ಮೊಯ್ಲಿ ಮಣಿಸಲು ಬಚ್ಚೇಗೌಡ ಕಸರತ್ತು: ಪ್ರಚಾರಕ್ಕೆ ದಳಪತಿಗಳ ಷರತ್ತು

| ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇದ್ದು, ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮತ್ತೆ ಮುಖಾಮುಖಿ ಆಗಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಈ ಸಲ ಏನಾದರೂ ಕಮಲ ಅರಳಿದರೆ ಅದೊಂದು ದಾಖಲೆ ಆಗಲಿದೆ. ಮತದಾರ ಮೈತ್ರಿ ಪಕ್ಷಕ್ಕೆ ಒಲವು ತೋರಿದರೆ ಮೊಯ್ಲಿ ಅವರದ್ದು ಹ್ಯಾಟ್ರಿಕ್ ಗೆಲುವಾಗಲಿದೆ. ಆದರೆ ಸದ್ಯದ ವಾತಾವರಣ ಅನಿರೀಕ್ಷಿತ ಫಲಿತಾಂಶದ ನಿರೀಕ್ಷೆ ಹುಟ್ಟಿಸಿದೆ. ಯಾರೇ ಗೆದ್ದರೂ ಗೆಲುವಿನ ಅಂತರ ತೀರಾ ಕಡಿಮೆ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ.

ವೀರಪ್ಪ ಮೊಯ್ಲಿ (ಮೈತ್ರಿ ಅಭ್ಯರ್ಥಿ), ಬಿ.ಎನ್.ಬಚ್ಚೇಗೌಡ (ಬಿಜೆಪಿ), ಸಿ.ಎಸ್.ದ್ವಾರಕನಾಥ್ (ಬಿಎಸ್ಪಿ), ವರಲಕ್ಷ್ಮೀ (ಸಿಪಿಎಂ), ಮುನಿರಾಜು (ಉತ್ತಮ ಪ್ರಜಾಕೀಯ ಪಕ್ಷ), ಖಾದರ್ ಸುಬಾನ್ ಖಾನ್ (ಸಮಾಜವಾದಿ ಜನತಾ ಪಾರ್ಟಿ), ನಜೀರ್ ಅಹಮದ್ (ಕರ್ನಾಟಕ ಕಾರ್ವಿುಕರ ಪಕ್ಷ), ನಾಗೇಶ್​ರೆಡ್ಡಿ (ಅಂಬೇಡ್ಕರ್ ಸಮಾಜ ಪಾರ್ಟಿ), ನಾಗೇಂದ್ರರಾವ್ ಶಿಂಧೆ (ಕರ್ನಾಟಕ ಜನತಾ ಪಕ್ಷ), 6 ಪಕ್ಷೇತರರು ಸೇರಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೈತ್ರಿ ಧರ್ಮಪಾಲನೆ ಸಂಕಷ್ಟ: ಮೇಲ್ನೋಟಕ್ಕೆ ಕಾಂಗ್ರೆಸ್-ಜೆಡಿಎಸ್​ನಲ್ಲಿ ಮೈತ್ರಿ ಧರ್ಮಪಾಲನೆ ಮಾತಿದೆ. ಆದರೆ, ಎರಡೂ ಪಕ್ಷದ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ಹಾವು-ಮುಂಗುಸಿಯಂತೆ ರಾಜಕೀಯವಾಗಿ ಕಾದಾಡಿರುವ ಶಾಸಕರು ಮತ್ತು ನಾಯಕರು ಬಹಿರಂಗವಾಗಿಯೇ ಭಿನ್ನಾಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ವರಿಷ್ಠರ ಮಾತಿಗೆ ಬದ್ಧವಾಗಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಮುಂದಾಗಿರುವ ದಳಪತಿಗಳು ಪ್ರತ್ಯೇಕ ಕಾರ್ಯಕ್ರಮಗಳ ಷರತ್ತು ಹಾಕಿದ್ದಾರೆ. ಸ್ವಪಕ್ಷೀಯರು ಮತ್ತು ಬೆಂಬಲಿತ ಪಕ್ಷದವರನ್ನು ಒಟ್ಟಾಗಿ ಕರೆದೊಯ್ಯುವ ಸವಾಲು ಮೊಯ್ಲಿ ನಿದ್ದೆಗೆಡಿಸಿದೆ. ಕಚೇರಿಗಳಲ್ಲಿ ಸಭೆ ನಡೆಸಿದ್ದನ್ನು ಬಿಟ್ಟರೆ, ಜೆಡಿಎಸ್ ಈವರೆೆಗೂ ಬಹಿರಂಗ ಪ್ರಚಾರ ಕೈಗೊಂಡಿಲ್ಲ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಿದೆ ಪರಿಸ್ಥಿತಿ.

ಸಮುದಾಯಗಳ ಬೆಂಬಲವೇ ನಿರ್ಣಾಯಕ

ಈ ಹಿಂದೆ ಇಲ್ಲಿ ಜಾತಿ ರಾಜಕಾರಣ ಹೆಚ್ಚಿಗೆ ಕೆಲಸ ಮಾಡಿಲ್ಲ. ಈ ಬಾರಿ ಸಮುದಾಯಗಳ ಬೆಂಬಲವೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಒಕ್ಕಲಿಗ, ಬಲಿಜಿಗ, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಸಿಪಿಎಂ ಮತ್ತು ಬಿಎಸ್​ಪಿ ಕಾಂಗ್ರೆಸ್​ನ ಸಾಂಪ್ರದಾಯಿಕ ಮತ ಬುಟ್ಟಿಗೆ ಕೈಹಾಕುತ್ತಿವೆ.

ನೀಗದ ಸಮಸ್ಯೆಗಳು

ಕ್ಷೇತ್ರದಲ್ಲಿ ನೀರಿನ ಹಾಹಾಕಾರ ದೊಡ್ಡ ಸಮಸ್ಯೆ. ಶಾಶ್ವತ ನೀರಾವರಿ ಸೌಲಭ್ಯಕ್ಕೆ ಎರಡೂವರೆ ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿ ಚುನಾವಣೆ ವೇಳೆ ಒಂದೊಂದು ಹೊಸ ಯೋಜನೆ ಘೊಷಣೆಯಾದರೂ ಯಾವುದೂ ಅನುಷ್ಠಾನಗೊಂಡಿಲ್ಲ. ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಟುತ್ತ ಸಾಗಿದೆ. ಎಚ್​ಎನ್ ವ್ಯಾಲಿಗೆ ಹಲವು ವಿಘ್ನಗಳು ಎದುರಾಗಿವೆ. ಬೃಹತ್ ಕೈಗಾರಿಕೆ ಸ್ಥಾಪನೆಗೆ ಕಾಳಜಿ ತೋರಿಲ್ಲ. ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿಲ್ಲ. ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ರೈಲ್ವೆ ಹಳಿ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಕಳೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿ ಸೋತಿದ್ದೇನೆ. ಈಗ ಮೋದಿ ಅಲೆ ಮತ್ತು ಅನುಕಂಪದ ಅಲೆ ಗೆಲುವಿಗೆ ಸಹಕಾರಿ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಜನರು ಬಿಜೆಪಿಗೆ ಹೆಚ್ಚಿನ ಮತ ನೀಡಲಿದ್ದಾರೆ. ಕಾಂಗ್ರೆಸ್ ವಿರುದ್ಧದ ಜೆಡಿಎಸ್ ಮುನಿಸು ಅನುಕೂಲಕರವಾಗಲಿದೆ.

| ಬಿ.ಎನ್.ಬಚ್ಚೇಗೌಡ ಬಿಜೆಪಿ ಅಭ್ಯರ್ಥಿ

ಒಗ್ಗಟ್ಟು, ನಾಯಕತ್ವ ಸಮಸ್ಯೆ

ಮೋದಿ ಜಪ ಮಾಡುತ್ತಿರುವುದನ್ನು ಬಿಟ್ಟರೆ ಬೂತ್ ಮಟ್ಟದಲ್ಲಿ ಬಿಜೆಪಿ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ. ಕ್ಷೇತ್ರಗಳಲ್ಲಿ ಪಕ್ಷದ ಪ್ರಾಬಲ್ಯ ಕಡಿಮೆ. ಸಾಲದೆಂಬಂತೆ ನಾಯಕತ್ವದ ಕೊರತೆ, ಒಗ್ಗಟ್ಟಿನ ಸಮಸ್ಯೆಯೂ ಕಾಡುತ್ತಿವೆ. ಪಕ್ಷದ ಹಿರಿಯ ನಾಯಕರ ಆಗಮನದ ವೇಳೆ ಮಾತ್ರ ಉತ್ಸಾಹ ಕಂಡುಬರುತ್ತಿದೆ.