ಅಮಿತ್ ಷಾ ಹೆಸರಲ್ಲಿ ಧೋಖಾ

| ಶಿವಕುಮಾರ್ ಮೆಣಸಿನಕಾಯಿ ಬೆಂಗಳೂರು

ಚುನಾವಣಾ ತಂತ್ರಗಾರಿಕೆಯಲ್ಲಿ ಚಾಣಕ್ಯ ಎಂದೇ ಹೆಸರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೆಸರಿನಲ್ಲೇ ಬಿಜೆಪಿ ಮುಖಂಡರನ್ನು ವಂಚಿಸುತ್ತಿದ್ದ ತಂಡವೊಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ.

ಅಮಿತ್ ಷಾ ಅವರ ಲೆಟರ್ ಹೆಡ್, ಫೋರ್ಜರಿ ಸಹಿ ಹಾಗೂ ಕೆಲವು ಸೂಕ್ಷ್ಮ ದಾಖಲೆಗಳನ್ನು ರಾಜ್ಯದ ನಾನಾ ಕಡೆ ಬಳಸಿರುವ ಶಂಕೆಯ ಆಧಾರದ ಮೇಲೆ ಹುಬ್ಬಳ್ಳಿ ಮೂಲದ ವಿನಾಯಕ ಮೇಹರವಾಡೆ ಎಂಬ ವ್ಯಕ್ತಿಯನ್ನು ಬೆಂಗಳೂರಿನ ಗಿರಿನಗರ ಪೊಲೀಸರು ವಶಕ್ಕೆ ಪಡೆದಿದ್ದು, ಇಡೀ ಘಟನೆಯ ಸೂತ್ರಧಾರಿ ಶಿವಕುಮಾರ್ ದೇವೇಂದ್ರಪ್ಪ ಸೂರಿ ತಲೆ ಮರೆಸಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇನ್ನೂ ಕೆಲವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಐದು ದಿನಗಳ ಹಿಂದಷ್ಟೇ ಯುವಕರ ತಂಡವೊಂದು ಬೆಂಗಳೂರಿನ ಪ್ರತಿಷ್ಠಿತ ಅಭ್ಯರ್ಥಿಯೊಬ್ಬರ ಚುನಾವಣಾ ರಣತಂತ್ರದ ಬಗ್ಗೆ ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಬಿಜೆಪಿ ಶಾಸಕರ ಕಚೇರಿಗೆ ಭೇಟಿ ಕೊಟ್ಟು, ದೆಹಲಿಯಿಂದ ಬಂದಿರುವ ಅಮಿತ್ ಷಾ ರಚಿಸಿದ ವಿಶೇಷ ತಂಡವೆಂದು ಹೇಳಿಕೊಂಡಿದ್ದರು.

ಅಮಿತ್ ಷಾ ನಕಲಿ ತಂಡದ ರಹಸ್ಯ: ಅಮಿತ್ ಷಾ ಅವರು ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ಪಡೆಯುವ ಮಾಹಿತಿ ಹೊರತಾಗಿಯೂ ಚುನಾವಣೆ ವೇಳೆ ಸಮೀಕ್ಷೆ ನಡೆಸಲು ತಮ್ಮದೇ ಸ್ವಂತ ತಂಡ ರಚಿಸಿ, ಮಾಹಿತಿ ಪಡೆದುಕೊಳ್ಳುತ್ತಾರೆ. ಅದನ್ನು ಆಧರಿಸಿಯೇ ಚುನಾವಣಾ ರಣತಂತ್ರ ರೂಪಿಸುತ್ತಾರೆ ಎಂಬುದು ಜಗಜ್ಜಾಹೀರು. ಈ ರೀತಿಯ ಚಾಕಚಕ್ಯತೆ ಕಾರಣಕ್ಕಾಗಿಯೇ ವಿರೋಧಿಗಳ ಎದೆಯಲ್ಲಿ ಷಾ ನಡುಕ ಹುಟ್ಟಿಸುತ್ತಾರೆ. ಇದನ್ನೇ ದಾಳವಾಗಿ ಬಳಸಿಕೊಂಡ ಯುವಕರ ತಂಡವೊಂದು ಅಮಿತ್ ಷಾ ಹೆಸರಿನಲ್ಲಿ ಬಿಜೆಪಿ ನಾಯಕರನ್ನೇ ವಂಚಿಸಲು ಮುಂದಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಐದು ದಿನಗಳ ಹಿಂದೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಕಚೇರಿಗೆ ಬಂದ ಯುವಕರ ತಂಡವೊಂದು, ತಾವು ಅಮಿತ್ ಷಾ ವಿಶೇಷ ತಂಡದ ಸದಸ್ಯರೆಂದು ಹೇಳಿಕೊಂಡಿದ್ದಾರೆ. ಅದನ್ನು ನಂಬಿಸಲು ಷಾ ಅವರ ಲೆಟರ್ ಹೆಡ್ ಮತ್ತಿತರ ದಾಖಲೆಗಳನ್ನು ಕಚೇರಿ ಸಿಬ್ಬಂದಿಗೆ ಪ್ರದರ್ಶಿಸಿದ್ದಾರೆ. ಈ ವಿಷಯವನ್ನು ಸಿಬ್ಬಂದಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ತಿಳಿಸಿದ್ದಾರೆ.

ಅಮಿತ್ ಷಾ ಅವರು 4 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಹೋಗಿರುವುದರಿಂದ ಸಂಶಯಗೊಂಡ ಶಾಸಕ ರವಿ ಸುಬ್ರಹ್ಮಣ್ಯ ಅವರು ತಮ್ಮ ಆಪ್ತವಲಯದಲ್ಲಿ ವಿಚಾರಿಸಿ, ಇಂಥ ಯಾವುದೇ ತಂಡ ಬಂದಿರುವುದು ಅನುಮಾನ ಎಂದರಿತು ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ತಂಡದ ಸದಸ್ಯರು ಕಚೇರಿಯಿಂದ ಜಾಗ ಖಾಲಿ ಮಾಡಿದ್ದರು. ಹೀಗಾಗಿ ಪೊಲೀಸರು ತನಿಖೆ ನಡೆಸಿ, ಕೊನೆಗೂ ವಂಚಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಮ್ಮ ಕಚೇರಿಗೆ ಅಮಿತ್ ಷಾ ಅವರ ಹೆಸರು ಹೇಳಿಕೊಂಡು ಯುವಕರು ಬಂದಿದ್ದರು. ಮಾಹಿತಿ ಸಂಗ್ರಹಕ್ಕೆ ನೆರವು ಕೋರಿದ್ದರು. ಈ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದೆ.

| ರವಿ ಸುಬ್ರಹ್ಮಣ್ಯ ಬಸವನಗುಡಿ ಶಾಸಕ

ಬಿಜೆಪಿಯ ಪ್ರಮುಖರೆಂದು ಹೇಳಿಕೊಂಡು ಕೆಲ ಮಾಹಿತಿ ಪಡೆಯಲು ಬಂದಿದ್ದಾಗಿ ನಮಗೆ ದೂರು ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಆ ಯುವಕರಿಗೂ ಬಿಜೆಪಿ ರಾಷ್ಟ್ರೀಯ ಮುಖಂಡರಿಗೂ ಸಂಬಂಧವೇ ಇಲ್ಲವೆಂಬುದು ದೃಢಪಟ್ಟಿದೆ. ಈ ಬಗ್ಗೆ ಯುವಕನನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

| ಎಸ್.ಪಿ. ಸಿದ್ದಲಿಂಗಯ್ಯ, ಇನ್ಸ್​ಪೆೆಕ್ಟರ್ ಗಿರಿನಗರ ಪೊಲೀಸ್ ಠಾಣೆ

ಬಂಧಿತರಿಗೂ ಬಿಜೆಪಿ ನಂಟು?

ವಿಚಿತ್ರವೆಂದರೆ ಬಂಧಿತ ವಿನಾಯಕ ಮೇಹರವಾಡೆ ಹಾಗೂ ಶಿವಕುಮಾರ್ ದೇವೇಂದ್ರಪ್ಪ ಸೂರಿಗೆ ಬಿಜೆಪಿ ನಂಟಿದೆ ಎನ್ನಲಾಗಿದೆ. ಹುಬ್ಬಳ್ಳಿಯ ಕಟಾರಿಯಾ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಲ್ಲಿ ಸ್ವಾತಿ ಗ್ರಾಫಿಕ್ಸ್ ಎಂಬ ಹೆಸರಿನ ಡಿಟಿಪಿ ನಡೆಸುತ್ತಿರುವ ಶಿವಕುಮಾರ್ ಮತ್ತು ವಿನಾಯಕ ಈ ಜಾಲದ ಪ್ರಮುಖ ಆರೋಪಿಗಳು. ಆರೋಪಿಗಳ ಜಾಡು ಹಿಡಿದು ಹುಬ್ಬಳ್ಳಿಗೆ ಹೋಗಿದ್ದ ಗಿರಿನಗರ ಪೊಲೀಸರು ವಿನಾಯಕ ಮೇಹರವಾಡೆಯನ್ನು ಬಂಧಿಸಿದ್ದಾರೆ. ಅಲ್ಲದೆ ಸ್ವಾತಿ ಗ್ರಾಫಿಕ್ಸ್​ನಲ್ಲಿ ಅಮಿತ್ ಷಾ ಸೇರಿ ಹಲವು ರಾಷ್ಟ್ರೀಯ ನಾಯಕರ ವಿಳಾಸ ಇರುವ ಲೆಟರ್ ಹೆಡ್ ಮತ್ತಿತರ ದಾಖಲೆಗಳು ಕಂಪ್ಯೂಟರ್​ನಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಬಂಧಿತ ವಿನಾಯಕ ತನ್ನ ಸಹಚರ ಶಿವಕುಮಾರ್ ಬಗ್ಗೆ ಮಾಹಿತಿ ನೀಡಿದ್ದಾನೆ. ಆದರೆ ಶಿವಕುಮಾರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ. ಶಿವಕುಮಾರ್​ನ ತಂದೆ ದೇವೇಂದ್ರಪ್ಪ ಸೂರಿ ಬಿಜೆಪಿ ಮತ್ತು ಸಂಘ ಪರಿವಾರದ ಸಕ್ರಿಯ ಮುಖಂಡ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.