ಮಂಗಳೂರು ವಿವಿ ಕುಲಪತಿ ಗಾದಿ ಮೇಲೆ ಸ್ಥಳೀಯ ಕಣ್ಣು

ವೇಣುವಿನೋದ್ ಕೆ.ಎಸ್. ಮಂಗಳೂರು

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಕುಲಪತಿ ಗಾದಿಯೇರಲು ಸ್ಥಳೀಯ ಆಕಾಂಕ್ಷಿಗಳು ಪ್ರಯತ್ನ ಮಾಡುತ್ತಿದ್ದಾರೆ!
ಹಿಂದೆ ಸತತವಾಗಿ ಮೈಸೂರು ಮೂಲದವರಿಗೆ ಅವಕಾಶ ಸಿಗುತ್ತಿತ್ತು. ಹೀಗಾಗಿ ಈ ಬಾರಿಯಾದರೂ ಪ್ರಸ್ತುತ ಹುದ್ದೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದಿನ ಕುಲಪತಿ ಪ್ರೊ.ಕೆ.ಬೈರಪ್ಪ ಜೂನ್ 6ರಂದು ನಿವೃತ್ತರಾಗಿ, ಸದ್ಯ ಡಾ.ಕಿಶೋರ್ ಕುಮಾರ್ ಪ್ರಭಾರ ಕುಲಪತಿಯಾಗಿದ್ದಾರೆ. ಇನ್ನೂ ಹೊಸ ಕುಲಪತಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಅಧಿಸೂಚನೆಯೂ ಬಂದಿಲ್ಲ. ಅಷ್ಟರಲ್ಲೇ ಈ ಹುದ್ದೆಗೆ ಮೈಸೂರು ವಿವಿಯಲ್ಲೊಬ್ಬರು ಆಕಾಂಕ್ಷಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸ್ಥಳೀಯ ಪ್ರೊಫೆಸರ್‌ಗಳ ವಿರೋಧವೂ ವ್ಯಕ್ತವಾಗಿದೆ.
ಬೇರೆ ಭಾಗದಿಂದ ಬಂದವರು ವಿವಿ ಕುಲಪತಿಯಾಗಿದ್ದು, ವಿಶ್ವವಿದ್ಯಾಲಯದ ಬೆಳವಣಿಗೆಗೆ ಹೆಚ್ಚೇನೂ ಶ್ರಮಿಸಿಲ್ಲ. ಕೆಲವರಂತೂ ವಿಶ್ವವಿದ್ಯಾಲಯದ ಹೆಸರು ಕೆಡಿಸಿ ಹೋಗಿದ್ದಾರೆ, ಸ್ಥಳೀಯರಿಗೆ ಮಾತ್ರ ಇಲ್ಲಿನ ಸಮಸ್ಯೆಗಳ ಅರಿವಿರುತ್ತದೆ, ಅವರಿಗೆ ವಿವಿ ಸುಧಾರಣೆ ಉತ್ಸಾಹ ಇರುತ್ತದೆ ಎಂದು ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್ ಹೇಳುತ್ತಾರೆ.
20 ವರ್ಷ ಬೋಧನೆ ಅನುಭವ, ಪ್ರೊಫೆಸರ್ ಆಗಿ 10 ವರ್ಷ ಅನುಭವ ಹೊಂದಿರಬೇಕು ಎಂಬುದು ಕುಲಪತಿ ಆಗಲು ಇರುವ ಕನಿಷ್ಠ ಅರ್ಹತೆ. ಇದನ್ನು ಪೂರೈಸುವ ಅನೇಕರು ಮಂಗಳೂರು ವಿವಿಯಲ್ಲಿದ್ದಾರೆ. ಅವರಲ್ಲಿ ಕೆಲವು ಮಂದಿ ಕುಲಪತಿ ಸ್ಥಾನದ ಆಕಾಂಕ್ಷಿಗಳು ಆಗಿದ್ದಾರೆ. ಮುಖ್ಯವಾಗಿ ಪ್ರೊ.ಬಿ.ಎಸ್.ಯಡಪಡಿತ್ತಾಯ, ಪ್ರೊ.ಪಿ.ಎಲ್.ಧರ್ಮ, ಅರ್ಥಶಾಸ್ತ್ರ ವಿಭಾಗದ ಪ್ರೊ.ವಿಶ್ವನಾಥ್ ಅಲ್ಲದೆ ಈಗಿನ ರಿಜಿಸ್ಟ್ರಾರ್ ನಾಗೇಂದ್ರ ಪ್ರಕಾಶ್, ರಾಸಾಯನಶಾಸ್ತ್ರ ವಿಭಾಗದ ಪ್ರೊ.ನಾರಾಯಣ್ ಮುಂತಾದವರಿರ ಹೆಸರು ಕೇಳಿಬರುತ್ತಿದೆ.

ಶೋಧನಾ ಸಮಿತಿ ಆಗಿಲ್ಲ: ಶೋಧನಾ ಸಮಿತಿ ರಚನೆ, ಕುಲಪತಿ ಆಯ್ಕೆಯ ಪ್ರಮುಖ ಭಾಗ. ಕುಲಪತಿ ಹೆಸರು ಪರಿಶೀಲಿಸಿ, ಸೂಕ್ತ ಅಭ್ಯರ್ಥಿಗಳ ಅಂತಿಮ ಪಟ್ಟಿ ಶಿಫಾರಸು ಮಾಡುವುದು ಶೋಧನಾ ಸಮಿತಿಯ ಕೆಲಸ. ಇದಕ್ಕೆ ಸದಸ್ಯರ ಆಯ್ಕೆ ಮಾಡಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾಲಯ, ಯುಜಿಸಿ, ರಾಜ್ಯಪಾಲರು ಹಾಗೂ ಸರ್ಕಾರ ಈ ನಾಲ್ವರ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಮಂಗಳೂರು ವಿವಿ ನಾಮನಿರ್ದೇಶಿತರಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾಜಿ ಕುಲಪತಿ ಪ್ರೊ.ರಾಮೇಗೌಡ ಆಯ್ಕೆಯಾಗಿದ್ದಾರೆ. ಯುಜಿಸಿ, ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಾಮನಿರ್ದೇಶಿತರ ಆಯ್ಕೆ ಇನ್ನೂ ನಡೆದಿಲ್ಲ.

ಆಯ್ಕೆ ಅಂತಿಮಕ್ಕೆ ಮೊದಲು ಅಧಿಸೂಚನೆ: ಸದಸ್ಯರ ಆಯ್ಕೆ ಅಂತಿಮಗೊಳಿಸುವ ಮೊದಲು ಅಧಿಸೂಚನೆ ಹೊರಡಿಸಿ ಆಕ್ಷೇಪಗಳನ್ನೂ ಪಡೆಯಲಾಗುತ್ತದೆ. ಅಂತಿಮಗೊಂಡ ಬಳಿಕ ಸದಸ್ಯರು ಅವರ ಆಯ್ಕೆಯ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಅಂತಿಮವಾಗಿ ಮೂರು ಮಂದಿಯ ಹೆಸರು, ವಿವರಗಳನ್ನು ಕೈಬರಹದಲ್ಲಿ ಬರೆದು ಲಕೋಟೆಯೊಳಗೆ ಇರಿಸಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರಿಗೆ ಕಳುಹಿಸುತ್ತಾರೆ. ಅಲ್ಲಿಂದ ಉನ್ನತ ಶಿಕ್ಷಣ ಸಚಿವರಿಗೆ ಹೆಸರುಗಳು ತಲಪುತ್ತವೆ. ಸಚಿವರು ಇವುಗಳನ್ನು ಪರಿಶೀಲಿಸಿ ಮುಖ್ಯಮಂತ್ರಿಗೆ ತಲಪಿಸುತ್ತಾರೆ. ಮುಖ್ಯಮಂತ್ರಿ ಇದರಲ್ಲಿ ಒಂದು ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ, ಇದಕ್ಕೆ ಆಕ್ಷೇಪವಿಲ್ಲದಿದ್ದರೆ ರಾಜ್ಯಪಾಲರು ಅಂತಿಮವಾಗಿ ಆದೇಶಿಸುತ್ತಾರೆ.

ಸ್ಥಳೀಯರಿಗೆ ಸಿಗಲೇ ಇಲ್ಲ ಅವಕಾಶ: ಮಂಗಳೂರು ವಿವಿಯಲ್ಲೇ ಕಲಿತು ಉಪನ್ಯಾಸಕರಾಗಿ ಇಲ್ಲಿನ ಆಗುಹೋಗು ಅರಿತುಕೊಂಡವರಿಗೆ ಇದುವರೆಗೆ ಕುಲಪತಿಯಾಗುವ ಅವಕಾಶ ದೊರೆತಿಲ್ಲ. ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಕಾವೇರಿಯಪ್ಪ 2006ರಿಂದ 2010ರ ವರೆಗೆ ಕುಲಪತಿಯಾದರೂ ಅವರು ಮೂಲತಃ ಮೈಸೂರಿನವರೇ. ಹಾಗಾಗಿ 9ನೇ ಕುಲಪತಿಯಾದರೂ ಇಲ್ಲಿನವರೇ ಆಗಬೇಕೆನ್ನುವುದು ಸದ್ಯ ಮಂಗಳಗಂಗೋತ್ರಿಯಲ್ಲಿ ಕೇಳಿಬರುವ ಆಗ್ರಹ.