ರಟ್ಟಿಹಳ್ಳಿ: ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ವತಿಯಿಂದ ಗುರುವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 11 ಗಂಟೆಗೆ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರೈತರ ಬೃಹತ್ ಮೆರವಣಿಗೆ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು. ಮಧ್ಯಾಹ್ನ 1 ಗಂಟೆಗೆ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರಿಗೆ ಬೇಸಿಗೆ ಬೆಳೆಗೆ ನೀರುಣಿಸಲು ಹಗಲಿನಲ್ಲಿ 12 ತಾಸು ವಿದ್ಯುತ್ ಪೂರೈಸಬೇಕು. 2017-18ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಹಿರೇಕೆರೂರು ತಾಲೂಕಿನ 571 ಪಂಪ್ಸೆಟ್ಗಳು ಹಾಗೂ ರಟ್ಟಿಹಳ್ಳಿ ತಾಲೂಕಿನ 698 ಪಂಪ್ಸೆಟ್ಗಳಿಗೆ ತಕ್ಷಣ ವಿದ್ಯುತ್ ಪರಿಕರಗಳನ್ನು ಒದಗಿಸಿ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.
ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ಎಲ್ಲ 33 ಕೆವಿ ಗ್ರಿಡ್ಗಳನ್ನು 110 ಕೆವಿಗೆ ಉನ್ನತೀಕರಿಸಬೇಕು. ರೈತರು ಆರ್ಥಿಕ ಸಂಕಷ್ಟದಲ್ಲಿದ್ದು ಪಂಪ್ಸೆಟ್ಗಳಿಗೆ ಈ ಮೊದಲು ಡಿಪಾಸಿಟ್ ಪ್ರತಿ ಎಚ್ಪಿಗೆ 950 ಇರುವುದನ್ನು ಪ್ರಸ್ತುತ 1950 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನು 950 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ರಾಣೆಬೆನ್ನೂರಿನ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಸಿ. ಬೆಳಕೇರಿ ಮಾತನಾಡಿ, ಜ. 20ರಿಂದ ರೈತರ ಪಂಪ್ಸೆಟ್ಗಳಿಗೆ ಹಗಲಿನಲ್ಲಿ 5 ತಾಸು ಮತ್ತು ರಾತ್ರಿ 3 ತಾಸು ವಿದ್ಯುತ್ ಪೂರೈಕೆ ಮಾಡಲಾಗುವುದು. ಡೆಪಾಸಿಟ್ ಹಣದ ಬಗ್ಗೆ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಇಂಜಿನಿಯರ್ ನಂದಾ ಮರಡಿ ಮಾತನಾಡಿ, ಈಗಾಗಲೇ ಎರಡು ತಾಲೂಕಿನಲ್ಲಿರುವ 33 ಕೆವಿಗಳನ್ನು ಉನ್ನತೀಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಸಂಘಟನೆಯ ಬಸನಗೌಡ ಗಂಗಪ್ಪಳವರ, ಶಂಕ್ರುಗೌಡ ಶಿರಗಂಬಿ, ಗಂಗನಗೌಡ ಮುದಿಗೌಡ್ರ, ಶಂಭು ಮುತ್ತಗಿ, ಹನುಮಂತಪ್ಪ ಜೋಗೇರ, ಶಾಂತನಗೌಡ ಪಾಟೀಲ, ಮಂಜುನಾಥ ಹಾರೀಕಟ್ಟಿ, ಕರಬಸಪ್ಪ ಬಸಾಪುರ, ಮಲ್ಲನಗೌಡ ಮಾಳಗಿ, ರಂಗಪ್ಪ ಮಲೇಬೆನ್ನೂರ, ಫಯಾಜಸಾಬ್ ದೊಡ್ಡಮನಿ, ಪ್ರಶಾಂತ ದ್ಯಾವಕ್ಕಳವರ, ರೈತ ಸಂಘಟನೆಯ ನೂರಾರು ಸದಸ್ಯರು ಇದ್ದರು.