ಸೈಕಲ್ ಮೇಲೆ ಆನೆ ಸವಾರಿ ಇತರೆ ರಾಜ್ಯಗಳತ್ತ!

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾಗಿದ್ದರೂ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಒಂದಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಮೈತ್ರಿಯಾತ್ರೆ ಇತರೆ ರಾಜ್ಯಗಳಿಗೂ ಮುಂದುವರಿದಿದ್ದು, ಹಲವು ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಮಾಯಾವತಿ ಜತೆಗಿನ ಸ್ನೇಹವನ್ನು ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಬಹಿರಂಗವಾಗಿ ವಿರೋಧಿಸಿದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ಅಖಿಲೇಶ ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಎಸ್‌ಪಿಯೊಂದಿಗೆ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ. ಮಧ್ಯಪ್ರದೇಶದ 26 ಕ್ಷೇತ್ರಗಳಲ್ಲಿ ಬಿಎಸ್‌ಪಿ ಮತ್ತು ಮೂರು ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧಿಸಲಿವೆ. ಮಧ್ಯಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಲೋಕಸಭಾ ಚುನಾವಣೆ ಸ್ಪರ್ಧಿಸುತ್ತಿರುವ ಬಿಎಸ್‌ಪಿ, ನಾಲ್ಕು ಬಾರಿ ಕೆಲ ಕ್ಷೇತ್ರಗಳಲ್ಲಿ ಗೆಲುವು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 227 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಮಾಯಾರ ಪಕ್ಷ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಒಟ್ಟು ಶೇ.5.01 ಮತ ಪಡೆದಿದೆ (ಇದು ಪಕ್ಷೇತರರು ಪಡೆದ ಮತಪ್ರಮಾಣ(ಶೇ.5.82)ಕ್ಕಿಂತಲೂ ಕಡಿಮೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಶೇ.8.72 ಮತ ಪಡೆದಿತ್ತು. ಇಲ್ಲಿ ಈ ಬಾರಿ ಕಾಂಗ್ರೆಸ್ ಜತೆಗೆ ಮೈತ್ರಿಗೆ ಬಿಎಸ್‌ಪಿ ಯತ್ನಿಸಿತ್ತಾದರೂ, ಕೈ ಪಕ್ಷದ ನಿರುತ್ಸಾಹದಿಂದ ಅದು ಸಾಧ್ಯವಾಗಲಿಲ್ಲ. ಉತ್ತರಾಖಂಡದಲ್ಲಿ ಎಸ್‌ಪಿ-ಬಿಎಸ್‌ಪಿ ಇನ್ನೂ ನೆಲೆ ಕಂಡುಕೊಳ್ಳಬೇಕಿದೆ.

ಕಾರ್ಯಕರ್ತರ ಅಸಮಾಧಾನ
ಎಸ್‌ಪಿ-ಬಿಎಸ್‌ಪಿ ನಾಯಕರು ಒಂದಾಗಿದ್ದರೂ ಕಾರ್ಯಕರ್ತರ ಮನಸುಗಳು ಒಂದಾಗಿಲ್ಲ. ಉತ್ತರ ಪ್ರದೇಶದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಈ ಮೈತ್ರಿಯನ್ನು ವಿರೋಧಿಸಿದ್ದರೆ, ಮಧ್ಯಪ್ರದೇಶದಲ್ಲಿ ಈ ರಾಜಕೀಯ ಪ್ರಯೋಗ ಅಷ್ಟೇನು ಯಶಸ್ಸು ಕಾಣದು ಎನ್ನುತ್ತಾರೆ ಕಾರ್ಯಕರ್ತರು. ಆದರೆ, ಉತ್ತರ ಪ್ರದೇಶದ ಹೊರತಾಗಿ ಬೇರೆ ರಾಜ್ಯಗಳಲ್ಲೂ ನೆಲೆ ವಿಸ್ತರಿಸಿ, ಪಕ್ಷ ಸಂಘಟನೆ ಬಲಗೊಳಿಸುವ ಯೋಚನೆ ಮಾಯಾ-ಅಖಿಲೇಶರದ್ದು. ಅದಕ್ಕೆ ಪೂರಕವಾಗಿ, ಮೈತ್ರಿ, ಸೀಟು ಹಂಚಿಕೆ ಕೈಗೊಳ್ಳುತ್ತಿದ್ದಾರೆ. ಈವರೆಗಿನ ಒಪ್ಪಂದಗಳಲ್ಲಿ ಬಿಎಸ್‌ಪಿಯೇ ಮೇಲುಗೈ ಸಾಧಿಸಿದ್ದು, ಅಖಿಲೇಶ್ ಮುಗುಳ್ನುಗೆ ಬೀರುತ್ತಲೇ ಮುಂದಿನ ಲೆಕ್ಕಾಚಾರಗಳತ್ತ ಗಮನ ಹರಿಸಿದ್ದಾರೆ.

ಎಸ್‌ಪಿ-ಬಿಎಸ್‌ಪಿಗಳು ಒಂದಾಗಿರುವುದರಿಂದ ಮತಗಳ ವಿಭಜನೆ ತಪ್ಪಲಿದೆ. ಬಿಜೆಪಿ-ಕಾಂಗ್ರೆಸ್‌ನ್ನು ದೂರ ವಿರಿಸಿಯೇ ಮಹಾಮೈತ್ರಿಕೂಟ ಮುನ್ನಡೆಯಲಿದೆ. ಉತ್ತರ ಪ್ರದೇಶದ ಬಳಿಕ ಇನ್ನೆರಡು ರಾಜ್ಯಗಳಲ್ಲಿ ಸೀಟು ಹಂಚಿಕೆ ಅಂತಿಮಗೊಂಡಿದೆ. ಪ್ರಚಾರವನ್ನು ಜಂಟಿಯಾಗಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

| ಅಖಿಲೇಶ್ ಯಾದವ್ ಎಸ್‌ಪಿ ಮುಖಂಡ

ಬಿಜೆಪಿ-ಅಕಾಲಿದಳ  ಸೀಟು ಹಂಚಿಕೆ ಅಂತಿಮ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎನ್‌ಡಿಎ ಸೀಟು ಹಂಚಿಕೆ ಅಂತಿಮವಾಗಿದ್ದು, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 10 ಮತ್ತು ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಎಸ್‌ಎಡಿ ಅಧ್ಯಕ್ಷ ಸುಖ್‌ಬಿರ್ ಸಿಂಗ್ ಬಾದಲ್ ಜತೆ ಗುರುವಾರ ಮಾತುಕತೆ ನಡೆದ ನಂತರ ಸೀಟು ಹಂಚಿಕೆ ೋಷಣೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾಡಿದ್ದಾರೆ. 2014ರ ಚುನಾವಣೆಯಲ್ಲೂ ಇದೇ ಮಾದರಿಯಲ್ಲಿ ಸೀಟು ಹಂಚಿಕೆ ಆಗಿತ್ತು ಎಂದು ಷಾ ಟ್ವೀಟ್ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಆಮ್ ಆದ್ಮಿ ಪಕ್ಷ ತಲಾ 4 ಮತ್ತು ಕಾಂಗ್ರೆಸ್ 3 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 77, ಆಮ್ ಆದ್ಮಿ ಪಕ್ಷ 20, ಎಸ್‌ಎಡಿ 15, ಬಿಜೆಪಿ 3 ಮತ್ತು ಎಲ್‌ಐಪಿ 2 ಸ್ಥಾನಗಳಲ್ಲಿ ಗೆದ್ದಿವೆ. -ಏಜೆನ್ಸೀಸ್

ಸೋಷಿಯಲ್ ಮೀಡಿಯಾ ಟ್ರೆಂಡ್
ಯಾರ ನಡುವೆ ೈಟು…?
ಕೆಲ ವಿಐಪಿ ಕ್ಷೇತ್ರಗಳು ಚುನಾವಣೆ ವೇಳೆ ಇಡೀ ದೇಶದ ಗಮನ ಸೆಳೆಯುತ್ತವೆ. 2014ರಲ್ಲಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಕೇಜ್ರಿವಾಲ್ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ ಎಲ್ಲ ಪಕ್ಷಗಳು ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕಿದೆಯಷ್ಟೇ. ಆದರೆ, ಇದಕ್ಕೂ ಮುನ್ನವೇ ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಬಗೆಗೆ ತೀವ್ರ ಕುತೂಹಲ ಮನೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಾವಿಷಯವಾಗಿದೆ. ಆಲ್ ಇಂಡಿಯಾ ಮಜಲಿಸ್ ಎ ಇತ್ತೆಹಾದುಲ್ ಮುಸ್ಲಿಮಿನ್ ಪಕ್ಷದ ಅಸದುದ್ದಿನ್ ಒವೈಸಿ ವಿರುದ್ಧ ಕಾಂಗ್ರೆಸ್ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಜರುದ್ದಿನ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಕಾಂಗ್ರೆಸ್ ತೆಲಂಗಾಣ ಮತ್ತು ಆಂಧ್ರಪ್ರದೇಶದ 17 ಸೀಟುಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಹೈದರಾಬಾದ್‌ನಿಂದ ಅಜರುದ್ದಿನ್ ಸ್ಪರ್ಧೆ ಖಚಿತ ಎನ್ನಲಾಗಿದೆ. ಹೀಗಾದ್ದಲ್ಲಿ ಒವೈಸಿ ಮತ್ತು ಅಜರ್ ನಡುವೆ ಚುನಾವಣಾ ಅಖಾಡಾ ರಂಗೇರಲಿದೆ. ‘ರಾಜಕೀಯದ ಪಿಚ್‌ನಲ್ಲಿ ಅಜರ್ ಔಟಾಗುತ್ತಾರೋ, ಸಿಕ್ಸರ್ ಹೊಡೆಯುತ್ತಾರೋ ಇಲ್ಲವೆ ಒವೈಸಿಯೇ ಅಬ್ಬರಿಸುತ್ತಾರೋ ಕಾದು ನೋಡಬೇಕು’ ಎಂದಿದ್ದಾರೆ ಟ್ವೀಟಿಗರು.

ಇತಿಹಾಸ ಮತ್ತೆ ವೈಭವದ ದಿನಗಳಿಗೆ ಕಾಂಗ್ರೆಸ್
7ನೇ ಲೋಕಸಭೆಗೆ 1980ರ ಜನವರಿಯಲ್ಲಿ ಚುನಾವಣೆ ನಡೆಯಿತು. ಆದರೆ ಜನತಾ ಪರಿವಾರಿಗರ ನಡುವಿನ ಮುಸುಕಿನ ಗುದ್ದಾಟ ಹಾಗೂ ಭಿನ್ನಾಭಿಪ್ರಾಯಗಳನ್ನು ಕಂಡಿದ್ದ ಮತದಾರರು ಅಷ್ಟೊತ್ತಿಗಾಗಲೇ ಭ್ರಮನಿರಸನಗೊಂಡಿದ್ದರು. ಇದರ ಸಂಪೂರ್ಣ ಪ್ರಯೋಜನ ದಕ್ಕಿದ್ದು ‘ಇಂದಿರಾ ಕಾಂಗ್ರೆಸ್’ಗೆ. ಬರೋಬ್ಬರಿ 353 ಸ್ಥಾನಗಳನ್ನು ದಕ್ಕಿಸಿಕೊಂಡ ಕಾಂಗ್ರೆಸ್ ಗತವೈಭವಕ್ಕೆ ಮತ್ತೊಮ್ಮೆ ಮರಳಿದರೆ, ಜನತಾಪಕ್ಷದ ಚರಣ್ ಸಿಂಗ್ ಬಣಕ್ಕೆ 41 ಸ್ಥಾನಗಳೂ ಮತ್ತೊಂದು ಬಣಕ್ಕೆ 31 ಸ್ಥಾನಗಳೂ ದಕ್ಕಿದವು. ಮಿಕ್ಕಂತೆ ಸಿಪಿಐಎಂಗೆ 37, ಕಾಂಗ್ರೆಸ್‌ನ ದೇವರಾಜ ಅರಸು ಬಣಕ್ಕೆ 13, ಸಿಪಿಐಗೆ 10, ಡಿಎಂಕೆಗೆ 16 ಸ್ಥಾನಗಳು ದಕ್ಕಿದವು. ಕಾಲಾನಂತರದಲ್ಲಿ ಜನತಾಪಕ್ಷವು ಮತ್ತೆಮತ್ತೆ ಹೋಳಾಗುತ್ತ ಹೋಗಿದ್ದು ವಿಷಾದನೀಯ ಬೆಳವಣಿಗೆ. ಕೇಂದ್ರದಲ್ಲಿ ‘ಕಾಂಗ್ರೆಸ್ಸೇತರ’ ಸರ್ಕಾರ ಸ್ಥಾಪಿಸಿ ಆ ಪರಂಪರೆ ಮುಂದುವರಿಸಿಕೊಂಡು ಹೋಗುವುದಕ್ಕೆ ಜನತಾ ಪರಿವಾರಕ್ಕೆ ಮತದಾರರಿತ್ತ ಅವಕಾಶ ಕೆಲವರ ಕಿತ್ತಾಟದಿಂದ ಮಣ್ಣುಪಾಲಾಯಿತು.