ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಬಾದಾಮಿ: ಠೇವಣಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಓರ್ವ ಸಿಬ್ಬಂದಿ ಹಾಗೂ ಕೆಲ ಠೇವಣಿದಾರರು ಮಂಗಳವಾರ ನಗರದ ಕನಕದಾಸ ಪತ್ತಿನ ಸಹಕಾರಿ ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷರಿಗೆ ಆರು ತಿಂಗಳ ಹಿಂದೆ ನೀಡಿದ್ದ ಡೊನೇಷನ್ ಮರಳಿ ನೀಡಿ ಎಂದು ಮನವಿ ಸಲ್ಲಿಸಿದ್ದೆ. ಇದುವರೆಗೂ ಹಣ ನೀಡಿರಲಿಲ್ಲ. ಅಧ್ಯಕ್ಷರಿಗೆ ಸೋಮವಾರ ಮೊಬೈಲ್ ಮೂಲಕ ಮಾತನಾಡಿ ಹಣ ನೀಡಲು ಮತ್ತೊಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಹೊರಹಾಕಿ ಬೀಗ ಜಡಿದಿದ್ದಾಗಿ ಸಿಬ್ಬಂದಿ ವಿಜಯ ಹಿರೇಕುಂಬಿ ತಿಳಿಸಿದರು.

ಅವರೊಂದಿಗೆ ಬ್ಯಾಂಕ್ ಎದುರು ಜಮಾಯಿಸಿದ ಠೇವಣಿದಾರರು ನಾವೆಲ್ಲ ಲಕ್ಷಗಟ್ಟಲೆ ಠೇವಣಿ ಇಟ್ಟಿದ್ದು, ಮೂರು ತಿಂಗಳ ಹಿಂದೆಯೇ ಠೇವಣಿ ಅವಧಿ ಮುಗಿದಿದೆ. ಮೂರು ತಿಂಗಳ ಕಾಲ ವಿಸ್ತರಿಸಿ ಠೇವಣಿ ಹಣ ನೀಡುವುದಾಗಿ ಮಾರ್ಚ್​ನಲ್ಲಿ ತಿಳಿಸಿದ್ದರೂ ನೀಡಿಲ್ಲ. ನಿರ್ದೇಶಕ ಮಂಡಳಿ ಆಪ್ತ ರಿಗೆ ಹಾಗೂ ಕೆಲ ಮುಖಂಡರಿಗೆ ಮಾತ್ರ ಗುಪ್ತವಾಗಿ ಹಣ ಮರುಪಾವತಿಸಿದ್ದಾರೆ ಆರೋಪಿಸಿದರು.

ನಮ್ಮ ದುಡಿಮೆಯಲ್ಲಿ ಪ್ರತಿದಿನ ಪಿಗ್ಮಿ ಹಣ ಕಟ್ಟಿದ್ದೇವೆ. ನಮ್ಮ ಹಣ ಪಡೆಯಬೇಕಾದರೂ ತಿಂಗಳುಗಟ್ಟಲೆ ಅಲೆದಾಡಬೇಕಿದೆ ಎಂದು ಪಿಗ್ಮಿ ಖಾತೆದಾರರು ದೂರಿದರು.

ಆಡಳಿತ ಮಂಡಳಿ ನಿರ್ದೇಶಕರು ಸ್ಥಳಕ್ಕಾ ಗಮಿಸಿ ವಿಜಯನನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಬಳಿಕ ನಿರ್ದೇಶಕರು ಹೊರಟು ಹೋದರು.

ವಿಜಯ ಎಂಬುವರು ಬ್ಯಾಂಕ್ ಕರಣಿಕ ನಾಗಿ ಸೇವೆ ಆರಂಭಿಸಿದ್ದ. ನಂತರ ಕುಳಗೇರಿ ಕ್ರಾಸ್ ಶಾಖೆಗೆ ವ್ಯವಸ್ಥಾಪಕ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಅನಧಿಕೃತ ಗೈರು ಹಾಜರಾದ ಕಾರಣ ನೋಟಿಸ್ ನೀಡಲಾಗಿತ್ತು. ಇದರಿಂದಾಗಿ ಜನರನ್ನು ಪ್ರತಿಭಟನೆಗಿಳಿಸಿದ್ದಾರೆ. ಬ್ಯಾಂಕ್​ನಲ್ಲಿನ ಠೇವಣಿ ಹಣ ಏನೂ ಆಗಿಲ್ಲ. ಬೇಕಂತಲೆ ಸದಸ್ಯರ ಹಾಗೂ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಸಿಬ್ಬಂದಿ ಬಗ್ಗೆ ಆಡಳಿತ ಮಂಡಳಿ ವತಿಯಿಂದ ಸೂಕ್ತ ನಿರ್ಧಾರ ತೆಗೆದುಕೊಂಡು ಬದಲಾವಣೆ ಮಾಡಲಾಗಿದೆ. ಐದಾರು ವರ್ಷಗಳಿಂದ ಸಾಲ ಮಂಜೂರು ಮಾಡಿದ್ದು, ಅವುಗಳಲ್ಲಿ ಕೆಲ ಆಸ್ತಿಗಳು ಮುಂದಿನ ತಿಂಗಳು ಹರಾಜು ಪ್ರಕ್ರಿಯೆಗೆ ಬರಲಿವೆ. ಬಳಿಕ ಠೇವಣಿದಾರರಿಗೆ ಹಣ ನೀಡಲಾಗುವುದು.

| ಡಾ. ದೇವರಾಜ ಪಾಟೀಲ ಕನಕದಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ

ಠೇವಣಿದಾರರಿಗೆ ಹಣ ಮರುಪಾವತಿಸುವಂತೆ ಸ್ಥಳೀಯ ನಾಯಕರು ಸೇರಿ ನಾವು ಹೇಳಿದ್ದರೂ ಪ್ರಯೋಜನವಾಗಿಲ್ಲ. ಅಧ್ಯಕ್ಷರು, ಠೇವಣಿದಾರರ ಹಣ ಮರುಪಾವತಿಸಿ ವಿಶ್ವಾಸ ಕಾಪಾಡಿಕೊಳ್ಳಬೇಕು.

| ಹನುಮಂತ ಹೆಬ್ಬಳ್ಳಿ ಠೇವಣಿದಾರ