| ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಪ್ರಭಾವಿ ನಾಯಕ ಎಂ.ವೀರಪ್ಪ ಮೊಯ್ಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಸತತ ಮೂರನೇ ಬಾರಿಗೆ ಗೆಲುವು ಸಾಧಿಸಲು ಮೊಯ್ಲಿ ಕಸರತ್ತು ನಡೆಸುತ್ತಿದ್ದರೆ, ಶತಾಯಗತಾಯ ಕಮಲ ಅರಳಿಸಲು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಸಂಘಟನೆ ಚುರುಕುಗೊಳಿಸಿದ್ದಾರೆ. ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ನ ಸ್ಥಳೀಯ ಮುಖಂಡರು ವರಿಷ್ಠರ ನಿಲುವಿಗೆ ಎದುರು ನೋಡುತ್ತಿದ್ದಾರೆ. ಉಳಿದಂತೆ ಇತರ ಪಕ್ಷ ಮತ್ತು ಅಭ್ಯರ್ಥಿಗಳ ಚಟುವಟಿಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವುದಂತೂ ದಿಟ.
ಮೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಎಂಟರಲ್ಲಿ ಕಾಂಗ್ರೆಸ್ 5, ಜೆಡಿಎಸ್ 2 ಮತ್ತು ಬಿಜೆಪಿಯ ಒಬ್ಬರು ಶಾಸಕರಿದ್ದಾರೆ. ಕಳೆದ ಚುನಾವಣೆ ವೇಳೆಯೂ ಪಕ್ಷಗಳ ಬಲಾಬಲ ಇಷ್ಟೇ ಇತ್ತೆನ್ನುವುದು ವಿಶೇಷ.
1977ರಿಂದ 2014ರವರೆಗೆ ನಡೆದ 11 ಚುನಾವಣೆಗಳ ಪೈಕಿ 10 ಬಾರಿ ಕಾಂಗ್ರೆಸ್, 1 ಬಾರಿ ಜನತಾದಳ ಗೆದ್ದಿದೆ. ವಿ.ಕೃಷ್ಣರಾವ್ ಮತ್ತು ಆರ್.ಎಲ್.ಜಾಲಪ್ಪ ಸತತ ನಾಲ್ಕು ಬಾರಿ, ಮೊಯ್ಲಿ ಸತತ ಎರಡು ಬಾರಿ ಜಯಿಸಿದ್ದಾರೆ. ಜಾತಿ ಹಿನ್ನೆಲೆಗಿಂತಲೂ ಪಕ್ಷದ ಬಲ ಮತ್ತು ವೈಯಕ್ತಿಕ ವರ್ಚಸ್ಸಿನಿಂದಲೇ ಅಭ್ಯರ್ಥಿಗಳ ಕೊರಳಿಗೆ ವಿಜಯ ಮಾಲೆ ಬೀಳುವುದು ಇಲ್ಲಿನ ವಿಶೇಷ.
ಮೈತ್ರಿ ಲಾಭದ ಲೆಕ್ಕಾಚಾರ…
ತವರುಜಿಲ್ಲೆ ದಕ್ಷಿಣ ಕನ್ನಡದಲ್ಲಿ ರಾಜಕೀಯವಾಗಿ ಜನರ ಒಲವು ಕಳೆದುಕೊಂಡು ಬಂದ ವೀರಪ್ಪ ಮೊಯ್ಲಿ ಕೈ ಹಿಡಿಯುವ ಮೂಲಕ ಕ್ಷೇತ್ರದ ಮತದಾರರು ಅವರಿಗೆ ಮರುಜೀವ ನೀಡಿದರು. 2009ರಲ್ಲಿ ಕ್ಷೇತ್ರಕ್ಕೆ ಭರವಸೆಗಳ ಸುರಿಮಳೆಯ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಿ ಮೊಯ್ಲಿ ಗೆಲುವು ಸಾಧಿಸಿದರು. 2013ರಲ್ಲಿ ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಒಕ್ಕಲಿಗ ಮತಗಳು ವಿಭಜನೆಗೊಂಡು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಸೋತು, ಮೊಯ್ಲಿ ಗೆಲುವು ಕಂಡರು. ಈಗ ವಿರೋಧಿ ಅಲೆಯ ನಡುವೆ ಕ್ಷೇತ್ರದಲ್ಲಿ ಪಕ್ಷದ ಹೆಚ್ಚಿನ ಶಾಸಕರ ಬಲ, ಮೈತ್ರಿಯ ಲಾಭದ ಲೆಕ್ಕಾಚಾರದಲ್ಲಿದ್ದಾರೆ ಮೊಯ್ಲಿ.
ಮೋದಿ, ಅನುಕಂಪದ ಅಲೆ
ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡರೇ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೊಷಿಸಿಯಾಗಿದೆ. ಕಳೆದ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡಿದ್ದ ಬಚ್ಚೇಗೌಡರು ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್ಡಿಕೆ ಅವರನ್ನೇ ಮೂರನೇ ಸ್ಥಾನಕ್ಕೆ ತಳ್ಳಿ 2ನೇ ಸ್ಥಾನ ಪಡೆದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದು ನಡೆಸಿದ ಪ್ರಚಾರದ ಬಲ, ಮೋದಿ ವರ್ಚಸ್ಸು ಮತ್ತು ಹಿಂದಿನ ಚುನಾವಣೆಯಲ್ಲಿ ಸೋಲಿನ ಅನುಕಂಪ ಬಿಜೆಪಿಗೆ ಪ್ಲಸ್ ಆಗುವುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಬಿರುಸಿನ ಕಾಂಗ್ರೆಸ್, ಕಮಲ
ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಈ ಆಧಾರದ ಮೇಲೆ ಮತ್ತೆ ಕಳೆದ ಚುನಾವಣೆಯಂತೆ ಸಂಸದ ಮೊಯ್ಲಿ ಮತ್ತು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ನಡುವೆಯೇ ನೇರ ಹಣಾಹಣಿ ನಡೆಯಲಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಚ್ಚೇಗೌಡರ ಪಾಲಿನ ಮತಗಳನ್ನು ವಿಭಜಿಸುವ ಯೋಜನೆಯನ್ನೂ ಜೆಡಿಎಸ್ ಹಾಕಿಕೊಂಡಿದೆ.
ಭರವಸೆ ನೂರು, ಸಾಧನೆ ಚೂರು!
ಮೊಯ್ಲಿ ಭರಪೂರ ಭರವಸೆಗಳ ಮೂಲಕ ಜನರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ. ಸಾಕಾರಗೊಳಿಸುವಲ್ಲಿ ಬಹುತೇಕ ವಿಫಲರಾಗಿದ್ದಾರೆ. ಕ್ಷೇತ್ರಕ್ಕೆ ಐಐಟಿ ಮಂಜೂರು, ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿ, ಬೃಹತ್ ಕೈಗಾರಿಕೆಗಳ ಸ್ಥಾಪನೆ ಸೇರಿ ನೀಡಿದ ಭರವಸೆಗಳಿಗೇನೂ ಕಡಿಮೆ ಇಲ್ಲ. 2 ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭ, ಡಿಜಿಟಲ್ ಗ್ರಂಥಾಲಯ ಮತ್ತು ರಾಜ್ಯಮಟ್ಟದ ಕಲಾ ಭವನ ನಿರ್ವಣ, ಬೆಳಗಾವಿಯ ವಿಟಿಯು ಸಂಶೋಧನಾ ಕೇಂದ್ರದ ಕಟ್ಟಡ ನಿರ್ವಣಕ್ಕೆ ಹೆಚ್ಚಿನ ಅನುದಾನ ಮಂಜೂರಾತಿಗೆ ಶ್ರಮಿಸಿದ್ದು ಪ್ರಮುಖ ಸಾಧನೆ. ಬೆಂ.ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಗಲಕೊಪ್ಪೆಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಂಥಾಲಯ, ಶಾಲಾ ಕೊಠಡಿ, ಅಂಗನವಾಡಿ ಕೇಂದ್ರ ನಿರ್ವಿುಸಿಕೊಟ್ಟಿದ್ದಾರೆ. ಬಹುತೇಕ ರಸ್ತೆಗಳು ಸುಸ್ಥಿತಿಯಲ್ಲಿವೆ. ಹದಗೆಟ್ಟ ನೈರ್ಮಲ್ಯದಿಂದ ಗ್ರಾಮವು ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವಂತಿದೆ. 2014-15ರಿಂದ 2018-19ನೇ ಸಾಲಿನವರೆಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಲ್ಲಿ 372 ಕಾಮಗಾರಿಗಳಿಗೆ 17.65 ಕೋಟಿ ರೂ. ನಿಗದಿಪಡಿಸಿದ್ದು 14.48 ಕೋಟಿ ರೂ. ವೆಚ್ಚದಲ್ಲಿ 243 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 149 ಪ್ರಗತಿಯಲ್ಲಿವೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಹೊಸಕೋಟೆ, ಗೌರಿಬಿದನೂರು, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್, ನೆಲಮಂಗಲ, ದೇವನಹಳ್ಳಿಯಲ್ಲಿ ಜೆಡಿಎಸ್, ಯಲಹಂಕದಲ್ಲಿ ಬಿಜೆಪಿ ಶಾಸಕರಿದ್ದಾರೆ.
ದೇವೇಗೌಡ ಸ್ಪರ್ಧೆಗೆ ಒತ್ತಾಯ
ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡದಿರಲು ಜೆಡಿಎಸ್ನ ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ. ಇಲ್ಲಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಲ್ಲವೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೇರಿದ್ದಾರೆ. ಕಾಂಗ್ರೆಸ್ ಬೆಂಬಲಿಸಲು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಸುತರಾಂ ಇಷ್ಟವಿಲ್ಲ. ಎದುರಾಳಿಗೆ ಬೆಂಬಲ ನೀಡಿ ಅಸ್ತಿತ್ವ ಕಳೆದುಕೊಳ್ಳಬೇಕಾ ಎಂದು ವರಿಷ್ಠರನ್ನು ಪ್ರಶ್ನಿಸಿದ್ದಾರೆ. ಆದರೂ ದೇವೇಗೌಡರು ಗೊಂದಲಕ್ಕೆ ತೆರೆ ಎಳೆದಿಲ್ಲ. ಅಂತಿಮವಾಗಿ ಪಕ್ಷ ಸೂಚಿಸುವ ಅಭ್ಯರ್ಥಿ ಪರ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ನನಸಾಗದ ನೀರಾವರಿ ಭರವಸೆ
ಪ್ರತಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದೇ ಪ್ರಮುಖ ಭರವಸೆ. ಎತ್ತಿನಹೊಳೆ ಮತ್ತು ಎಚ್ಎನ್ ವ್ಯಾಲಿ ತ್ಯಾಜ್ಯ ಸಂಸ್ಕರಿಸಿದ ನೀರುಪೂರೈಕೆ ಯೋಜನೆ ಅನುಷ್ಠಾನ ಪ್ರಾರಂಭದ ಹಂತದಲ್ಲಿ ಇದೆಯೇ ಹೊರತು ಈ ಭಾಗಕ್ಕೆ ನೀರು ಹರಿದಿಲ್ಲ. ಇದೀಗ ಹೊಸದಾಗಿ ಮೇಕೆದಾಟು, ಕೃಷ್ಣಾ ನದಿ ನೀರು, ಕಾವೇರಿ ನೀರು ಪೂರೈಕೆಯ ಭರವಸೆಗಳು ಕೇಳಿ ಬರುತ್ತಿವೆ.