ಹಳಿಗಳ ಮೇಲೆ ಕಬ್ಬಿಣದ ತುಂಡುಗಳನ್ನು ಗಮನಿಸಿದ, ಎಮರ್ಜೆನ್ಸಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಿದ ರೈಲು ಚಾಲಕ

ಪುಣೆ: ರೈಲು ಹಳಿಗಳ ಮೇಲೆ ಇರಿಸಿದ್ದ ದಪ್ಪನಾದ ಕಬ್ಬಿಣದ ತುಂಡುಗಳನ್ನು ಸಕಾಲದಲ್ಲಿ ಗಮನಿಸಿದ ರೈಲು ಚಾಲಕ ಎಮರ್ಜೆನ್ಸಿ ಬ್ರೇಕ್​ ಹಾಕಿ ಭಾರಿ ಅಪಘಾತವನ್ನು ತಪ್ಪಿಸಿದ್ದಲ್ಲದೆ, ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಶನಿವಾರ ಮುಂಜಾನೆ ಸುದ್ದಿಗಾರರ ಜತೆ ಮಾತನಾಡಿದ ಪುಣೆ ವಿಭಾಗೀಯ ರೈಲ್ವೆ ಪ್ರಬಂಧಕ ಮಿಲಿಂದ್​ ದ್ಯೂಸ್ಕರ್​ ತಿಳಿಸಿದರು.

ರುಕಾಡಿ ಮತ್ತು ಹಟ್ಕಲಂಗಾನೆ ರೈಲು ನಿಲ್ದಾಣಗಳ ಬಳಿ ಈ ಘಟನೆ ನಡೆದಿದೆ. ಈ ಮಾರ್ಗದಲ್ಲಿ ಹಳಿಗಳ ಮೇಲೆ ದಪ್ಪನಾದ ಕಬ್ಬಿಣದ ತುಂಡುಗಳನ್ನು ಇರಿಸಿದ್ದ 2ನೇ ಘಟನೆ ಇದಾಗಿದೆ. ಎರಡೂ ಘಟನೆಗಳನ್ನು ಕಬ್ಬಿಣದ ತುಂಡುಗಳನ್ನು ಸಕಾಲದಲ್ಲಿ ಗಮನಿಸಿ, ರೈಲು ಚಾಲಕರು ಎಮರ್ಜೆನ್ಸಿ ಬ್ರೇಕ್​ ಹಾಕಿ, ಅಪಘಾತ ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಥಾಹಾರ್​ ನಿಲ್ದಾಣದ ಬಳಿ 2018ರ ಡಿಸೆಂಬರ್​ನಲ್ಲಿ ಮಕ್ಕಳು ಹಳಿಗಳ ಮೇಲೆ ಸ್ಟೀಲ್​ ತುಂಡುಗಳನ್ನು ಇರಿಸಿದ್ದರು. ಇದರಿಂದಾಗಿ ಇಂಜಿನ್​ನ 6 ಗಾಲಿಗಳು ಹಳಿ ತಪ್ಪಿದ್ದವು. ಇಂತಹ 8-10 ಅಪಘಾತಗಳು ಸಂಭವಿಸಿವೆ. ಎಲ್ಲ ಘಟನೆಗಳಲ್ಲೂ ರೈಲು ಚಾಲಕರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಆದರೆ, ರೈಲು ಚಾಲಕರಿಗೆ ಬೇರೆ ಕೆಲಸಗಳೂ ಇರುತ್ತವೆ. ಹಾಗಾಗಿ ಸುರಕ್ಷತೆ ವಿಷಯವಾಗಿ ಸದಾ ಅವರನ್ನು ನಂಬಿಕೊಂಡಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *