ಮಣ್ಣಿನ ಮಗನೋ, ಮೊಮ್ಮಗನೋ?

| ಮಂಜು ಬನವಾಸೆ ಹಾಸನ

ಕಾಂಗ್ರೆಸ್ ಮತ್ತು ಜೆಡಿಎಸ್​ನ ಮೈತ್ರಿಗೆ ಸವಾಲೆನಿಸಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯುತ್ತಾರೆಂಬುದೇ ಈಗ ಕುತೂಹಲದ ವಿಚಾರ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ನಿರಾಯಾಸ ವಾಗಿ ಒಲಿಸಿಕೊಂಡಿದ್ದರೂ, ಈ ಬಾರಿ ಪರಿಸ್ಥಿತಿ ಅಷ್ಟೊಂದು ಸಲೀಸಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್ ನಾಯಕರೇ ಈಗ ಸೆಟೆದು ನಿಂತಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಏರುಪೇರು ಮಾಡಿಕೊಂಡರೆ ಗೆಲುವಿಗೆ ಬೆವರು ಹರಿಸಬೇಕಾದೀತೆಂಬ ಸುಳಿವು ದಳಪತಿಗಳಿಗೆ ದೊರೆತಿದೆ. ಪಕ್ಷದ ಅಭ್ಯರ್ಥಿ ಆಯ್ಕೆ ವಿಷಯ ಗೌಡರ ಕುಟುಂಬದೊಳಗಿನ ರಾಜಕೀಯಕ್ಕೆ ಸಂಬಂಧಿಸಿದ್ದಾದ್ದ್ದಂದ ಗೊಂದಲ ಏರ್ಪಟ್ಟಿದೆ. ದೇವೇಗೌಡರು 6ನೇ ಬಾರಿ ಹಾಸನದಿಂದ ಸ್ಪರ್ಧಿಸುವರೇ? ಕ್ಷೇತ್ರ ಬದಲಿಸುವರೇ? ಎನ್ನುವ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ದೊರಕಿಲ್ಲ. ಇತ್ತೀಚೆಗೆ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ್ದ ಗೌಡರು, ಇದು ಲೋಕಸಭೆಯಲ್ಲಿ ನನ್ನ ಕೊನೇ ಭಾಷಣ ಎಂದಿದ್ದರು. ಆದರೆ, ಈ ಹಿಂದಿನ ಎರಡು ಚುನಾವಣೆಗಳಲ್ಲೂ ‘ಕೊನೇ ಚುನಾವಣೆ’ ಎಂದೇ ಮತಯಾಚಿಸಿ ಗೆದ್ದಿದ್ದನ್ನು ಜನ ಮರೆತಿಲ್ಲ. ಹೀಗಾಗಿ ಕೊನೇ ಕ್ಷಣದ ಬದಲಾವಣೆ ಎಂಬಂತೆ ಹಾಸನದಿಂದ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಮೊಮ್ಮಗ ಪ್ರಜ್ವಲ್ ರೇವಣ್ಣ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂದು ಗೌಡರೇ ಕೆಲ ತಿಂಗಳ ಕೆಳಗೆ ಹೇಳಿಕೆ ನೀಡಿದ್ದರು. ಇದರಿಂದಾಗಿ ಗೌಡರು ಮಂಡ್ಯ ಇಲ್ಲವೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿತ್ತು. ಆದರೆ, ಈಚೆಗೆ ಹಾಸನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ಸ್ಪರ್ಧೆಯನ್ನು ದೇವೇಗೌಡರು ಅಧಿಕೃತವಾಗಿ ಘೊಷಿಸಬಹುದು ಎನ್ನುವ ಊಹೆ ಸುಳ್ಳಾಯಿತು. ಇನ್ನೂ ಆ ಸೀಟು ಖಾಲಿ ಇಲ್ಲವಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಹೀಗಿದ್ದರೂ ಪ್ರಜ್ವಲ್ ರೇವಣ್ಣ ಮಾತ್ರ ತಾವೇ ಅಭ್ಯರ್ಥಿಯಾಗುವುದು ಖಚಿತ ಎನ್ನುವ ವಿಶ್ವಾಸದೊಂದಿಗೆ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸಿದ್ದಾರೆ. ಪಕ್ಷದ ಹಿರಿಯ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಆರಂಭಿಸಿದ್ದಾರೆ. ಇಷ್ಟೆಲ್ಲದರ ನಂತರವೂ ಗೌಡರು ಆಯಾ ಕಾಲಕ್ಕೆ ತಕ್ಕಂತೆ ತೆಗೆದುಕೊಂಡಿರುವ ತೀರ್ವನಗಳ ಅರಿವಿರುವವರು ಅವರ ಸ್ಪರ್ಧೆ ಸಾಧ್ಯತೆ ಅಲ್ಲಗಳೆಯಲು ಸಾಧ್ಯವಿಲ್ಲ.

ಜೆಡಿಎಸ್ ಗೆಲ್ಲುವ ಕುದುರೆ

ಹಾಸನ ಕ್ಷೇತ್ರದ ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ಗಮನಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತು. ಅದರಲ್ಲಿಯೂ ಹೊಳೆನರಸೀಪುರ ಹಾಗೂ ಶ್ರವಣಬೆಳಗೊಳ ಕ್ಷೇತ್ರಗಳ ಮುನ್ನಡೆ ಗೌಡರ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿತ್ತು.

ಸಂಸದರ ನಿಧಿ ಬಳಕೆಯಲ್ಲೂ ಮುಂದೆ

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಅನುದಾನ ಬಳಕೆಯಲ್ಲೂ ದೇವೇಗೌಡರು ಮುಂದಿದ್ದಾರೆ. ವಿಶೇಷವೆಂದರೆ ಅವರ ಎಲ್ಲ ಅನುದಾನವನ್ನು ಕೇವಲ ಸಮುದಾಯ ಭವನಗಳ ನಿರ್ವಣಕ್ಕೆ ನೀಡಿದ್ದಾರೆ. 2014-15ನೇ ಸಾಲಿನಲ್ಲಿ 130 ಕಾಮಗಾರಿಗಳಿಗಾಗಿ 4.90 ಕೋಟಿ ರೂ., ಮಂಜೂರು ಮಾಡಿದ್ದು, 123 ಕಾಮಗಾರಿ ಗಳು ಪೂರ್ಣಗೊಂಡಿವೆ. 2015-16ನೇ ಸಾಲಿನಲ್ಲಿ 178 ಕಾಮಗಾರಿಗಳಿಗೆ 4.90 ಕೋಟಿ ರೂ. ಮಂಜೂರು ಮಾಡಿದ್ದು, 164 ಕಾಮಗಾರಿ ಪೂರ್ಣಗೊಂಡಿವೆ. 2016-17ನೇ ಸಾಲಿನಲ್ಲಿ 134 ಕಾಮಗಾರಿಗಳಿಗೆ 4.72 ಕೋಟಿ ರೂ. ಮಂಜೂರು ಮಾಡಿದ್ದು, 60 ಕೆಲಸ ಪೂರ್ಣಗೊಂಡಿವೆ. 2017-18ನೇ ಸಾಲಿನ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗೆ ಇನ್ನೂ ಅನುದಾನ ಬಿಡುಗಡೆಯಾಗಬೇಕಿದೆ.

ಗೌಡರ ಹೆಸರು ರೇವಣ್ಣ ಕೆಲಸ

ದೇವೇಗೌಡರು ಸಂಸದರಾಗಿದ್ದರೂ ಅವರ ಪರವಾಗಿ ಎಲ್ಲ ಕೆಲಸ, ಕಾರ್ಯಗಳನ್ನು ಅವರ ಪುತ್ರ, ಸಚಿವ ಎಚ್.ಡಿ. ರೇವಣ್ಣ ಅವರೇ ನಿಭಾಯಿಸುತ್ತಾರೆ. ಕ್ಷೇತ್ರದ ಅಗತ್ಯವೇನು? ಎನ್ನುವುದರಿಂದ ಹಿಡಿದು ಪ್ರಸ್ತಾವನೆಗೆ ಅಂತಿಮ ರೂಪ ನೀಡುವವರೆಗೂ ರೇವಣ್ಣ ಅವರೇ ಎಲ್ಲವನ್ನೂ ನಿರ್ಧರಿಸುತ್ತಾರೆ. ಒಂದೇ ಬಾರಿ ಹತ್ತಾರು ಫೈಲ್​ಗಳನ್ನು ಹಿಡಿದು ಗೌಡರೊಂದಿಗೆ ದೆಹಲಿ ವಿಮಾನ ಏರುತ್ತಾರೆ. ಒಂದೆರಡು ದಿನ ತಂದೆಯೊಂದಿಗೆ ವಿವಿಧ ಸಚಿವಾಲಯ ಸುತ್ತಿ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಳ್ಳುತ್ತಾರೆ.

ಸಮರ್ಥರ ಹುಡುಕಾಟದಲ್ಲಿ ಬಿಜೆಪಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಟ್ಟರೆ ಕ್ಷೇತ್ರದಲ್ಲಿ ಬಿಜೆಪಿಗೆ ಮೈತ್ರಿ ಅಭ್ಯರ್ಥಿಯೇ ನೇರ ಎದುರಾಳಿಯಾಗಲಿದ್ದು, ಗಂಭೀರ ಪೈಪೋಟಿ ನೀಡುವ ಅವಕಾಶ ಒದಗಿಬಂದಿದೆ. ಆದರೆ, ಆ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಯಾಗಿ ಬಿಂಬಿಸಬಲ್ಲ ಸಮರ್ಥ ನಾಯಕತ್ವ ಕಾಣಿಸುತ್ತಿಲ್ಲ. ಪರಿಣಾಮ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ ಕರೆತರುವ ಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಿಂದೆ ಕನಕಪುರದಲ್ಲಿ ಗೌಡರನ್ನು ಸೋಲಿಸಿದ್ದ ಮಾಜಿ ಸಂಸದೆ ತೇಜಸ್ವಿನಿಗೌಡ ಹೆಸರೂ ಚಾಲ್ತಿಗೆ ಬಂದಿದೆ. ಈ ನಡುವೆ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡರನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚಿಂತನೆಯೂ ನಡೆಯುತ್ತಿದೆ. ಇದಲ್ಲದೆ, ಹಿಂದೆ ಬಿಜೆಪಿಯಿಂದ ಶಾಸಕರಾಗಿದ್ದ ಮಾಜಿ ಸಚಿವ ಎ. ಮಂಜು, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌಡರಿಗೆ ಪೈಪೋಟಿ ನೀಡಿದ್ದರು. ಅವರನ್ನು ಸೆಳೆದು ಬಿಜೆಪಿ ಅಭ್ಯರ್ಥಿಯಾಗಿಸುವ ಆಲೋಚನೆಯೂ ಕಮಲ ಪಡೆಯಲ್ಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗುವ ವಿಷಯದಲ್ಲಿ ಎ.ಮಂಜು ಹಲವು ತಿಂಗಳಿಂದ ಅಳೆದು ತೂಗುವ ತಂತ್ರ ಅನುಸರಿಸುತ್ತಿದ್ದು, ಗೌಡರು ಮೈತ್ರಿ ಅಭ್ಯರ್ಥಿಯಾದರೆ ಮಾತ್ರ ಬೆಂಬಲ ನೀಡುವೆ. ಪ್ರಜ್ವಲ್ ಕಣಕ್ಕಿಳಿದರೆ ಬೆಂಬಲವಿಲ್ಲ ಎಂದು ಪದೇಪದೆ ಹೇಳುತ್ತಿದ್ದಾರೆ. ಈ ಮಾತಿನ ಹಿಂದಿರುವ ಮರ್ಮ ಏನೆಂಬುದನ್ನು ತಿಳಿಯಲು ಮೈತ್ರಿ ವ್ಯವಹಾರ ಅಂತಿಮವಾಗಬೇಕಿದೆ.

ಅಭಿವೃದ್ಧಿಯಲ್ಲಿ ಗೌಡರು ಮುಂದೆ

86ರ ಹರೆಯದ ಗೌಡರು ರಾಜ್ಯ ಸಮ್ಮಿಶ್ರ ಸರ್ಕಾರದ ಸವಾಲುಗಳ ಬೆಟ್ಟ ಕರಗಿಸುವ ತಂತ್ರಗಾರಿಕೆ, ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ಸಂಘಟನೆಯಲ್ಲಿ ಪುರುಸೊತ್ತಿಲ್ಲದೆ ತೊಡಗಿಕೊಂಡಿದ್ದರೂ ಅವರ ಫೋನ್ ಕರೆ, ಪತ್ರಗಳು ಅವರ ಕೆಲಸ ಪೂರೈಸುತ್ತಿವೆ. ‘ಹಾಸನ ಏರ್​ಪೋರ್ಟ್’ ನಿರ್ಮಾಣ ಯೋಜನೆ ಈ ಬಾರಿ ವಾಸ್ತವಕ್ಕಿಳಿಯುವುದಕ್ಕೆ ಸಿದ್ಧವಾಗಿದೆ. ಹಾಸನ ನಗರಕ್ಕೆ 24/7 ಹೇಮಾವತಿ ನದಿ ನೀರು ಪೂರೈಸುವ ಅಮೃತ್ ಯೋಜನೆ ಕಾಮಗಾರಿ ಪ್ರಗತಿ ಯಲ್ಲಿದೆ. 360 ಕೋಟಿ ರೂ. ವೆಚ್ಚದ ಮೆಗಾ ಡೇರಿಗೆ ಶಂಕುಸ್ಥಾಪನೆ ನೆರವೇರಿದೆ. ಹಾಸನ-ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ನಿರ್ವಣಕ್ಕೆ ತಾತ್ವಿಕ ಒಪ್ಪಿಗೆ ದೊರಕಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. 1400 ಕೋಟಿ ರೂ. ವೆಚ್ಚದಲ್ಲಿ ಹಾಸನ- ಬಿ.ಸಿ. ರೋಡ್ ನಡುವಿನ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಶಿರಾಡಿಘಾಟ್ ರಸ್ತೆ ಕಾಂಕ್ರಿಟೀಕರಣ ಸೇರಿ ಹತ್ತಾರು ಕಾಮಗಾರಿ ಪೂರ್ಣಗೊಂಡಿವೆ.

One Reply to “ಮಣ್ಣಿನ ಮಗನೋ, ಮೊಮ್ಮಗನೋ?”

Comments are closed.