More

    ಲಾಕ್‌ಡೌನ್‌ನಿಂದ ರಕ್ತ ಕೊರತೆ

    ಗೋಪಾಲಕೃಷ್ಣ ಪಾದೂರು, ಉಡುಪಿ

    ಲಾಕ್‌ಡೌನ್ ಜಾರಿಯಿಂದ ಅನೇಕ ರಕ್ತದಾನ ಶಿಬಿರಗಳು ರದ್ದಾಗಿದ್ದು, ರಕ್ತ ಕೊರತೆ ಎದುರಾಗಿದೆ.
    ಉಡುಪಿಯಲ್ಲಿ ತೀರಾ ಅಗತ್ಯ ಸಂದರ್ಭದಲ್ಲಿ ದಾನಿಗಳನ್ನು ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್‌ಗೆ ಆಹ್ವಾನಿಸಿ ರಕ್ತ ಪಡೆಯಲಾಗುತ್ತಿದೆ. ಆದರೂ ನೆಗೆಟಿವ್ ಗ್ರೂಪ್‌ನ ರಕ್ತ ಪಡೆಯಲು ಈಗಲೂ ಸಮಸ್ಯೆಯಾಗುತ್ತಿದೆ. ಮಾರ್ಚ್‌ನಲ್ಲಿ 1068 ಯುನಿಟ್ ರಕ್ತ ಸಂಗ್ರಹಿಸಲಾಗಿತ್ತು. ಸದ್ಯ ಬ್ಲಡ್ ಬ್ಯಾಂಕ್‌ನಲ್ಲಿ 178 ಯುನಿಟ್ ರಕ್ತವಷ್ಟೇ ಲಭ್ಯವಿದೆ.

    ಲಸಿಕೆಯೂ ರಕ್ತದ ಕೊರತೆಗೆ ಕಾರಣವಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಿದೆ. ಲಸಿಕೆ ಹಾಸಿಕೊಂಡವರು ಮುಂದಿನ ಎರಡು ತಿಂಗಳ ಮಟ್ಟಿಗೆ ರಕ್ತದಾನ ಮಾಡುವಂತಿಲ್ಲ. ಇದೇ ರೀತಿ ಮೇ 1ರಿಂದ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪ್ರಾರಂಭವಾದರೆ ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು ಹಾಗೂ ಯುವಕರಿಂದ ರಕ್ತ ಪಡೆಯಲು ಕನಿಷ್ಠ 2 ತಿಂಗಳು ಕಾಯಬೇಕಾಗುತ್ತದೆ. ಇದು ರಕ್ತ ಸಂಗ್ರಹ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

    ಪ್ಲೇಟ್ಲೆಟ್‌ಗೂ ಬೇಡಿಕೆ
    ರಕ್ತದ ಜೊತೆಗೆ ಬಿಳಿ ರಕ್ತಕಣ, ಕೆಂಪು ರಕ್ತಕಣ ಹಾಗೂ ಪ್ಲೇಟ್ಲೆಟ್‌ಗೂ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಮಾರ್ಚ್ ತಿಂಗಳು 630 ಯುನಿಟ್ ಕೆಂಪು ರಕ್ತ ಕಣ, 134 ಯುನಿಟ್ ಬಿಳಿ ರಕ್ತಕಣ, 106 ಯುನಿಟ್ ಪ್ಲೇಟ್ಲೆಟ್ ವಿತರಿಸಲಾಗಿದೆ. ಪ್ಲೇಟ್ಲೆಟ್5 ದಿನವಷ್ಟೇ ಬಾಳಿಕೆ ಬರುವುದರಿಂದ ಹೊಸ ರಕ್ತ ಸಂಗ್ರಹ ಅನಿವಾರ್ಯ. ಉಳಿದಂತೆ ರಕ್ತವನ್ನು 35 ದಿನ ಹಾಗೂ ಪ್ಲಾಸ್ಮಾ 365 ದಿನದವರೆಗೆ ಸಂಗ್ರಹಿಸಿಡಬಹುದು.

    ಬಿಜೆಪಿಯಿಂದ ರಕ್ತದಾನ ಶಿಬಿರ
    ರೋಗಿಗಳಿಗೆ ರಕ್ತದ ಕೊರತೆ ನೀಗಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಎಲ್ಲ ಮಂಡಲಗಳಲ್ಲಿ ರಕ್ತದಾನ ನಡೆಸಲು ಬಿಜೆಪಿ ಯುವಮೋರ್ಚಾ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. 27ರಂದು ಕಾರ್ಕಳ ಶಾಸಕರ ಕಚೇರಿ, ಕುಂದಾಪುರ ಆರ್.ಎನ್.ಶೆಟ್ಟಿ ಸಭಾಭವನ, 28ರಂದು ಮಣಿಪಾಲ ಕೆಎಂಸಿ ಆಸ್ಪತ್ರೆ, ಅಜ್ಜರಕಾಡು ಜಿಲ್ಲಾಸ್ಪತ್ರೆ, ಏ.29ರಂದು ಬೈಂದೂರು ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

    ದ.ಕ.ದಲ್ಲೂ ಕೊರತೆ
    ದ.ಕ.ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿನ ರಕ್ತದ ಕೊರತೆ ಇದೆ. ಸದ್ಯ 223 ಯುನಿಟ್ ಸಂಗ್ರಹವಿದೆ ಎಂದು ಮಂಗಳೂರು ವೆನ್ಲಾಕ್ ಆಸ್ಪತ್ರೆ ಬ್ಲಡ್‌ಬ್ಯಾಂಕ್ ವೈದ್ಯಾಧಿಕಾರಿ ಡಾ.ಶರತ್ ತಿಳಿಸಿದ್ದಾರೆ. ದಾನಿಗಳು ಹಾಗೂ ಸಂಘ ಸಂಸ್ಥೆಗಳ ಮೂಲಕ ರಕ್ತ ಪಡೆಯಲಾಗುತ್ತಿದೆ. ಪ್ಲೇಟ್ಲೆಟ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅವರು ತಿಳಿಸಿದ್ದಾರೆ.

    ಜಿಲ್ಲಾ ಬ್ಲಡ್‌ಬ್ಯಾಂಕ್ ವತಿಯಿಂದ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ರಕ್ತದಾನ ಶಿಬಿರ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆಯಷ್ಟು ರಕ್ತ ಪೂರೈಕೆ ಆಗುತ್ತಿಲ್ಲ. ನಮ್ಮಲ್ಲಿ ರಕ್ತದಾನಿಗಳ ಪಟ್ಟಿ ಇದೆ. ತೀರಾ ಅಗತ್ಯ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಕರೆದು ರಕ್ತ ಪಡೆಯುತ್ತೇವೆ.
    ಡಾ.ವೀಣಾ, ವೈದ್ಯಾಧಿಕಾರಿ, ಬ್ಲಡ್‌ಬ್ಯಾಂಕ್, ಜಿಲ್ಲಾಸ್ಪತ್ರೆ ಉಡುಪಿ

    ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನಿಂದ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರಕ್ತ ನೀಡಲಾಗುತ್ತದೆ. ಪ್ರಸ್ತುತ 82 ಯುನಿಟ್ ರಕ್ತ ಸಂಗ್ರಹವಿದೆ. ದಿನಕ್ಕೆ ಸರಾಸರಿ 10 ಯುನಿಟ್ ರಕ್ತಕ್ಕೆ ಬೇಡಿಕೆ ಇದೆ. ಸಣ್ಣ ಸಣ್ಣ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸಲಾಗುತ್ತದೆ.
    ಜಯಕರ ಶೆಟ್ಟಿ, ಮುಖ್ಯಸ್ಥ, ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts