ಪಂಚಗಂಗಾವಳಿ ನದಿಗೆ ಸೇತುವೆ

ಬಿ. ರಾಘವೇಂದ್ರ ಪೈ, ಗಂಗೊಳ್ಳಿ

ಕುಂದಾಪುರ-ಗಂಗೊಳ್ಳಿ ನಡುವೆ ಸೇತುವೆ ನಿರ್ಮಾಣ ಮಾಡಿ ಗಂಗೊಳ್ಳಿ-ಕುಂದಾಪುರವನ್ನು ಅವಳಿ ನಗರವನ್ನಾಗಿ ಬೆಳೆಸಬೇಕೆನ್ನುವ ಬೇಡಿಕೆಗೆ ಮತ್ತೆ ಜೀವ ಬಂದಿದ್ದು, ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲು ಸಾರ್ವಜನಿಕರು ಮುಂದಾಗಿದ್ದಾರೆ.

ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಬೇಡಿಕೆ 50 ವರ್ಷ ಹಿಂದಿನದ್ದು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಆಸಕ್ತರು ಹಾಗೂ ಸಂಘಟನೆಗಳು ಚುರುಕಾಗಿವೆ. ಚುನಾವಣೆ ಸಮಯವನ್ನೇ ಬಳಸಿ ಈ ಕಾರ್ಯ ಸಾಧಿಸಲು ಚಟುವಟಿಕೆಗಳು ತೀವ್ರಗೊಂಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಆರಂಭಗೊಂಡಿದೆ.

ಅಭಿವೃದ್ಧಿಗೆ ಪೂರಕ: ಪರ್ಯಾಯ ದ್ವೀಪದಂತಿರುವ ಗಂಗೊಳ್ಳಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಬೆಳವಣಿಗೆಗೆ ಅವಕಾಶವಿಲ್ಲದೆ ಸೊರಗುತ್ತಿದೆ. ಗಂಗೊಳ್ಳಿ-ಕುಂದಾಪುರ ನಡುವೆ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಸುಮಾರು 1.5 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಅನುಷ್ಠಾನಗೊಂಡರೆ ಈ ಭಾಗದ ಚಿತ್ರಣವೇ ಬದಲಾಗುವ ಸಾಧ್ಯತೆಗಳಿವೆ. ಸಂಪರ್ಕ ಸೇತುವೆ ನಿರ್ಮಾಣಗೊಂಡರೆ ಕುಂದಾಪುರಕ್ಕೂ ವಿಸ್ತರಣೆಗೆ ಅನುಕೂಲವಾಗಲಿದೆ. ಜತೆಗೆ ಗಂಗೊಳ್ಳಿ ಹಾಗೂ ಹತ್ತಿರದ ಗ್ರಾಮಗಳ ಅಭಿವೃದ್ಧಿಗೂ ಅವಕಾಶ ದೊರೆಯುತ್ತದೆ. ಜನರು 17 ಕಿ.ಮೀ. ಸಂಚರಿಸಿ ಕುಂದಾಪುರ ತಲುಪಬೇಕಾದರೆ ಸುಮಾರು 30-45 ನಿಮಿಷ ಸಮಯಾವಕಾಶ ಬೇಕು. ಆದರೆ ಸೇತುವೆ ನಿರ್ಮಿಸಿದರೆ ಈ ಅಂತರ ಕಡಿಮೆಯಾಗಲಿದೆ.

ಮತ್ಸ್ಯೋದ್ಯಮ, ವ್ಯಾಪಾರ, ಉದ್ಯಮ, ಶಿಕ್ಷಣ, ಕೈಗಾರಿಕೋದ್ಯಮ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುವ ಅವಕಾಶ ದೊರೆಯಲಿದೆ. ಗಂಗೊಳ್ಳಿ ತಾಗಿಕೊಂಡಿರುವ ಗುಜ್ಜಾಡಿ, ನಾಯಕವಾಡಿ, ತ್ರಾಸಿ, ಹೊಸಾಡು, ನಾಡಮ ಪಡುಕೋಣೆ, ಮರವಂತೆ ಮೊದಲಾದ ಪ್ರದೇಶಗಳ ಜನರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.

35 ಸಾವಿರ ಜನಸಂಖ್ಯೆ ಇರುವ ಕುಂದಾಪುರ ಮತ್ತು 20 ಸಾವಿರ ಜನಸಂಖ್ಯೆ ಇರುವ ಗಂಗೊಳ್ಳಿ ಗ್ರಾಮವು ಐದು ನದಿಗಳ ಸಂಗಮದಿಂದ ಬೇರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲೇ ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಿಸಲು ಅಂದಿನ ಸಂಸದ ಶ್ರೀನಿವಾಸ ಮಲ್ಯರು ಆಸಕ್ತಿ ತೋರಿದ್ದರು. ಆದರೆ ಹಡಗುಗಳು ಗಂಗೊಳ್ಳಿಗೆ ಬರಲು ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಸ್ಥಳೀಯ ಉದ್ಯಮಿಗಳು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಪಥ ಬದಲಿಸಿ ಗಂಗೊಳ್ಳಿ-ಕುಂದಾಪುರ ಒಂದು ಸೇತುವೆ ಬದಲಿಗೆ ಐದು ಸೇತುವೆಗಳನ್ನು ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ.

ಗಂಗೊಳ್ಳಿಯಿಂದ ಕುಂದಾಪುರಕ್ಕೆ ದೋಣಿ ಮೂಲಕ ಸಂಚರಿಸಿದರೆ ಕೇವಲ ಒಂದುವರೆ ಕಿಲೋ ಮೀಟರ್ ದೂರವಿದ್ದು, ಪ್ರಸ್ತುತ ಇಲ್ಲಿನ ಜನರು ಕುಂದಾಪುರಕ್ಕೆ ತೆರಳಬೇಕಾದರೆ ಐದು ಸೇತುವೆಗಳನ್ನು ದಾಟಿ ಸುಮಾರು 17 ಕಿ.ಮೀ. ದೂರ ಕ್ರಮಿಸಬೇಕಿದೆ. ಸೇತುವೆ ನಿರ್ಮಿಸಬೇಕೆಂದು ಕುಂದಾಪುರ ಪುರಸಭೆ ಮತ್ತು ಗಂಗೊಳ್ಳಿ ಗ್ರಾಪಂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿವೆ.

ಗಂಗೊಳ್ಳಿ-ಕುಂದಾಪುರ ನಡುವೆ ಸಂಪರ್ಕ ಸೇತುವೆ ನಿರ್ಮಾಣಗೊಂಡರೆ ಕುಂದಾಪುರಕ್ಕೂ ವಿಸ್ತರಣೆಗೆ ಅನುಕೂಲವಾಗಿದೆ ಮತ್ತು ಗಂಗೊಳ್ಳಿ ಹಾಗೂ ಹತ್ತಿರದ ಗ್ರಾಮಗಳ ಅಭಿವೃದ್ಧಿಗೂ ಅವಕಾಶ ದೊರೆಯುತ್ತದೆ. ಸೇತುವೆ ನಿರ್ಮಾಣ ಮಾಡುವುದರಿಂದ ಸಮಯ, ಇಂಧನ ಉಳಿತಾಯ ಜತೆಗೆ ಸಹಸ್ರಾರು ಜನರಿಗೆ ಪ್ರಯೋಜನವಾಗಲಿದೆ.
|ಬಿ.ಸದಾನಂದ ಶೆಣೈ, ಮಾಜಿ ಮಂಡಲ ಪ್ರಧಾನ, ಗಂಗೊಳ್ಳಿ

ಕುಂದಾಪುರ ನಡುವೆ ಸೇತುವೆ ನಿರ್ಮಾಣ ಮಾಡುವುದರಿಂದ ಆಗುವ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟು ಇಲಾಖಾಧಿಕಾರಿಗಳು ಸಮಗ್ರ ಯೋಜನೆ ರೂಪಿಸಬೇಕು. ಗ್ರಾಮದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸೇತುವೆ ನಿರ್ಮಾಣ ಅವಶ್ಯಕ.
|ಜಿ.ಬಿ.ಕಲೈಕಾರ್, ವ್ಯಂಗ್ಯಚಿತ್ರಕಾರರು, ಗಂಗೊಳ್ಳಿ