ಲೋಕಕ್ಕಾಗಿ ಮತ-ಮಂಥನ

ಲೋಕಸಭಾ ಸಮರ ದಿನೇ ದಿನೆ ವೇಗ ಪಡೆದುಕೊಳ್ಳುತ್ತಿದ್ದು, ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿ ಈಗಾಗಲೇ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್​ನಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಅಲ್ಲದೆ, ರೈತರನ್ನು ಕೇಂದ್ರೀಕರಿಸಿ ಮತಬುಟ್ಟಿಗೆ ಕೈಹಾಕಲು ಮುಂದಾಗಿದೆ.

ಬೆಂಗಳೂರು: ಲೋಕಸಭಾ ಚುನಾವಣೆ ತಯಾರಿ ಸಲುವಾಗಿ ಕ್ಷೇತ್ರವಾರು ಪ್ರಭಾರಿಗಳು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳ ಜತೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಫೆ.21ಕ್ಕೆ ಸಭೆ ನಡೆಸಲಿದ್ದಾರೆ.

ಅಂದು ಸಂಜೆ ಚಿಕ್ಕಬಳ್ಳಾಪುರದಲ್ಲಿ ಶಕ್ತಿಕೇಂದ್ರ ಪ್ರಮುಖರ ಹಾಗೂ ಮತಗಟ್ಟೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಭೆ ನಂತರ ಬೆಂಗಳೂರಿನ ಹೊರವಲಯದ ಯಲಹಂಕದ ಖಾಸಗಿ ಹೋಟೆಲ್​ನಲ್ಲಿ ಸಭೆ ಆಯೋಜಿಸಲಾಗಿದೆ. ಈಗಾಗಲೇ ನೀಡಿರುವ 23 ಅಂಶದ ಕಾರ್ಯಕ್ರಮಗಳ ಅನುಷ್ಠಾನ ಸೇರಿ ಅನೇಕ ವಿಚಾರಗಳಲ್ಲಿ ಪ್ರಗತಿ ಹಾಗೂ ಮುಂದಿನ ಹಾದಿ ಕುರಿತು ಸೂಚನೆಗಳನ್ನು ಅಮಿತ್ ಷಾ ನೀಡುವ ಸಾಧ್ಯತೆಯಿದೆ.

ಮೋದಿ ಕಾರ್ಯಕ್ರಮ ಮುಂದೂಡಿಕೆ: ಈಗಾಗಲೇ ಹುಬ್ಬಳ್ಳಿಯಲ್ಲಿ ಒಂದು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಪ್ರಧಾನಿ ಮೋದಿಯವರ ಕಲಬುರಗಿ ರ್ಯಾಲಿಯನ್ನು ಮುಂದೂಡಲಾಗಿದೆ. ಫೆ.19ಕ್ಕೆ ಕಲಬುರಗಿಯಲ್ಲಿ ನಿಗದಿಯಾಗಿದ್ದ ರ್ಯಾಲಿಯನ್ನು ಮಾ.1ಕ್ಕೆ ಮುಂದೂಡಲಾಗಿದೆ. ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿ ಕಾರಣಕ್ಕೆ ಪ್ರಧಾನಿಯವರ ಅನೇಕ ಕಾರ್ಯಕ್ರಮಗಳ ದಿನಾಂಕ ವ್ಯತ್ಯಾಸವಾಗಿದೆ ಎನ್ನಲಾಗಿದೆ.

ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ರೆಬಲ್ ನಾಯಕರಾಗಿ ಕಾಂಗ್ರೆಸ್​ಗೆ ಟ್ರಬಲ್ ನೀಡುತ್ತಿದ್ದಾರೆ. ಅವರು ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬುದು ನಿರ್ಧಾರವಾಗಿಲ್ಲ. ಯಾರೇ ನಿಂತರೂ ಕಲಬುರಗಿ ಕ್ಷೇತ್ರದಲ್ಲಿ ಕಮಲ ಅರಳುವುದು ನಿಶ್ಚಿತ.

| ಆರ್.ಅಶೋಕ್ ಮಾಜಿ ಡಿಸಿಎಂ

ಸೋಮವಾರ ನಡೆಯಲಿರುವ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದ ಕುರಿತು ಚರ್ಚೆ ಮಾಡಲಾಗುವುದು.

ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ

ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಎಸ್​ಐಟಿ ವಿರೋಧಿಸುತ್ತಾರೆ. ಬಿಜೆಪಿ ಎಸ್​ಐಟಿ ವಿರೋಧವಾಗಿದೆ. ಎಸ್​ಐಟಿ ತನಿಖೆಗೆ ಸ್ಪೀಕರ್ ಆದೇಶಿಸಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಖಂಡಿತ ಕ್ರಮವಾಗಲಿದೆ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ಇಂದು ಮೈತ್ರಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರಣಿ ಸಭೆ

ಚುನಾವಣೆ ಪೂರ್ವ ಮೈತ್ರಿಯಲ್ಲಿ ಯಾವ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಸೂಕ್ತ ಎಂಬುದನ್ನು ಕಾಂಗ್ರೆಸ್​ನ ರಾಜ್ಯ ನಾಯಕರು ಸೋಮವಾರ ಚರ್ಚೆ ನಡೆಸಲಿದ್ದಾರೆ. ಚುನಾವಣೆ ತಯಾರಿ ಸಂಬಂಧ ಸರಣಿ ಸಭೆ ನಡೆಯುತ್ತಿದ್ದು, ಚುನಾವಣೆ ಸಮಿತಿಯು 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಸಲಿದೆ. ಯಾವ ಕ್ಷೇತ್ರದಲ್ಲಿ ಪಕ್ಷದ ಸಾಮರ್ಥ್ಯ ಎಷ್ಟಿದೆ? ಎಲ್ಲಿ ಕೊರತೆ ಇದೆ? ಕೊರತೆಯನ್ನು ತುಂಬಿಕೊಳ್ಳುವ ಬಗೆ ಹೇಗೆ ಎಂಬ ಬಗ್ಗೆ ನಾಯಕರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಚುನಾವಣೆ ಸಮಿತಿ ಸಭೆ ಖಾಸಗಿ ಹೋಟೆಲ್​ಗೆ ವರ್ಗವಾಗಿದೆ. ಸಂಜೆ 6ರಿಂದ ಸಭೆ ನಡೆಯಲಿದ್ದು, ಎಐಸಿಸಿ ಉಸ್ತುವಾರಿಗಳ ನಿಗಾದಲ್ಲೇ ರಾಜ್ಯದ ಪ್ರಮುಖ ನಾಯಕರು ಚರ್ಚೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ರಚಿಸಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ, ಆರ್.ವಿ.ದೇಶಪಾಂಡೆ, ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ ಸೇರಿ 22 ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವರು. ಕೆಪಿಸಿಸಿ ಸಮನ್ವಯ ಸಮಿತಿ ಹಾಗೂ ಪ್ರಚಾರ ಸಮಿತಿ ಸಭೆಯೂ ನಡೆಯುವುದು.

ಕಿಸಾನ್ ಘರ್ ಪೇ ಚರ್ಚಾಗೆ ಇಂದು ಚಾಲನೆ

ಕೆಪಿಸಿಸಿ ಕಿಸಾನ್ ಘಟಕದಿಂದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಡೆದ ಹಾದಿಯ ಬಗ್ಗೆ ರ್ಚಚಿಸಲು ರೈತ ಪ್ರತಿನಿಧಿಗಳ ದೃಷ್ಟಿಕೋನ ಶಿಬಿರವನ್ನು ಸೋಮವಾರ ಬೆಳಗ್ಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ರೈತರು ಎದುರಿಸುತ್ತಿರುವ ಸಮಸ್ಯೆ ಸವಾಲುಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ ಜತೆಗೆ ಹಲವು ನಿರ್ಣಯಗಳನ್ನು ಮಂಡಿಸಲಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಎಐಸಿಸಿ ಕಿಸಾನ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಕಾರ್ಯಕ್ರಮಕ್ಕೆ ಚಾಲನೆ ಕೊಡುವರು ಎಂದು ಹೇಳಿದರು. ‘ಕಿಸಾನ್ ಘರ್ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತಿದೆ. ನಂತರ ಉಪ ಹಳ್ಳಿಗಳಲ್ಲಿ ನಾವು ರೈತರ ಮನೆಗಳಿಗೆ ಭೇಟಿ ಕೊಟ್ಟು ಅವರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ 56 ಸಾವಿರ ಬೂತ್​ಗಳಿದ್ದು, 5.52 ಲಕ್ಷ ಉಪ ಹಳ್ಳಿಗಳಿವೆ. ಈ ಉಪ ಹಳ್ಳಿಗಳಲ್ಲಿ ಕಿಸಾನ್ ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಸುತ್ತೇವೆ ಎಂದು ವಿವರಿಸಿದರು.

ಫಸಲ್ ಬಿಮಾ ಯೋಜನೆ, ಕೃಷಿಗಾಗಿ ಲಕ್ಷಾಂತರ ಮಹಿಳೆ ಯರು ಒಡವೆಗಳನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡ ಇಟ್ಟಿದ್ದು, ಇವುಗಳನ್ನು ವಾಪಸ್ ಕೊಡಿಸಬೇಕೆಂದು ಸಭೆಯಲ್ಲಿ ನಿರ್ಣಯ ಮಾಡುತ್ತೇವೆ ಎಂದರು.