರ್ವನಿಸಲಿದೆ.

| ಶೋಭಾ ಕರಂದ್ಲಾಜೆ ಸಂಸದೆ (ಉಡುಪಿಯಲ್ಲಿ)

ಕಮಲ ಸಂದೇಶ ಬೈಕ್ ರ‍್ಯಾಲಿ ಇಂದು

ಬೆಂಗಳೂರು: ದೇಶಾದ್ಯಂತ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಮಲ ಸಂದೇಶ ಬೈಕ್ ರ್ಯಾಲಿಯನ್ನು ಶನಿವಾರ ಆಯೋಜನೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಚಾಲನೆ ನೀಡಲಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಪೂನಂ ಮಹಾಜನ್ ಮಥುರಾದಲ್ಲಿ ರ್ಯಾಲಿಗೆ ಚಾಲನೆ ನೀಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರಿನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.

ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿ ಆಯೋಜಿಸಿದ್ದ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಈ ಕುರಿತು ವಿವರ ನೀಡಿದ ಯಡಿಯೂರಪ್ಪ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಕ್ಕೆ ಕಡಿಮೆ ಇಲ್ಲದಂತೆ ಬೈಕ್ ಸೇರಿಸಿ ರ‍್ಯಾಲಿ ಆಯೋಜಿಸಬೇಕು. ಆಯಾ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪ್ರವಾಸ ಮಾಡುತ್ತಾ ಮೋದಿ ಅವರ ಕಾರ್ಯಕ್ರಮವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾದರೆ ಗಿನ್ನೆಸ್ ದಾಖಲೆಗೆ ಸೇರಲಿದೆ ಎಂದರು.

ನಗರ ಪ್ರದೇಶಗಳಲ್ಲಿ ಸುಮಾರು 30 ಕಿ.ಮೀ, ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ಪಂಚಾಯತಿಯನ್ನೂ ಸಂರ್ಪಸುವಂತೆ 100-130 ಕಿ.ಮೀ. ಬೈಕ್ ರ‍್ಯಾಲಿ ನಡೆಸಲು ಪಕ್ಷ ತಿಳಿಸಿದೆ.