ಹಾರೋಹಳ್ಳಿ: ಲಾಕ್‌ಡೌನ್ ವೇಳೆಯಲ್ಲೂ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕಲ್ಪಿಸಿ ಕೊಡಬೇಕೆಂದು ಕೆರೆ, ಕಲ್ಯಾಣಿ, ಗೋ ಕಟ್ಟೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್ ಹೇಳಿದರು.

ತಾಲೂಕಿನ ಟಿ.ಬೇಕುಪ್ಪೆ ಗ್ರಾಪಂ ವ್ಯಾಪ್ತಿಯ ತಿಗಳರ ಹೊಸಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ 7.10 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿಮ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾಮಗಾರಿ ವೇಳೆ ಕಾರ್ಮಿಕರು ಅಂತರ ಕಾಯ್ದುಕೊಳ್ಳಬೇಕು, ಅದಕ್ಕಾಗಿ 3 ಮೀಟರ್ ಅಂತರದಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಲಾಗಿದೆ ಎಂದರು.
ತಾಲೂಕಿನಲ್ಲಿ ಒಟ್ಟು 65 ಸಾವಿರ ಜಾಬ್ ಕಾರ್ಡ್‌ಗಳಿದ್ದು, 1.40 ಲಕ್ಷ ಕೂಲಿ ಕಾರ್ಮಿಕರಿದ್ದಾರೆ. ಇವೆರಲ್ಲರಿಗೂ ಕೂಲಿ ಕಲ್ಪಿಸಲು ತಾಲೂಕಿನ 43 ಗ್ರಾಪಂಗಳಿಂದ 667 ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಆ ಪೈಕಿ 125 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದವುಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಪಿಡಿಒ ರಂಗೇಗೌಡ ಮಾತನಾಡಿ, ಗ್ರಾಪಂ ಜತೆಗೆ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದಲೂ ಕೆಲಸ ಮಾಡಬಹುದಾಗಿದೆ. ಮಳೆ ನೀರಿನ ಸದ್ಬಳಕೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯಿತಿ ಕಟ್ಟಡ ಅಥವಾ ಶಾಲಾ ಕಟ್ಟಡದಲ್ಲಿ ಮಳೆಕೊಯ್ಲ ಮಾಡಲು ಅವಕಾಶ ಕಲ್ಪಿಸಿದ್ದು, ಮಳೆಗಾಲ ಪ್ರಾರಂಭವಾಗಿರುವುದರಿಂದ ಶೀಘ್ರವಾಗಿ ಇದನ್ನು ಜಾರಿ ಮಾಡಲಾಗುವುದು ಎಂದರು.
ಪಿಆರ್‌ಡಿ ತಾಂತ್ರಿಕ ಸಂಯೋಜಕ ಮಹದೇವಸ್ವಾಮಿ, ತಾಂತ್ರಿಕ ಸಹಾಯಕ ಸಿ.ಎಸ್.ನಿಂಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಮಹದೇವಯ್ಯ, ಕರವಸೂಲಿಗಾರ ರಾಮಚಂದ್ರ, ಸಿಬ್ಬಂದಿಗಳಾದ ಕುಮಾರ, ಸುದರ್ಶನ, ಉಮೇಶ್ ಉಪಸ್ಥಿತರಿದ್ದರು.