More

    ಕುಂಬ್ರ ಕಾಲೇಜು ಕಟ್ಟಡಕ್ಕೆ ಬೀಗ

    ಶ್ರವಣ್‌ಕುಮಾರ್ ನಾಳ ಪುತ್ತೂರು
    3ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಕೆಆರ್‌ಡಿಲ್ ಸಂಸ್ಥೆ ಗುತ್ತಿಗೆದಾರರಿಗೆ ಕಾಲೇಜು ಕಟ್ಟಡ ನಿರ್ಮಾಣದ ಹಣ ಪಾವತಿಸದ ಹಿನ್ನೆಲೆಯಲ್ಲಿ ಕುಂಬ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಗುತ್ತಿಗೆ ಸಂಸ್ಥೆ ಬೀಗ ಜಡಿದಿದೆ.
    ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕಾಲೇಜುಗಳ ಕೊಠಡಿಯ ಕೊರತೆ ನೀಗಿಸಲು 2016ನೇ ಸಾಲಿನಲ್ಲಿ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಅನೇಕ ಕಾಲೇಜುಗಳಿಗೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಪೈಕಿ ಕುಂಬ್ರ ಸರ್ಕಾರಿ ಪ.ಪೂ ಕಾಲೇಜಿಗೆ 48.98 ಲಕ್ಷ ರೂ. ಅನುದಾನ ಬಂದಿತ್ತು. ಯೋಜನೆಯಂತೆ ಎರಡು ಕೊಠಡಿಗಳ ನಿರ್ಮಾಣವೂ ಆಗಿದೆ. ಕೊಠಡಿ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ರಂಗಮಂದಿರದಲ್ಲಿ ಪಾಠ ಕೇಳುವ ಸ್ಥಿತಿಯಿತ್ತು. ಈಗ ಗುತ್ತಿಗೆದಾರರಿಗೆ ಇಲಾಖೆಯಿಂದ ಹಣ ಪಾವತಿ ಮಾಡದಿರುವುದರಿಂದ ನೂತನ ಕಟ್ಟಡದ ಕೊಠಡಿಗೆ ಗುತ್ತಿಗೆದಾರ ಬೀಗ ಹಾಕಿದ್ದು ಇದಕ್ಕೆ ಕಾರಣ.

    ಹಣ ಪಾವತಿ ಮಾಡದ ಕೆಆರ್‌ಡಿಎಲ್: ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಕುಂಬ್ರ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಕಂಡು ಅಂದಿನ ಕಾಲೇಜು ಅಬಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ 48.98 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಜತೆಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಕೆಆರ್‌ಡಿಎಲ್ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿತ್ತು. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಪಿಎಂಕೆ ಸಂಸ್ಥೆಗೆ ಗುತ್ತಿಗೆಯೂ ನೀಡಲಾಗಿತ್ತು. ಕಟ್ಟಡ ಕಾಮಗಾರಿ ಪೂರ್ಣವಾದ ಬಳಿಕ ಹಣ ಪಾವತಿ ಮಾಡುವುದಾಗಿ ಕೆಆರ್‌ಡಿಎಲ್ ಸಂಸ್ಥೆ ಗುತ್ತಿಗೆದಾರರಿಗೆ ತಿಳಿಸಿತ್ತು. ಶಾಸಕರ ಹಾಗೂ ಕೆಆರ್‌ಡಿಎಲ್ ಸಂಸ್ಥೆಯ ಒತ್ತಡದ ಕಾರಣ ಒಂದೇ ವರ್ಷದಲ್ಲಿ ಕೊಠಡಿಯ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಕೆಆರ್‌ಡಿಎಲ್ ಸಂಸ್ಥೆ ಹಣ ಪಾವತಿ ಮಾಡದೆ ಕಳೆದ ಮೂರು ವರ್ಷಗಳಿಂದ ಸತಾಯಿಸುತ್ತಿದ್ದು, ಹಣ ಪಾವತಿಯಾಗದೆ ಕಟ್ಟಡದ ಬೀಗ ತೆರವು ಮಾಡುವುದಿಲ್ಲ ಎಂದು ಗುತ್ತಿಗೆದಾರರು ಸಂಸ್ಥೆಗೆ ತಿಳಿಸಿದ್ದಾರೆ.
     
    ರಂಗಮಂದಿರದಲ್ಲಿ ಪಾಠ: ಕುಂಬ್ರ ಸರ್ಕಾರಿ ಕಾಲೇಜಿನಲ್ಲಿ ನೂತನ ಕಟ್ಟಡ ಸಿದ್ಧವಾದರೂ ಇದರ ಬಾಗಿಲು ತೆರೆಯದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಹಳೇ ರಂಗಮಂದಿರದಲ್ಲೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಬಿಸಿಲು, ಮಳೆಗಾಲದಲ್ಲಿ ಮಳೆಯ ಅವಾಂತರ ಇದೆ. ಗುತ್ತಿಗೆದಾರರ ಹಣ ಪಾವತಿ ಮಾಡುವಂತೆ ಕಾಲೇಜಿನ ಪ್ರಾಚಾರ್ಯ ದುಗ್ಗಪ್ಪ ಎನ್. ಹಲವು ಬಾರಿ ಕೆಆರ್‌ಡಿಎಲ್ ಸಂಸ್ಥೆಗೆ ಪತ್ರ ಬರೆದ್ದರೂ, ಇಲಾಖೆಯಿಂದ ಸಮರ್ಪಕ ಉತ್ತರ ದೊರೆತಿಲ್ಲ. ಈಗ ಸರ್ಕಾರ ಬದಲಾಗಿದೆ, ಶಾಸಕರೂ ಬದಲಾಗಿದ್ದಾರೆ. ಹಾಲಿ ಶಾಸಕ ಸಂಜೀವ ಮಠಂದೂರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ. ನೂತನ ಶಾಸಕರ ಮೂಲಕವೂ ಇಲಾಖೆಗೆ ಒತ್ತಡವನ್ನು ಹಾಕಿದ್ದರೂ ಇದುವರೆಗೂ ಹಣ ಪಾವತಿಯಾಗಿಲ್ಲ.

    ಗುತ್ತಿಗೆದಾರರು ಹಾಗೂ ನಮ್ಮ ಸಂಸ್ಥೆ ನಡುವೆ ತಾಂತ್ರಿಕ ಸಮಸ್ಯೆಯಾಗಿದ್ದು ನಿಜ. ಈ ಬಗ್ಗೆ ಗುತ್ತಿಗೆದಾರರನ್ನು ಕರೆಸಿ ಕಟ್ಟಡದ ಅಳತೆ ಮಾಡಿ ಬಾಕಿ ಇರುವ ಹಣವನ್ನು ಪಾವತಿ ಮಾಡುತ್ತೇವೆ. ಕಟ್ಟಡಕ್ಕೆ ಬೀಗ ಹಾಕಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಶೀಘ್ರದಲ್ಲೇ ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡುತ್ತೇವೆ.
    ರಮೇಶ್, ಕೆಆರ್‌ಡಿಎಲ್ ಅಧಿಕಾರಿ

    ನಾನು ಸ್ವಂತ ಹಣವನ್ನು ಕಟ್ಡಡ ನಿರ್ಮಾಣಕ್ಕೆ ಬಳಸಿದ್ದೇನೆ. ಕಾಮಗಾರಿ ಮುಗಿದ ತಕ್ಷಣ ಹಣ ಪಾವತಿ ಮಾಡುವುದಾಗಿ ಕೆಆರ್‌ಡಿಎಲ್ ಭರವಸೆ ನೀಡಿತ್ತು. ಮುಂಗಡವಾಗಿ 8ಲಕ್ಷ ರೂ. ಮಾತ್ರ ನೀಡಿದೆ ಉಳಿದ ಹಣವನ್ನು ನೀಡದೆ ಮೂರು ವರ್ಷದಿಂದ ಸತಾಯಿಸುತ್ತಿದೆ. ಹಣ ಪಾವತಿಯಾದ ತಕ್ಷಣ ಬೀಗ ತೆರವು ಮಾಡುತ್ತೇನೆ.
    ಆಶಿಕುದ್ದೀನ್ ಅಕ್ತರ್, ಪಿಎಂಕೆ ಕನ್‌ಸ್ಟ್ರಕ್ಷನ್ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts