ಜೈಪುರ: ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಲು ರೈಲು ಚಾಲಕರೊಬ್ಬರು ಟ್ರೇನ್ ಅನ್ನು ಅಂದಾಜು ಒಂದು ಕಿ.ಮೀ. ಹಿಂದಕ್ಕೆ ಓಡಿಸಿದ್ದಾರೆ.
ರಾಜಸ್ತಾನದ ಬರಾನ್ ಜಿಲ್ಲೆಯ ಅಟ್ರು-ಸಲಾಪುರ್ ರೈಲ್ವೆ ಮಾರ್ಗದಲ್ಲಿ ಸಲಾಪುರ್ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ರಾಜೇಂದ್ರ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ರೈಲಿನಿಂದ ಹೊರಗೆ ಜಿಗಿದಿದ್ದಾರೆ. ರಾಜೇಂದ್ರನನ್ನು ರಕ್ಷಿಸಲು ಅವರ ಸಹೋದರ ವಿನೋದ್ ಪ್ರಯತ್ನಿಸಿದ್ದಾರೆ. ಆಗ ಅವರೂ ಆಯ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರ ಸಹಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಲ್ಲದೆ, ಆಂಬುಲೆನ್ಸ್ಗೆ ಫೋನ್ ಮಾಡಿದ್ದಾರೆ.
ಆದರೆ ಅವರಿಬ್ಬರೂ ಬಿದ್ದ ಸ್ಥಳಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾರಣ ಆಂಬುಲೆನ್ಸ್ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ತಕ್ಷಣ ರೈಲ್ವೆ ಚಾಲಕ ರೈಲನ್ನು ಒಂದು ಕಿ.ಮೀ. ರಿವರ್ಸ್ ಚಲಾಯಿಸಿ ಪ್ರಯಾಣಿಕರು ಬಿದ್ದಿದ್ದ ಸ್ಥಳ ತಲುಪಿದ್ದಾರೆ. ಗಾಯಾಳುಗಳನ್ನು ರೈಲಿನಲ್ಲಿ ಕರೆತಂದು ಮುಂದಿನ ನಿಲ್ದಾಣದಲ್ಲಿ ಇಳಿಸಿ ಬರಾನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಂಬಂಧಿಗಳು ತಿಳಿಸಿದ್ದಾರೆ.