ಕಿಂಗ್​ಪಿನ್​, ಉಪ ಚುನಾವಣೆ, ದತ್ತಪೀಠ: ನ್ಯಾಯಾಲಯದಲ್ಲಿಂದು ನಡೆದ ಈ ವಿಚಾರಣೆಗಳು ಏನಾದವು?

ಬೆಂಗಳೂರು: ಸರ್ಕಾರ ಉರುಳಿಸುವ ಯತ್ನ ನಡೆಸಿದ ಆರೋಪ ಹೊತ್ತಿರುವ ಕಿಂಗ್​ಪಿನ್​, ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆ, ದತ್ತಪೀಠ ವಿವಾದವೂ ಸೇರಿದಂತೆ ಕರ್ನಾಟಕದ ಹಲವು ಪ್ರಮುಖ ವಿಚಾರಗಳ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಬುಧವಾರ ಹೈಕೋರ್ಟ್​ನಲ್ಲಿ ನಡೆಯಿತು.

ಯಾವ ಯಾವ ಪ್ರಕರಣಗಳು ಏನಾದವು? ಎಂಬುದರ ಮಾಹಿತಿ ಇಲ್ಲಿದೆ.

ಕಿಂಗ್​ಪಿನ್​ ಸೋಮಶೇಖರ್​ ಮನವಿ ಏನಾಯ್ತು?

ಆಪರೇಷನ್ ಕಮಲದ ಆರೋಪದಡಿ ಪೊಲೀಸರು ಅನಗತ್ಯ ಕಿರುಕುಳ ನೀಡಬಾರದು. ಜಯನಗರದ ಗಣೇಶ್ ಶೂಟ್‌ಔಟ್ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಬಾರದು. ತಮ್ಮ ವಿರುದ್ಧ ಕೈಗೊಳ್ಳುವ ಕ್ರಮಗಳನ್ನು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಕೋರಿ ಕಿಂಗ್​ಪಿನ್​ ಸೋಮಶೇಖರ್​ ಸಲ್ಲಿಸಿದ್ದ ಪಿಐಎಲ್​ ವಿಚಾರಣೆ ನಡೆಸಿದ ಹೈಕೋರ್ಟ್​, ಪೊಲೀಸ್​ ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೋಮಶೇಖರ್​ಗೆ ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಮಲ್ಟಿಫ್ಲೆಕ್ಸ್​ಗಳ ಆಹಾರ ದರ ಕುರಿತು ಮಾಹಿತಿ ಕೇಳಿದ ಕೋರ್ಟ್​

ಮಲ್ಟಿಫ್ಲೆಕ್ಸ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಹೆಚ್ಚಿನ ದರ ನಿಗದಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್​, ಆಹಾರ ಪದಾರ್ಥಗಳ ದರ ನಿಯಂತ್ರಿಸುವ ಸಾಧ್ಯತೆಯ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.

ಲೋಕಸಭೆ ಉಪಚುನಾವಣೆ ರದ್ದು ಕೋರಿದ್ದ ಅರ್ಜಿ ತುರ್ತು ವಿಚಾರಣೆಗೆ ನಕಾರ

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಉಪ ಚುನಾವಣೆ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿತು. ನಿಯಮನುಸಾರ ವಿಚಾರಣೆಗೆ ಅರ್ಜಿ ನಿಗದಿಪಡಿಸಲು ಕೋರಿ ರಿಜಿಸ್ಟ್ರಾರ್ ಮುಂದೆ ಮನವಿ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.

ಬೆಂಗಳೂರು ಮಾದರಿ

ಬೆಂಗಳೂರಿನ ಮಾದರಿಯಲ್ಲೇ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಲ್ಲ ರಸ್ತೆಗಳನ್ನು ಮುಚ್ಚಿಸಲು ಆದೇಶ ನೀಡಬೇಕೆಂದು ಕೋರಿ, ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಎಂಟು ಮಂದಿಯನ್ನು ಪ್ರತಿವಾದಿಯನ್ನಾಗಿಸಿ, ಬೀದರ್ ಮೂಲದ ಗುರುನಾಥ್ ವದ್ದೆ ಎಂಬುವವರು ಇಂದು ಪಿಐಎಲ್ ಸಲ್ಲಿಸಿದರು.

ದತ್ತಪೀಠ ಪೂಜಾ ವಿಧಿ ವಿಧಾನದ ತಕರಾರು

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಜಾವರ್ ಅವರನ್ನು ನೇಮಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಪ್ರಕರಣದ‌ ಸಂಬಂಧ ಮುಜಾವರ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ಜಾರಿ ಮಾಡಿರುವ ನೋಟಿಸ್ ಪ್ರತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.